ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಶ್ರೀ ಪಂಚಾಕ್ಷರ ಗವಾಯಿಗಳು

ಪಂಚಾಕ್ಷರ ಗವಾಯಿಗಳು

ಅಂಗವಿಕಲತೆ  ದೈಹಿಕವಾಗಿದ್ದರೂ ಅದು ಮನಸ್ಸಿನ ಪರಿಣಾಮ ಮಾಡುತ್ತದೆ.ಮನುಷ್ಯನಲ್ಲಿ ತಾನು ಕೀಳು ಎನ್ನುವ ಭಾವನೆಯನ್ನು ಉಂಟುಮಾಡುತ್ತದೆ. ಈ ಗಡಿಯನ್ನು ದಾಟಿದ ಮನುಷ್ಯರು ಮಹಾತ್ಮರೆನಿಸುತ್ತಾರೆ.

ಕುರುಡರಾಗಿದ್ದೂ ತಮ್ಮ ಸುತ್ತಮುತ್ತಲಿನ ಜನರ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರಿರುವವರಲ್ಲಿ ಕೃಷ್ಣ ಭಕ್ತ ಸೂರದಾಸ್,ಶಿವಭಕ್ತ ಪಂಚಾಕ್ಷರ ಗವಾಯಿ,ಕುರುಡರ ಕಣ್ಣಿನಿಸಿದ ಲೂಯಿ ಬ್ರೆಯಿಲ್,ಅಮೇರಿಕದ ಹೆಲೆನ್ ಕೆಲ್ಲರ್,ದುರದೃಷ್ಟವಶಾತ್ ಕಣ್ಣು ಕಳೆದುಕಂಡರೂ ಹಿಂದೂಸ್ತಾನೀ ಸಂಗೀತದ ಪಿತಾಮಹನೆನಿಸಿದ ಪೂಜ್ಯ ವಿಷ್ಣು ದಿಗಂಬರ ಪಲುಸ್ಕರ್ ಮುಂತಾದವರು ಗಣನೀಯರು.

ಜನನ:- ಹಾನಗಲ್ ತಾಲೂಕಿನ  ಕಾಡಸೆಟ್ಟಿಯೆಂಬ ಹಳ್ಳಿ. ಅಲ್ಲಿಯ ವೀರಶೈವ ಮಠದಲ್ಲಿ ಶಿವಭಕ್ತ ಗುರುಪಾದಯ್ಯ ಹಾಗೂ ಅವನ ಪತ್ನಿ ನೀಲಮ್ಮ ಜೀವಿಸುತ್ತಿದ್ದರು. ಇವರ ಮೊದಲ ಮಗ ಗುರುಬಸಯ್ಯ. ಆತ ಜನ್ಮಾಂಧ. ಅಂಧ ಮಗುವಿಗೆ ಜನ್ಮವಿತ್ತ ನೀಲಮ್ಮ ಬಹಳ ದುಃಖಪಟ್ಟಳು. ದುಃಖವನ್ನು ಸ್ನರಿಸಿಕೊಂಡು ಶಿವ ಪೂಜೆಯನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದು ಮತ್ತೆ ಗರ್ಭಿಣಿಯಾಗಿ ಮತ್ತೊಂದು ಅಂಧ ಮಗುವಿಗೆ 1892 ಫೆಬ್ರವರಿ 2ರಂದು ಜನ್ಮವಿತ್ತಳು.ಆಕೆಯ ದುಃಖ ಹೇಳತೀರದು.ಈ ಎರಡನೆಯ ಮಗುವೇ ಪಂಚಾಕ್ಷರ ಗವಾಯಿಗಳೆಂದು ಪ್ರಖ್ಯಾತಿ ಪಡೆದ ಗದಿಗೆಯ್ಯ.

ಗದಿಗೆಯ್ಯ – ಗುರುಬಸಯ್ಯರಲ್ಲಿ ಬಾಲ್ಯಾವಸ್ಥೆಯಲ್ಲೇ ಗಾಯಕನ ಕಲೆ ಬೇರೊರಿತ್ತು. ಯಾರಾದರೂ ಹಾಡಿದರೆ ಅದನ್ನು ಆಸಕ್ತಿಯಿಂದ ಕೇಳುತ್ತಿದ್ದರು. ಮತ್ತು ಕಲೆಯಲ್ಲಿರುವ ಅನಿರ್ವಚನೀಯ   ಆನಂದವನ್ನು ಸವಿಯುತ್ತಿದ್ದರು.ಈ ಕೇಳುವ ಚಟ ಬೆಳೆದಂತೆಲ್ಲಾ ಯಾರಾದರೂ ಹಾಡುಗಳನ್ನು ಹೇಳಿದರೆ ಅದನ್ನು ತಕ್ಷಣ ಗ್ರಹಿಸಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗಾಗಿ ಬಾಲಕರು ತಮ್ಮ ಐದು,ಆರು ವಯಸ್ಸಿನಲ್ಲಿಯೇ ಎಲ್ಲರೆದುರೂ ಹಾಡುಗಳನ್ನು ಹೇಳಿ ಮೆಚ್ಚಗೆಯನ್ನು ಪಡೆದರು.   ಈ  ಮಕ್ಕಳ ಕಂಠಮಾಧುರ್ಯದ ಜೊತೆಗೆ ನೈಸರ್ಗಿಕವಾಗಿ ಒಲಿದು ಬಂದ ಮದ್ದಳೆ ವಾದ್ಯವು ಸಹ ಇವರ ಕೀರ್ತಿಗೆ ಸಹಕಾರಿಯಾಯಿತು. ಇದನ್ನು ಕಂಡು ಇವರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಲು ತಂದೆ ಗುರುಪಾದಯ್ಯನವರನ್ನು ಅನೇಕರು ಒತ್ತಾಯಪಡಿಸಿದರು. ಒಳ್ಳೆಯ ವಿದ್ವಾಂಸರಲ್ಲಿ ಸಂಗೀತಾಭ್ಯಾಸಕ್ಕಾಗಿ ಸೇರಿಸಲು ಸಲಹೆ ಮಾಡಿದರು.

 ಅದಕ್ಕಾಗಿ ಹಿತೈಷಿಗಳು ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಹಾನಗಲ್ ಕುಮಾರಸ್ವಾಮಿಗಳ ಬಳಿ ಈ ಮಕ್ಕಳನ್ನು ಕರೆದುಕೊಂಡು ಹೋಗಿ ಇದ್ದ ವಿಷಯವನ್ನು ತಿಳಿಸಿ ಈ ಮಕ್ಕಳಿಗೆ ಸಂಗೀತ ವಿದ್ಯೆಯನ್ನು ಸಾಧಿಸುವುದಕ್ಕೆ ಮಾರ್ಗದರ್ಶನ ಮಾಡಲು ಪ್ರಾರ್ಥಿಸಲು ಸಲಹೆ ಮಾಡಿದರು. ತಂದೆ ಗುರುಪಾದಯ್ಯನವರಿಗೆ ಈ ಸಲಹೆ ಸರಿ ಎಂದು ತೋರಿತು. ಮಕ್ಕಳಿಬ್ಬರನ್ನೂ ಕರೆದುಕೊಂಡು ಹೋಗಿ ಹಾನಗಲ್ ಶ್ರೀಯವರಿಗೆ ದೀರ್ಘದಂಡ ನಮಸ್ಕಾರ ಮಾಡಿದರು. ಈ ಕುರುಡ ಮಕ್ಕಳನ್ನು ನೋಡಿ ಸ್ವಾಮಿಗಳ  ಅಂತಃಕರಣ ಕರಗಿ ನೀರಾಯಿತು. ಗುರುಪಾದಯ್ಯನವರೊಡನೆ ಕುಶಲ ಪ್ರಶ್ನೆಮಾಡಿ. “ನಿನಗೆಷ್ಟು ಜನ ಮಕ್ಕಳು’’? ಎಂದು ಕೇಳಿದರು. ಗುರುಪಾದಯ್ಯನವರಿಗೆ ದುಃಖ ಉಕ್ಕಿಬಂದರೂ ತಡೆಹಿಡಿದು, “ಸ್ವಾಮಿ ನನಗಿಬ್ಬರೇ ಮಕ್ಕಳು. ಇಬ್ಬರೂ ಹುಟ್ಟು ಕುರುಡರು. ಈ ಹುಡುಗರ ಧ್ವನಿ ತುಂಬಾ ಇಂಪಾಗಿದೆ. ತಾವು ಕೃಪೆಮಾಡಿ ಒಂದೆರಡು ಭಜನೆಗಳನ್ನು ಕೇಳಬೇಕು’’ ಎಂದರು.

ಸ್ವಾಮಿಗಳು, “ಅವಶ್ಯ ಆಗಬಹುದು’’ ಎಂದರು. ಹುಡುಗರು ಹಾಡಿದರು. ಇಬ್ಬರ ಗಾಯನವೂ ಶ್ರೀಯವರಿಗೆ ತುಂಬಾ ಮೆಚ್ಚುಗೆಯಾಯಿತು. “ಗುರುಪಾದಯ್ಯ, ನೀನು ಈ ಮಕ್ಕಳನ್ನು ನನ್ನಗೊಪ್ಪಿಸಿಬಿಡು. ನಾವು ಇವರಿಬ್ಬರಿಗೂ ಸಂಗೀತ ವಿದ್ಯೆಯನ್ನು ಅಭ್ಯಾಸ ಮಾಡಿಸುತ್ತೇವೆ. ಇವರು ಸುಪ್ರಸಿದ್ಧ ಕಲಾವಿದರಾಗುತ್ತಾರೆ. ಪರಮೇಶ್ವರನ ಕೃಪೆಯಿದ್ದರೆ ಉತ್ಕೃಷ್ಟ ಸಮಾಜಸೇವಕರೂ ಆಗುತ್ತಾರೆ. ಇದರಿಂದ ನಿನ್ನ ವಂಶೋದ್ಧಾರ ಹಾಗೂ ಬಾಲಕರ ಜನ್ಮೋದ್ದಾರ ವಾಗುವುದು’’ ಎಂದರು ಶ್ರೀಯವರು. ಗುರುಪಾದಯ್ಯನವರು ಅತ್ಯಾನಂದದಿಂದ ಉಬ್ಬಿ ಮಕ್ಕಳಿಬ್ಬರನ್ನು ಶ್ರೀಗಳವರ ಪಾದಕ್ಕರ್ಪಿಸಿ ಕಾಡಸೆಟ್ಟಿ ಹಳ್ಳಿಗೆ ತೆರಳಿದರು.

ಕರ್ನಾಟಕ ಸಂಗೀತಾಭ್ಯಾಸ

 ಹಿಂದೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತವೇ ಹೆಚ್ಚು ಪ್ರಚಾರದಲ್ಲಿದ್ದಿತು. ಹಾನಗಲ್ ಕುಮಾರಸ್ವಾಮಿಗಳು ಈ ಇಬ್ಬರು  ಹುಡುಗರಿಗೆ ಸಂಗೀತವನ್ನು ಕಲಿಸಲು ಇಷ್ಟಪಟ್ಟು ತಂಜಾವೂರಿನಿಂದ ಒಬ್ಬ ಸಂಗೀತಗಾರನನ್ನು ಕರೆಸಿ ಪಾಠ ಹೇಳಿಸಿದರು. ಕೆಲವು ತಿಂಗಳ ನಂತರ ಈ ಗಾಯಕನು ತನ್ನ ಊರಿಗೆ ಹೋದವನು ಮತ್ತೆ ಬರಲಿಲ್ಲ. ಆಗ ಸ್ವಾಮಿಗಳು ಶಿರಾಳಕೊಪ್ಪದ ಗಾಯಕ ಗದಿಗೆಪ್ಪ ಎಂಬುವರಲ್ಲಿ ಈ ಬಾಲಕರು ಸಂಗೀತ ಕಲಿಯುವಂತೆ ಏರ್ಪಾಡು ಮಾಡಿದರು.  ಹುಡುಗರು ಅತ್ಯಂತ ಚುರುಕಾಗಿದ್ದ ಕಾರಣ ಅವರಿಗೆ ಸಂಗೀತ ದೇವತೆಯು ಬೇಗೆ ಒಲಿದಳು. ಮುಂದೆ ಈ ಬಾಲಕರು  ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿನಲ್ಲಿಯೂ ಅಭ್ಯಾಸ ಮಾಡಿದರು. ಅಷ್ಟರಲ್ಲಿ ಬಾಲಕ ಗದಿಗೆಯ್ಯನ ಅಣ್ಣ ಗುರು ಬಸವಯ್ಯನು ದುರದೃಷ್ಟವಶಾತ್ ಆಕಾಲ ಮರಣಕ್ಕೆ ತುತ್ತಾದನು. ಇದು ಹಾನಗಲ್ ಶ್ರೀಯವರಿಗೆ ಹಾಗು ಬಾಲಕ ಗದಿಗೆಯ್ಯನಿಗೂ ಅತ್ಯಂತ ದುಂಖವನ್ನುಂಟುಮಾಡಿತು.

“ಪಂಚಾಕ್ಷರ ಗವಾಯಿ” ಅಣ್ಣನ ವಿಯೋಗದಿಂದ ಧೃತಿಗೆಡದೆ, ಗದಿಗೆಯ್ಯ ಸ್ವಾಮಿಗಳ ಹರಕೆಯನ್ನು ಹೊತ್ತು ಮತ್ತೆ ಮೈಸೂರಿಗೆ ಬಂದು ಅಲ್ಲಿನ ವೆಂಕಟರಮಣಯ್ಯ ಎಂಬ ಗಾಯಕರ ಬಳಿ ಅಭ್ಯಾಸವನ್ನು ಪ್ರಾರಂಭಿಸಿದನು. ಗದಿಗೆಯ್ಯನ ಜೀವನ ಮೈಸೂರಿನಲ್ಲಿ ಸುಲಭವಾಗಿರಲಿಲ್ಲ. ಭಜನೆಯನ್ನು ಮಾಡುತ್ತಾ ಭಿಕ್ಷಾನ್ನವನ್ನು ಸಂಪಾದಿಸಿ ಜೀವನನ್ನು ನಡೆಸಬೇಕಾಗಿತ್ತು. ಆದರೆ ಬಾಲಕನ ಅಸಾಧಾರಣ ಕಂಠಶ್ರೀ ಮೈಸೂರಿನಲ್ಲಿ ಎಲ್ಲರನ್ನೂ ಬಹಳ ಆಕರ್ಷಿಸಿತು.

ಶಿಕ್ಷಣವನ್ನು ಮುಗಿಸಿ ಬಂದ ಬಾಲಕ ಗದಿಗೆಯ್ಯನ ಜೀವನದಲ್ಲಿ ಮಹತ್ಪೂರ್ಣವಾದ ಘಟನೆಯು ಸಂಭವಿಸಿತು. ಬಾಗಲಕೋಟೆಯಲ್ಲಿ ಈತನ ಅಸಾಧಾರಣ ಗಾಯನ ಪ್ರೌಢಿಮೆಯನ್ನು ಕಂಡ  ಊರ ಜನರು ಗದಿಗೆಯ್ಯನನ್ನು ‘ ಪಂಚಾಕ್ಷರ ಗವಾಯಿ ‘ಎಂದು ಹೆಸರಿಸಿ ಗೌರಿವಿಸಿದರು.

‘ಗವಾಯಿ’ ಎಂದರೆ ಹಾಡುವವನು ಎಂದರ್ಥ. ಆದುದರಿಂದ ಇವರು ‘ಪಂಚಾಕ್ಷರ ಗವಾಯಿ’ ಎಂದು ಪ್ರಸಿದ್ಧಿಯಾದರು. ಹಾನಗಲ್ ಶ್ರೀಗಳವರು ಸಂಗೀತದ ಪ್ರಸರಣೆಯಿಂದ ಬಡ ವಿದ್ಯಾರ್ಥಿಗಳ ಜೀವನ ಸಾಗುವುದೆಂದು ತಿಳಿದು ಒಂದು ಸಂಗೀತದ ಶಾಲೆಯನ್ನು ಪ್ರಾರಂಭಿಸಲು ನಿಶ್ಚಯಿಸಿದರು.

        ಪಂಚಾಕ್ಷರ ಗವಾಯಿಯವರನ್ನು ಕರೆದು, “ನಿನ್ನ ಪೂರ್ವಜನ್ಮದ ಸುಕೃತದಿಂದ ಈ ಗಾನವಿದ್ಯೆ ನಿನಗೆ ಲಭಿಸಿದೆ. ನಿಷ್ಠೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿಕೊಂಡು, ಜಾತಿ-ಕುಲ ವ್ಯತ್ಯಾಸಗಳನ್ನು ನೋಡದೆ ಈ ವಿದ್ಯೆಯನ್ನು ಹೇಳಿಕೂಡು’’ ಎಂದು ಅಜ್ಞಾಪಿಸಿದರು. ಗದಿಗೆಯ್ಯ ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಚಾಚೂತಪ್ಪದೆ ತಮ್ಮ ಜೀವತದ  ಅಂತ್ಯದವರೆಗೂ ಪಾಲಿಸಿದರು. ಹಾನಗಲ್ ಕುಮಾರಸ್ವಾಮಿಯವರು 1614ರ ಬಸವ   ಜಯಂತಿಯಂದು ನಿಡಗುಂದಿಯಲ್ಲಿ ‘ಶಿವಯೋಗಮಂದಿರ ಸಂಗೀತ- ಸಾಹಿತ್ಯ – ಸಾಹಿತ್ಯ ಪಾಠಶಾಲೆಯನ್ನು ಸ್ಥಾಪಿಸಿದರು. ಹೆಚ್ಚು ಆದಾಯವಿಲ್ಲದುರಿಂದ ಗವಾಯಿಗಳು ಸುತ್ತ ಮುತ್ತಲಿದ್ದ ಧನಿಕ ಜನರ ಸಹಾಯವನ್ನೇ ಅಪೇಕ್ಷಿಸಬೇಕಾಗಿತ್ತು.

ಹಿಂದೂಸ್ತಾನಿ ಸಂಗೀತಾಭ್ಯಾಸ :- ಕಾಲ ಕಳೆದಂತೆ ಪಂಚಾಕ್ಷರ ಗವಾಯಿವರಿಗೆ ಹಿಂದೂಸ್ತಾನಿ ಸಂಗೀತ ಕಲಿಯಬೇಕೆಂದು ಉತ್ಕಟ ಇಚ್ಛೆಯಂಟಾಯಿತು. ಹಾನಹಲ್ ಶ್ರೀಗಳವರು ಸಹ ಈ ಆಸೆಗೆ ಪ್ರೋತ್ಸಾಹವನ್ನಿತ್ತರು. ಗವಾಯಿಯವರು ಗುರುಗಳನ್ನು ಹುಡುಕುತ್ತಾ ಮುಂಬಯಿಯವರೆಗೆ ಹೋಗಿ ನಿರಾಶಗಾಗಿ ಹಿಂತಿರುಗಿದು. ಅನಂತರವೇ ಹಾನಗಲ್ ಶ್ರೀಗಳವರು ಖ್ಯಾತ ಗವಾಯಿ ಮಿರ್ಜಿಯ ನೀಲಕಂಠ ಬುವಾ ಅವರನ್ನು ಕರೆಸಿ ತಮ್ಮಲ್ಲಿಯೇ ಇರಿಸಿಕೊಂಡು ಪಂಚಾಕ್ಷರ ಗವಾಯಿಯವರಿಗೆ  ಶಿಕ್ಷಣ ಕೊಡಿಸಿದರು.

ಮಿರ್ಜಿ ನೀಲಕಂಠ ಬುವಾರವರು ಪಲುಸ್ಕರ್ ರವರ ಗುರು ಬಂಧುಗಳು; ಹಾಗೂ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಅಧ್ಯಯನಕ್ಕೆ ಅಡಿಪಾಯ ಹಾಕಿದರು. ಇಂತಹ ಉತ್ತಮ ಗವಾಯಿ ಯವರ ಶಿಷ್ಯರು ಪಂಚಾಕ್ಷರ ಗವಾಯಿಯವರು. ಮಲ್ಲಿಕಾರ್ಜುನ ಮನ್ಸೂರ್ ಇವರ ಗುರು ಬಂಧುಗಳು.

ಹಿಂದೂಸ್ತಾನಿ ಸಂಗೀತವನ್ನು ಸಹ ಗ್ರಹಿಸಿವುದು, ಇವರಿಗೆ ಕಷ್ಟವಾಗಲಿಲ್ಲ.ಆರಂಭಿಸಿದ  ಒಂದು ವರ್ಷದದಲ್ಲಿಯೇ ಈ ಸಂಗೀತ ಪ್ರಕಾರದಲ್ಲಿಯೂ ಅವರು ಅಪೂರ್ವ ಪಾಂಡಿತ್ಯವನ್ನು ಪಡೆದರು. ಇದಾದ ನಂತರ ಹಾನಹಲ್ ಶ್ರೀಗಳವರು ಗವಾಯಿಯವರಿಗೆ ಶಿವದೀಕ್ಷೆಯನ್ನು ಕೊಡಿಸಿದರು. ಇದರಿಂದ ಅವನ ಮನಸ್ಥೈರ್ಯ ಹೆಚ್ಚಿಸಿ ಹಾಗೂ ಅವರ ಮನಸ್ಸೆಲ್ಲಾ ಲಿಂಗ ಪೂಜೆಯಲ್ಲಿಯೂ ಸಂಗೀತ ಹೇಳಿಕೊಡುವುದರಲ್ಲಿಯೂ, ಸ್ವಂತ ಕಲಿಯುವುದರಲ್ಲಿಯೂ ಮಗ್ನವಾಯಿತು. ಈ ಸಮಯದಲ್ಲಿ ಗವಾಯಿಯವರು ರಾಜಾಸಾಹೆಬ್ ಬಾಗಲಕೋಟೆಯವರಲ್ಲಿ ತಬಲವಾದನವನ್ನು ಕಲಿತರು. ಇದರೊಂದಿಗೆ ಪಖವಾಜ್ ವಾದನವನ್ನು ಸಹ ಶಿವಯ್ಯಸ್ವಾಮಿ ಜೇಕಿನಕಟ್ಟಿ ಹಾಗೂ ಮಲ್ಲೇಶಪ್ಪ ಬೆಳಗಾಂವ ಶಹಪೂರ್ ಅವರಲ್ಲಿ ಕಲಿತರು.

ಅಭ್ಯಾಸ:- ಪಂಚಾಕ್ಷರ ಗವಾಯಿಯವರು ತಮ್ಮ ಜೀವನದ ಪ್ರತಿಯೊಂದು ದಿನವೂ  ಎಡೆಬಿಡದೆ ತಮ್ಮ ಶಿಷ್ಯರಿಗೆ ಸಂಗೀತಾಭ್ಯಾಸವನ್ನು ಮಾಡಿಸುತ್ತಿದ್ದರು. ಅವರ ದಿನಚರಿ ಬೆಳಗ್ಗೆ ನಾಲ್ಕು ಗಂಟೆಗೆ ಪ್ರಾರಂಭವಾದರೆ,  ರಾತ್ರಿ ಹನ್ನೆರಡು ಗಂಟೆಯವರೆಗೆ ಸತತವಾಗಿ ನಡೆಯುತ್ತಿತ್ತು. ಆದರೂ ತಮ್ಮ ಕಲಿಯುವಿಕೆಯನ್ನು ಮಾತ್ರ ಅವರು ನಿಲ್ಲಿಸಲಿಲ್ಲ.  ಪಂಚಾಕ್ಷರ ಗವಾಯಿಯವರು ತಬಲ ಪಖವಾಜ್ ವಾದನಗಳಲ್ಲಿ ಅತ್ಯಂತ ಹೆಚ್ಚಿನ ಸಾಧನೆ ನಡೆಸಿದರು. ಗಾಯನವಲ್ಲದೆ ಹಾರ್ಮೋನಿಯಂ, ಪಿಟೀಲು, ಸಾರಂಗಿ, ದಿಲ್ರುಬಾ ಹಾಗೂ ಕೊಳಲು ವಾದ್ಯಗಳನ್ನು ಹೇಳಿಕೊಡುವುದರಲ್ಲಿ ನಿಷ್ಣಾತರಾಗಿದ್ದರು.

ಶಿಷ್ಯ ಪರಂಪರೆ:- ಗ್ವಾಲಿಯಾರ್ ಫರಾನೆಯನ್ನು ಮುಂದುವರಿಸಿದವರಲ್ಲಿ ಮಹಾರಾಷ್ಟದಲ್ಲಿ ವಿಷ್ಣು ದಿಗಂಬರ ಪಲುಸ್ಕರ್ ರವರು ಹಾಗೂ ಕರ್ನಾಟಕದಲ್ಲಿ ಮಿರ್ಜಿ ನೀಲಕಂಠ  ಬುವಾ ಅವರ ಪಂಚಾಕ್ಷರ ಗವಾಯಿಯವರ  ಮೂಲಕ  ಹಿಂದೂಸ್ತಾನಿ ಸಂಗೀತ ಹೆಚ್ಚು  ಪ್ರಚಾರವಾಗಲೂ ಕಾರಣರಾದರು. ಹುಟ್ಟು ಕುರುಡರಾದರೂ. ಕೇವಲ ಗಾಯಕರಲ್ಲದೆ ವಾಗ್ಗೇಯಕಾರರೂ, ನಾಟಕಾರರೂ ಹೌದು. ಪಂಚಾಕ್ಷರ ಗವಾಯಿಯವರ ಶಿಷ್ಯವೃಂದ ಅತಿದೊಡ್ಡದಾಗಿದ್ದು ಹಲವಾರು ಶಿಷ್ಯರು ತಮ್ಮದೇ ಆದ ಸ್ಥಾನವನ್ನು ಸಂಗೀತ ಪ್ರಪಂಚದಲ್ಲಿ ಗಳಿಸಿಕೊಂಡಿದ್ದಾರೆ. ಪುಟ್ಟರಾಜ ಗವಾಯಿಯವರು ಇವರ ಶಿಷ್ಯರಲ್ಲಿ ಪ್ರಮುಖರು. ಇಂದು ಪಂಚಾಕ್ಷರ ಗವಾಯಿಯವರಿಂದ ಸ್ಥಾಪಿಸಿದ ವಿದ್ಯಾಸಂಸ್ಥೆಯ ನೇತೃತ್ವ ವಹಿಸಿರುವ ಇವರು ಸಂಸ್ಕೃತದಲ್ಲಿ ಉದ್ಧಾಮ ಪಂಡಿತರು.ಸುಮಾರು ಆರು ಸಾವಿರಜನ ಶಿಷ್ಯರು ಕರ್ನಾಟಕದ ಹಾಗೂ ಹಿಂದೂಸ್ತಾನದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಯೋಗಿಗಳು:- ಪಂಚಾಕ್ಷರ ಗವಾಯಿಯವರು ಹೆಚ್ಚಾಗಿ ಏನನ್ನು ರಚಿಸಿಲಿಲ್ಲ. ಆದರೆ ಅವರ ಜೀವನಕ್ರಮವು ಪರಮೇಶ್ವರನ ಒಂದು ಅದ್ಬುತ ರಚನೆಯಾಗಿತ್ತು. ಬೇರೆಯವರು ಆಡಿ ಪ್ರಸಿದ್ಧರಾದರೆ ಇವರು ಮಾಡಿ ಪ್ರಸಿದ್ಧರಾದರು. ಐದಾರು ಸಾವಿರ ವಿದ್ಯಾರ್ಥಿಗಳನ್ನು ಸಾಕುವ ಸಲಹುವ ಹಾಗೂ ಕಲಿಸುವ ಮಹತ್ಕಾರ್ಯ ಅಚ್ಚರಿಗೊಳಿಸುವಂತಹದ್ದೇ.

    ಪಂಚಾಕ್ಷರ ಗವಾಯಿಯವರು ಎಂದೂ ಕೀರ್ತಿಯ ಬೆನ್ನಟ್ಟಿ ಹೋಗಲಿಲ್ಲ. ಇದರಿಂದಾಗಿ ಅವರು ಬಹಳಷ್ಟು ಹಣವನ್ನು ಸಂಪಾದಿಸುವ ಅವಕಾಶವನ್ನು ಕಳೆದುಕೊಂಡರು. ಮೂಲತಃ ಗವಾಯಿಯವರು ಶಿವಯೋಗಿಗಳು, ಅಂತ್ಯಂತ ಧಾರ್ಮಿಕ ಪ್ರವೃತ್ತಿಯವರು. ಎಲ್ಲಿ ಶಿವಪೂಜೆಯನ್ನು ಮಾಡಲು ಅವಕಾಶವಿರಲಿಲ್ಲವೂ ಅಲ್ಲಿ ಅವರೆಂದಿಗೂ ಹೋಗುತ್ತಿರಲ್ಲಿಲ್ಲ. ಈ ಸಂದರ್ಭದಲ್ಲಿ ಒಂದು ಘಟನೆಯನ್ನು ಸ್ಮರಿಸಬಹುದು.

ಗವಾಯಿಯವರ ಬೆಳೆಯುತ್ತಿರುವ ಖ್ಯಾತಿಯನ್ನು ಗಮನಿಸಿ ಅವರ ಶ್ರೇಯೋಭಿಲಾಷಿಗಳು ಹಾಗೂ ಸ್ನೇಹಿತರು ಅವರನ್ನು ಮುಂಬಯಿಯ ಆಕಾಶವಾಣಿ. ಕೇಂದ್ರದಲ್ಲಿ ಹಾಡಲು ಒತ್ತಾಯ ಮಾಡಿದರು, ಹಾಗೂ ಸಿದ್ದತೆಯನ್ನು ನಡೆಸಿದರು. ಗವಾಯಿಯವರಾದರೋ. ಮುಂಬಯಿಯಲ್ಲಿ ಶಿವಪೂಜೆ ನಡೆಸಲು ಬಿಲ್ವವೃಕ್ಷ, ಬಾವಿ ಇತ್ಯಾದಿಗಳು ಸಿಕ್ಕುವುದು ಕಷ್ಟವಾದುದರಿಂದ ಲಿಂಗಪೂಜೆ ಸಾಂಗವಾಗಿ ನೆರವೇರಲಾಗದೆಂದು ಭಾವಿಸಿ ಅವರ ಮನವಿಯನ್ನು ಸವಿನಯವಾಗಿ ತಿಸ್ಕರಿಸಿದರು.

 ಪಂಚಾಕ್ಷರ ಗವಾಯಿಯವರು ಅವಿರತವಾಗಿ ಸಮಾಜ ಸೇವೆ ಮಾಡಿದರೂ ಸಮಾಜದಿಂದ ಶಾಲೆಗಳಿಗಲ್ಲದೆ ತನಗೇನನ್ನೂ ಅಪೇಕ್ಷಿಸಲಿಲ್ಲ.  ಆದರೂ ಹಲವಾರು ಸಂಸ್ಥೆಗಳು, ನಗರಗಳು ಇವರನ್ನು ಸನ್ಮಾನಿಸಿ ಕೃತಾರ್ಥವಾದವು. ಇವರಿಗೆ ಸಂಗೀತರತ್ನ ; ‘ಸಂಗೀತ ಸಾಮ್ರಾಟ್ ;  ಲಲಿತ ಕಲಾ ಪಿತಾಮಹ;  ‘ಗಾನಯೋಗಿ’ ಹಾಗೂ ‘ಭೂಗಂಧರ್ವ ಚಂದ್ರ’  ಇತ್ಯಾದಿ ಅನೇಕ ಬಿರುದುಗಳು ಲಭಿಸಿದ್ದರೂ ಇವುಗಳ ಬಗ್ಗೆ ಅವರೆಂದೂ ಅಹಂಕಾರ ಪಡುತ್ತಿರಲಿಲ್ಲ.

 ಶಿಷ್ಯಪ್ರೇಮ:- ಪಂಚಾಕ್ಷರ ಗವಾಯಿಯವರು ಸ್ಥಾಪಿಸಿದ ಶಾಲೆಯು ಒಂದೇ ಊರಿನಲ್ಲಿ ಇರುತ್ತಿರಲಿಲ್ಲ. ಅವರು ತಮ್ಮ ಸಂಚಾರ ನಡೆಸಿದಂತೆ ಅವರೊಂದಿಗೆ ಸಂಪೂರ್ಣ ಶಾಲೆಯೂ  ಹೋಗುತ್ತಿತ್ತು. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಇವರೆಲ್ಲವನ್ನೂ ಕರೆದುಕೊಂಡು  ಹೋಗುವುದು ಬಹಳ ಕಷ್ಟವೆನಿಸಿತು. ಅಲ್ಲದೆ ಶಾಲೆಯಲ್ಲಿ ಅಂಧ ಹುಡುಗರೇ ಹೆಚ್ಚಾಗಿದ್ದುದರಿಂದ ಸಮಸ್ಯೆ ಸುಲಭವಾಗಿ ಬಗೆಹರಿಯುವಂತಿರಲಿಲ್ಲ. ಆದುದರಿಂದ ಗವಾಯಿಯವರು ತಮ್ಮ ಶಾಲೆಯಲ್ಲಿ ಎರಡು ವಿಭಾಗ ಮಾಡಿದರು ಸ್ಥಿರ ವಿದ್ಯಾಲಯ, ಚರ ವಿದ್ಯಾಲಯ. ಹತ್ತಿಪ್ಪತ್ತು ಹುಡುಗರನ್ನು ಒಂದೊಂದು ಹಳ್ಳಿಯಲ್ಲಿ ಇರಿಸುವುದರ ಜೊತೆಗೆ ಅದರ ಪಾಲನೆ-ಪೋಷಣೆ ನಡೆಸಲು ಹಾಗೂ ಅಧ್ಯಾಪಕರಿಗೆ ಸಂಬಳ ನೀಡಲು ನಾಲ್ಕೈದು ಸಾವಿರ ರೂಪಾಯಿಯಾದರೂ ಬೇಕಾಗುತ್ತಿತ್ತು. ಅದರೂ ಗವಾಯಿಯವರು ಎದೆಗುಂದದೆ ಕಾಲ್ನಡಿಗೆಯಲ್ಲಿಯೇ ಪ್ರತಿಯೊಂದು ಹಳ್ಳಿ ಸುತ್ತಿ ಪ್ರತಿಯೊಂದು ಮನೆಯಿಂದಲೂ ಧನ ಸಂಗ್ರಹ ಮಾಡುತ್ತಿದ್ದರು. ಪ್ರತಿದಿನವೂ ಭಜನೆ, ಪ್ರವಚನಗಳನ್ನು ನಡೆಸುತ್ತಿದ್ದರು. ಇದಕ್ಕಾಗಿ ಎಷ್ಟೋ ಬಾರಿ ಆಹಾರ ನಿದ್ರೆಯನ್ನು ಬಿಟ್ಟು ಅವರು ದುಡಿದದ್ದುಂಟು. ಇಷ್ಟಲ್ಲದೆ  ಹುಡುಗರಿಗೆ  ಪಾಠ ಹೇಳಿಕೊಡುವ ಕಾರ್ಯವೂ ಇರುತ್ತಿತ್ತು.

ಗವಾಯಿಯವರಿಗೆ ತಮ್ಮ ಶಿಷ್ಯರಲ್ಲಿ ಅತ್ಯಂತ ಪ್ರೇಮ ವಾತ್ಯಲ್ಯ ಇರುತ್ತಿತ್ತು. ಅವರು ಅತ್ಯಂತ ಜಾತ್ಯತೀತ ಮನೋಭಾವವನ್ನುಳ್ಳವರಾಗಿದ್ದರು. ಹಾನಗಲ್ ಶ್ರೀಗಳ ಉಪದೇಶದಂತೆ ಎಲ್ಲ ಜಾತಿಯು ಹುಡುಗರಿಗೂ ಸಮಾನತಯಿಂದ ವಿದ್ಯಾದಾನವನ್ನು ಮಾಡುತ್ತಿದ್ದರು. ಜಾತ್ಯ ತೀತರಾಗಿದ್ದರು ಎಂದ ಮಾತ್ರಕ್ಕೆ ಧರ್ಮದಲ್ಲಿ ನಂಬಿಕೆ ಇಟ್ಟಿರಲಿಲ್ಲವೆಂದಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ತನ್ನ ಧರ್ಮದ ಬಗ್ಗೆ ಗೌರವ ಇರಬೇಕು, ಅದನ್ನು ತಿಳಿದುಕೊಳ್ಳಲು ಶ್ರದ್ಧೆಯಿಂದ ಪ್ರಯತ್ನಿಸಬೇಕು ಎಂದು ಅವರ ಅಪೇಕ್ಷೆಯಾಗಿದ್ದಿತು. ಶಿಷ್ಯರು ತಮ್ಮ ಸಂಪ್ರದಾಯದಂತೆ ವಾಸಿಸಲು ಎಲ್ಲ ಅನುಕೂಲಗಳನ್ನೂ ಮಾಡಿ ಕೊಡುತ್ತಿದ್ದರು.

 ಶೇಷಾದ್ರಿ ಗವಾಯಿ ಎಂಬುವನು ಪಂಚಾಕ್ಷರ ಗವಾಯಿ ಯುರ ಬಳಿ ಶಿಷ್ಯವೃತ್ತಿ ಕೈಗೊಂಡಾಗ, ಅವರು ತಮ್ಮ ಶಿಷ್ಯನ ಊಟೋಪಚಾರ ಹಾಗೂ ದೈನಿಕ ಸಂಧ್ಯಾವಂದನೆ ಇತ್ಯಾದಿ ಪೂಜಾಕ್ರಮಗಳನ್ನು ಸಾಂಗವಾಗಿ ನೆರವೇರಿಸಲು ಅವರನ್ನು ಒಬ್ಬ ಬ್ರಾಹ್ಮಣರ ಮನೆಯಲ್ಲಿಟ್ಟು, ಅವನ ನಡವಳಿಕೆಯ ಬಗೆಗೆ ತೀವ್ರವಾದ ವಿಚಾರಣೆ ನಡೆಸುತ್ತಿದ್ದರು.

ಒಂದು ಬಾರಿ ಯಾವುದೇ  ಹಳ್ಳಿಯಲ್ಲಿ ಬಿಡಾರ ಹೂಡಿದ್ದಾಗ ಅಲ್ಲಿಯ ಜನರು ವಿದ್ಯಾರ್ಥಿಗಳ ಭೋಜನಕ್ಕೆ ಸಿದ್ಧ ಮಾಡಿರಲಿಲ್ಲ. ಆದುದರಿಂದ ಗವಾಯಿಯವರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವಂತೆ ತಮ್ಮ ಸಂಸ್ಥೆಯ ವ್ಯವಸ್ಥಾಪಕರಿಗೆ ಹೇಳಿದರು. ಪ್ರಮಾದವಶಾತ್ ವ್ಯವಸ್ಥಾಪಕರು ವಿದ್ಯಾರ್ಥಿಗಳಿಗೆ ಹಾಲಿನ ವ್ಯವಸ್ಥೆಯನ್ನು ಮಾಡಿರಲಿಲ್ಲ. ಇದನ್ನು  ಕೇಳಿದಾಗ ಗವಾಯಿಯವರ ಮನಸ್ಸಿಗೆ ನೋವಾಯಿತು. ಅವರು ತಮಗಿಟ್ಟದ್ದ ಹಾಲನ್ನು ತೆಗೆದುಕೊಳ್ಳಲಿಲ್ಲ. ವ್ಯವಸ್ಥಾಪಕರನ್ನು ಕರೆದು, ಏನ್ಪಾ, ನಿನ್ನ ಮಕ್ಕಳಿಗೆ ನೀರು ಕುಡಿಯಲು ಕೊಟ್ಟು ನೀನು ಹಾಲು ಕುಡಿಯುವೆಯಾ? ಈ  ಹುಡುಗರು ತಂದೆ ತಾಯಿಯರನ್ನು ಬಿಟ್ಟು ನನ್ನ ಬಳಿ ಬಂದಿದ್ದಾರೆ. ಮರೆಯಬೇಡ. ಅವರಿಗೂ ಸರಿಯಾದ ವ್ಯವಸ್ಥೆಯನ್ನು ಮಾಡು. ಇಲ್ಲಿದ್ದರೆ ನಾವು ಇಲ್ಲಿ ಇರುವುದಿಲ್ಲ’ ಎಂದರು.ವ್ಯವಸ್ಥಾಪಕರು ಪಶ್ಚಾತ್ತಾಪಪಟ್ಟು ಗುರುಗಳಲ್ಲಿ ಕ್ಷಮಾಪಣೆ ಕೇಳಿಕೊಂಡ.

1941ರಲ್ಲಿ ಪಂಚಾಕ್ಷರ ಗವಾಯಿಯವರು ಪುಟ್ಟರಾಜ ಗವಾಯಿಯವರನ್ನು ಸಂಚಾರಿ ಸಂಗೀತ ಶಾಲೆಗೆ ಮುಖ್ಯಸ್ಥರನ್ನಾಗಿ ನೇಮಿಸಿ, ಸಂಚಾರಕ್ಕೆ ಕಳುಹಿಸಿದಾಗ ಪುಟ್ಟರಾಜ ಗವಾಯಿಯವರು ಹೇಳಿದರಂತೆ.

  “ ಗುರುಗಳೇ, ತಾವು ಮಹಾನ್ ಯೋಗಿಗಳು. ತಮ್ಮ ಮಾತು ವೇದವಾಕ್ಯವೆಂದು ಜನರು ಧನಸಹಾಯ ಮಾಡುತ್ತಾರೆ. ನಾನೋ ಹೊಸಬ. ನನಗೆ ಅಷ್ಟು ಪರಿಚಯವಿಲ್ಲದಿರುವುದರಿಂದ ತೊಂದರೆಯಾಗಬಹುದಲ್ಲವೇ?’’

 ಪಂಚಾಕ್ಷರ, “ಪುಟ್ಟಯ್ಯ. ಕಷ್ಟಗಳನ್ನೆಲ್ಲಾ ನಾನೇ ಅನುಭವಿಸಿದ್ದೇನೆ. ನಿನ್ನ ಪಾಲಿಗೆ ಏನಾದರೂ ಉಳಿದಿದ್ದರೆ ಅದು ಸುಖ ಮಾತ್ರ” ಎಂದರು.

  ಪುಟ್ಟರಾಜ ಗವಾಯಿಯವರು ಈ ಮಾತನ್ನು ಸದಾ ಸ್ಮರಿಸುತ್ತಿರುತ್ತಾರೆ. ಪುಟ್ಟರಾಜರ ಜೀವನ ಹಾಗೂ ಶಾಲೆಯ ನಿರ್ವಹಣೆ ಬಹಳ ಸುಲಭವಾಗಿಲ್ಲದಿದ್ದರೂ ಪಂಚಾಕ್ಷರರಷ್ಟು ಕಷ್ಟಕರವಾಗಿಲ್ಲವೆಂದು ಒಪ್ಪಿಕೊಳ್ಳಬೇಕಾಗುತ್ತದೆ.

 ಕನ್ನಡ ಪ್ರೇಮ:- ಗವಾಯಿಯವರ ಕನ್ನಡ ಪ್ರೇಮ ಆಗಾಧವಾದದ್ದು. ಮುಂಬಯಿಯ ಧ್ವನಿಮುದ್ರಣ ಸಂಸ್ಥೆಯೊಂದು ಇವರ ಹಾಡುಗಳನ್ನು ಧ್ವನಿ ಮುದ್ರಿಕೆಗಳನ್ನಾಗಿ ಮಾಡಲು ನಿಶ್ಚಯಿಸಿ ಆಮಂತ್ರಿಸಿದ್ದಿತು. ಆಮಂತ್ರಣವನ್ನು ಸ್ವೀಕರಿಸಿದ ಗವಾಯಿಯವರನ್ನು ಸಂಸ್ಥೆಯವರು ಒಂದು ಕರ್ನಾಟಕ ಸಂಗೀತದ ಕೀರ್ತನೆಯನ್ನೂ, ಒಂದು ಹಿಂದೂಸ್ತಾನಿ ಸಂಗೀತದ ಪ್ರಕಾರದ ಚೀಜನ್ನೂ ಹಾಡಲು ಕೇಳಿಕೊಂಡರು.

  ಗವಾಯಿಯವರು ತ್ಯಾಗರಾಜರಿಂದ ವಿರಚಿತ ದರಬಾರೀ ರಾಗದ ‘ ಯೋಚನಾ ಕಮಲಾ ಲೋಚನ’ ಎಂಬ ಕೀರ್ತನೆಯನ್ನು ಹಾಗೂ ಒಂದು ಕನ್ನಡ ಪದವನ್ನು ಹಾಡುವುದು ಎಂದುಕೊಂಡರು. ಆ ಸಂಸ್ಥೆಯವರು ಗವಾಯಿಯವರ ನಿಶ್ಚಯವನ್ನು ಕೇಳಿ ಅಸಮಾಧಾನಗೊಂಡರು. ಗವಾಯಿಯವರು, ಕನ್ನಡ ಹಾಡನ್ನು ಮುದ್ರಿಸುವುದಾದರೆ ಮುದ್ರಿಸಲಿ; ಇಲ್ಲದಿದ್ದರೆ ಈ ಕೆಲಸವೇ ಬೇಡ’ ಎಂದು ಪಟ್ಟು ಹಿಡಿದರು.

ಅನಂತರ ಬಹಳ ಸಮಾಲೋಚನೆ ನಡೆದು, ‘ಯೋಚನಾ ಕಮಲಾ ಲೋಚನಾ’ ವನ್ನು ಹಾಗೂ ಧ್ವನಿ ಮುದ್ರಿಕೆಯ ಇನ್ನೊಂದು ಕಡೆಯಲ್ಲಿ ಹಿಂದೂಸ್ತಾನಿ ರಾಗದಲ್ಲಿ ಕನ್ನಡ ಪದವನ್ನು ಹಾಡಿದರು. ಆ ಮುದ್ರಿಕೆಯು ಇಂದಿಗೂ ಜನಪ್ರಿಯಾವಗಿದೆ.

ಕೀರ್ತನಕಾರರು.:-ಪಂಚಾಕ್ಷರ ಗವಾಯಿಯವರು ಕೀರ್ತನಕಾರರೆಂದು ಪ್ರಸಿದ್ಧರಾಗಿದ್ದರು. ಕೀರ್ತನೆಯೆಂದರೆ ಗಾಯನವನ್ನು ಬಳಸಿಕೊಂಡು ಕಥೆ ಹೇಳುವುದು. ಅವರ ಕೀರ್ತನೆಗಳಲ್ಲಿ ಪ್ರಸಿದ್ಧವಾಗಿದ್ದುದು ಸತ್ಯವಾನ-ಸಾವಿತ್ರಿ ಕಥೆ ಹಾಗೂ ಮಂತ್ರಜಾತನ ಕಥೆ. ಸಮರ್ಥ ಕೀರ್ತನಕಾರರಕ್ಕು ಇರಬೇಕಾದ ಸರ್ವ ಲಕ್ಷಗಳೂ ಅವರಲ್ಲಿದ್ದವು. ಭವ್ಯವಾದ ಶಾರೀರ, ಕಥೆಯನ್ನು ಹೇಳುವ ಕಲೆ. ಜನರನ್ನು  ಸುಲಭವಾಗಿ ಆಕರ್ಷಿಸುವಂತಹ  ಉನ್ನತ ಮಟ್ಟದ ಹಾಸ್ಯಪ್ರವೃತ್ತಿ ಅವರಲ್ಲಿ ಬೇರೂರಿದ್ದವು.

ಮಂತ್ರಜಾತನು ದೊಂಬರವಳಿಂದ ಬೀಜಾಕ್ಷರ ಮಂತ್ರವನ್ನು ಪಡೆಯಲು ಪಟ್ಟ ಕಷ್ಟಗಳನ್ನು ಹಾಗೂ ಪಡೆದ ಮೇಲೆ ಅವನ ಮನಸ್ಸನ್ನು ವರ್ಣಿಸುವಾಗ ಜನ ಮಂತ್ರಮುದ್ಧರಾಗಿ ಕಣ್ಣೀರು ಸುರಿಸುತ್ತಿದ್ದರು. ಜನರನ್ನು ಮಂತ್ರಮುದ್ಧರನ್ನಾಗಿಸುವುದು ಅವರಲ್ಲಿ ಬೇರೂದಿದ್ದ ಕಲೆ.

ಬೆಂಗಳೂರು ಸಂಚಾರ ಹಾಗೂ ನಾಟಕ ಕಂಪನಿ ಸ್ಥಾಪನೆ:- ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆಳೆದಂತೆ ಗವಾಯಿಯವರ ಖರ್ಚುವೆಚ್ಚಗಳು ಬಹಳ ಹೆಚ್ಚಾದವು. ಕೇವಲ ದಾನಿಗಳನ್ನು ಪ್ರಾರ್ಥಿಸುವುದರಿಂದ ಹಾಗೂ ಸಣ್ಣ ಪ್ರಮಾಣದಲ್ಲಿ ಕೀರ್ತನೆ ಕಥೆಗಳನ್ನು ನಡೆಸುವುದರಿಂದ ಜೀವನ ನಡೆಸುವುದು ಕಷ್ಟವಾಗಿತ್ತು. ಆದುದರಿಂದ ಗವಾಯಿಯವರು ಮೈಸೂರಿಗೆ ಪ್ರಮಾಣ ಬೆಳೆಸಲು ನಿಶ್ಚಯಿಸಿದರು. ಆದರೆ ಬೆಂಗಳೂರಿನ ಹಲವಾರು ಅಭಿಮಾನಿಗಳು ಆಮಂತ್ರಿಸಿದ್ದುದರಿಂದ ಬೆಂಗಳೂರಿಗೆ ಬಂದರು. ಮೈಸೂರಿನಲ್ಲಿ ಮಹಾರಾಜರನ್ನು ಕಂಡು ಕಾರ್ಯವನ್ನು, ತಿಳಿಸಿ ಸಹಾಯಧನ ಪಡೆಯುವುದು ಅವರ ಉದ್ದೇಶವಾಗಿದ್ದಿತು. ದುರ್ದೈವವಶಾತ್ ಬೆಂಗಳೂರಿನಿಂದ ಹೊರಡುವಷ್ಟರಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್. ಸ್ವರ್ಗಸ್ಥರಾದರೆಂಬ ಸುದ್ಧಿ ತಿಳಿದು ಬಂದಿತು. ಗವಾಯಿಯವರು  ಬಹು ದುಃಖಿತರಾದರೂ ಎದೆಗುಂದದೆ ಕಾರ್ಯ ಮುಂದುವರಿಸಲು ನಿಶ್ಚಯಿಸಿದರು. ಸಾಲ ನಾಲ್ಕೈದು ಸಾವಿರ ರೂಪಾಯಿಗಳಿಗೂ ಮಿಕ್ಕಿದ್ದಿತ್ತು.

  ನರಗುಂದ ತಾಲೂಕಿನಲ್ಲಿ ಬಿಡಾರ ಹೂಡಿದ್ದಾಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಒಂದು ನಾಟಕದ ಕಂಪನಿಯನ್ನು ರಚಿಸಲು ನಿಶ್ಚಯಿಸಿದರು. ಇದರ ಫಲವೇ ಶ್ರೀ ಕುಮಾರೇಶ್ಚರ ಕೃಪಾಪೋಷಿತ   ಪಂಚಾಕ್ಷರ ನಾಟಕ ಸಂಘ’ ಇದರಲ್ಲಿ ಹೆಚ್ಚಾಗಿ ಬಾಲಕರೇ ಇದ್ದು, ಹಲವಾರು ಖ್ಯಾತ ಪೌರಾಣಿಕ ಕಥೆಗಳನ್ನು ಆಧರಿಸಿದ ನಾಟಕಗಳನ್ನು ಆಡಿದರು. ಇವುಗಳಲ್ಲಿ ಮುಖ್ಯವಾದವು ಪುಟ್ಟರಾಜ ಗವಾಯಿಯವರು ಬರೆದ ‘ಸಿದ್ದರಾಮೇಶ್ವರ’, ‘ಸತಿ ಸುಕನ್ಯ‘ ‘ರತ್ನಹಾರ’ ಮತ್ತು ‘ ‘ಮಿಂಚು‘. ಇವಲ್ಲದೆ “ಹೇಮರೆಡ್ಡಿ ಮಲ್ಲಮ್ಮ’, ‘ಕೃಷ್ಣ ಗಾರುಡಿ’, ‘ಭೀಷ್ಮ ಪ್ರತಿಜ್ಞೆ’ ‘ಅಕ್ಕಮಹಾದೇವಿ’ ಮೊದಲಾದ ನಾಟಕಗಳನ್ನು ಆಡಿಸಿದರು. ನಾಟಕದ ಕಂಪನಿ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಗವಾಯಿವರು ಹಣದ ಚಿಂತೆಯಿಂದ ಮುಕ್ತರಾದರು. ಪಾತ್ರ ವಹಿಸಿತ್ತಿದ್ದ ವಿದ್ಯಾರ್ಥಿಗಳಿಗೂ ಸಂಭಾವನೆ ನೀಡಲು ಪ್ರಾರಂಭಿಸಿದರು. ನಾಟಕಗಳಿಗೆ ಅವಶ್ಯಕವಾದ ತಬಲ ವಾದನವನ್ನು ಅವರೇ ಮಾಡುತ್ತಿದ್ದರು.

 ಆದರೆ ಹಲವು ವರ್ಷಗಳು ಕಳೆದಂತೆ, ಶಿಕ್ಷಣ ಪಡೆದು ನುರಿತರಾದ ವಿದ್ಯಾರ್ಥಿಗಳು ಕಂಪನಿಯನ್ನು ಬಿಟ್ಟು ಬೇರೆ ಕಡೆ ಹೋಗಲು ಪ್ರಾರಂಭಿಸಿದರು. ಇದರಿಂದ ನಾಟಕ ಕಂಪನಿಯನ್ನು ನಡೆಸಲು ಬಹು ಕಷ್ಟವಾಯಿತು.

ಈ ಸಮಯದಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ಹೊಲವನ್ನು ಮಾರಿ ಬಂದ ಹಣದಿಂದ ಗವಾಯಿಯವರಿಗೆ ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಒದಗಿಸಿಕೊಟ್ಟ ವೃತ್ತಾಂತವನ್ನು ತಿಳಿದು ವಿಸ್ಮಿತರಾದ ಗವಾಯಿಯವರು ಆತನನ್ನು ಮನಃಪೂರ್ವಕವಾಗಿ ಆಶೀರ್ವದಿಸಿದರು. ಹಾಗೂ ಒಂದೇ ವರ್ಷದಲ್ಲಿ ಆ ಸಾಲವನ್ನು ತೀರಿಸಿದರು. ಮುಂದೆ ಈ ಶಿಷ್ಯ ಗವಾಯಿಯವರ ಕೃಪೆಗೆ ಪಾತ್ರನಾಗಿದ್ದಲ್ಲದೆ ಅತ್ಯಂತ ಧನಿಕನೂ ಸುಖಿಯೂ ಆದ. ಈ ಶಿಷ್ಯ ಖ್ಯಾತ ನಟ ದಿವಂಗತ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು.

ವೀರೇಶ್ವರ ಪುಣ್ಯಾಶ್ರಮ:-  1940 ರಲ್ಲಿ ಮೈಸೂರು ರಾಜ್ಯದಲ್ಲಿ ಅತ್ಯಂತ ಬೀಕರವಾದ ಕ್ಷಾಮವು ತಲೆದೋರಿತು. ಆಗ ಗದಗ ನಗರದಲ್ಲಿ ಇಳಿದುಕೊಂಡಿದ್ದ ಗವಾಯಿಯವರಿಗೆ ಸಂಚಾರಿ ಸಂಗೀತ ಹಾಗೂ ನಾಟಕ ಕಂಪನಿಯನ್ನು ಮುಂದುವರಿಸುವುದು ಅತಿ ಕಷ್ಟಕರವಾಗಿದ್ದಿತು. ಆಗ ಕೆಲವು ಹಿತೈಷಿಗಳು ಬಂದು, ವಿದ್ಯಾರ್ಥಿಗಳನ್ನು ಅವರವರ ಮನೆಗೆ ಕಳುಹಿಸಿಲು ಗವಾಯಿಯವರಿಗೆ ಸಲಹೆ ಮಾಡಿದರಂತೆ/ ಗವಾಯಿಯವರಿಗೆ ವ್ಯಥೆಯಾಯಿತು; ಅವರು ಹೇಳಿದರಂತೆ;

‘’ ದುರ್ಭಿಕ್ಷದ ಸಮಯವೆಂದು ನೀವು ನಿಮ್ಮ ಮಕ್ಕಳನ್ನು ರಜೆ ಕೊಟ್ಟು ಕಳುಹಿಸುತ್ತೀರಾ? ತಂದೆ ತಾಯಿಗಳನ್ನು ಬಿಟ್ಟು ಬಂದಿರುವ ಈ ಮಕ್ಕಳನ್ನು ಪೋಷಿಸಲು ಎಲ್ಲವನ್ನೂ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ.

 ಈ ಮಾತನ್ನು ಕೇಳಿದ ಬಸಿರಿಗಿಡದ ವೀರಪ್ಪ ಎಂಬ ಮಹನೀಯರು ಸಂಸ್ಥೆಯ ಸಂಪೂರ್ಣ ಖರ್ಚನ್ನು ಒಪ್ಪಿಕೊಂಡರು, ಹಾಗೂ ಗವಾಯಿಯವರ ಕೃಪೆಗೆ ಪಾತ್ರರಾದರು. ಮುಂದೆ ಭಾರಿ ಶ್ರೀಮಂತರಾದ ವೀರಪ್ಪನವರು ಆನೇಕ ಸಂಸ್ಥೆಗಳನ್ನೂ ದೇವಾಲಯಗಳನ್ನು ಕಟ್ಟಿಸಿದರು; ಹಾಗೂ ಗವಾಯಿಯವರ ಸಂಸ್ಥೆಯನ್ನು ಅಜೀವ ಪರ್ಯಂತ ನೋಡಿಕೊಳ್ಳಲು ನಿಶ್ಚಯಿಸಿದರು. ವೀರಪ್ಪ ನವರ ಒತ್ತಾಸೆಯ ಮೇಲೆ ಪಂಚಾಕ್ಷರ ಗವಾಯಿಯವರು ಸಂಚಾರವನ್ನು ನಿಲ್ಲಿಸಿ ಗದುಗಿನಲ್ಲಿಯೇ ನೆಲೆಸಿದರು. ಇಲ್ಲಿ ವೀರಪ್ಪನವರ ಸಹಾಯದಿಂದ ಒಂದು ಆಶ್ರಮವನ್ನು ಸ್ಥಾಪಿಸಿದರು. ಹಾಗೂ ಅದಕ್ಕೆ ಮಹಾಶಿವಯೋಗಿಗಳಾದ ವೀರೇಶ್ವರ ಶಿವಶರಣರ ನೆನಪಿಗಾಗಿ ‘ ವೀರೇಶ್ವರ’ ಪುಣ್ಯಾಶ್ರಮ ಎಂದು ಹೆಸರಿಟ್ಟರು. ಇದರೊಂದಿಗೆ ದಾನಿ ಬರಿಸಿಗಿಡದ ವೀರಪ್ಪನವರ ಹೆಸರು ಸಹ ಆ ಚಂದ್ರಾರ್ಕವಾಗಿ ಉಳಿಯಿತು.

   ಆಶ್ಚರ್ಯಕರ ಸಂಗತಿಗಳು:- ಅನನ್ಯವಾದ ಭಕ್ತಿ ಇರುವವರ ಬಾಳಿನಲ್ಲಿ ಆಶ್ಚರ್ಯಕರವಾದ ಸಂಗತಿಗಳು ನಡೆಯುತ್ತವೆ ಎಂದು ಅನೇಕರು ನಂಬುತ್ತಾರೆ. ಮನುಷ್ಯರ ಬಾಳನ್ನು ಸದಾ ಗಮನಿಸುವ ಶಕ್ತಿಯೊಂದಿದೆ. ನಿರ್ಮಲ ಮನಸ್ಸಿನಿಂದ  ಹಿರಿಯ ಗುರಿಗಾಗಿ ಮುಡಿಪಾದವರಿಗೆ ಈ ಶಕ್ತಿ  ಬೆಂಗಾವಲಾಗುತ್ತದೆ. ನಾವು ಕಾರಣ ಕೊಟ್ಟು ವಿವರಸಲಾಗದ  ಸಂಗತಿಗಳನ್ನು ಈ ಶಕ್ತಿ ಇವರ ಬಾಳಿನಲ್ಲಿ ನಡೆಸುತ್ತದೆ ಎಂದು ಅವರ ವಿಶ್ವಾಸ.

 ಪಂಚಾಕ್ಷರ ಗವಾಯಿಗಳ ಜೀವನದಲ್ಲಿ ಹಲವು ಆಶ್ಚರ್ಯಕರ ಘಟನೆಗಳು ನಡೆದಿವೆ.  ಗವಾಯಿಗಳು ದಾನಿಗಳನ್ನು ಪ್ರಾರ್ಥಿಸಿ ಹಣ ಪಡೆದು, ಇಲ್ಲವೇ ನಾಟಕ ಪ್ರದರ್ಶನಗಳಿಂದ ಶಾಲೆಯನ್ನು ನಡೆಸಬೇಕಾಗಿತ್ತು ಎಂದು ಆಗಲೇ ಹೇಳಿದೆ. ಒಂದು ಬಾರಿ ಗವಾಯಿಯವರ ಸಂಚಾರ ಧಾರವಾಡ ಜಿಲ್ಲೆಯಲ್ಲಿ ನಡೆಯಬೇಕಾಗಿತ್ತು. ಆರ್ಥಿಕ ಪರಿಸ್ಥಿತಿ ಬಹಳಷ್ಟು ಬಿಗಿಯಾಗಿತ್ತು. ಊರಿನಲ್ಲಿ ಒಬ್ಬ ಶ್ರೀಮಂತ ಮಹನೀಯರು ಧನಸಹಾಯ ಮಾಡಲು ಒಪ್ಪಿದರು. ರೈಲಿನಲ್ಲಿ ಊರಿಗೆ ಬಂದ ಕೂಡಲೇ ಗವಾಯಿಯವರು ಈ ಮಹನೀಯರನ್ನು ನೋಡಲು ಧಾವಿಸಿದರು. ದುರದೃಷ್ಟವಶಾತ್ ಅವರು ಊರಿನಲ್ಲಿ ಇರರಿಲ್ಲ. ಗವಾಯಿಯವರಿಗೆ ತುಂಬಾ ಚಿಂತೆಯಾಯಿತು. ಕೈಯಲ್ಲಿ ಕಾಸಿಲ್ಲ. ಪರ ಊರಿನಲ್ಲಿ ಯಾರನ್ನು ಕೇಳುವುದು ಪರಮೇಶ್ವರನನ್ನು ಧ್ಯಾನಿಸುತ್ತಾ ರೈಲ್ವೆ ನಿಲ್ದಾಣದ ಒಂದು ಕಲ್ಲುಬೆಂಚಿನ ಮೇಲೆ ಕುಳಿತಿದ್ದಾರೆ. ಒಬ್ಬ ವ್ಯಕ್ತಿ ಅವರ ಬಳಿ ಬಂದ,

  “ ಪಂಚಾಕ್ಷರ ಗವಾಯಿಯವರೆಂದರೆ ನೀವೇನೆಯೇ?’’ ಎಂದು ಪ್ರಶ್ನಿಸಿದ ಆಗಂತುಕ, ‘ ಬಳ್ಳಾರಿಯ ಒಬ್ಬ ಶ್ರೀಮಂತರು ಇನ್ನೂರು ರೂಪಾಯಿಗಳನ್ನು ಕಳಿಸಿದ್ದಾರೆ, ತೆಗೆದು ಕೊಳ್ಳಬೇಕು ಎಂದ.  ಗವಾಯಿಯವರಿಗೆ ತುಂಬಾ ಸಂತೋಷವಾಯಿತು,  ಕೃತಜ್ಞತೆ  ಉಕ್ಕಿ ಬಂತು. ಹಣವನ್ನು ಸ್ವೀಕರಿಸಿದರು. ಅನಂತರ  ಬಳ್ಳಾರಿಯ ಮಹನೀಯರಿಗೆ, ‘ ನಾನು ಬರೆದ ಪತ್ರದ ಕೋರಿಕೆಯ ಮೇರೆಗೆ ನೀವು ಕಳುಹಿಸಿದ ಇನ್ನೂರು ರೂಪಾಯಿ ತಲುಪಿತು. ನಿಮ್ಮ ಸಹಾಯಕ್ಕಾಗಿ ಅನಂತಾನಂತ ವಂದನೆಗಳು’ ಎಂದು ಬರೆದರು.

 ಸ್ವಲ್ಪ ದಿನಗಳಲ್ಲಿ ಗವಾಯಿಯವರಿಗೆ ಒಂದು ದೊಡ್ಡ   ಆಶ್ಚರ್ಯ ಕಾದಿತ್ತು. ಬಳ್ಳಾರಿಯ ಮಹನೀಯರು ಪತ್ರ ಬರೆದಿದ್ದರು:

  ‘ಪೂಜ್ಯ ಮಹನೀಯರೇ,

ನೀವು ಹಣಕ್ಕಾಗಿ ಬರೆದ ಪತ್ರವು ನನಗೆ ತಲುಪಲಿಲ್ಲ, ನಾನು  ಹಣವನ್ನು ಕಳುಹಿಸಲಿಲ್ಲ. ನಿಮಗೆ ಹಣ ಬಂದಿದೆ ಎಂದು ಬರೆಯುತ್ತೀರಿ. ನಿಮಗೆ ನನ್ನ ಹೆಸರಿನಲ್ಲಿ ಯಾರು ಹಣ ಕೊಟ್ಟರೋ ಅದೂ ನನಗೆ ತಿಳಿಯಲಿಲ್ಲ.  ಈ ಪ್ರಸಂಗ ಕೊನೆಯವರೆಗೆ ನಿಗೂಢವಾಗಿಯೇ ಉಳಿಯಿತು.

 ಶಿರಹಟ್ಟಿಯಲ್ಲಿ :-  ಪಂಚಾಕ್ಷರ ಗವಾಯಿಯವರ ಮನಸ್ಸು ಬಹಳಷ್ಟು ಮೃದುವಾಗಿದ್ದರೂ ಕೆಲವೊಮ್ಮೆ ಅವರು ಅಷ್ಟೇ ನಿಷ್ಟುರರೂ ಆಗುತ್ತಿದ್ದರು. ‘ ವಜ್ರಾದಪಿ ಕಠೋರಾನೀ ಮೃದೂನಿ ಕುಸುಮಾದಪಿ’ ( ವಜ್ರದಂತೆ ಕಠಿಣ, ಹೂವನಂತೆ ಮೃದು) ಎನ್ನುವಂತೆ. ಗವಾಯಿಯವರು ನಿಷ್ಟುರರಾದರೂ, ಕೋಪ ಮಾಡಿಕೊಂಡರೂ ಯಾರನ್ನು ದ್ವೇಷಿಸುತ್ತಿರಲಿಲ್ಲ. 1938  ರಲ್ಲಿ  ಧಾರವಾಡದ ಶಿರಹಟ್ಟಿ ಗ್ರಾಮದಲ್ಲಿ ಒಂದು ವಿಶೇಷ ಸಂಗತಿ ನಡೆಯಿತು. ಆಗ ಅವರು ಅಲ್ಲಿ ಸಂಚಾರಿ ನಾಟಕ ಹಾಗು ಸಂಗೀತ ಶಾಲೆಯೊಂದಿಗೆ ಮೊಕ್ಕಾಂ  ಹೂಡಿದ್ದರು. ಅಲ್ಲಿ ಅವರ ಶಿಷ್ಯರ ಅಚಾತುರ್ಯದಿಂದ  ಒಂದು ಕಷ್ಟಕ್ಕೆ ಗುರಿಯಾದರು.

ಮೊಕ್ಕಾಂ ಹೂಡಿದ್ದ ಬಿಡಾರದ ಬಳಿಯಲ್ಲಿಯೇ ಪುರಸಭೆಯಿಂದ ನಿರ್ಮಿತವಾದ ಒಂದು ಬಾವಿ ಇತ್ತು. ಅಲ್ಲಿ ಗವಾಯಿಯವರ ಶಿಷ್ಯಂದಿರು ಸ್ನಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ಪುರಸಭೆಯ ಅಧಿಕಾರಿಗಳು ಹಾಗೂ ನಾಗರಿಕರು ಅಕ್ಷೇಪಿಸಿದರು. ಇದನ್ನು ಗಣನೆಗೇ ತಾರದೆ ಹುಡುಗರು ಪ್ರತಿನಿತ್ಯ  ಅಲ್ಲಿಯೇ ಸ್ನಾನ ಮಾಡುತ್ತಿದ್ದರು. ಅಧಿಕಾರಿಗಳ ಮನವಿ ಗೋರ್ಕಲ್ಲ ಮೇಲೆ  ಮಳೆ ಸುರಿದಂತಾಯಿತು.

 ನಿರ್ವಾಹವಿಲ್ಲದೆಯೇ ಪುರಸಭೆಯವರು ಗವಾಯಿಯವರಿಗೆ ಒಂಧು ನೋಟೀಸನ್ನು ಕೊಟ್ಟರು. ಅದರಲ್ಲಿ ಗವಾಯಿಯವರು ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ಕ್ಷಮಾಪಣೆ ಕೇಳಬೇಕು ಎಂದು ಆಜ್ಞೆ ಮಾಡಲಾಯಿತ್ತು. ಇಲ್ಲದಿದ್ದರೆ ಐವತ್ತು ರೂಪಾಯಿ ತಪ್ಪು ದಂಡವನ್ನು ಕೊಡಬೇಕು ಎಂದು ತಿಳಿಸಿತ್ತು.

 ನೋಟೀಸನ್ನು ಕಂಡು ಗವಾಯಿಗಳ ಮನಸ್ಸು ತುಂಬಾ ನೊಂದಿತು. ತಮ್ಮ ಶಿಷ್ಯರಿಂದ ಜನರಿಗೆ ಬೇಸರವಾಗುವಂತೆ ಆಗಬಾರದಾಗಿತ್ತು, ಎನ್ನಿಸಿತು. ಒಂದು ದಿನ ಮುಂಜಾನೆ ಗವಾಯಿಯವರು ಯಾರಿಗೂ ಹೇಳದೆ ತಮ್ಮ ಶಿಷ್ಯನೊಬ್ಬನೊಂಧಿಗೆ ಪುರ ಸಭೆಯ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿದರು. ಅಧಿಕಾರಿಗಳಿಗೆ ವಂದಿಸಿ ಅವರಲ್ಲಿ ಸವಿನಯದಿಂದ ತಮ್ಮ ಶಿಷ್ಯರಿಂದ ಆದ ಆಚಾತುರ್ಯಕ್ಕಾಗಿ ಕ್ಷಮೆ ಕೇಳಿ ಕೊಂಡರು.

   ‘’ ನನ್ನ ಶಿಷ್ಯರು ಜನರಿಗೆ ಬೇಸರ ಮತ್ತು ಅನಾನುಕೂಲ ಆಗುವಂತೆ ನಡೆದದ್ದು ತಪ್ಪು. ಅವರ ಪರವಾಗಿ ಕ್ಷಮೆ ಬೇಡುತ್ತೇನೆ. ಮತ್ತೆ ಹೀಗೆ ನಡೆದುಕೊಳ್ಳದಂತೆ ಅವರಿಗೆ ಎಚ್ಚರಿಗೆ ಕೊಡುತ್ತೇನೆ; ಎಂದರು ಆದರೆ ಅಧಿಕಾರಿಗಳು,

  “ ನಿಮ್ಮ ಕ್ಷಮಾಪಣೆಯನ್ನು ಈ ರೀತಿ ನಾನು ಸ್ಚೀಕರಿಸುವುದಿಲ್ಲ ನೀವು ನಿಮ್ಮ ಇಂದಿನ ನಾಕಟದ ಅಥವಾ ಕಾರ್ಯಕ್ರಮದ ಮುನ್ನ ಸಾರ್ವಜನಿಕರಲ್ಲಿ ಕ್ಷಮಾಪಣೆ ಕೇಳಿಕೊಳ್ಳಿ. ಸಾರ್ವಜನಿಕರಿಗೆ ನಿಮ್ಮ ಶಿಷ್ಯಂದಿರು ತೊಂದರೆ ಮಾಡಿರುವುದರಿಂದ ಅವರಲ್ಲಿಯೇ ಕ್ಷಮಾಪಣೆ ಕೇಳಿಕೊಳ್ಳಿ. ಇಲ್ಲವಾದರೆ 50 ರೂಪಾಯಿ ದಂಡ ಕೊಡಿರಿ’ ಎಂದು ಕಟುವಾಗಿ ನುಡಿದರು.

 ಗವಾಯಿಯಗಳು ಚಿಂತಾಕ್ರಾಂತರಾಗಿ, ‘’ ನನಗೆ ಸಾರ್ವಜನಿಕರು ಕೊಟ್ಟಿರುವ ಹಣ ಹೀಗೆ ಜುಲ್ಮಾನೆ ತೆರುವುದು ಕ್ಕಲ್ಲ, ಶಾಲೆಯನ್ನು ಹಾಗೂ ಕಲೆಯನ್ನು ಬೆಳೆಸಲು’’ ಎಂದರು.

  ಗವಾಯಿಯವರ ಶಿಷ್ಯ ಪ್ರಮುಖರು ಅವರು ಸಾರ್ವಜನಿಕವಾಗಿ ಕ್ಷಮೆ ಕೇಳುವುದನ್ನು ಒಪ್ಪಲೇ ಇಲ್ಲ.

  “ ಗುರುಗಳೇ, ನೀವು ಈ ರೀತಿ ಕ್ಷಮಾಪಣೆ ಕೇಳುವುದು ನಿಮ್ಮ ಹಾಗೂ ಶಾಲೆಯ ಹಿರಿಮೆಗೆ ಕಡಿಮೆ’’ ಎಂದರು.

     ಗವಾಯಿಯವರು ಅದಕ್ಕೆ,“ ಇಂದು ಏನೇ ಆಗಲಿ ಕಾರ್ಯಕ್ರಮದ ಮೊದಲು ಕ್ಷಮಾಪಣೆಯನ್ನು ಕೇಳುವೆನು. ಇದರಿಂದ ಯಾರ ಹಿರಿಮೆಗಾದರೂ ಧಕ್ಕೆಯಾಗುವುದಿದ್ದರೆ ಅವರು ಸಂಸ್ಥೆಯನ್ನು ಈಗಿಂದೀಗಲೇ ಬಿಟ್ಟುಹೋಗಬಹುದು’’ ಎಂದರು.

ಅಂದು ಸಂಜೆ ನಾಟಕಕ್ಕಾಗಿ ಸರ್ವಸಿದ್ದತೆ ನಡೆದಿದೆ. ಜನರೆಲ್ಲರೂ ಕಾತರರಾಗಿ ಕುಳಿತಿದ್ದಾರೆ. ಪರದೆ ಸರಿದ ಆನಂತರ ಗವಾಯಿಯವರು ರಂಗಮಂಟಪವನ್ನು ಪ್ರವೇಶಿಸಿದರು.

“ಸಹೃದಯ ಸಾರ್ವಜನಿಕರೇ, ನಮ್ಮ ಶಿಷ್ಯವೃಂದದವರು  ನಿಮಗೆ ಮಾಡಿದ ತೊಂದರೆಗಾಗಿ ನಾನು  ಬಹಳ ವಿಷಾದಿಸುತ್ತೇನೆ. ತಾವು ನಮ್ಮೆಲ್ಲರನ್ನು ದೊಡ್ಡ ಮನಸ್ಸು ಮಾಡಿ ಕ್ಷಮಿಸಬೇಕು’’ ಎಂದು ಹೇಳಿದರು. ಆನಂತರ, “ನಮಗೆ ತುಂಬ ಬೇಸರವಾಗಿರುವುದರಿಂದ ಇಲ್ಲಿ ನಾವು ನಾಟಕ ಆಡಲು ಇಷ್ಟ ಪಡುವುದಿಲ್ಲ. ಇಂದೇ ಶಿರಹಟ್ಟಿ ಗ್ರಾಮದಿಂದ ಹೊರಟು ಗದಗಿನಲ್ಲಿಯೇ ಶಿವ ಪೂಜೆಯನ್ನು ಮಾಡುತ್ತೇವೆ. ನಾಟಕಕ್ಕೆ ನೀವು ಕೊಟ್ಟಿರುವ ಪ್ರವೇಶ ಧನವನ್ನು ವಾಪಸ್ಸು ಕೊಡುತ್ತೇವೆ” ಎಂದರು.

ಅಂದು ವಸೂಲಾಗಿದ್ದ ಹಣ ಎಂಟು ನೂರು  ರೂಪಾಯುಗಳು!

ಶಿರಹಟ್ಟಿ ಗ್ರಾಮದ ಪ್ರಮುಖರು ಬಹಳ ನೊಂದು ಗವಾಯಿಯವರಲ್ಲಿ ಕ್ಷಮೆ ಬೇಡಿದರು. ಆದರೆ ಗವಾಯಿಯವರು ಅವರ ಪ್ರಾರ್ಥನೆಯನ್ನು ಸವಿನಯವಾಗಿ ತಿರಸ್ಕರಿಸಿ ಅಹೋರಾತ್ರಿಯಲ್ಲಿ ಹೊರಟು ಗದಗ  ಸೇರಿದರು.

ಮುಂದೆ ಸ್ವಲ್ಪ ದಿನಗಳ್ಲಲಿಯೇ ಶಿರಹಟ್ಟಿ ಗ್ರಾಮವು ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿತು. ಊರಜನರು ಅಲ್ಲಿನ ಫಕೀರ ಸ್ವಾಮಿಗಳಲ್ಲಿ ಬಿನ್ನಹ ಮಾಡಿಕೊಂಡರು. ಅವರು,       ‘’ನೀವು ಮಹಾ ಶಿವಶರಣ ಪಂಚಾಕ್ಷರ ಗವಾಯಿಯವರನ್ನು ನಿಂದಿಸಿದ್ದುದರಿಂದ ದೈವಕ್ಷೋಭೆಯಾಗಿದೆ. ಅವರಿಗೆ ತಪ್ಪು ಕಾಣಿಕೆ ಒಪ್ಪಿಸಿ. ನಿಮ್ಮ ಕಷ್ಟ ಪರಿಹಾವಾಗುವುದು’’ ಎಂದರು.

ಊರ ಮುಖಂಡರು ಪಂಚಾಕ್ಷರ ಗವಾಯಿಯವರ ಬಳಿಗೆ ಹೋದರು. ಅವರನ್ನು ಭೇಟಿ ಮಾಡಿ, “ ಪೂಜ್ಯರೇ ನಮ್ಮಿಂದ ಬಹಳ ದೊಡ್ಡ ತಪ್ಪಾಗಿದೆ. ನೀವು ದಯಮಾಡಿ ಕ್ಷಮಿಸಬೇಕು’’ ಎಂದು ಪ್ರಾರ್ಥಿಸಿ ಫಕೀರ ಸ್ವಾಮಿಗಳು ಹೇಳಿದುದನ್ನು ಹೇಳಿ. ತಾವು ತಪ್ಪು ಕಾಣಿಕೆಯನ್ನು ತಂದಿರುವ ಸಂಗತಿಯನ್ನು ತಿಳಿಸಿದರು.

 ಗವಾಯಿಯವರು, “ಈ ತಪ್ಪು ಕಾಣಿಕೆಯನ್ನು ಶಿರಹಟ್ಟಿ ಫಕೀರ ಸ್ವಾಮಿಗಳ ಪಾದಕ್ಕೆ  ಒಪ್ಪಿಸಿ.  ಸದಸ್ಯದಲ್ಲಿಯೇ ನಿಮಗೆ ಒಳ್ಳೆಯದಾಗುವುದು’ ಎಂದರು. ಮುಂದೆ ಕೆಲವೇ ದಿನಗಳಲ್ಲಿ ಸಾಂಕ್ರಾಮಿಕ ರೋಗವು ಮಾಯವಾಗಿ ಅಲ್ಲಿ ಶಾಂತಿ ನೆಲೆಸಿತು.

 ‘ ಇನ್ನು ಮುಂದೆ’’:-  ಗದಗಿನ ವೃದ್ಧ ವರ್ತಕ  ಶ್ರೇಷ್ಠರೊಬ್ಬರು ಗವಾಯಿಯವರಿಗೆ ಧನ ಸಹಾಯ ಮಾಡಲು ಒಪ್ಪಿದ್ದರು. ನಿಯಮಿತ ದಿನದಂದು ಗವಾಯಿಯವರು ತಮ್ಮ ಶಿಷ್ಯನೊಂದಿಗೆ ಅವರ ಅಂಗಡಿಗೆ ಹೋದಾಗ ಆ ಮಹನೀಯರು ದುರದೃಷ್ಟವಶಾತ್ ಮನೆಯಲ್ಲಿಲ್ಲ ಎಂಬ ಸುದ್ಧಿ ತಿಳಿಯಿತು. ಅವರ ಮಗನೊಬ್ಬ ಬಂದು ವಿಚಾರಿಸಿದಾಗ ಗವಾಯಿಯವರು ಆತನ ತಂದೆ ಮಾಡಿದ್ದ ಸಹಾಯದ ವಾಗ್ದಾನದ ಬಗೆಗೆ ತಿಳಿಸಿದರು.

ತಕ್ಷಣವೇ ಆತ ಅಸಮಾಧಾನಪಟ್ಟುಕೊಂಡು  ‘’ನಮ್ಮಲ್ಲಿ ವ್ಯಾಪಾರವೇ ಸರಿಯಿರದಿರುವಾಗ ಸಹಾಯ ಮಾಡುವುದಾದರೂ ಹೇಗೇ? ನಮ್ಮ ತಂದೆಗೆ  ತಿಳಿಯುವುದಿಲ್ಲ. ನಮಗೆ ಸಹಾಯ ಮಾಡಲು  ಸಾಧ್ಯವಿಲ್ಲ”  ಎಂದು ಕರಾರುವಕ್ಕಾಗಿ ಹೇಳಿದ.

ಗವಾಯಿಯವರು ತಮಗಾಗಿ ಏನನ್ನೂ ಬೇಡುತ್ತಿರಲಿಲ್ಲ. ಬೇಡುತ್ತಿದ್ದುದ್ದೆಲ್ಲವೂ ಸಂಸ್ಥೆಗಾಗಿ. ಆದ್ದರಿಂದ ಈ ಉತ್ತರವನ್ನು ಕೇಳುತ್ತಲೇ ಅವರಿಗೆ ತೀರ ಅಸಮಾಧಾನವಾಯಿತು. ತಂದೆಗೆ ಏನೊಂದೂ ತಿಳಿಯುವುದಿಲ್ಲ. ಎಂದು ಮಗನಾಡಿದ ಮಾತಿನಿಂದ ಅವರ ಮನಸ್ಸು ಬಹಳ ನೊಂದಿತು. ಅವರು, ‘’ಇನ್ನು ಮುಂದೆ ನಾನು ಮಾತ್ರವಲ್ಲ ನನ್ನ ಕೈಯಲ್ಲಿರುವ ಈ ಬಡಿಗೆ ಸಹ ನಿನ್ನ ಮನೆಯ ಹೊಸ್ತಿಲನ್ನು ತುಳಿಯುವುದಿಲ್ಲ’’ ಎಂದು ನುಡಿದು ಅಲ್ಲಿಂದ ಹೊರಟೇಬಿಟ್ಟರು. ಮುಂದೆ ಹಲವಾರು ವರ್ಷಗಳು ಕಳೆದಮೇಲೆ, ಗವಾಯಿಯವರು ಶಿವೈಕ್ಯರಾದಮೇಲೆ ಅವರ ಶಿಷ್ಯ ಪುಟ್ಟರಾಜ ಗವಾಯಿಗಳು ಆ ವರ್ತಕನ ಮನೆಗೆ ಬಿನ್ನಹಕ್ಕಾಗಿ ಹೋಗಿದ್ದರು. ಅಲ್ಲಿ ಒಂದು ಅತ್ಯಂತ ಸೋಜಿಗವಾದ ಪ್ರಸಂಗ ಉಂಟಾಯಿತು. ಬಂಡಿಯಿಂದ ಇಳಿದ ನಂತರ ಪುಟ್ಟರಾಜ ಗವಾಯಿಯವರು ಒಳಗೆ ಹೋಗಿ ನೋಡಿಕೊಳ್ಳುತ್ತಾರೆ. ದಂಡವೇ ಇಲ್ಲ. ಆ ದಂಡವಿಲ್ಲದೆ ಪುಟ್ಟರಾಜ ಗವಾಯಿಯವರು ಎಲ್ಲಿಯೂ  ಹೋಗಿದ್ದುದಿಲ್ಲ. ಆದರೆ  ಇಂದು ಮಾತ್ರ ಪರಿವೆಯೇ ಇಲ್ಲದೆ ದಂಡವನ್ನು ಬಂಡಿಯಲ್ಲಿಯೇ ಬಿಟ್ಟು ಬಂದು  ಬಿಟ್ಟದ್ದರು. ಮನೆಯಲ್ಲಿ ಕಾರ್ಯಕ್ರಮವನ್ನೆಲ್ಲ ಮುಗಿಸಿ ದಂಡವೆಲ್ಲಿ ಹೋಯ್ತೋ? ಎಂದು ಯೋಚಿಸುತ್ತಾ ಚಿಂತಾ ಕ್ರಾಂತರಾಗಿ ಮಠಕ್ಕೆ ಬಂದರು. ಅಷ್ಟರಲ್ಲಿ ಬಂಡಿಯವನು ಆ ದಂಡವನ್ನು ಪಂಚಾಕ್ಷರ ಗವಾಯಿಯವರದೆಂದು ಗುರತಿಸಿ ಮಠಕ್ಕೆ ಹಿಂತಿರುಗಿಸಿ ಹೋಗಿದ್ದನು.

ಪಂಚಾಕ್ಷರ ಗವಾಯಿಯರ ಮಾತು ಕೊನೆಗೂ ಸುಳ್ಳಾಗಲಿಲ್ಲ. ಅವರು ಲಿಂಗೈಕ್ಯರಾದರೂ ಆ ವರ್ತಕನ ಮನೆಯನ್ನು ಮೆಟ್ಟಬಾರದೆಂಬ ಪ್ರತಿಜ್ಞೆಯನ್ನು ಅವರ ತಂಡವೂ ಮರೆತಿರಲಿಲ್ಲ.

ಶಿಷ್ಯರ ಅನುಭವ:-  ಪಂಚಾಕ್ಷರ ಗವಾಯಿಯಗಳ ನಿರ್ಮಲ ಜೀವನ, ಅಧ್ಯಾತ್ಮಕ ಸಾಧನೆ ಇವುಗಳಿಂದ ಭೂತಗಳೂ ಅವರಲ್ಲಿ ಭಯ ಭಕ್ತಿಗಳನ್ನು ತೋರಿದವು ಎಂದು ಹೇಳುತ್ತಾರೆ. ಇಂತಹ ಹಲವು ಪ್ರಸಂಗಗಳ ಕಥೆಗಳನ್ನು ಅವರ ಶಿಷ್ಯರು ಹೇಳುತ್ತಾರೆ.

 ಮಂಗಳೂರಿನಲ್ಲಿ ಧರ್ಮಮ್ಮ ಎಂಬ ಜೈನ ಮಹಿಳೆ, ಸುಂದರಿ, ಒಳ್ಳೆಯ ಹೆಂಗಸು. ಆಕೆಯನ್ನು ಒಂಧು ಭೂತ ಹಿಡಿದಿತು. ಗವಾಯಿಯವರು ಅವರ ಮನೆಗೆ ಹೋದಾಗ ಭೂತ ಆಕೆಯನ್ನು ಹೊಕ್ಕಿತು. ಗವಾಯಿಯವರು ಹಾಡಬೇಕೆಂದು ಆಕೆ ಪ್ರಾರ್ಥಿಸಿದಳು. ಅವರು ಹಾಡಿದ ನಂತರ ಆಕೆ ಹದಿನೈದು ರೂಪಾಯಿಗಳ ಕಾಣಿಕೆಯನ್ನು ಕೊಟ್ಟಳು. ಗವಾಯಿಯವರು ಪ್ರಶ್ನಿಸಿದಾಗ ಭೂತ ಆಕೆಗೆ ತೊಂದರೆ ಕೊಡುವುದಿಲ್ಲ ಎಂದು ಹೇಳಿತಂತೆ. ಅದು ಮಾಡುತ್ತಿರುವುದು ತಪ್ಪು ಎಂದು ಗವಾಯಿಯವರು ತೋರಿಸಿಕೊಟ್ಟಾಗ, ಅವರ ಆ ಊರಿನಲ್ಲಿರುವಷ್ಟು ದಿನ ತಾನಿದ್ದು ಅನಂತರ ಹೊರಟು ಹೋಗುವುದಾಗಿ ಮಾತು ಕೊಟ್ಟತಂತೆ. ಹಾಗೆಯೇ ಮಾಡಿತಂತೆ.

ಗವಾಯಿಯವರ ಶಿಷ್ಯರು ಇನ್ನೊಂದು ಪ್ರಸಂಗವನ್ನು ಹೇಳುತ್ತಾರೆ. ಅವರ ಶಿಷ್ಯರಲ್ಲಿ ಧಾರವಾಡ ಜಿಲ್ಲೆಯ ನಿಡುಗುಂದಿ ಕೊಪ್ಪದ ಅನ್ನದಾನ ಶರ್ಮ ಬೃಹನ್ನಮಠ ಎಂಬುವರು ಒಬ್ಬರು. ಅವರ ಹೆಂಡತಿಯನ್ನು ಭೂತ ಹಿಡಿಯಿತು. ಯಾವ ಪ್ರಯತ್ನ ಮಾಡಿದರೂ ಭೂತ ಅವಳನ್ನು ಬಿಡಲಿಲ್ಲ. ಕಡೆಗೆ ಗುರುಗಳು ಮಂತ್ರಿಸಿಕೊಟ್ಟ ರುದ್ರಾಕ್ಷಿ ಮಣಿಯನ್ನು ಆಕೆಯ ಕೊರಳಲ್ಲಿ ಕಟ್ಟಿದರು. ಭೂತ ಬಿಟ್ಟುಹೋಯಿತು. ಈ  ಗಂಡ- ಹೆಂಡತಿಯರ ಮಕ್ಕಳು ಬುದ್ಧಿವಂತರಾದರು, ಮುಂದೆ ಬಂದರು. ಅನ್ನದಾನ ಶರ್ಮರು ಕೃತಜ್ಞತೆಯಿಂದ ಗವಾಯಿಯವರ ಆಶ್ರಮದಲ್ಲಿ ವ್ಯವಸ್ಥಾಪಕರಾಗಿ ನಲವತ್ತು ವರ್ಷಗಳ ಕಾಲ ಕೆಲಸ ಮಾಡಿದರು ಎಂದೂ ಶಿಷ್ಯರು ಹೇಳುತ್ತಾರೆ.

ನಿಧನ:-  ಪಂಚಾಕ್ಷರ ಗವಾಯಿಯವರ ಅಜೀವ ಪರ್ಯಂತ ನಿರಂತರ ದುಡಿಮೆಯ ಶ್ರಮ ಅವರ ಕೊನೆಯ ದಿನಗಳಲ್ಲಿ ಅವರ ಆರೋಗ್ಯದ ಮೇಲೆ ಪರಿಣಾಮ ಮಾಡಿತು. ಶುಶ್ರೂಷೆ ನಡೆಸುತ್ತಿದ್ದ ವೈದ್ಯರು ಉದರ ರೋಗವೆಂದು ನಿಶ್ಚಯಿಸಿದರು. ಅದರೆ ಗವಾಯಿಯವರು ಸೂಜಿಮದ್ದು ತೆಗೆದುಕೊಳ್ಳಲು ಒಪ್ಪಲಿಲ್ಲ; ಏಕೆಂದರೆ ಅವರು ತಮ್ಮ ಜೀವಮಾನವಿಡಿ ಆಯುರ್ವೇದದ ರೀತ್ಯ ಮೂಲಿಕೆಗಳನ್ನು ತಮ್ಮ ಪೂಜಾಕಾಲದಲ್ಲಿ ಮಾತ್ರ ಸ್ವೀಕರಿಸುತ್ತಿದ್ದರು. ಆದರೂ ಜನರ ಒತ್ತಾಯದ ಮೇರೆಗೆ ಸುಪ್ರಸಿದ್ಧ ವೈದ್ಯರುಗಳಿಂದ ಔಷಧಿಯನ್ನು ಸ್ವೀಕರಿಸಲು ಒಪ್ಪಿದರು. ಆದರೆ ಇದರಿಂದ ಹೆಚ್ಚು ಪ್ರಯೋಜನವಾಗಲಿಲ್ಲ. ದಿನೇ ದಿನೇ ಹದಗೆಡುತ್ತಿದ್ದ ಗವಾಯಿಯವರ ಆರೋಗ್ಯ ಕಂಡು ದುಃಖಿತರಾದ ಶಿಷ್ಯರ ಚಿಂತೆ ಗೊಳಗಾದರು. ಕೊನೆಗೆ  ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮಾಡಿಸಬೇಕೆಂದು ಸಲಹೆ ಮಾಡಿದರು. ಆದರೆ ಗುರುಗಳು ಸುತರಾಂ ಒಪ್ಪಲಿಲ್ಲ.

ಆದರೆ ಗವಾಯಿಯವರನ್ನು ಕಷ್ಟಪಟ್ಟು ಹಾಲಕೇರಿ ಅನ್ನದಾನಪ್ಪ ಸ್ವಾಮಿಗಳು ಶಸ್ತ್ರಚಿಕಿತ್ಸೆಗೆ ಒಪ್ಪಿಸಿದರು. ಆದರೆ ಆ ವೇಳೆಗಾಗಲೇ ರೋಗದ ತೀವ್ರತೆ ಹೆಚ್ಚಾಗಿದ್ದು ಶಸ್ತ್ರಚಿಕಿತ್ಸೆಯಿಂದ ಏನೂ ಪ್ರಯೋಜನೆವಿಲ್ಲವೆಂದು ವೈದ್ಯರು ಅಭಿಪ್ರಾಯಪಟ್ಟರು. 1944ರ ಜೂನ್ 11ರಂದು (ಜ್ಯೇಷ್ಠ ಬಹುಳ ಪಂಚಮಿ) ವಿದ್ಯಾರ್ಥಿಗಳು ಗುರುಗಳಿಗೆ ಸ್ನಾನಮಾಡಿಸಿ ಲಿಂಗಪೂಜೆಗೆ ಕೂಡಿಸಿದರು. ಆದರೆ ಆಗ ದೇಹದ ಮೇಲಿನ ಪ್ರಜ್ಞೆ ಸಂಪೂರ್ಣವಾಗಿ ಹೊರಟುಹೋಗಿದ್ದರೂ ಲಿಂಗಪೂಜೆಯಲ್ಲಿ ಮಾತ್ರ ನಿಶ್ಚಲವಾಗಿತು. ಲಿಂಗಪೂಜೆಯನ್ನು ಸಾಂಗವಾಗಿ ನೆರೆವೇರಿಸಲು ಪ್ರಾರಂಭಿಸಿದರು. ಆದರೆ ಕ್ರಮೇಣ ಪೂಜೆಯೂ ಕುಂಠಿತವಾಗುತ್ತಿತ್ತು. ಹಸ್ತದಲ್ಲಿ ಇಷ್ಟಲಿಂಗವನ್ನು ಹಿಡಿದು ಪ್ರಕಾಶಮಾನವಾಗಿ ವಿರಾಜಿಸುತ್ತಿದ್ದರು ಗವಾಯಿಯವರು. ಹಿರಿಯರ ಹೇಳಿಕೆಯ ಮೇರೆಗೆ ವಿದ್ಯಾರ್ಥಿಗಳು ಲಿಂಗಕ್ಕೆ ನಿವೇದಿಸಿದ ನೀರನ್ನು ಗುರುಗಳಿಗೆ ಪಾನ ಮಾಡಿಸಿದರು. ಅನಂತರ ಪಂಚಾಕ್ಷರ ಗವಾಯಿಯವರ ಪ್ರಾಣ ಲಿಂಗರೂಪಿ ಶಿವನಲ್ಲಿ ಐಕ್ಯವಾಯಿತು.

 ಗವಾಯಿಯವರನ್ನು ಸಮಾಧಿ ಮಾಡಿ ಜಾಗದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿ ಅನಂತರ ಇವರ ಪ್ರತಿಮೆ ಯನ್ನಿಡಲಾಯಿತು. ಪ್ರತಿವರ್ಷವೂ ಜ್ಯೇಷ್ಠ ಬಹುಳ ಪಂಚಮಿಯಂದು ಪೂಜ್ಯ ಪಂಚಾಕ್ಷರ ಗವಾಯಿಯವರ ಪೂಣ್ಯ ತಿಥಿ ಗದುಗಿನಲ್ಲಿ ಅತ್ಯಂತ ವಿಜೃಂಭಣೆಯಿಂದ ವಿದ್ಯಾಸಂಸ್ಥೆಯ ಇಂದಿನ ಕುಲಪತಿಯವರಾದ ಪುಟ್ಟರಾಜ ಗವಾಯಿಯವರ ನೇತೃತ್ವದಲ್ಲಿ ನಡೆಯುತ್ತದೆ.

ನಾದಯೋಗಿ:- ಪಂಚಾಕ್ಷರ ಗವಾಯಿಯವರು ಕಣ್ಣಿಲ್ಲದ ಕಷ್ಟವನ್ನೂ ಸಹಿಸಿ, ಎಂತಹ ಬಾಳನ್ನು ಬಾಳಿದರು ಎಂದು ನೆನೆದರೆ ವಿಸ್ಮಯವಾಗುತ್ತದೆ. ಕರ್ನಾಟಕ ಸಂಗೀತ, ಹಿಂದೂ ಸ್ತಾನಿ ಸಂಗೀತ-ಎರಡರಲ್ಲಿ ಒಂದನ್ನು ಚೆನ್ನಾಗಿ ಕಲಿಯುವುದೇ ಕಷ್ಟದ ಸಾಧನೆ. ಗವಾಯಿಯವರು ಎರಡು ಶೈಲಿಗಳಲ್ಲೂ ಪರಿಣತರಾದರು. ಒಂದು ಮನೆಯ ಮಕ್ಕಳನ್ನು ಪೋಷಿಸಿ ಅವರಿಗೆ ವಿದ್ಯಾಭ್ಯಾಸ ಕೊಡಿಸಿ ದೊಡ್ಡವರನ್ನಾಗಿ ಮಾಡುವುದೇ ಕಷ್ಟ. ಪಂಚಾಕ್ಷರಿ ಹಲವಾರು ಕುರುಡರು. ಅಂತಹವರನ್ನು ಸೇರಿಸಿಕೊಂಡು ಅವರನ್ನು ಪೋಷಿಸಿ ಅವರ ಯೋಗಕ್ಷೇಮದ ಹೊಣೆಯನ್ನು ಹೊತ್ತು ಅವರಿಗೆ ಸಂಗೀತದ ವಿದ್ಯಾಭ್ಯಾಸ ಮಾಡಿಸಿದರು. ತಮಗಾಗಿ ಏನನ್ನೂ ಬಯಸಲಿಲ್ಲ, ಶಿಷ್ಯರಿಗಾಗಿ- ಸಂಸ್ಥೆಗಾಗಿ ಸಂಗೀತಕ್ಕಾಗಿ ಬೇಡಿದರು, ಕಷ್ಟಪಟ್ಟರು. ಶಿಷ್ಯರಿಗೆ ತಂದೆ, ತಾಯಿ, ಗುರು ಎಲ್ಲ ಅವರೇ ಆದರು. ಈ ಮಹಾನ್ ನಾದಯೋಗಿಗೆ ನಮನ.

News & Events