ಮಾನವ ಸಮಾಜದಲ್ಲಿಯ ವ್ಯಕ್ತಿಗಳ ಸಂಘಟನಾ ಶಕ್ತಿಯ ಮೂರ್ತ ಸ್ವರೂಪವೇ ಸಂಸ್ಥೆಯಾಗಿ ನಿರ್ಮಾಣವಾಗುತ್ತದೆ. ಸಂಘ-ಸಂಸ್ಥೆಗಳು ತಮ್ಮ ನಿರಂತರ ಕ್ರಿಯಾಶೀಲತೆಯೊಂದಿಗೆ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತವೆ. ಇಂಥ ಜಂಗಮಶೀಲ ಸಂಸ್ಥೆಗಳು ನಿರ್ಮಾಣವಾಗಬೇಕಾದರೆ ಅದಕ್ಕೊಬ್ಬ ಸಮರ್ಥಶೀಲ ವ್ಯಕ್ತಿತ್ವದ ಮುಖಂಡನ ಅವಶ್ಯಕತೆಬೇಕು. ಅದಕ್ಕೊಂದು ನಿಶ್ಚಿತವಾದ ತನ್ನದೆ ಆದ ಉದ್ದೇಶವು ಬೇಕು. ಸಂಸ್ಥೆಯ ಸ್ಥಾಪನೆಯಷ್ಟೆ ಅಲ್ಲದೆ ಅದರ ಮುಂದುವರೆಕೆಯೂ ಮಹತ್ವದ ಅಂಶವಾಗಿರುತ್ತದೆ. ಹಾನಗಲ್ಲ ಕುಮಾರ ಸ್ವಾಮಿಗಳು ಶ್ರೇಷ್ಠ ಸಂಘಟನಾಶೀಲರೂ, ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡವರಾಗಿದ್ದರಿಂದ ಅವರಿಂದ ಅನೇಕ ಸಂಘ-ಸಂಸ್ಥೆಗಳು ಸೃಷ್ಠಿಯಾದವು. ಅವರ ಶಿಷ್ಯರಾದ ಪಂಚಾಕ್ಷರ ಗವಾಯಿಗಳವರ ಹಾಗೂ ಪುಟ್ಟರಾಜ ಗವಾಯಿಗಳವರ ಕರ್ತೃತ್ವ ಶಕ್ತಿಯ ಸಾಂಸ್ಥಿಕ ರೂಪವೇ ವೀರೇಶ್ವರ ಪುಣ್ಯಾಶ್ರಮ.ಜಾತಿ-ಮತ-ಭೇದ ಗಳನ್ನು ಮರೆತು ವಿದ್ಯಾಸಕ್ತರಾಗಿ, ಸಂಗೀತ ಕಲಿಕೆಯ ಅಭೀಕ್ಷೆ ಹೊಂದಿದ ವಿದ್ಯಾರ್ಥಿಗಳಿಗೆ ಹಾಗು ಅಂಧ ಅನಾಥ ಮಕ್ಕಳಿಗೆ ದಾರಿದೀಪವಾಗಿರುವ ಈ ಸಂಸ್ಥೆಯನ್ನು ಇಂದಿನ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಸಮರ್ಥರಾಗಿ ಮುನ್ನೆಡಿಸಿಕೊಂಡು ಹೋಗುತ್ತಿದ್ದಾರೆ.