ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಶ್ರೀ ಪುಟ್ಟರಾಜ ಗವಾಯಿಗಳು

ಶ್ರೀ ಪುಟ್ಟರಾಜ ಗವಾಯಿಗಳವರ ಜೀವನ

        ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಕನ್ನಡ ನಾಡಿನ ಸಾಂಸ್ಕ್ರತಿಕ ಕ್ಷೇತ್ರಕ್ಕೆ ಬಹುರೂಪವಾಗಿ ಅಪಾರ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿ-ಶಕ್ತಿ, ಆಧ್ಯಾತ್ಮಿಕ ಸಾಧನೆ, ಸಂಗೀತ ಸಿದ್ದಿ, ಸಾಹಿತ್ಯ ಕೃತಿಗಳ ರಚನೆ, ಅಂಧ-ಅನಾಥ ಮಕ್ಕಳ ಪೋಷಣೆ-ಶಿಕ್ಷಣ; ವೃತ್ತಿರಂಗಭೂಮಿಯ ಮೂಲಕ ಕಲಾ ರಕ್ಷಣೆ, ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನ ಪ್ರಸಾರ, ಇಂಥ ಹಲವಾರು ಕ್ಷೇತ್ರಗಳನ್ನು ನಿತ್ಯವೂ ತಮ್ಮ ಸಾರಥ್ಯದಲ್ಲಿ ಸಮರ್ಥವಾಗಿ ನಡೆಸಿಕೊಂಡು ಬರುವುದರೊಂದಿಗೆ ಬಹುಭಾಷಾ ಪಂಡಿತರಾಗಿ; ವಾಗ್ಗೇಯಕಾರರಾಗಿ, ಗಾಯಕರಾಗಿ, ವಾದಕರಾಗಿ, ನಾಟಕಕಾರರಾಗಿ, ಕವಿಗಳಾಗಿ, ವಚನಕಾರರಾಗಿ, ಹೊಸ ರಾಗಗಳ ಅನ್ವೇಶಕರಾಗಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಯನ್ನು ಸಲ್ಲಿಸಿರುವ, ಸಲ್ಲಿಸುತ್ತಿರುವ; ಪುಟ್ಟರಾಜ ಗವಾಯಿಗಳ ಬದುಕು-ಬರಹಗಳ ಅಧ್ಯಯನವು ವೈವಿಧ್ಯಮಯವಾದುದು ಹಾಗೂ ಕುತೂಹಲಕಾರಿಯಾಗಿದೆ.

        ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ ಅವರ ಸಂಗೀತದ ಮಹೋನ್ನತ ಸೇವೆ ಅನುಪಮ, ಅಮೋಘ, ಗವಾಯಿಗಳವರ ಸೃಜನ ಶೀಲ ಸಾಹಿತ್ಯವೆಲ್ಲವೂ ರೂಪ ತಾಳಿದುದು ಆಧ್ಯಾತ್ಮ ಸಾಧನೆಯ ಅಸ್ತಿ ಭಾರದ ಮೇಲೆ, ಅವರದು ಶರಣ ಜೀವನ. ಪರಿಶುದ್ಧ ಆಚಾರ, ನಡೆ-ನುಡಿಗಳೊಂದಿಗೆ ಸದಾ ಕಾಯಕ ನಿರತರಾಗಿ ಶಿಷ್ಯ ಬಳಗಕ್ಕೆ ವಿದ್ಯೆಯನ್ನು ಧಾರೆ ಯೆರೆಯುತ್ತಾ ಸಮಾಜದ ಸರ್ವತೋಮುಖ ಬೆಳವಣಿಗೆಯತ್ತ ಗಮನಹರಿಸುತ್ತ ಸಾರ್ಥಕ ಬದುಕನ್ನು ಸವೆಯಿಸಿದ ಪಂಡಿತ ಪುಟ್ಟರಾಜ ಗವಾಯಿಗಳ ಜೀವನಾದರ್ಶಗಳು ಅನುಕರಣೀ ಯವಾದವುಗಳು.

        ಒಬ್ಬ ಕವಿಯ ಸಾಹಿತ್ಯ ಕೃತಿಗಳ ಅವಲೋಕನಕ್ಕಿಂತ ಪೂರ್ವದಲ್ಲಿ ಅವರ ಜೀವನವನ್ನು, ಪರಿಸರವನ್ನು, ಯುಗವನ್ನು ಅರಿತುಕೊಳ್ಳುವುದು ಅತ್ಯಂತ ಅವಶ್ಯಕಾರಿಯಾದುದು. ಕವಿಯ ಜೀವನ ದರ್ಶನವೇ ಅವರ ಕೃತಿಯಲ್ಲಿ ಮೂಡಿಬರುವುದರಿಂದ ಕವಿಯ ಬದುಕನ್ನು ಅರ್ಥೈಸಿಕೊಂಡಾಗ ಆತನಿಂದ ರಚಿತಗೊಂಡ ಸಾಹಿತ್ಯ ಕೃತಿಗಳು ಅರ್ಥವಾಗುತ್ತವೆ. ಕವಿ-ಕೃತಿಗಳಲ್ಲಿ ಪರಸ್ಪರ ಅನ್ಯೋನ್ಯ ಸಂಬಂಧವಿರುವುದರಿಂದ ಕೃತಿಗಳ ಅಧ್ಯಯನಕ್ಕೆ ಪೂರ್ವದಲ್ಲಿ ಕೃತಿಕಾರರ ಜೀವನ ವೃತ್ತಾಂತವನ್ನರಿಯುವುದು ಯಥೋಚಿತವಾದದು.

ಪಂಡಿತ ಪುಟ್ಟರಾಜ ಗವಾಯಿಗಳವರ ಪೂರ್ವಿಕರ ಮನೆತನ:

        “ಪಂಡಿತ ಡಾ.ಪುಟ್ಟರಾಜ ಗವಾಯಿಗಳು” ಎಂಬ ಕಾವ್ಯ ನಾಮದಿಂದಲೇ ಸಾಹಿತ್ಯ-ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾದ ಗವಾಯಿಗಳ ಪೂರ್ಣ ಹೆಸರು ಪುಟ್ಟಯ್ಯ ರೇವಯ್ಯ ವೆಂಕಟಾಪೂರಮಠ. ಗವಾಯಿಗಳವರ ಮನೆತನಕ್ಕೆ ‘ವೆಂಕಟಾಪೂರಮಠ’ ಎಂಬ ಹೆಸರು ಬಂದುದು “ವೆಂಕಟಾಪೂರ” ಎಂಬ ಗ್ರಾಮದಿಂದ. ಪುಟ್ಟಯ್ಯನವರ ಮನೆತನದ ಹೆಸರನ್ನುಹೊಂದಿದ “ವೆಂಕಟಾಪೂರ” ಗ್ರಾಮ ಧಾರವಾಡ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ (ನೂತನ ಜಿಲ್ಲೆಗಳ ಅಸ್ತಿತ್ವಕ್ಕೆ ಬಂದ ಮೇಲೆ ಹಾನಗಲ್ಲ ಹಾವೇರಿ ಜಿಲ್ಲೆಗೆ ಸೇರಿದೆ) ಮಲೆನಾಡಿನ ಪ್ರಾಕೃತಿಕ ಪರಿಸರವನ್ನು ಹೊಂದಿದ ಒಂದು ಚಿಕ್ಕ ಹಳ್ಳಿ. ಗವಾಯಿಗಳವರ ಪೂರ್ವಿಕರು ವೆಂಕಟಾಪೂರದಿಂದ “ಹೊಸಪೇಟೆ” ಎಂಬ ಹಳ್ಳಿಗೆ ಬಂದು ನೆಲೆಸಿದರು. ವೆಂಕಟಾಪೂರದಲ್ಲಿ ವೀರಶೈವ ಹಿರೇಮಠ ಮನೆತನದವರಾದ ಇವರು ವೆಂಕಟಾಪೂರದ ದಿಂಗಾಲೇಶ್ವರ ವಿರಕ್ತಮಠದ ಸರ್ವಧರ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಕಾಲಾಂತರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಹೊಸಪೇಟೆಯ ಗ್ರಾಮಸ್ಥರು ತಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ವೆಂಕಟಾಪೂರದಲ್ಲಿದ್ದ ಹಿರೇಮಠದ ಒಂದು ಮನೆತನದವರನ್ನು ಕರೆದುಕೊಂಡು ಬಂದು ತಮ್ಮ ಊರಲ್ಲಿ ಆಶ್ರಯವಿತ್ತು ಅವರನ್ನು ತಮ್ಮ ಗುರುಗಳೆಂದು ಗೌರವಿಸಿದರು. ಮುಂದೆ ಅವರ ಮನೆತನಕ್ಕೆ ವೆಂಕಟಾಪೂರ ಎಂಬ ಊರಿನ ರೂಪವು ಮತ್ತು ಹಿರೇಮಠ ಮನೆತನದಲ್ಲಿಯ ಮಠ ಎಂಬ ರೂಪವು ಸಂಯುಕ್ತಗೊಂಡು ಅವರ ಮನೆತನವು ಹೊಸಪೇಟೆಯಲ್ಲಿ “ವೆಂಕಟಾಪೂರಮಠ” ಎಂದು ಗುರುತಿಸಲ್ಪಟ್ಟಿತು. ಅದೇ ಹೆಸರು ಇಂದಿಗೂ ಗವಾಯಿಗಳವರ ಮನೆತನಕ್ಕೆ ಉಳಿದುಕೊಂಡು ಬಂದಿದೆ.

        ಪಂ.ಪುಟ್ಟರಾಜ ಗವಾಯಿಗಳ ಮನೆತನದ ಇತಿಹಾಸ ತಿಳಿಯುವುದು ಕೇವಲ ಎರಡು ತಲೆಮಾರಿನಿಂದ ಈಚೆಗೆ. ಸಿದ್ದಯ್ಯ ಹಿರೇಮಠ ಎಂಬುದು ಪುಟ್ಟರಾಜ ಗವಾಯಿಗಳವರ ಅಜ್ಜಂದಿರ ಹೆಸರು ವೀರಶೈವ ಧರ್ಮದ ಆಚಾರ ವಿಚಾರಗಳು, ದೀಕ್ಷೆ ಧಾರ್ಮಿಕ ವಿಧಾನಗಳನ್ನು ನಡೆಸಿಕೊಡುವ ಜಂಗಮರು (ಅಯ್ಯನವರು) ಸಿದ್ದಯ್ಯನವರಿಗೆ ಗದಿಗಯ್ಯ ಮತ್ತು ರೇವಣಯ್ಯ (ರೇವಯ್ಯ) ಎಂಬ ಇಬ್ಬರು ಗಂಡು ಮಕ್ಕಳು. ವೆಂಕಟಾಪೂರದಿಂದ ಹೊಸಪೇಟೆಗೆ ಬಂದು ನೆಲೆಸಿದರು ರೇವಣಯ್ಯನವರು. ಸಿದ್ದಯ್ಯನವರ ಇನ್ನೋರ್ವ ಮಗನಾದ ಗದಿಗಯ್ಯನವರು ತಮ್ಮ ಊರಾದ ವೆಂಕಟಾಪೂರದಲ್ಲಿ ಉಳಿದುಕೊಂಡರು.

        ರೇವಣಯ್ಯನವರಿಗೆ ಇಬ್ಬರು ಹೆಂಡಂದಿರು ಮೊದಲನೆಯವರು ಸವಣೂರು ತಾಲ್ಲೂಕಿನ ಹಿರೇಮಳ್ಳಳ್ಳಿ ಗ್ರಾಮದವರು ಇವರ ಹೆಸರು ಗದಿಗೆವ್ವ ಇವರಿಗೆ 1) ರೇವಣಯ್ಯ 2) ಬಸವ್ವ 3) ಈರಮ್ಮ 4) ಬಸವಣ್ಣೆಯ್ಯ ಎಂಬ ನಾಲ್ವರು ಮಕ್ಕಳಾದರು. ರೇವಣಯ್ಯ ಮತ್ತು ಗದಿಗೆಮ್ಮನವರ ಕೌಟುಂಬಿಕ ಜೀವನದಲ್ಲಿಯ ಕೆಲ ಕಹಿ ಘಟನೆಗಳು, ರೇವಣಯ್ಯನವರು ಮರುಮದುವೆ ನಡೆಯಲು ಕಾರಣವಾದವು.

        ರೇವಣಯ್ಯನವರು ತಮ್ಮ ಎರಡನೆಯ ಹೆಂಡತಿಯನ್ನಾಗಿ ಹಾವೇರಿ ತಾಲ್ಲೂಕಿನ ಕರ್ಜಗಿಯ ಹತ್ತಿರದ ದೇವಗಿರಿ ಗ್ರಾಮದ “ಮಳ್ಳೇಗಟ್ಟಿ ಹಿರೇಮಠ” ಮನೆತನದ ಗದಿಗಯ್ಯನವರ ಮಗಳಾದ ಸಿದ್ದಮ್ಮನನ್ನು ಮದುವೆಯಾದರು. ಸಿದ್ದಮ್ಮನವರನ್ನು ಮೊದಲ ಹೆರಿಗೆಗಾಗಿ ತವರೂರಾದ ದೇವರಿಗೆ ಕರೆತಂದರು. ಸಿದ್ದಮ್ಮನಿಗೆ ಚಂದ್ರಶೇಖರಯ್ಯ ಎಂಬ ಸಹೋದರನಿದ್ದನು. ಮನೆಯ ಎಲ್ಲ ಕಾರ್ಯಗಳನ್ನು ಇವನೇ ನಿರ್ವಹಣೆ ಮಾಡುತ್ತಿದ್ದನು. ಸಿದ್ದಮ್ಮನ ಕ್ರಿ.ಶ.1914ನೇಯ ಮಾರ್ಚ್ ತಿಂಗಳು 3ನೇಯ ತಾರೀಖು ಮಂಗಳವಾರದಂದು ಗಂಡು ಮಗುವಿಗೆ ಜನ್ಮ ನೀಡಿದಳು. ನಾಡು-ನುಡಿ-ಸಂಗೀತ ಲೋಕಕ್ಕೆ ಮಹಾಶಕ್ತಿಯನ್ನು ನೀಡುವ ಪುಣ್ಯಪುರುಷನನ್ನು ಹೆತ್ತ ಭಾಗ್ಯ ಸಿದ್ದಮ್ಮನದಾದರೆ, ಆಶ್ರಯವಿತ್ತು ಜನ್ಮ ಭೂಮಿ ಎನಿಸಿಕೊಂಡ ಖ್ಯಾತಿ ದೇವಗಿರಿಯದಾಯಿತು. ಮಗುವಿಗೆ ತಾಯಿ ಮನೆಯವರು ಪುಟ್ಟಯ್ಯ ಎಂದು ನಾಮಕರಣ ಮಾಡಿ ಹೆಸರಿಟ್ಟರು. ತಂದೆಯ ಮನೆಯವರು ‘ಚೆನ್ನಬಸವಯ್ಯ’ ಎಂದು ಕರೆಯುತ್ತಿದ್ದರಂತೆ. ಆದರೆ ಗವಾಯಿಗಳವರ ಹೆಸರು-ಸಾಹಿತ್ಯ-ಸಂಗೀತ ಕ್ಷೇತ್ರದಲ್ಲಿ ತಾಯಿಮನೆಯವರು ಕರೆದ ಪುಟ್ಟಯ್ಯ, ಪುಟ್ಟಯ್ಯಸ್ವಾಮಿ, ಪುಟ್ಟಯ್ಯ ಗವಾಯಿ, ‘ಪುಟ್ಟರಾಜ ಗವಾಯಿಗಳು’ ಎಂದೇ ಪ್ರಚಾರ ಮತ್ತು ಪ್ರಸಿದ್ಧಿ ಪಡೆಯಿತು.

ಬಾಲಕ ಪುಟ್ಟಯ್ಯ ಅಂಧನಾದದ್ದು:

        ಸಾಧು ಕಪ್ಪು ವರ್ಣದ, ಕಿರುಗಾತ್ರ ದೇಹದ ಮಗು ಮಿಂಚಿನಂತೆ ಬೆಳಕಿನ ಕಣ್ಣುಗಳ ಮೂಲಕ ಮಗು ಮುದ್ದಾದ ನಗೆಯೊಂದಿಗೆ ತನ್ನತ್ತ ಎಲ್ಲರನ್ನು ಆಕರ್ಷಿಸುತ್ತಿತ್ತು. ಆದರೆ ಬೆಳೆವ ಸಸಿಗೆ ನೂರು ಕುತ್ತೆನ್ನುವಂತೆ ಆರು ತಿಂಗಳಿನ ಬಾಳಕನಿದ್ದಾಗ ಪುಟ್ಟಯ್ಯನಿಗೆ ಕಣ್ಣು ಬೇನೆ ಕಾಣಿಸಿಕೊಂಡಿತು. ದಿನದಿಂದ ದಿನಕ್ಕೆ ಬೇನೆ ಉಲ್ಬಣಗೊಂಡು ಕಣ್ಣಲ್ಲಿ ಪರಿಬೆಳೆಯಿತು. ಪರಿಯನ್ನು ನಿವಾರಿಸಲು ನಾಟಿ ವೈದ್ಯರಲ್ಲಿಗೆ ವಿಚಾರಿಸಲು ಹೋದಾಗ ಅವರು ಕಣ್ಣಿನ ಪರಿಯನ್ನು ಹರಿಯಲು ತೊನಸಿಗಳನ್ನು ಮುಟ್ಟಿಸುವಂತೆ ಸಲಹೆ ಸೂಚಿಸಿದರು. ತಾಯಿಯು ತೊನಸಿಗಳನ್ನು ಬಾಲಕ ಪುಟ್ಟಯ್ಯನ ಕಣ್ಣುಗಳಿಗೆ ಮುಟ್ಟಿಸಲು ಹೋದಾಗ ಅವು ಕೈಜಾರಿ ಕಣ್ಣಿನೊಳಗೆ ಬಿದ್ದವು. ತೊನಿಸಿ ಹುಳುಗಳ ಪೊರೆ ಹರಿಯುವುದರ ಬದಲು ಎಳೆಯ ಬಾಲಕನ ಕಣ್ಣುಗುಡ್ಡೆಯನ್ನೆ ತಿಂದು ಹಾಕಿದವು. ಮೂರು ದಿವಸಕ್ಕೆ ಬಾಲಕ ಪುಟ್ಟಯ್ಯನ ಕಣ್ಣ ಗುಡ್ಡೆಗಳು ದೃಷ್ಟಿಯನ್ನು ಗುರುತಿಸುವ ಶಕ್ತಿಯನ್ನು ಕಳೆದುಕೊಂಡು ಬೆಳ್ಳಗಾಗಿದ್ದವು. ನಾಟಿ ವೈದ್ಯರ ಸಲಹೆ ಮಗುವಿನ ಬೇನೆಯನ್ನು ಕಳೆಯುವುದಕ್ಕೆ ಪ್ರತಿಯಾಗಿ ಕಣ್ಣನ್ನೇ ಕಳೆದುಬಿಟ್ಟಿತು. ಪುಟ್ಟಯ್ಯನು ಕಣ್ಣುಗಳನ್ನು ಕಳೆದುಕೊಂಡಾಗ (ಮಗುವಿನ) ವಯಸ್ಸು ಆರು ತಿಂಗಳಾಗಿದ್ದವು. ಬೆಳೆಯುವ ಬಾಲಕನ ದೃಷ್ಟಿ ಹೀನತೆಯಿಂದ ತಾಯಿಗೆ ಅಪಾರ ದುಃಖವಾಯಿತು.

        ಎಳೆಯ ಬಾಲಕನನ್ನು ಎದುರನಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸಿದ್ದಮ್ಮನ ಬದುಕಿನಲ್ಲಿ ಮತ್ತೊಂದು ಬಿರುಗಾಳಿ ಬೀಸಿತು. ರೇವಣಯ್ಯನವರಿಗೆ ವಯಸ್ಸಾದಂತೆ ದೇಹದಲ್ಲಿ ವ್ಯಾಧಿ ಕಾಣಿಸಿಕೊಂಡುದರ ಪರಿಣಾಮಾವಾಗಿ ದಿನದಿನಕ್ಕೆ ಆರೋಗ್ಯವು ಹದಗೆಟ್ಟಿತು. ಗುಣವಾಗದ ರೋಗದಿಂದ ಬಳಲಿ ಬೆಂಡಾದ ರೇವಣಯ್ಯನವರು 26-11-1916 ರಂದು ಹೊಸಪೇಟೆಯಲ್ಲಿ ನಿಧನರಾದರು. ರೇವಣಯ್ಯನವರ ಅಗಲಿಕೆಯಿಂದ ಸಿದ್ದಮ್ಮನ ಕೌಟುಂಬಿಕ ಪರಿಸ್ಥಿತಿಯು ಗಂಭೀರ ಮತ್ತು ಅಸಹಾಯಕತೆಯನ್ನು ಹೊಂದಿತು. ಜೀವನ ನಿರ್ವಹಣೆ ಕಠಿಣವಾಯಿತು. ಈ ಸಂದರ್ಭದಲ್ಲಿ ಬಾಲಕ ಪುಟ್ಟಯ್ಯನಿಗೆ ಮತ್ತು ಸಿದ್ದಮ್ಮನವರಿಗೆ ಆಶ್ರಯವಾಗಿ ಬಂದವರು ಅವರ ಸಹೋದರನಾದ ಚಂದ್ರಶೇಖರಯ್ಯನವರು. ಹೊಸಪೇಟೆಯಿಂದ ಸಿದ್ದಮ್ಮ ಹಾಗೂ ಎರಡು ವರ್ಷದ ಪುಟ್ಟಯ್ಯನವರನ್ನು ಕರೆದುಕೊಂಡು ತಮ್ಮೂರಾದ ದೇವಗಿರಿಯ ಮನೆಯಲ್ಲಿರಿಸಿಕೊಂಡು ಪೋಷಕರಾಗಿ ಬಾಲಕ ಪುಟ್ಟಯ್ಯನ ಜೀವನ ಜವಾಬ್ದಾರಿಯ ಹೊಣೆಯನ್ನು ತಮ್ಮ ಹೆಗಲಿಗೆ ಹೊತ್ತುಕೊಂಡರು.

ಸೋದರಮಾವ ಚಂದ್ರಶೇಖರಯ್ಯನವರ ಆಶ್ರಯದಲ್ಲಿ ಪುಟ್ಟಯ್ಯನ ಸಂಗೀತಾಭ್ಯಾಸ:

        ಚಂದ್ರಶೇಖರಯ್ಯನವರು ಪುಟ್ಟಯ್ಯನವರ ತಾಯಿಯಾದ ಸಿದ್ದಮ್ಮನವರ ಹಿರಿಯ ಸಹೋದರರು, ಪಂಡಿತ ಪಂಚಾಕ್ಷರ ಗವಾಯಿಗಳ ಶಿಷ್ಯರು ಹೌದು. ಚಂದ್ರಶೇಖರಯ್ಯನವರು ಒಳ್ಳೆಯ ಸಂಗೀತಗಾರರು. ತಮ್ಮ ಸುಮಧುರ ಕಂಠದಿಂದ ಹಾಡುವ ಕಲೆಯಲ್ಲಿ ನಿಷ್ಣಾತರಾದುದರಿಂದ ಜನರು ಇವರನ್ನು ಒಳ್ಳೆಯ ಗಾಯಕರೆಂದು ಗೌರವಿಸುತ್ತಿದ್ದರು. ವೀರಶೈವ ಧರ್ಮದ ಆಚಾರ-ವಿಚಾರಗಳಲ್ಲಿ ಅಪಾರ ನಿಷ್ಠೆಯುಳ್ಳವರಾಗಿದ್ದ ಅವರು ಹಾರ್ಮೋನಿಯಂ ನುಡಿಸುವಲ್ಲಿ ಸಿದ್ಧಹಸ್ತರಾಗಿದ್ದರು. ಸಂಗೀತ ಸಾಹಿತ್ಯಗಳಲ್ಲಿ ಅಭಿರುಚಿ ಹೊಂದಿದ ಚಂದ್ರಶೇಖರಯ್ಯನವರು ಪಂಡಿತ ಪಂಚಾಕ್ಷರ ಗವಾಯಿಗಳವರ ಶಿಷ್ಯರಾಗಿದ್ದರು. ಚಂದ್ರಶೇಖರಯ್ಯನವರು ದೇವಗಿರಿ ಗ್ರಾಮದಲ್ಲಿಯ ಜನರಿಗೆ ಭಜನೆಯ ಹಾಡುಗಳನ್ನು, ತತ್ವಪದಗಳನ್ನು, ಅನುಭಾವ ಗೀತೆಗಳನ್ನು ಹೇಳಿಕೊಡುತ್ತ ಜನರಲ್ಲಿ ಸಂಗೀತದ ಬಗ್ಗೆ ಆಸಕ್ತಿಯನ್ನು ಮೂಡಿಸುವ ಕಾರ್ಯ ಮಾಡುತ್ತಿದ್ದರು.

ಪುಟ್ಟಯ್ಯನಿಗೆ ಸಂಗೀತಾಭ್ಯಾಸ ಪ್ರಾರಂಭ:

        ಬಾಲಕನಾದ ಪುಟ್ಟಯ್ಯನ ವ್ಯಕ್ತಿತ್ವವನ್ನು ರೂಪಿಸುವುದನ್ನು ಕುರಿತು ಚಿಂತನೆ ಮಾಡುತ್ತಿದ್ದ ಚಂದ್ರಶೇಖರಯ್ಯನವರು ಆಗಾಗ ಪುಟ್ಟಯ್ಯನವರಿಗೆ ಸಂಗೀತದ ಪರಿಚಯ ಮಾಡಿಕೊಡುತ್ತ ಕಣ್ಣಿಲ್ಲದ ಅಳಿಯ ಪುಟ್ಟಯ್ಯನನ್ನು ವಿದ್ಯಾವಂತನನ್ನಾಗಿ ಬೆಳೆಸಿ, ಸಂಗೀತ ಲೋಕದ ಶ್ರೇಷ್ಠ ಸಾಧಕನನ್ನು ಮಾಡುವ ಗುರಿಯನ್ನು ಹೊಂದಿದ್ದರು. ತಮ್ಮ ಗುರಿಯನ್ನು ನನಸಾಗಿಸಲು ಪುಟ್ಟಯ್ಯನವರ ಮನಸ್ಸು ಸಂಗೀತ ಅಭ್ಯಾಸದಲ್ಲಿ ತೊಡಗುವಂತೆ ನಿತ್ಯವು ಅವನಿಗೆ ಸಂಗೀತದ ರಾಗ – ಸ್ವರ, ಲಯಾಗಾರಿಕೆಗಳ ಪ್ರಾಥಮಿಕ ಕಲಿಕೆಯನ್ನು ನೀಡುತ್ತ ಬಂದರು. ಆದುದರಿಂದ ಚಂದ್ರಶೇಖರಯ್ಯನವರು ಪುಟ್ಟಯ್ಯನಿಗೆ ಮೊದಲ ಗುರುವಾಗುವುದರೊಂದಿಗೆ ಸಂಗೀತ ಲೋಕದಲ್ಲಿ ಅವನೊಬ್ಬ ಶ್ರೇಷ್ಠ ಗವಾಯಿಯಾಗಿ ಬೆಳೆಸುವ ಅವರ ಗುರಿ ದಿನದಿಂದ ದಿನಕ್ಕೆ ಮನದಲ್ಲಿ ಗಟ್ಟಿಗೊಳ್ಳುತ್ತಾ ನಡೆಯಿತು.

        ಬಾಲಕ ಪುಟ್ಟಯ್ಯ ಅತ್ಯಂತ ಕುಶಾಗ್ರಮತಿ. ಒಂದು ಸಾರಿ ತಿಳಿಸಿದ ಯಾವುದೇ ವಿಷಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಅದನ್ನೇ ಸದಾಕಾಲ ಮೆಲುಕು ಹಾಕುವದರೊಂದಿಗೆ ವಿಷಯ ಜ್ಞಾನವನ್ನು ತನ್ನದಾಗಿಸಿಕೊಳ್ಳುತ್ತಿದ್ದನು. ‘ನೆಲದ ಮರೆಯ ನಿಧಾನದಂತೆ’ ಪುಟ್ಟಯ್ಯನಲ್ಲಿ ಅವ್ಯಕ್ತ ಸಂಗೀತ ಶಕ್ತಿ ರೂಪುಗೊಳ್ಳುತ್ತಾ ಬಂದಿತು. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕ ಪುಟ್ಟಯ್ಯನು ಮಾವ ಚಂದ್ರಶೇಖರಯ್ಯನವರು ನುಡಿಸುತ್ತಿದ್ದ ಹಾರ್ಮೋನಿಯಂ ತೆಗೆದುಕೊಂಡು ಅತ್ಯಂತ ರಾಗಬದ್ಧವಾಗಿ ನುಡಿಸುತ್ತಾ ಅದರಲ್ಲಿಯೇ ತಲ್ಲೀನನಾಗಿ ಆನಂದ ಭರಿತನಾಗಿದ್ದನು. ಮನೆಗೆ ಬಂದ ಚಂದ್ರಶೇಖರಯ್ಯನವರು ಅಳಿಯ ಪುಟ್ಟಯ್ಯನು ಹಾರ್ಮೋನಿಯಂ ನುಡಿಸುತ್ತಿರುವದನ್ನು ಆಲಿಸಿ ಪುಟ್ಟಯ್ಯನಲ್ಲಿದ್ದ ಅವ್ಯಕ್ತ ಶಕ್ತಿಗೆ ಉತ್ತಮ ಸಂಸ್ಕಾರ ನೀಡಿದರೆ ಮುಂದೊಂದು ದಿನ ದೊಡ್ಡ ಸಂಗೀತ ಸಾಧಕನಾಗುತ್ತಾನೆಂಬುದನ್ನು ದೃಢಪಡಿಸಿಕೊಂಡರು. ಚಂದ್ರಶೇಖರಯ್ಯನವರು ತಮ್ಮಲ್ಲಿ ಗುರುಗಳಿಂದ ಕಲಿತು ಬಂದ ಎಲ್ಲ ಸಂಗೀತ ವಿದ್ಯೆಯನ್ನು ಅಳಿಯನಿಗೆ ಧಾರೆಯರೆದರು. ಐದಾರು ವರ್ಷಗಳಲ್ಲಿ ಪುಟ್ಟಯ್ಯ ವಚನ, ಚೀಜು, ತತ್ವಪದಗಳನ್ನು ಲಯಬದ್ಧವಾಗಿ, ವಾದ್ಯಗಳೊಂದಿಗೆ ಹಾಡುವಲ್ಲಿ ಯಶಸ್ವಿ ಸಾಧಕನಾದನು. ಪುಟ್ಟಯ್ಯನಲ್ಲಿದ್ದ ಕ್ರಿಯಾ ಶಕ್ತಿಯು ಅವನಲ್ಲಿ ಕಲಿಯುವ ತೃಷೆಯನ್ನು ತೀವ್ರಗೊಳಿಸುತ್ತಿತ್ತು. ಹೆಚ್ಚಿನ ಸಂಗೀತಾಭ್ಯಾಸವನ್ನು ಸಮರ್ಥ ಗುರುಗಳ ಮೂಲಕ ಪುಟ್ಟಯ್ಯನಿಗೆ ದೊರಕಿಸಬೇಕೆಂಬ ಉದ್ದೇಶದಿಂದ ಗುರುಗಳ ಶೋಧನೆಯಲ್ಲಿದ್ದಾಗ ಚಂದ್ರಶೇಖರಯ್ಯನವರು ತಮ್ಮ ಗುರುಗಳಾದ ಪಂ.ಪಂಚಾಕ್ಷರ ಗವಾಯಿಗಳೇ ಸಮರ್ಥರೆಂದು ದೃಢಪಡಿಸಿಕೊಂಡು ಈ ವಿಷಯವನ್ನು ಅಳಿಯನಿಗೆ ತಿಳಿಸಿದಾಗ ಪುಟ್ಟಯ್ಯ ತನ್ನ ಬಾಳಿನ ಪುಣ್ಯದ ದಿನಗಳು ಬಾಗಿಲಿಗೆ ಬಂದಿದ್ದನ್ನು ಕೇಳಿ ಹರ್ಷದಿಂದ ತನ್ನ ಜೀವನ ರಥಕ್ಕೆ ತಾನೆ ಸಾರಥಿಯಾಗಿ ಸಾಗಲು ದೃಢ ಮನಸ್ಸು ಮಾಡಿ (ಗುರುಗಳತ್ತ) ಮಾವನೊಂದಿಗೆ ಪಂಚಾಕ್ಷರ ಗವಾಯಿಗಳಲ್ಲಿಗೆ ವಿದ್ಯೆ ಪಡೆಯಲು ಸನ್ನದ್ಧನಾಗಿ ತಾಯಿ ಮನೆ ದೇವಗಿರಿಯಿಂದ ಹೊರಟನು.

 ಪಂಡಿತ ಪಂಚಾಕ್ಷರ ಗವಾಯಿಗಳ ಸಂಗೀತ ಪಾಠಶಾಲೆಯ ಪ್ರವೇಶ:

ಸಂಗೀತ ಸಾಹಿತ್ಯ ಅಭ್ಯಾಸ:

        ಪಂಡಿತ ಪಂಚಾಕ್ಷರ ಗವಾಯಿಗಳು ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಕರಸಂಜಾತ ಶಿಷ್ಯರು. ಪಂಚಾಕ್ಷರ ಗವಾಯಿಗಳವರನ್ನು ಒಂದು ಶಕ್ತಿಯಾಗಿ ಬೆಳೆಸಿದ ಹಾನಗಲ್ಲ ಕುಮಾರ ಸ್ವಾಮಿಗಳು ಶಿವಯೋಗ ಮಂದಿರದ ಸಂಸ್ಥಾಪಕರು. ಪಂಚಾಕ್ಷರ ಗವಾಯಿಗಳ ಮೂಲಕ ಉತ್ತರ ಕರ್ನಾಟಕದಲ್ಲಿ ಸಂಗೀತ ಪರಂಪರೆ ಉಜ್ವಲವಾಗಿ ಬೆಳೆಯಲು ಪ್ರೇರಣೆ ನೀಡಿದ ಕಾರಣಿಕ ಪುರುಷರು. ಶಿವಯೋಗ ಮಂದಿರದಲ್ಲಿ ಅನೇಕ ವರ್ಷಗಳ ಕಾಲ ಆಶ್ರಯವಿತ್ತು ಪಂಚಾಕ್ಷರ ಗವಾಯಿಗಳನ್ನು ಶ್ರೇಷ್ಠ ಸಂಗೀತಗಾರರನ್ನಾಗಿ ಮಾಡುವಲ್ಲಿ ಕುಮಾರ ಸ್ವಾಮಿಗಳ ಕೃಪಾಪಾತ್ರ ಮನನೀಯವಾದದು. ಶಿವಯೋಗ ಮಂದಿರದಲ್ಲಿದ್ದ ಸಂಗೀತ ಶಾಲೆ ಕಾರಣಾಂತಗಳಿಂದ ಶಿವಯೋಗ ಮಂದಿರದಿಂದ ಬೇರ್ಪಟ್ಟು “ಸಂಚಾರಿ ಸಂಗೀತ ಶಾಲೆ” ಯಾಗಿ ಅಂಧ-ಅನಾಥ ಮಕ್ಕಳಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಾ ಊರಿಂದ ಊರಿಗೆ ಸಂಚಾರ ಮಾಡುತ್ತ ನವಿಲುಗುಂದದ ಗವಿಮಠದಲ್ಲಿ ಕ್ಯಾಂಪು (ವಾಸ) ಮಾಡಿತ್ತು. ಗವಿಮಠದ ಪೀಠಾಧಿಪತಿಗಳಾದ ಶ್ರೀ ನಿ.ಪ್ರ.ಬಸವಲಿಂಗ ಸ್ವಾಮಿಗಳು ಗವಾಯಿಗಳವರಿಗೆ ಮಠದಲ್ಲಿ ಆಶ್ರಯವಿತ್ತು, ವಿದ್ಯಾರ್ಥಿಗಳಿಗೆ ವಾರಾನ್ನದ ಮನೆಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಂಚಾಕ್ಷರ ಗವಾಯಿಗಳು ನವಿಲಗುಂದದಲ್ಲಿ ಇದ್ದಾಗ ಚಂದ್ರಶೇಖರಯ್ಯನವರು ಅಳಿಯನಾದ ಪುಟ್ಟಯ್ಯನನ್ನು ಕರೆದುಕೊಂಡು ಪಂಚಾಕ್ಷರಿ ಗವಾಯಿಗಳವರಿಗೆ ತಮ್ಮ ಆಶ್ರಯದಲ್ಲಿ ವಿದ್ಯೆ ಕಲಿಸಲು ಪುಟ್ಟಯ್ಯನನ್ನು ಕರೆತಂದ ಸಂಗತಿಯನ್ನು ತಿಳಿಸಿದರು. ವಿನಮ್ರನಾಗಿ ಪುಟ್ಟಯ್ಯನು ಪಂಚಾಕ್ಷರ ಗವಾಯಿಗಳಿಗೆ ಶಿರಬಾಗಿ ಗುರುಪಾದಕ್ಕೆ ನಮನ ಸಲ್ಲಿಸಿದನು.

        ಪಂಚಾಕ್ಷರ ಗವಾಯಿಗಳಿಗೆ ಚಂದ್ರಶೇಖರಯ್ಯನವರು “ಪುಟ್ಟಯ್ಯನ ಬಾಳು-ಬೆಳಗುವಂತೆ ಬೆಳೆಸುವದು ತಮ್ಮದೆಂದೂ, ಅವನ ಬದುಕಿನ ಸರ್ವಸ್ವ ತಾವೆ ಎಂದು. ಬಾಲಕನ ತಂದೆ-ತಾಯಿ ಗುರು ತಾವೆಂದು” ಹೇಳಿ ಅಪ್ಪಣೆ ಪಡೆದು ಚಂದ್ರಶೇಖರಯ್ಯನವರು ತಮ್ಮೂರಿಗೆ ಸಾಗಿದರು. ಪಂಚಾಕ್ಷರ ಗವಾಯಿಗಳು ತಮ್ಮಲ್ಲಿಗೆ ಬಂದ ಪುಟ್ಟಯ್ಯನನ್ನು ಕಂಡು ಧ್ಯಾನಾಸಕ್ತರಾದರು. ಧ್ಯಾನದ ನಂತರ ಪುಟ್ಟಯ್ಯನಲ್ಲಿ ನಾಡು ಬೆಳಗುವಶಕ್ತಿ ಇದೆ ಎಂದು ಗುರುತಿಸಿಕೊಂಡರು. ಪಂಚಾಕ್ಷರ ಗವಾಯಿಗಳು ಪುಟ್ಟಯ್ಯನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿಕೊಂಡರು.

        ಪುಟ್ಟಯ್ಯನು ನವಿಲಗುಂದದ ಗವಿಮಠದಲ್ಲಿ ಕ್ಯಾಂಪು ಮಾಡಿದ ಸಂಚಾರಿ ಸಂಗೀತ ಪಾಠಶಾಲೆಯನ್ನು ಪ್ರವೇಶಿಸಿದ ನಂತರ ಎಲ್ಲ ವಿದ್ಯಾರ್ಥಿಗಳಿಗೆ ನೇಮಿಸಿದಂತೆ ಈತನಿಗೂ ವಾರಾನ್ನದ ಮನೆಯನ್ನು ಪಂಚಾಕ್ಷರ ಗವಾಯಿಗಳು ಗೊತ್ತುಪಡಿಸಿದರು. ನವಿಲಗುಂದದ ಕೆಸರಪ್ಪ ದಾನಪ್ಪನವರ ಮನೆಯೇ ಪುಟ್ಟಯ್ಯನ ವಾರಾನ್ನದ ಮೊದಲ ಮನೆಯಾಯಿತು. ಬಾಲಕ ಪುಟ್ಟಯ್ಯನು ವಿನಮ್ರತೆ. ತಾಳ್ಮೆ, ಸ್ಥಿತಪ್ರಜ್ಞೆಗಳ ಮೂಲಕ ಬಹುಬೇಗನೆ ಜನಗಳ ಪ್ರೀತಿಗೆ ಪಾತ್ರನಾದನು. ಈ ದಿನಗಳಲ್ಲಿ ತನ್ನ ಬದುಕಿನ ಸಾಧನೆಯನ್ನು ಗುರುತಿಸಿಕೊಳ್ಳುವದಕ್ಕಾಗಿ ದೃಢವಾಗಿ ನಿತ್ಯವೂ ಕ್ರಿಯಾಶೀಲನಾಗಿ ಚಟುವಟಿಕೆಯಿಂದಿರುತ್ತಿದ್ದನು. ಮನೆಯವರು ನೀಡಿದ್ದನ್ನೇ ಊಟ ಮಾಡಿ ತನ್ನ ವಿದ್ಯಾರ್ಜನೆಗೆ ಸನ್ನದ್ಧನಾಗುತ್ತಿದ್ದನು. ಊಟವೇ ಪ್ರಧಾನವಲ್ಲವೆಂದು ಪುಟ್ಟಯ್ಯ ಹಸಿವಿಗಾಗಿ ಪ್ರಸಾದ ಎಂದು ಸ್ವೀಕರಿಸಿ ಸಂಗೀತ ಕಲಿಯುವ ತನ್ನ ಜ್ಞಾನ ಹಸಿವೆಯನ್ನು ತೃಪ್ತಿ ಪಡಿಸಿಕೊಳ್ಳುವಲ್ಲಿ ಜಾಗೃತನಾಗಿರುತ್ತಿದ್ದನು.

ಕರುಣಾಮೂರ್ತಿ ಪಂಡಿತ ಪಂಚಾಕ್ಷರ ಗವಾಯಿಗಳು

        ಪಂಚಾಕ್ಷರ ಗವಾಯಿಗಳ ವಿದ್ಯಾರ್ಥಿವಾತ್ಸಲ್ಯ ಅನ್ಯಾಸದೃಶವಾಗಿತ್ತು. ಅವರು ವಿದ್ವತ್ತು ಮತ್ತು ವಾತ್ಸಲ್ಯದಿಂದಾಗಿ ತಮ್ಮಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಆಕರ್ಷಿಸಿದರು. ಜಾತಿ, ಮತ, ಪಂಥಗಳ ಭೇದವಿಲ್ಲದೆ. ವಿದ್ಯಾದಾನ ಮಾಡುತ್ತಿದ್ದ “ಸಂಚಾರಿ ಸಂಗೀತ ಪಾಠಶಾಲೆ” ಯು ಪುಟ್ಟರಾಜ  ಗವಾಯಿಗಳಿಗೆ ವಿಶ್ವದ ಬಂಧುತ್ವದ ಸರ್ವಮತಗಳಲ್ಲಿ ಸಮಾನತೆಯನ್ನು ಕಾಣುವ ಹಿರಿತನವನ್ನು ಕಿರಿಯ ವಯಸ್ಸಿನ ಬಾಲಕನ ಮನಸ್ಸಿನಲ್ಲಿ ಗಟ್ಟಿಗೊಳಿಸುತ್ತಿತ್ತು.

ಸಂಗೀತ ಸಾಧಕನಾಗಿ ಪುಟ್ಟರಾಜ

        ಪುಟ್ಟಯ್ಯನು ಸಂಚಾರಿ ಸಂಗೀತ ಪಾಠಶಾಲೆಯನ್ನು ಸೇರಿದ ಮೇಲೆ ಅವನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡ ಪಂಚಾಕ್ಷರಿ ಗವಾಯಿಗಳು ಪುಟ್ಟಯ್ಯನಿಗೆ ಹಾರ್ಮೋನಿಯಂ ಕಲಿಸುವುದರ ಮೂಲಕ ಸಂಗೀತ ವಿದ್ಯಾಭ್ಯಾಸವನ್ನು ಪ್ರಾರಂಭಗೊಳಿಸಿದರು. ಪುಟ್ಟಯ್ಯನವರ ವಿದ್ಯಾಗುರುಗಳನ್ನು ಎರಡು ವಿಧದಲ್ಲಿ ಗುರುತಿಸಬಹುದು. ಮೊದಲನೆಯದಾಗಿ ಸಂಗೀತ ಗುರುಗಳು, ತದನಂತರ ಸಾಹಿತ್ಯ ಗುರುಗಳು.

        ಪಂಚಾಕ್ಷರ ಗವಾಯಿಗಳು ತಾವು ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ್ಯ ಮಾಡುತ್ತಿರುವಾಗ ಸ್ಥಳದಲ್ಲಿದ್ದ ಸಂಗೀತಗಾರರನ್ನು ಭೇಟಿಯಾಗಿ ಸಂಗೀತವನ್ನು ಕಲಿಯುವದರೊಂದಿಗೆ ತಮ್ಮ ವಿದ್ಯಾರ್ಥಿಯಾಗಿದ್ದ ಪುಟ್ಟಯ್ಯನವರಿಗೂ ತಿಳಿಸಿಕೊಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಗುರು-ಶಿಷ್ಯರಿಬ್ಬರೂ ಕೂಡಿಯೇ ಸಂಗೀತ ವಿದ್ಯೆಯನ್ನು ತಿಳಿಸಿಕೊಳ್ಳುವ ಪ್ರಸಂಗಗಳೂ ಬರುತ್ತಿದ್ದವು.

        ಪಂಚಾಕ್ಷರ ಗವಾಯಿಗಳು ಹಾರ್ಮೋನಿಯಂ ವಾದನದಲ್ಲಿ ಉತ್ತರಾದಿ ಸಂಗೀತವನ್ನು ಪುಟ್ಟಯ್ಯನವರಿಗೆ ಕಲಿಸತೊಡಗಿದರೆ ಸಂಚಾರಿ ಪಾಠಶಾಲೆಯಲ್ಲಿಯೇ ಇದ್ದ ಗದಿಗೆಪ್ಪ ಗವಾಯಿಗಳು “ತಬಲಾ” ವಾದ್ಯ ನುಡಿಸುವ ವಿದ್ಯೆಯನ್ನು ತಿಳಿಸಿಕೊಟ್ಟರು. ದಿನದಿನದ ಪಾಠಗಳನ್ನು ಸಂಪೂರ್ಣವಾಗಿ ಕರಗತವಾಗುವವರೆಗೆ ಪುಟ್ಟಯ್ಯನು ದೃಢವಾಗಿ ಆಧ್ಯಯನಶೀಲನಾಗಿ ಸಂಗೀತವನ್ನು ಅಭ್ಯಸಿಸುತ್ತಿದ್ದನು. ದಿನದಿಂದ ದಿನಕ್ಕೆ ಪುಟ್ಟಯ್ಯನು ಸಂಗೀತ ಅಭ್ಯಾಸದೊಡನೆ ತಾನೂ ಬೆಳೆಯತೊಡಗಿದನು.

        ಪಂಚಾಕ್ಷರ ಗವಾಯಿಗಳವರ ಸಂಚಾರಿ ಸಂಗೀತ ಪಾಠಶಾಲೆಯು ಇಪ್ಪತ್ತೆಂಟು (1914-1942) ವರ್ಷಗಳ ಕಾಲ ನಾಡಿನಾದ್ಯಂತ ಸಂಚರಿಸುತ್ತಿದ್ದ ಅವಧಿಯಲ್ಲಿಯೇ ಸಂಗೀತದ ಲೋಕದ ದಿಗ್ಗಜರಿಂದ ಬೇರೆ ಬೇರೆ ವಾದ್ಯಗಳನ್ನು ನುಡಿಸುವಲ್ಲಿ ಪುಟ್ಟರಾಜರು ಪರಿಣತರಾದರು. ಪುಟ್ಟರಾಜರು ನಾಟಕ ಕಂಪನಿಯನ್ನು ಸ್ಥಾಪಿಸುವ ವೇಳೆಗಾಗಲೇ ಪ್ರಖ್ಯಾತ ಸಂಗೀತ ವಾದಕರೆಂದು ಜನ ಮೆಚ್ಚುಗೆ ಪಡೆದಿದ್ದರು.

        ಪುಟ್ಟಯ್ಯನವರು ಒಳ್ಳೆಯ ಸಂಗೀತವಾದಕರಾಗುವದಕ್ಕೆ ಆಯಾ ವಾದ್ಯಗಳಲ್ಲಿ ಪ್ರಖ್ಯಾತರಾದ ವಾದಕರಿಂದ ಸಂಗೀತಾಭ್ಯಾಸವನ್ನು ಪಡೆದರು. ತಮ್ಮ ವಿಶೇಷ ಕೌಶಲ್ಯವನ್ನು ಪಡೆದ ಹಾರ್ಮೋನಿಯಂ ವಾದನ ಅಭ್ಯಾಸವನ್ನು ಸೋದರಮಾವಂದಿರಾದ ಚಂದ್ರ ಶೇಖರಯ್ಯನವರಿಂದ ಹಾಗೂ ಗುರುಗಳಾದ ಪಂಡಿತ ಪಂಚಾಕ್ಷರ ಗವಾಯಿಗಳಿಂದ ಕಲಿತರು. ಸಾರಂಗಿ ವಿದ್ಯೆಯನ್ನು ಗೋಕಾಕದ ತುಕಾರಾಮ ಬುವಾ ಹಾಗೂ ತಮ್ಮಣ್ಣಾ ಸಾಹೇಬ ಮಿರಜಕರ್ ಇವರಿಂದ; ಕಮತಗಿಯ ಗದಿಗೆಪ್ಪ ಗವಾಯಿಗಳಿಂದ ತಬಲಾ ವಾದ್ಯವನ್ನು ನುಡಿಸುವುದನ್ನು ಕಲಿತರು. ವಾಯಲಿನ್ ವಾದ್ಯ ನುಡಿಸುವದನ್ನು ರಾಘವೇಂದ್ರಾಚಾರ್ಯರು ಹರಪನಹಳ್ಳಿ ಇವರಿಂದ; ವೀಣೆ ನುಡಿಸುವುದನ್ನು ಮೈಸೂರು ಆಸ್ಥಾನ ವಿದ್ವಾನ್ ದೇವೇಂದ್ರಪ್ಪನವರು ನ್ಯಾಮ್ತಿ ಇವರಿಂದ ಕಲಿತರು. ಪುಟ್ಟಯ್ಯನವರು ಪ್ರತಿಯೊಂದು ವಿಷಯ, ಸಂಗೀತ, ಯಾವುದೇ ಅಭ್ಯಾಸವನ್ನು ಅತ್ಯಂತ ನಿಷ್ಠತೆ, ಏಕಾಗ್ರತೆಯಿಂದ ಸಂಪೂರ್ಣವಾಗಿ ಖಚಿತವಾಗಿ ಸ್ಪಷ್ಟಪಡಿಸಿಕೊಂಡು ಸಾಹಿತ್ಯ-ಸಂಗೀತಗಳಲ್ಲಿ ತಮ್ಮ ಪ್ರಬುದ್ಧತೆಯನ್ನು ಪಡೆದುಕೊಂಡು ಯಶಸ್ವಿ ಸಂಗೀತ ಸಾಧಕರಾದರು. ಪುಟ್ಟರಾಜ ಗವಾಯಿಗಳವರು ಸುಮಾರು ಮೂವತ್ತು ವಾದ್ಯಗಳನ್ನು ನುಡಿಸಬಲ್ಲ ಸಾಧಕರಾಗಿ ನಿರ್ಮಾಣವಾದರು.

ಸಾಹಿತ್ಯಾರಾಧಕರಾಗಿ ಪಂಡಿತ ಪುಟ್ಟರಾಜ ಗವಾಯಿಗಳು

        ಪುಟ್ಟಯ್ಯನವರು ಸಂಗೀತವನ್ನು ಕಲಿಯುವದರೊಂದಿಗೆ ಸಾಹಿತ್ಯ ಅಧ್ಯಯನದ ಅಭ್ಯಾಸದತ್ತ ತಮ್ಮ ಆಸಕ್ತಿಯನ್ನು ತೋರಿಸುವುದನ್ನು ಗುರುತಿಸಿದ ಪಂಚಾಕ್ಷರ ಗವಾಯಿಗಳು ಪ್ರತಿಯೊಂದು ವಿಷಯದಲ್ಲಿ ಪರಿಣಿತಿ ಪಡೆದ ಪ್ರತಿಭಾವಂತರಿಂದ, ವಿದ್ವಾಂಸರಿಂದ ವಿವಿಧ ಶಾಸ್ತ್ರಗಳ ಅಧ್ಯಯನಕ್ಕ ಅನುಕೂಲ ಮಾಡಿದರು.

        ಕಂಪ್ಲಿಯವರಾದ ಚಂದ್ರಶೇಖರ ಶಾಸ್ತ್ರಿಗಳು, ಪಗಡದಿನ್ನಿ ಹಿರೇಮಠ ಇವರು ಪುಟ್ಟಯ್ಯ ನವರಿಗೆ ಛಂದಸ್ಸು, ಶಬ್ದಮಣಿ ದರ್ಪಣ ವಿಷಯವನ್ನು ತಿಳಿಸಿದರು. ಬಾಗಲಕೋಟೆಯಲ್ಲಿ ಸಂಸ್ಕ್ರತ ಪಾಠಶಾಲಾ ಶಿಕ್ಷಕರಾಗಿದ್ದ ಕಲಿಗಣನಾಥ ಶಾಸ್ತ್ರಿಗಳು ತರ್ಕಶಾಸ್ತ್ರ, ನ್ಯಾಯಶಾಸ್ತ್ರ ವಿಷಯವನ್ನು ತಿಳಿಸಿದರು. ಸಂಸ್ಕ್ರತ ಅಭ್ಯಾಸವನ್ನು ಜೇರಟಗಿಯ ಸದಾಶಿವ ಶಾಸ್ತ್ರಿಗಳು ಮಳೇಮಠ ಇವರಿಂದ ತಿಳಿದುಕೊಂಡರು. ಪಂಡಿತ ನಾಗಭೂಷಣ ಶಾಸ್ತ್ರಿಗಳು ಸಂಗನಾಳ ಹಿರೇಮಠ ಇವರಿಂದ ವೇದಾಂತ, ಭಾಷೆ, ನ್ಯಾಯಶಾಸ್ತ್ರ, ಕೈವಲ್ಯ ಪದ್ಧತಿ, ಮೊಗ್ಗೆಯ ಮಾಹಿದೇವನ ಶತಕತ್ರಯ ಕೃತಿಗಳ ಅಧ್ಯಯನ ನಡೆಯಿತು. ತಾಳಿಕೋಟೆಯ ಬಸಪ್ಪಯ್ಯ ಬೆಳಗಲಿಮಠ ಶಾಸ್ತ್ರಿಗಳಿಂದ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ ಪಾರಮಾರ್ಥಗೀತೆ, ಅನುಭವಸಾರ, ವಿಚಾರಸಾಂಖ್ಯ ವಿಷಯಗಳನ್ನು ಅಭ್ಯಸಿಸಿದ ಪುಟ್ಟರಾಜ ಗವಾಯಿಗಳು, ವಿರೂಪಾಕ್ಷಶಾಸ್ತ್ರಿಗಳು ಗಾರವಾಡ ಇವರಿಂದ ಶಬ್ದಾನುಶಾಸನವನ್ನು ಪರಿಚಯಿಸಿಕೊಂಡರು. ರೋಣದ ಪಟ್ಟದ ದೇವರಾದ ಅಂಕಲಗಿ ಸಿದ್ದರಾಮಸ್ವಾಮಿಗಳವರಿಂದ ಛಂದಸ್ಸನ್ನು ಕರಗತ ಮಾಡಿಕೊಂಡರು. ಬಾಗಲಕೋಟೆಯ ಶಿರೂರು ಗ್ರಾಮದವರಾದ ಶಿವಬಸಪ್ಪಮಾಸ್ತರ ಇವರಿಂದ ಕನ್ನಡ ವ್ಯಾಕರಣವನ್ನು ತಿಳಿದುಕೊಂಡು, ಹಿರೂರಿನ ಶಾಸ್ತ್ರಿಗಳಿಂದ ಅಲಂಕಾರ ಶಾಸ್ತ್ರವನ್ನು ಅಧ್ಯಯನ ಮಾಡಿದರು. ಅಂಧರಿಗಾಗಿ ಸಂಶೋಧಿಸಿದ ಬ್ರೈಲ್ ಲಿಪಿಯ ಅಧ್ಯಯನವನ್ನು ಮೈಸೂರಿನ ವೆಂಕಟಪ್ಪ ಬಳ್ಳಾರಿ ಇವರಿಂದ ಹಸ್ತಗತವಾಗಿ ರೂಢಿಸಿಕೊಂಡರು. ಹಿಂದಿ ಭಾಷೆಯನ್ನು ಗದುಗಿನ ನಗರಸಭೆಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ಆರ್.ಎಸ್.ದೇಶಪಾಂಡೆ ಇವರಿಂದ ಕಲಿತರು.

        ಪುಟ್ಟಯ್ಯನವರು ಸಾಧಕರಾಗಿ ಪಂಚಾಕ್ಷರ ಗವಾಯಿಗಳೊಂದಿಗೆ ಸಂಚಾರಿ ಸಂಗೀತ ಪಾಠಶಾಲೆಯಲ್ಲಿ ಸಾಹಿತ್ಯ ಅಭ್ಯಾಸದೊಂದಿಗೆ; ಸಂಗೀತ ವಾದ್ಯಗಳನ್ನು ನುಡಿಸುವ ಕಲೆಯನ್ನು ಕರಗತ ಮಾಡಿಕೊಂಡರು. ಪಂಚಾಕ್ಷರ ಗವಾಯಿಗಳು ತಾವು ಸಾಧನೆ-ಸಿದ್ಧಿಯಿಂದ ಪಡೆದುಕೊಂಡು ಎಲ್ಲಾ ಸಂಗೀತ ವಿದ್ಯೆಯನ್ನು ಪುಟ್ಟಯ್ಯನವರಿಗೆ ಧಾರೆಯರೆದರು. ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದಲ್ಲಿ ಪುಟ್ಟಯ್ಯನವರು ಪ್ರಾವಿಣ್ಯ ಪಡೆದುಕೊಂಡು ಉಭಯಗಾಯನ ವಿಶಾರದರಾದಂತೆ ಕನ್ನಡ, ಸಂಸ್ಕ್ರತ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಭುತ್ವವನ್ನು ಸಾಧಿಸಿ, ತ್ರಿಭಾಷಾ ಪಂಡಿತರಾದರು.

ಲೈಕಿಕ ಬಂಧನದಿಂದ ಮುಕ್ತ:

        ಪಂಚಾಕ್ಷರ ಗವಾಯಿಗಳವರ ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಿ ಸಂಗೀತ ಮಹಾವಿದ್ಯಾಲಯ ಇಪ್ಪತ್ತು ವರ್ಷಗಳಲ್ಲಿ ಬಹುಕಾಲ ಕರ್ನಾಟಕ ತುಂಬೆಲ್ಲ ಸಂಚರಿಸುತ್ತಲೇ ಸಾಗಿತ್ತು. ಪುಟ್ಟಯ್ಯನವರು ಸಂಗೀತ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಿದ್ದರು. ಪುಟ್ಟಯ್ಯನವರು ಬೆಳೆದು ದೊಡ್ಡವರಾದಂತೆ ಅವರ ಬದುಕಿನ ನಿಜವಾದ ಗುರಿಯನ್ನು ನಿರ್ಧಾರ ಮಾಡುವದಕ್ಕಾಗಿ ಪುಟ್ಟಯ್ಯನವರ ಪಾಲಕರಾದ ಹಾಗೂ ತಮ್ಮ ಶಿಷ್ಯರಾಗಿದ್ದ ವೇ.ಪಂ. ಚಂದ್ರಶೇಖರಯ್ಯನವರು ಮೆಳ್ಳಾಗಟ್ಟಮಠ ದೇವಗಿರಿ ಇವರನ್ನು ಪಂಚಾಕ್ಷರ ಗವಾಯಿಗಳು, ಸಂಗೀತ ಶಾಲೆಯು ರಾಣೇಬೆನ್ನೂರ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ವಾಸ್ತವ್ಯ ಮಾಡಿದಾಗ ಕರೆಯಿಸಿ ಅವರ ಅಭಿಪ್ರಾಯವನ್ನು ಕೇಳಿಕೊಂಡು ಪುಟ್ಟಯ್ಯನವರನ್ನು ತಮ್ಮ ಶಿಷ್ಯನನ್ನಾಗಿ ನೇಮಿಸಿಕೊಳ್ಳಲು, ಸಮಾಜ ಸೇವೆಗೆ ಅರ್ಪಿಸುವ ವಿಚಾರವನ್ನು ತಿಳಿಸಿದರು. ಪಂಚಾಕ್ಷರ ಗವಾಯಿಗಳವರ ನಿರ್ಧಾರಕ್ಕೆ ಚಂದ್ರಶೇಖರಯ್ಯ ನವರು ಒಪ್ಪಿಗೆಯನ್ನು ಕೊಟ್ಟು ಪುಟ್ಟಯ್ಯನವರ ಸರ್ವಪಾಲನೆ, ಪೋಷಣೆಯನ್ನು ಪಂಚಾಕ್ಷರ ಗವಾಯಿಗಳವರಿಗೆ ಒಪ್ಪಿಸಿದರು.

        ಪುಟ್ಟಯ್ಯನು ಬೆಳೆದು ದೊಡ್ಡವನಾದ ಸಂಗತಿಯನ್ನು ಸಹೋದರರಿಂದ ತಿಳಿದುಕೊಂಡ ತಾಯಿ ಸಿದ್ದಮ್ಮನ ಪಂಚಾಕ್ಷರ ಗವಾಯಿಗಳವರು ಹೊಳೆ ಆಲೂರಿನಲ್ಲಿ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಮಗನನ್ನು ಕಾಣಲು ಬಂದಳು. ಮಗನನ್ನು ಕಂಡು ಹರ್ಷಗೊಂಡ ಸಿದ್ದಮ್ಮನು ಮನೆಗೆ ಮಗನನ್ನು ಬರುವಂತೆ ಕೇಳಿಕೊಂಡಳು. ಪುಟ್ಟಯ್ಯನವರು ತಮ್ಮ ಜೀವನ ಸರ್ವಸ್ವ ಎಲ್ಲವೂ ಪಂಚಾಕ್ಷರ ಗವಾಯಿಗಳೆಂದು ನಿರ್ಧಿಸಿರುವುದರಿಂದ ಅವರ ಶಿಷ್ಯನಾಗಿ ಮುಂದುವರೆಯುವುದಾಗಿ ತಾಯಿಗೆ ತಮ್ಮ ನಿರ್ಧಾರವನ್ನು ತಿಳಿಸಿದರು.

ಪುಟ್ಟಯ್ಯನನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ವಿಚಾರವಾಗಿ ತಾಯಿ ಸಿದ್ದಮ್ಮಳು ಪಂಚಾಕ್ಷರ ಗವಾಯಿಗಳನ್ನು ಕೇಳಿಕೊಂಡಳು. ಪಂಚಾಕ್ಷರ ಗವಾಯಿಗಳು ಪುಟ್ಟಯ್ಯನ ನಿರ್ಣಯವೇ ತಮ್ಮ ನಿರ್ಧಾರವೆಂದು ಸಿದ್ದಮ್ಮಗೆ ಹೇಳಲು, ಮಗನಲ್ಲಿಗೆ ಸಿದ್ದಮ್ಮನ ಬಂದು ವಿಚಾರಿಸಲು “ನನ್ನ ಬದುಕಿಗೆ ಆಶ್ರಯ, ನೆಲೆ, ವಿದ್ಯೆಯನ್ನು ನೀಡಿ ಬೆಳೆಸಿದ ಪಂಚಾಕ್ಷರ ಗವಾಯಿಗಳೇ ನನಗೆ ತಂದೆ ಮತ್ತು ತಾಯಿ ಅವರನ್ನು ಬಿಟ್ಟು ಬಾಳುವದಾಗಲಿ ಬೇರೆ ಇರುವುದಾಗಲಿ ಸಾಧ್ಯವಿಲ್ಲ. ಅವರೇ ನನ್ನ ಮುಂದಿನ ಜೀವನದ ಗುರಿ ಮತ್ತು ಗುರು ಎಂದು ಹೇಳಿ ತಾವು ಜೀವನದುದ್ದಕ್ಕೂ ಅವರ ಶಿಷ್ಯರಾಗಿರುವುದಾಗಿ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿ ತಾಯಿಗೆ ತಮ್ಮನ್ನು ಪಂಚಾಕ್ಷರ ಗವಾಯಿಗಳಿಗೆ ಅರ್ಪಿಸಿದ ಶಿಷ್ಯನೆಂದು ಅರಿಯುವುದಾಗಿ ಹೇಳಿದರು. ಪಂಚಾಕ್ಷರ ಗವಾಯಿಗಳು ಪುಟ್ಟಯ್ಯನ ದೃಢ ನಿರ್ಧಾರವನ್ನು ಹಾಗೂ ಆತ ಇಟ್ಟುಕೊಂಡು ಸಾಧಿಸಬಯಸಿದ ಗುರಿಯ ವಿಷಯವನ್ನು ತಿಳಿದು ಅವನನ್ನು ಒಬ್ಬ ಶ್ರೇಷ್ಠ ಸಂಗೀತ ಸಾಧಕನನ್ನಾಗಿ ಮಾಡುವ ಮಹಾಕಾರ್ಯಕ್ಕೆ ಸಿದ್ದನಾಗುವುದಕ್ಕೆ ಬೇಕಾದ ಎಲ್ಲ ಅನುಕೂಲ ಮತ್ತು ಅವಶ್ಯಕತೆಗಳನ್ನು ಒದಗಿಸತೊಡಗಿದರು. ಯೋಗಸಾಧಕರೂ, ಹಾನಗಲ್ಲ ಕುಮಾರಸ್ವಾಮಿಗಳ ಒಡನಾಡಿಗಳು, ಪಂಚಾಕ್ಷರ ಗವಾಯಿಗಳ ಗುರುಗಳೂ ಆದ ಕಂಚಗಲ್ಲು-ಬಿದಿರಿಮಠ ದೊಡ್ಡಮಠದ ಪೀಠಾಧಿಪತಿಗಳಾದ (1890-1931) ಶ್ರೀ ಮ.ಘ.ಚ. ಪ್ರಭುಕುಮಾರ ಪಟ್ಟಾಧ್ಯಕ್ಷರಿಂದ ಪುಟ್ಟಯ್ಯನವರಿಗೆ ಶಿವದೀಕ್ಷೆಯನ್ನು ಕೊಡಿಸಿ, ವೀರಶೈವ ತತ್ವಬೋಧನೆ ಆಚಾರ ಪಾಲನೆ, ಲಿಂಗಪೂಜೆ ವಿಧಿ-ವಿಧಾನಗಳನ್ನು ತಿಳಿಸಿದರು. ಪುಟ್ಟಯ್ಯನವರು ಸಂಗೀತ ಸಾಧನೆಯೊಂದಿಗೆ ವೀರಶೈವ ಧರ್ಮಾಚರಣೆಯನ್ನು ತಮ್ಮಲ್ಲಿ ರೂಢಿಸಿಕೊಂಡರು. ದಿನದಿಂದ ದಿನಕ್ಕೆ ಪುಟ್ಟಯ್ಯನವರ ವ್ಯಕ್ತಿತ್ವವು ವಿಕಾಸಗೊಳ್ಳುತ್ತಾ ಸಾಗಿದಂತೆ ಕಲಿಯುವ ವಿದ್ಯೆಯಲ್ಲಿಯೂ ಪರಿಣತಿಯನ್ನು ಹೊಂದುತ್ತ ನಡೆದರು. ಪಂಚಾಕ್ಷರ ಗವಾಯಿಗಳ ಬದುಕು ಪುಟ್ಟಯ್ಯನವರ ಜೀವನವನ್ನು ರೂಪಿಸುವಲ್ಲಿ ಬಹುರೀತಿಯಲ್ಲಿ ಪ್ರಭಾವ ಬೀರಿತು. ಪಂಚಾಕ್ಷರ ಗವಾಯಿಗಳು ಗಾಂಧೀಜಿಯವರಿಂದ ಪ್ರೇರಣೆ-ಸ್ಪೂರ್ತಿಯನ್ನು ಹೊಂದಿ, ಖಾದಿ-ವಸ್ತ್ರಧಾರಿಗಳಾಗಿಯೇ ವೇಷ-ಭೂಷಣಗಳನ್ನು ಧರಿಸುತ್ತಿದ್ದರು. ಗುರುಗಳಂತೆ ಪುಟ್ಟಯ್ಯನವರು ಖಾದಿ ವೇಷಗಳನ್ನೇ ಧರಿಸುತ್ತಾರೆ. ಶುಭ್ರವಾದ ಬಟ್ಟೆಯ ಉದ್ದನೆಯ ಅಂಗಿ, ಪಂಜೆ ತಲೆಗೆ ಕಾವಿಯನ್ನು ಅದ್ದಿದ ನೀಟಾಗಿ ಸುತ್ತಿದ ತಲೆಯ ಮೇಲೆ ಪೇಠ (ಪಟಗ) ಹಣೆಯ ಮೇಲೆ ಯಾವಾಗಲೂ ತ್ರಿಪುಂಡಭಸ್ಮ ಪಾದಗಳಲ್ಲಿ ಅರಿವೆಯ ಪಟ್ಟಿಯನ್ನು ಜೋಡಿಸಿದ ಕಟ್ಟಿಗೆಯ ಆವುಗೆಗಳು (ಪಾದರಕ್ಷೆಗಳು); ಸದಾ ಕೈಯಲ್ಲಿ ಉದ್ದನೆಯ ಬೆತ್ತವು (ದಂಡ) ಪುಟ್ಟಯ್ಯನವರ ಸದಾ ಸಂಗಾತಿ. ಕೆಲವು ಸಲ ಗವಾಯಿಗಳು ವಿಶೇಷ ಸಂದರ್ಭದಲ್ಲಿ ಹಸಿರು, ಗುಲಾಬಿ, ಬಣ್ಣದ ಕೋಟುಗಳನ್ನು ಧರಿಸಿದ್ದಾರೆ. ಪುಟ್ಟಯ್ಯನವರು ಸದಾ ಖಾದಿ ಶುಭ್ರ ವಸ್ತ್ರಗಳನ್ನು ಧರಿಸುವರು. ಪಂಚಾಕ್ಷರ ಗವಾಯಿಗಳು ತಮ್ಮಲ್ಲಿ ವಿದ್ಯೆಯನ್ನು ಸಂಪಾದಿಸುತ್ತಿದ್ದ ಪುಟ್ಟಯ್ಯನ ಸಾಧನೆ ಮತ್ತು ಶ್ರೇಯಸ್ಸಿನ ಬಗ್ಗೆ ತಮ್ಮ ಗುರುಗಳಾದ ಹಾನಗಲ್ಲ ಕುಮಾರ ಸ್ವಾಮಿಗಳಲ್ಲಿ ವ್ಯಕ್ತಪಡಿಸುತ್ತಿದ್ದರು. ಶಿವಯೋಗ ಮಂದಿರದಲ್ಲಿದ್ದಾಗ ಕುಮಾರ ಸ್ವಾಮಿಗಳು ಪುಟ್ಟಯ್ಯನನ್ನು ಕರೆಕಳಿಸಿ, ಅವನಲ್ಲಿರುವ ಅಗಾಧಶೃದ್ಧೆ, ವಿದ್ಯೆಯನ್ನು ಕಲಿಯಬೇಕೆಂಬುವ ಎಲ್ಲ ಅಗಾಧ ಕಾತುರವನ್ನು ಗುರುತಿಸಿ, ಅವನನ್ನು “ನೀನೊಬ್ಬ ಒಳ್ಳೆಯ ಸಾಹಿತಿಯಾಗು” ಎಂದು ಆಶೀರ್ವಾದಿಸಿದರು. ಗುರುಗಳಿಗೆ ಅವರಿಟ್ಟ ಆಸೆಯನ್ನು ಜೀವನದಲ್ಲಿ ಸಾಧಿಸಿ ಪೂರೈಸಲು ದುಡಿಯುವುದಾಗಿ ಪುಟ್ಟಯ್ಯನವರು ಭಾಷೆಯನ್ನಿಟ್ಟು ಕಾರ್ಯೋನ್ಮುಖರಾದರು.

ಸಂಚಾರಿ ಸಂಗೀತ ಪಾಠಶಾಲೆಯಲ್ಲಿ ಪುಟ್ಟಯ್ಯನವರು

        ಪುಟ್ಟಯ್ಯನವರು ಪಂ. ಪಂಚಾಕ್ಷರ ಗವಾಯಿಗಳವರು ನಡೆಸುತ್ತಿದ್ದ ಸಂಚಾರಿ ಸಂಗೀತ ಪಾಠಶಾಲೆಯನ್ನು ಸೇರಿದ್ದು ನವಿಲುಗುಂದದ ಗವಿಮಠದಲ್ಲಿ. 1922 ರಂದು ಪಂಚಾಕ್ಷರ ಗವಾಯಿಗಳು ಸಂಗೀತ ಪಾಠಶಾಲೆಯನ್ನು ಎರಡು ಬಗೆಯಲ್ಲಿ ನಡೆಸುತ್ತಿದ್ದರು. “ವಸತಿ ಸಂಗೀತ ಪಾಠಶಾಲೆ” ಇದು ಪ್ರಾರಂಭಗೊಂಡದ್ದು ಕೋಟೆಕಲ್ಲಿರುವ ಹುಚ್ಚಪ್ಪಯ್ಯ ಸ್ವಾಮಿಗಳ ಮಠದಲ್ಲಿ. “ಸಂಚಾರಿ ಸಂಗೀತ ಪಾಠಶಾಲೆ” ಮೊದಲು ಪ್ರಾರಂಭಗೊಂಡದ್ದು ರೋಣ ತಾಲೂಕಿನ ನಿಡಗುಂದಿ ಗ್ರಾಮದ ಶಾಖಾ ಶಿವಯೋಗ ಮಂದಿರದಲ್ಲಿ. ಪಂಚಾಕ್ಷರ ಗವಾಯಿಗಳ “ಸಂಚಾರಿ ಸಂಗೀತ ಪಾಠಶಾಲೆ” ಕರ್ನಾಟಕದ ಬಹುಭಾಗದಲ್ಲಿ ಸಂಚರಿಸುತ್ತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ವಿವಿಧ ಸಂಗೀತ ವಿದ್ವಾಂಸರಿಂದ ಬೋಧಿಸಲಾಗುತ್ತಿತ್ತು. ಕೆಲವು ಸಂದರ್ಭದಲ್ಲಿ ಸಂಗೀತ ವಿದ್ವಾಂಸರನ್ನು ಕರೆಯಿಸಿಕೊಂಡು ಅವರಿಂದ ವಿದ್ಯಾರ್ಥಿಗಳಿಗೆ ಪಾಠಗಳನ್ನು ತಿಳಿಸಿಕೊಡಲಾಗುತ್ತಿತ್ತು.

        ಸಂಚಾರಿ ಸಂಗೀತ ಪಾಠಶಾಲೆ ನಾಡನ್ನೆಲ್ಲ ಸುತ್ತುತ್ತಾ ಸಾಗುತ್ತಿದ್ದಂತೆ ಪಾಠಶಾಲೆಗೆ ಬಂದು ಸೇರುವ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚುತ್ತಾ ನಡೆಯಿತು. ಆಗ ದಿನದಿಂದ ದಿನಕ್ಕೆ ಪಾಠಶಾಲೆಯನ್ನು ನಡೆಸುವ ಖರ್ಚು- ವೆಚ್ಚದ ಬಗ್ಗೆ ಗವಾಯಿಗಳು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಗುರುಗಳಾದ ಪಂಚಾಕ್ಷರ ಗವಾಯಿಗಳೊಂದಿಗೆ ಪುಟ್ಟಯ್ಯನವರು ವಿದ್ಯಾರ್ಥಿಗಳಿಗೆ ಪಾಠಗಳನ್ನು ಹೇಳುತ್ತಿದ್ದರು.

        ಕ್ರಿ.ಶ.1938 ರಲ್ಲಿ ಹೊಂಬಳದಿಂದ ಗವಾಯಿಗಳವರ ಸಂಚಾರಿ ಸಂಗೀತ ವಿದ್ಯಾಲಯವು ಗದುಗಿಗೆ ಬಂದಿತು. ಗದುಗಿನ ಮಾನ್ವಿಯವರ ಹಳೆಯ ಮನೆಯಲ್ಲಿ ವಸತಿಗೆ ಏರ್ಪಾಡು ಮಾಡಲಾಗಿತ್ತು. ಸಂಚಾರಿ ವಿದ್ಯಾಲಯದಲ್ಲಿ 50-60 ವಿದ್ಯಾರ್ಥಿಗಳಿದ್ದರು. ಅವರ ಊಟ-ವಸತಿ ನಿಭಾಯಿಸುವದು ಬಹಳ ಕಷ್ಟದ ಕೆಲಸವಾಗಿತ್ತು. ಈ ಕಷ್ಟವನ್ನು ನಿವಾರಿಸಲು ಮೈಸೂರು ದೊರೆಗಳಾದ ನಾಲ್ವಡಿ ಕೃಷ್ಣರಾಜರನ್ನು ಕಂಡು ಧನಸಹಾಯ ಪಡೆಯಬೇಕೆಂದು ಪಂಚಾಕ್ಷರಿ ಗವಾಯಿಗಳು, ಪುಟ್ಟಯ್ಯನವರು 60 ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಅಲ್ಲಲ್ಲಿ ಸಂಗೀತ ಕಛೇರಿಗಳನ್ನು ನಡೆಸುತ್ತ 1939 ರಲ್ಲಿ ಬೆಂಗಳೂರಿಗೆ ಬಂದರು. ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಗೌಡರ ವೀರಭದ್ರಪ್ಪನವರ ಛತ್ರದಲ್ಲಿ ತಂಗಿದರು. ಮೈಸೂರನ್ನು ತಲುಪಿದ ನಂತರ ಪಂಚಾಕ್ಷರ ಗವಾಯಿಗಳವರು ಮೈಸೂರು ಮಹಾರಾಜರಿಗೆ ತಮಗೆ ಸಹಾಯವನ್ನು ಕೋರಿ ಪತ್ರವನ್ನು ಬರೆದು ಅರ್ಪಿಸಿದರು. ಮಹಾರಾಜರು ಗವಾಯಿಗಳವರ ಪತ್ರ ತಲುಪುತ್ತಲೇ ಆಸ್ಥಾನದ ವಿದ್ವಾಂಸ ರೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲಿಯ ವಿದ್ವಾಂಸರು ಗವಾಯಿಗಳವರ ಸಂಚಾರಿ ಸಂಗೀತ ಪಾಠಶಾಲೆ ಸ್ವತಂತ್ರವಾದುದೋ ಅಥವಾ ಶಿವಯೋಗ ಮಂದಿರಕ್ಕೆ ಸಂಬಂಧಿಸಿದುದೋ ಎಂಬುದನ್ನು ತಿಳಿದುಕೊಳ್ಳಲು ಬದಾಮಿಯ ಮಾಮಲೇದಾರರಿಗೆ ವಿವರ ತಿಳಿಸಲು ಪತ್ರ ಬರೆದರು. ಪಾಠಶಾಲೆಯ ವಿಸ್ತ್ರತ ವಿವರವು ಮಾಮಲೆದಾರರಿಂದ ಮಹಾರಾಜರಲ್ಲಿಗೆ ತಲುಪಲು ಕಾಲ ವಿಳಂಬವಾಯಿತು. ಈ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆರೋಗ್ಯ ಅಸ್ತವ್ಯಸ್ಥವಾದುದರಿಂದ 3-8-1940 ರಂದು ಮಹಾರಾಜರು ಮರಣ ಹೊಂದಿದರು.

        ಸಹಾಯ ಧನವನ್ನು ಕೋರಿ ಮೈಸೂರಿಗೆ ಬಂದ ಪಂಚಾಕ್ಷರ ಗವಾಯಿಗಳವರಿಗೆ ಮಹಾರಾಜರ ನಿಧನ ವಾರ್ತೆ ತಿಳಿಯುತ್ತಿದ್ದಂತೆ, ಈ ಮೊದಲೇ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದ ಸಂಚಾರಿ ಸಂಗೀತ ಪಾಠಶಾಲೆಯು ಮತ್ತಷ್ಟು ಆರ್ಥಿಕ ಸಮಸ್ಯೆಗೆ ಒಳಗಾಯಿತು. ಮೈಸೂರಿನಲ್ಲಿ ಗವಾಯಿಗಳಿಗೆ ಬಳ್ಳಾರಿಯ ವೀರಭದ್ರಪ್ಪನವರ ಕಿರಾಣಿ ಅಂಗಡಿಯಲ್ಲಿ ಐದಾರು ಸಾವಿರ ರೂಪಾಯಿಗಳಷ್ಟು ಸಾಲವಾಗಿತ್ತು. ಪಂಚಾಕ್ಷರ ಗವಾಯಿಗಳು ತಾವು ಹಾನಗಲ್ಲ ಮುಟ್ಟಿದ ತಕ್ಷಣ ಹಣವನ್ನು ಕಳಿಸುವುದಾಗಿ ಹೇಳಿದರು. ವೀರಭದ್ರಪ್ಪನವರು ಗವಾಯಿಗಳವರ ಮೇಲಿನ ಗೌರವ, ಅಭಿಮಾನದಿಂದ ಅದು ತಮ್ಮ ಸೇವೆಗೆ ಸಂದಿದು ಎಂದು ಹೇಳಿದರು. ಮೈಸೂರಿನಿಂದ ಪಂಚಾಕ್ಷರ ಗವಾಯಿಗಳವರು ನೇರವಾಗಿ ನರಗುಂದಕ್ಕೆ ಬಂದು ಕ್ಯಾಂಪು ಮಾಡಿದರು.

ನಾಟಕ ಮಂಡಳಿ ಸ್ಥಾಪನೆ (ಕ್ರಿ.ಶ. 1940)

        ಪಂಚಾಕ್ಷರ ಗವಾಯಿಗಳ ಮೈಸೂರಿನಿಂದ ನರಗುಂದಕ್ಕೆ ಬಂದ ನಂತರ ಆ ಊರ ಪ್ರಮುಖರು ಹಾಗೂ ಗಣ್ಯರಾದ ಕುದರಿಮೋತಿ ಬಸಲಿಂಗಪ್ಪನವರು, ಹಸಬಿ ಫಕ್ಕೀರಪ್ಪ ಶೆಟ್ಟರು ಸೇರಿಕೊಂಡು ಕೂಡಲೇ ಆರು ಸಾವಿರ ರೂಪಾಯಿ ಹಣವನ್ನು ಗವಾಯಿಗಳವರಿಗೆ ಸಲ್ಲಿಸಿದರು.

        ನರಗುಂದದಲ್ಲಿ ಪಂಚಾಕ್ಷರ ಗವಾಯಿಗಳವರೆಗೆ ಸಂಚಾರಿ ಪಾಠಶಾಲೆಯ ಹಾಗೂ ವಿದ್ಯಾರ್ಥಿಗಳ ದಿನ ನಿತ್ಯದ ಬಾಬತ್ತಿನ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗಿ ಆರ್ಥಿಕ ಸ್ಥಿತಿ-ಗತಿ ಗಂಭೀರತೆಯನ್ನು ತಂದೊಡ್ಡತೊಡಗಿತು. ಈ ಸಂದರ್ಭದಲ್ಲಿ ಪುಟ್ಟಯ್ಯನವರು ಮತ್ತು ನರಗುಂದದ ಪ್ರಮುಖರು ಸೇರಿ ದಿನದ ಖರ್ಚನ್ನು ನಿಭಾಯಿಸಲು ನಾಟಕಗಳನ್ನಾಡದೆ ಬೇರೆ ಗತ್ಯಂತರವಿಲ್ಲವೆಂಬ ನಿರ್ಣಯಕ್ಕೆ ಬಂದರು. ಆದರೆ ಈ ಮೊದಲು ಪಂಚಾಕ್ಷರ ಗವಾಯಿಗಳು “ಮಳೇಮಲ್ಲೇಶ್ವರ ಸಂಗೀತ ನಾಟಕ ಮಂಡಳಿ” ಸ್ಥಾಪಿಸಿ ಅದರಿಂದ ಬಹಳಷ್ಟು ತೊಂದರೆ ಅನುಭವಿಸಿದ್ದರು. ಈ ವಿಷಯವು ಪುಟ್ಟಯ್ಯನವರಿಗೆ ತಿಳಿದುದರಿಂದ ಗುರುಗಳಾದ ಪಂಚಾಕ್ಷರ ಗವಾಯಿಗಳಲ್ಲಿ ತಾವು “ನಾಟಕ ಕಂಪನಿ” ಸ್ಥಾಪಿಸುವ ವಿಷಯವನ್ನು ಪ್ರಸ್ಥಾಪಿಸಲು ಪಂಚಾಕ್ಷರ ಗವಾಯಿಗಳು ಹಿಂದೇಟು ಹಾಕಿದರು. ನರಗುಂದದ ಕೆಲ ಪ್ರಮುಖರನ್ನು ಪುಟ್ಟಯ್ಯನವರು ಕೂಡಿಸಿ ತಮ್ಮ ವಿಚಾರವನ್ನು ಗುರುಗಳಿಗೆ ತಿಳಿಸಲು ಸೂಚನೆ ನೀಡಿದರು. ನರಗುಂದದ ಪ್ರಮುಖರೆಲ್ಲರೂ “ವಿದ್ಯಾರ್ಥಿಗಳ ಹಾಗೂ ಪಾಠಶಾಲೆಯ ಆರ್ಥಿಕ ವ್ಯವಸ್ಥೆಗಾಗಿ ‘ನಾಟಕ ಕಂಪನಿ’ ಸ್ಥಾಪಿಸುವದು ಸೂಕ್ತವೆಂದು ಅದಕ್ಕೆ ತಮ್ಮ ಒಪ್ಪಿಗೆ ಅವಶ್ಯವೆಂದು” ಪಂಚಾಕ್ಷರ ಗವಾಯಿಗಳಲ್ಲಿ ಭಿನ್ನವಿಸಿಕೊಳ್ಳಲು ಗವಾಯಿಗಳು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಒಪ್ಪಿಗೆಯಲ್ಲಿ ಪಂಚಾಕ್ಷರ ಗವಾಯಿಗಳು ಒಂದು ಕರಾರರನ್ನು ಸರ್ವರೂ ಪಾಲಿಸಬೇಕಾದುದದನ್ನು ಸ್ಪಷ್ಟಿಕರಿಸಿದರು. ನಾಟಕದಲ್ಲಿರುವ ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸಬೇಕೆಂದು; ನಾಟಕದಲ್ಲಿ ಸರ್ವರೂ ಪವಿತ್ರತೆಯನ್ನು ಉಳಿಸಿಕೊಂಡು ಸಾಗಬೇಕೆಂದು ಕರಾರು ಹಾಕಿದರು. ಅದಕ್ಕೆ ಒಪ್ಪಿಕೊಂಡು ಶಿಷ್ಯರು ನಾಟಕ ಕಂಪನಿ ಸ್ಥಾಪನೆಗೆ ಮುಂದಾದರು.

        ಪುಟ್ಟಯ್ಯನವರು ರಚಿಸಿದ ಸಂಗೀತ ಪ್ರಧಾನ “ಸೊಲ್ಲಾಪೂರ ಸಿದ್ದರಾಮೇಶ್ವರ” ಭಕ್ತಿ ಪ್ರಧಾನ ನಾಟಕವನ್ನು ಕ್ರಿ.ಶ.1980ನೆಯ ವಿಜಯದಶಮಿಯ ಶುಭದಿನದಂದು “ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿ” ಎಂಬ ಹೆಸರಿನ ಮೂಲಕ ಪುಟ್ಟಯ್ಯನವರು ಪಂ.ನಾಗಭೂಷಣ ಶಾಸ್ತ್ರಿಗಳು ಹಾಗೂ ನರಗುಂದದ ಪ್ರಮುಖರು ನಾಟಕ ಮಂಡಳಿ ಪ್ರಾರಂಭಿಸಿದರು. ಸಿದ್ದರಾಮೇಶ್ವರ ನಾಟಕವು ನಟರ ಒಳ್ಳೆಯ ಅಭಿನಯ ಪುಟ್ಟಯ್ಯನವರ ಸಂಗೀತದೊಂದಿಗೆ ಪ್ರಥಮ ದಿನದಂದೇ ಒಂದು ಸಾವಿರ ರೂ.ಸಂಗ್ರಹಣೆಯೊಂದಿಗೆ ಉತ್ತಮ ಪ್ರತಿಕ್ರಿಯೆಯನ್ನು ಪ್ರೇಕ್ಷಕರಿಂದ ಪಡೆಯಿತು.

        ಪುಟ್ಟರಾಜರು ತಾವು ಸ್ಥಾಪಿಸಿದ “ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ನಾಟಕ ಮಂಡಳಿ”ಯ ಮೂಲಕ ಅನೇಕ ನಾಟಕ ಪ್ರಯೋಗಗಳನ್ನು ನಡೆಸಬೇಕಾದ ಸಂದರ್ಭ ಬಂದೊದಗಿದುದರಿಂದ ತಾವೇ ನಾಟಕಗಳ ರಚನೆಯನ್ನು ಕೈಗೊಂಡರು. ಇದರ ಫಲವಾಗಿ ಪುಟ್ಟರಾಜರು ವೃತ್ತಿರಂಗಭೂಮಿಯ ಚರಿತ್ರೆಯಲ್ಲಿ ನಾಟಕ ಕವಿಗಳಾಗಿ ತಮ್ಮ ಹೆಸರನ್ನು ದಾಖಲೆಯಾಗಿರಿಸದರು. ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ ಹಾಗೂ ಸಾಮಾಜಿಕ ನಾಟಕಗಳನ್ನು ತಮ್ಮ ಕಂಪನಿಗಾಗಿಯೇ ಬರೆದು, ಅವುಗಳ ಯಶಸ್ವಿ ಪ್ರಯೋಗದಿಂದ ಗವಾಯಿಗಳ ನಾಟಕ ಕಂಪನಿ ಉತ್ತರಕರ್ನಾಟಕ ವೃತ್ತಿರಂಗ ಭೂಮಿಗೆ ತನ್ನ ಕೊಡುಗೆಯನ್ನು ಸಲ್ಲಿಸತೊಡಗಿತು.

        ಗವಾಯಿಗಳ ಕಂಪನಿಯಲ್ಲಿ ಅತ್ಯಂತ ಉನ್ನತ ಶ್ರೇಣಿಯ ನಟರಿದ್ದರು. ಪಂಚಾಕ್ಷರಿಸ್ವಾಮಿ ಮತ್ತಿಕಟ್ಟೆ, ಮುದೇನಗುಡಿ ಶಿವಯ್ಯ, ಬಸವರಾಜ ರಾಜಗುರು, ಅರ್ಜುನಸಾ ನಾಕೋಡ, ಚನ್ನಬಸಯ್ಯ ನರೇಗಲ್ಲ, ಶಿವಣ್ಣ ಯರಂಗಳಿ ಇಂತಹ ಕಲಾವಿದರು ಪ್ರೇಕ್ಷಕರ ಮನೋಭಿತ್ತಿಯಲ್ಲಿ ಅಚ್ಚೊತ್ತಿದಂತಾದುದು ಅವರ ಅಭಿನಯದಿಂದ. ಒಂದು ಸಲ ರೋಣದಲ್ಲಿ “ಸತಿ-ಸುಕನ್ಯಾ” ನಾಟಕವನ್ನು ನೋಡಿದ ಹಿರಿಯ ಕಲಾವಿದರಾದ ಹಂದಿಗನೂರು ಸಿದ್ರಾಮಪ್ಪನವರು ಗವಾಯಿಗಳವರ ಕಂಪನಿಯಲ್ಲಿದ್ದ ನಟರ ಅಭಿನಯವನ್ನು ಮೆಚ್ಚಿ 100/- ರೂ.ಗಳನ್ನು ಅಯೇರ ಮಾಡಿ ಗೌರವಿಸಿದರು.

        ಬದಾಮಿ ಬನಶಂಕರಿಯ ಜಾತ್ರೆಗೆ ನಾಡಿನ ಹಲವು ಕಡೆಗಳಿಂದ ನಾಟಕ ಕಂಪನಿಗಳು ಬಂದು ಕ್ಯಾಂಪ ಮಾಡಿದ್ದವು. ಒಂದು ಸಲ “ಕರ್ನಾಟಕ ಷೇಕ್ಸಪಿಯರ” ಎಂದು ಖ್ಯಾತನಾಮರಾದ ಕಂದಗಲ್ಲ ಹನುಮಂತರಾಯರು ನಾಟಕವನ್ನು ನೋಡಲು ಬನಶಂಕರಿ ಜಾತ್ರೆಯಲ್ಲಿ ಕ್ಯಾಂಪ್ ಮಾಡಿದ ಗವಾಯಿಗಳ ಕಂಪನಿಗೆ ಬಂದರು. ಪುಟ್ಟರಾಜ ಗವಾಯಿಗಳವರ ನಾಟಕ ರಚನೆ, ಪಾತ್ರ ಜೋಡಣೆ ಕಥಾ ಸಂವಿಧಾನ ಕಂಡು ಸಂತೋಷವಾಗಿ ಪುಟ್ಟರಾಜರನ್ನು ತಮ್ಮಲ್ಲಿಗೆ ಕರೆಯಿಸಿ ಗವಾಯಿಗಳವರನ್ನು ಮುಕ್ತಕಂಠದಿಂದ ಹೊಗಳಿ 50/- ರೂ.ಗಳನ್ನು ಪ್ರೇರಣೆಯಾಗಿ ಕೊಟ್ಟರು.

ಪ್ರಗತಿಪಥದತ್ತ ಶ್ರೀ ಕುಮಾರೇಶ್ವರ ನಾಟಕ ಮಂಡಳಿ:

        “ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳವರ ಸಂಗೀತ ನಾಟಕ ಮಂಡಳಿ” ಪುಟ್ಟಯ್ಯನವರು ರಚಿಸಿದ ನಾಟಕಗಳನ್ನು ಪ್ರಯೋಗಿಸುವದರೊಮದಿಗೆ ಅನೇಕ ನಾಟಕಕಾರರ ನಾಟಕಗಳನ್ನು ಪ್ರಯೋಗಿಸುತ್ತ ಗದಗ, ರೋಣ, ಮಲ್ಲಾಪೂರ, ತಾಳಿಕೋಟೆ, ಬನಶಂಕರಿ, ಮುದ್ದೇಬಿಹಾಳ, ಸಿಂದಗಿ, ಕಲಕೇರಿ, ದೇವರಹಿಪ್ಪರಗಿ, ಕೂಡಲಸಂಗಮ ಕನ್ನಡ ನಾಡಿನ ವಿವಿಧ ಕಡೆಗಳಲ್ಲಿ ಕ್ಯಾಂಪು ಮಾಡುತ್ತ ಮುನ್ನಡೆಯಿತು.

        ನಾಟಕ ಕಂಪನಿಯು ಪುಟ್ಟಯ್ಯನವರ ಸಮರ್ಥ ಮಾರ್ಗದರ್ಶನದಲ್ಲಿ ನಿರಾತಂಕವಾಗಿ ನಡೆದುಕೊಂಡು ಹೋಗುವುದನ್ನು ಅರಿತ ಪಂಚಾಕ್ಷರ ಗವಾಯಿಗಳು ನಾಟಕ ಕಂಪನಿಯ ಉಸ್ತುವಾರಿಯನ್ನು ಪುಟ್ಟಯ್ಯನವರಿಗೆ ಸಂಪೂರ್ಣವಾಗಿ ವಹಿಸಿಕೊಟ್ಟು ತಾವು ಸಂಗೀತ ಪಾಠ ಮತ್ತು ಶಿವ ಪೂಜೆಗಳಲ್ಲಿ ನಿರತರಾದರು.

        ಪುಟ್ಟಯ್ಯನವರು ತಮ್ಮ ನಾಟಕ ಕಂಪನಿಯನ್ನು ಗದಗದಲ್ಲಿ ಕ್ಯಾಂಪ್ ಮಾಡಿ ನಲವಡಿ ಶ್ರೀಕಂಠ ಶಾಸ್ತ್ರಿಗಳು ರಚಿಸಿದ “ಹೇಮರೆಡ್ಡಿ ಮಲ್ಲಮ್ಮ” ನಾಟಕವನ್ನು ಪ್ರಯೋಗಿಸತೊಡಗಿದರು. ನುರಿತ ನಟರ ಅಭಿನಯ, ಗವಾಯಿಗಳವರ ಸಂಗೀತ, ವರ್ಣರಂಜಿತ ರಂಗ ಪರಿಕರಿಗಳಿಂದ ನಾಟಕವು ಪ್ರೇಕ್ಷಕರಿಂದ ಅತ್ಯಂತ ಜನಪ್ರಿಯತೆಯನ್ನು ಪಡೆಯಿತು. ಈ ಸಂದರ್ಭದಲ್ಲಿ ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟೆ, ಶಿವಮೂರ್ತಿ ದೇವಗಿರಿ, ಶಿವಯ್ಯ ಮುದೇನಗುಡಿ, ಶಿವಪ್ಪ ಎರಂಗಳಿ ನಟರ ಅಭಿನಯಗಳು ಪ್ರೇಕ್ಷಕರ ಮನ ಪಟಲದಲ್ಲಿ ಅಚ್ಚೊತ್ತುವಂತೆ ಮಾಡಿದವು.

        ಆರ್ಥಿಕವಾಗಿ ನಾಟಕ ಮಂಡಳಿಯು ದಿನದಿಂದ ದಿನಕ್ಕೆ ಪ್ರಗತಿಯನ್ನು ಪಡೆಯುವದರೊಂದಿಗೆ ಸಂಪದ್ಭರಿತವಾಗತೊಡಗಿತು. ಹೇಮರಡ್ಡಿ ಮಲ್ಲಮ್ಮ ನಾಟಕ ಉತ್ತರ ಕರ್ನಾಟಕದ ವೃತ್ತಿರಂಗ ಭೂಮಿಯಲ್ಲಿ ಇತಿಹಾಸವನ್ನು ದಾಖಲಿಸುವ 376 ಪ್ರಯೋಗಗಳನ್ನು ಸತತವಾಗಿ ನಡೆಸಿ ಸಾಹಿತಿಗಳಿಂದ, ಅಭಿಮಾನಿಗಳಿಂದ, ಕವಿಗಳಿಂದ ಪ್ರಶಂಸೆಗೆ ಪಾತ್ರವಾದುದಲ್ಲದೆ, ಗವಾಯಿಗಳು ಪ್ರಯೋಗಿಸುತ್ತಿದ್ದ ಥೇಟರಿಗೆ “ಮಲ್ಲಮ್ಮನ ಥೇಟರ” ಎಂಬ ಹೆಸರೇ ರೂಢಿಯಾಯಿತು. ಈ ನಾಟಕದಿಂದ ಬಂದ ಹಣವನ್ನು ಒಂದೆಡೆ ಸಂಗ್ರಹಿಸಿ 36 ಎಕರೆ ಜಮೀನನ್ನು ತೆಗೆದುಕೊಂಡರು. ಅದಕ್ಕೆ ‘ಮಲ್ಲಮ್ಮನ ಹೊಲ’ವೆಂದೇ ಕರೆಯುವ ವಾಡಿಕೆ ಇಂದಿಗೂ ಉಳಿದುಕೊಂಡು ಬಂದಿದೆ.

ವೀರೇಶ್ವರ ಪುಣ್ಯಾಶ್ರಮದ ಅಧಿಕಾರ ಸ್ವೀಕಾರ ಹಾಗೂ ಸಾಧನೆಗಳು:

        ಪಂಚಾಕ್ಷರ ಗವಾಯಿಗಳು ಗದುಗಿಗೆ ಬಂದು ನೆಲೆಸಿದ ಮೇಲೆ ಎಲ್ಲವೂ ಅವರ ಯೋಜನೆಯಂತೆ ಸಾಗುತ್ತಿರುವ ಸಂದರ್ಭದಲ್ಲಿ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ಗವಾಯಿಗಳಿಗೆ ಸಿಡಿಲಿನಂತೆ ಅಘಾತವನ್ನುಂಟು ಮಾಡಿತು. ಪಂಚಾಕ್ಷರ ಗವಾಯಿಗಳು ತಮ್ಮ ಜೀವನದ ಸರ್ವಸ್ವವೇ ಆದ ಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಬಹಳಷ್ಟು ದುಃಖಗೊಂಡರು. ಪುಟ್ಟರಾಜ ಗವಾಯಿಗಳವರಿಗೆ ನಾಟಕ ಕಂಪನಿಯ ಎಲ್ಲ ಜವಾಬ್ದಾರಿಯನ್ನು ವಹಿಸಿ ಗದುಗಿನಲ್ಲಿಯೇ ಉಳಿದರು. ಇದೇ ಸಂದರ್ಭದಲ್ಲಿ ನಾಡಿನ ತುಂಬೆಲ್ಲ ಭೀಕರವಾದ ಬರಗಾಲ ಉಂಟಾದುದರಿಂದ ಕೆಲ ಕಾಲಾವಧಿಯಲ್ಲಿ ಕಂಪನಿ ಮತ್ತೆ ಆರ್ಥಿಕ ಮುಗ್ಗಟ್ಟಿನಿಂದ ಮುಗ್ಗರಿಸತೊಡಗಿತು. ಗದಗಿನಲ್ಲಿದ್ದ ವೈದಿಕರಾದ ಚನ್ನವೀರ ಶಾಸ್ತ್ರೀ ಹಿಡ್ಕಿಮಠ, ಗಣ್ಯರಾದ ಸಿದ್ರಾಮಪ್ಪ ಮಾನ್ವಿ, ಮಹಾಲಕ್ಷ್ಮೀ ಮೋಟಾರ ಕಂಪನಿಯ ಮಾಲೀಕರಾದ ಬಸರೀಗಿಡದ ವೀರಪ್ಪನವರು ಮೊದಲಾದ ಪ್ರಮುಖರು ಗವಾಯಿಗಳವರಿಗೆ ಆಶ್ರಯ ನೀಡಿದರು. ಕರ್ನಾಟಕದ ಪೋರ್ಡ ದಾನಶೂರರೆಂದು ಹೆಸರು ಪಡೆದ ಬಸರೀಗಿಡದ ವೀರಪ್ಪನವರು ಮಹಾಲಕ್ಷ್ಮೀ ಮೋಟಾರು ಕಂಪನಿವೊಂದನ್ನು ನಡೆಸುತ್ತಿದ್ದರು. ಗವಾಯಿಗಳವರಿಗೆ ಹಾಗೂ ಅವರ ಶಿಷ್ಯರಿಗೆ ವಸತಿ ವ್ಯವಸ್ಥೆಗಾಗಿ ಒಂದು ದೊಡ್ಡತಗಡಿನ ಸೆಡ್ಡನ್ನು ಹಾಕಿ ಕೊಟ್ಟರು. ಅಲ್ಲಿಯೇ ಉಚಿತ ಊಟದ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಪುಟ್ಟರಾಜ ಗವಾಯಿಗಳವರಿಂದ “ನಾಲ್ವತ್ತವಾಡ ವೀರೇಶ್ವರ ಶರಣ ಚರಿತ್ರೆ ಪುರಾಣ ಪ್ರವಚನ ಪ್ರಾರಂಭಿಸಿ ಸಂಗೀತ-ಹಾಗೂ ಧರ್ಮತತ್ವ ಪ್ರವಚನಗಳನ್ನು ನಡೆಸತೊಡಗಿದರು. ಅಲ್ಲಿ “ವೀರೇಶ್ವರ ಪುಣ್ಯಾಶ್ರಮ” ಸಂಸ್ಥೆ ಸ್ಥಾಪಿಸಿದರು. ಪಂಚಾಕ್ಷರ ಗವಾಯಿಗಳವರಿಗೆ ನಿರಂತರ ಸಂಚಾರ ಹಾಗೂ ಸತತ ಗಾಯನದಿಂದ ಆರೋಗ್ಯ ಅಸ್ತವ್ಯಸ್ತಗೊಂಡು ಉದರ ರೋಗವು ಕಾಣಿಸಿಕೊಂಡಿತು. ಪಂಚಾಕ್ಷರ ಗವಾಯಿಗಳು ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆಯನ್ನು ನೀಡದೆ ಇದ್ದಾಗ ಕ್ರಿ.ಶ.1944 ಜೂನ್-11 ನೇ ತಾರೀಖಿನ ಪ್ರಾರ್ಥಿನಾಮ ಸಂವತ್ಸರ ಜೇಷ್ಠ ಬಹುಳ ಪಂಚಮಿ ಮುಹೂರ್ತದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳು ಲಿಂಗೈಕ್ಯರಾದರು. ಪಂಚಾಕ್ಷರ ಗವಾಯಿಗಳವರು ತಮ್ಮ ಮುಂದಿನ ಉತ್ತರಾಧಿಕಾರಿಯನ್ನಾಗಿ ಪುಟ್ಟರಾಜ ಗವಾಯಿಗಳೆಂದು ನಿರ್ಧರಿಸಿ ಮೃತ್ಯುಪತ್ರವನ್ನು ಬರೆದುಬಿಟ್ಟಿದ್ದರು. ಪಂಚಾಕ್ಷರ ಗವಾಯಿಗಳು ಲಿಂಗೈಕ್ಯರಾದಾಗ ಪುಟ್ಟರಾಜ ಗವಾಯಿಗಳು ನಾಟಕ ಕಂಪನಿಯೊಂದಿಗೆ ಹಂಪಸಾಗರದಲ್ಲಿದ್ದರು. ಪಂಚಾಕ್ಷರ ಗವಾಯಿಗಳ ಮೃತ್ಯುವಾರ್ತೆ ತಿಳಿದಕೂಡಲೇ ಪುಟ್ಟರಾಜರು ಗದುಗಿಗೆ ಧಾವಿಸಿದರು. ಸರ್ವ ಪ್ರಮುಖರ ಹಾಗೂ ಪಂಚಾಕ್ಷರ ಗವಾಯಿಗಳವ ಸಂಕಲ್ಪದಂತೆ 1944 ಜೂನ್ ರಂದು ಪುಟ್ಟರಾಜ ಗವಾಯಿಗಳವರು ವೀರೇಶ್ವರ ಪುಣ್ಯಾಶ್ರಮದ ಉತ್ತರಾಧಿಕಾರಿಗಳಾಗಿ ನೇಮಕಗೊಂಡರು. ಆಗ ಪುಟ್ಟರಾಜರಿಗೆ ಮೂವತ್ತು ವರ್ಷವಯಸ್ಸು.

ಸಂಗೀತ ಶಿಕ್ಷಕರಾಗಿ ಪುಟ್ಟರಾಜ ಗವಾಯಿಗಳು

        ಪುಟ್ಟರಾಜ ಗವಾಯಿಗಳು ಪಂಚಾಕ್ಷರ ಗವಾಯಿಗಳವರು ಲಿಂಗೈಕ್ಯರಾದ ಬಳಿಕ ವೀರೇಶ್ವರ ಪುಣ್ಯಾಶ್ರಮದ ಸರ್ವಕಾರ್ಯಕಲಾಪಗಳನ್ನು ಸಮರ್ಥವಾಗಿ ಸಮರ್ಪಕವಾಗಿ ಸಾಗಿಸಿಕೊಂಡು ಹೋಗಲು ಅವಿರತವಾಗಿ ಶ್ರಮಿಸತೊಡಗಿದರು. ತಾವು ಗುರುಗಳಿಂದ ಪಡೆದುಕೊಂಡ ಸಂಗೀತ    ಜ್ಞಾನವನ್ನು ನೂರಾರು ಅಂಧ ವಿದ್ಯಾರ್ಥಿಗಳಿಗೆ ಕಲಿಸತೊಡಗಿದರು. ಅಲ್ಲದೆ ಅವರ ಊಟ ಹಾಗೂ ವಸತಿಯ ವ್ಯವಸ್ಥೆಗಾಗಿ ಉಚಿತ ಪ್ರಸಾದ ನಿಲಯವನ್ನು ತೆರೆದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವನ್ನೇರ್ಪಡಿಸಿದರು. ವೀರೇಶ್ವರ ಪುಣ್ಯಾಶ್ರಮ ಊರ್ಜಿತಾವಸ್ಥೆಗೆ ಬೆಳೆಯಲು ಗವಾಯಿಗಳಿಗೆ ಬೆಂಗಾಲವಾಗಿ ನಿಂತವರು ವೇ.ಮೂ. ಚನ್ನವೀರಶಾಸ್ತ್ರಿ ಹಿಡ್ಕಿಮಠ ಹಾಗೂ ಪಂಚಾಕ್ಷರ ಗವಾಯಿಗಳ ಅಭಿಮಾನಿಗಳು, ಶಿಷ್ಯರು.

        ಪುಟ್ಟರಾಜ ಗವಾಯಿಗಳವರು ಗದುಗಿನಲ್ಲಿ ನೆಲೆಸಿದ ಮೇಲೆ ಅವರ ಜೀವನದರ್ಶನ; ಸಂಗೀತ ಸೇವೆ ಶಿಕ್ಷಣ ಪ್ರಸಾರವನ್ನು ಮನಗಂಡು ಜನರು ವೀರೇಶ್ವರ ಪುಣ್ಯಾಶ್ರಮವನ್ನು ಒಂದು ಸಾಂಸ್ಕ್ರತಿಕ ಶಕ್ತಿ ಕೇಂದ್ರವಾಗಿ ಬೆಳೆಸಲು ಸಹಾಯ ಸಹಕಾರ ನೀಡಿದರು.

        ಪುಟ್ಟರಾಜ ಗವಾಯಿಗಳು ತಮ್ಮ ಸಂಗೀತಪಾಠಶಾಲೆಯಲ್ಲಿ ಸಂಗೀತ ವಿದ್ಯೆಗಳಾದ ತಬಲಾ, ಹಾರ್ಮೋನಿಯಂ, ಪಿಟೀಲು, ಸಾರಂಗಿ, ದಿಲರುಬಾ, ಕೊಳಲು, ವೀಣೆ, ವಾಯಿಲಿನ್ ವಾದನಗಳ ಕಲಿಕೆಯನ್ನು ಬೋಧಿಸತೊಡಗಿದರು.

ಸಾಹಿತ್ಯ ರಚನಾಕಾರರಾಗಿ ಪುಟ್ಟರಾಜಗವಾಯಿಗಳು

        ಪುಟ್ಟರಾಜ ಗವಾಯಿಗಳು ತಾವು ಸಂಪಾದಿಸಿದ ಸಂಸ್ಕ್ರತ, ಹಿಂದಿ ಮತ್ತು ಕನ್ನಡ ಸಾಹಿತ್ಯದ ಆಳವಾದ ಅಭ್ಯಾಸದ ಮೂಲಕ ಸಾಹಿತ್ಯ ಕೃತಿಗಳ ರಚನೆಯನ್ನು ಕೈಗೊಂಡು ಮೌಲ್ಯಯುತ ಕೃತಿಗಳನ್ನು ಕಾವ್ಯಲೋಕಕ್ಕೆ ಕೊಡುಗೆಯಾಗಿ ನೀಡುವುದರೊಂದಿಗೆ ತಮ್ಮ ಹೆಸರನ್ನು ಸಾಹಿತ್ಯ ಚರಿತ್ರೆಯಲ್ಲಿ ಸ್ಥಿರಸ್ಥಾಯಿಯಾಗಿಸಿದ್ದಾರೆ. ಅವರಿಂದ ರಚಿತವಾದ ಸಾಹಿತ್ಯ ಕೃತಿಗಳನ್ನು ಪುರಾಣ ಕಾವ್ಯಗಳು, ನಾಟಕಗಳು, ಸಂಗೀತ ಕೃತಿಗಳು, ಕವನ ಸಂಕಲನಗಳು, ಗದ್ಯ; ಜೀವನ ಚರಿತ್ರೆ; ವ್ಯಾಖ್ಯಾನ, ವಚನ, ವ್ಯಾಕರಣ ಎಂಬುದಾಗಿ ವಿಂಗಡಿಸಿ ಅಭ್ಯಾಸ ಮಾಡಲು ಸಾಧ್ಯವಾಗಿದೆ.

ಪುಟ್ಟರಾಜ ಗವಾಯಿಗಳವರ ಜೀವನದ ವೈಶಿಷ್ಟ್ಯತೆಗಳು

        ಋಷಿತ್ವವನ್ನು ಅಳವಡಿಸಿಕೊಂಡ ವ್ಯಕ್ತಿಯಲ್ಲಿ ಕಾವ್ಯತ್ವದ ಶಕ್ತಿ ಮೊಳಕೆಯೊಡೆಯುತ್ತದೆ, ಬೆಳೆಯುತ್ತದೆ. ಪುಟ್ಟರಾಜ ಗವಾಯಿಗಳವರು ಋಷಿ ಸದೃಶ ಬದುಕನ್ನು ಆದರ್ಶವಾಗಿರಿಸಿಕೊಂಡವರು. ಶುಚಿ ಬದುಕಿನ ಪಥದಲ್ಲಿ ಸಾಹಿತ್ಯ ಸೃಷ್ಠಿಯ ಹೆಜ್ಜೆಗಳನ್ನು ಗುರುತಿಸಿದವರು. ಹರಿಹರ, ಭೀಮ, ಷಡಕ್ಷರ ಕವಿಗಳ ಕಾವ್ಯ ಅಧ್ಯಯನದಿಂದ ಬಹು ಪ್ರೇರಣೆ ಪಡೆದ ಪುಟ್ಟರಾಜರು, ಶರಣರ ಬದುಕನ್ನೇ ತಮ್ಮ ಸಾಹಿತ್ಯ ಕೃತಿಗಳ ವಸ್ತುವಾಗಿರಿಸಿಕೊಂಡು ಕವಿಗಳಾಗಿ ಸಾಹಿತ್ಯವನ್ನು ಬೆಳೆಸಿದವರು. ಪುಟ್ಟರಾಜರು ಬದುಕಿನಲ್ಲಿ ಒಂದು ನಿಯತ್ತನ್ನು ತತ್ವಪರಿಪಾಲನೆಯನ್ನು ಪಾಲಿಸಿಕೊಂಡು ಇಂದಿನವರೆಗೂ ತಮ್ಮ ಗುರುಗಳಾದ ಪಂಚಾಕ್ಷರ ಗವಾಯಿಗಳವರ ಜೀವನ ಆದರ್ಶಗಳನ್ನು ಮುಂದುವರಿಸಿಕೊಂಡು ಸಾಗುತ್ತಲಿದ್ದಾರೆ.

ದಿನಚರಿ:

        ಪುಟ್ಟರಾಜರು ಬೆಳಗಿನ ಪ್ರಾತಃಕಾಲದಲ್ಲಿಯೇ ಎದ್ದು ಕೆಲವೇಳೆ ವಾಯುವಿಹಾರಕ್ಕೆ ಹೊರಡುತ್ತಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಸಾಹಿತ್ಯ ಕೃತಿಗಳ ರಚನೆಯ ಚಿಂತನೆಯಲ್ಲಿ ತೊಡಗಿರುತ್ತಾರೆ. ಮತ್ತೆ ತಮ್ಮ ಆಶ್ರಮಕ್ಕೆ ಬಂದು ಎಲ್ಲ ವಿದ್ಯಾರ್ಥಿಗಳ ಯೋಗ ಕ್ಷೇಮವನ್ನು ವಿಚಾರಿಸಿ, ಅವರಿಗೆ ಹಿಂದಿನ ದಿನದಲ್ಲಿ ತಿಳಿಸಿದ ವಿಷಯಗಳ ಪುನರಾವಲೋಕನವನ್ನು ಕೈಗೊಂಡು ಹೊಸ ವಿಷಯದ ಪಾಠ ವಿಚಾರವನ್ನು ತಿಳಿಸಿಕೊಡುತ್ತಾರೆ. ಗವಾಯಿಗಳು ಪ್ರತಿಯೊಂದು ವಾದ್ಯದ ವಾದನ ವಿದ್ಯೆಯನ್ನು ವಿದ್ಯಾರ್ಥಿಗಳು ಮನನ ಮಾಡಿಕೊಳ್ಳುವವರೆಗೆ ಬೇರೊಂದು ವಿಷಯವನ್ನು ಪ್ರಸ್ತಾಪಿಸುವುದಿಲ್ಲ.

        ಪುಟ್ಟರಾಜರು ವೀರಶೈವಾಚಾರ ಶೀಲ ಸಂಪನ್ನರು, ಅವರದು ಕಟ್ಟಾ ಮಡಿ. ಪ್ರತಿದಿನ ಸ್ನಾನ ಬೆಳಗಿನ ಪೂಜೆಯು, 5-6 ಗಂಟೆಗಳವರೆಗೆ ಲಿಂಗಪೂಜೆ, ಅದೇ ಪೂಜಾ ಸ್ಥಳದಲ್ಲಿಯೇ ತಮ್ಮ ಶಿಷ್ಯರಿಗೆ ಕೃತಿಯ ಪಾಠವನ್ನು ಹೇಳಿ ಬರೆಯಿಸುವ ಪದ್ಧತಿಯನ್ನು ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಪುಟ್ಟರಾಜರ ಸರ್ಕಿಟನಲ್ಲಿರುವ ಶಿಷ್ಯರೇ ಗವಾಯಿಗಳವರು ಹೇಳಿದ ಹಾಗೆ ಬರೆದು ಕೃತಿಯ ರಚನೆಗೆ ಸಹಾಯಕ ಲಿಪಿಕಾರರಾಗುತ್ತಾರೆ. ಒಂದೊಂದು ಕೃತಿಗೆ ಒಬ್ಬೊಬ್ಬ ಶಿಷ್ಯರು ಲಿಪಿಕಾರರಾಗಿರುವುದರಿಂದ ಕೃತಿಯಿಂದ ಕೃತಿಗೆ ಲಿಪಿಕಾರರು ಬದಲಾಗುತ್ತಲೇ ಇರುತ್ತಾರೆ. ಗವಾಯಿಗಳವರ ಕೃತಿಗಳನ್ನು ಲಿಪಿಯಾಗಿಸುವಲ್ಲಿ ವೈವಿಧ್ಯ ವ್ಯಕ್ತಿತ್ವದ ಲಿಪಿಕಾರರಿರುವದರಿಂದ ಲಿಪಿಗಳಲ್ಲಿ ಒಮ್ಮೊಮ್ಮೆ ಲೋಪದೋಷಗಳು ನುಸುಳಿಕೊಂಡು ಬರುವುದುಂಟು. ಉತ್ತಮ ಬರಹಗಾರರಿದ್ದಲ್ಲಿ ಕೃತಿಯಲ್ಲಾಗುವ ತಪ್ಪುಗಳನ್ನು ಕಡಿಮೆ ಯಾಗಿಸಿಕೊಳ್ಳಲು ಸಾಧ್ಯವಾಗುವುದು.

        ಕೃತಿ ರಚನಾ ಸಂದರ್ಭದಲ್ಲಿ ಪುಟ್ಟರಾಜ ಗವಾಯಿಳು ತನ್ಮಯರಾದಾಗ ಬಾಹ್ಯ ಪ್ರಪಂಚದ ಬಂಧನವನ್ನೇ ಮರೆತುಬಿಡುತ್ತಾರೆ. ಅವರು ಹೇಳುವ ವಿಷಯಕ್ಕೆ ಲಿಪಿಕಾರರು ಬರವಣಿಗೆಯಲ್ಲಿ ಸಾಗುವರು, ಕೆಲವು ಸಲ ಅಸಾಧ್ಯವಾದಾಗ ಮತ್ತೆ ಮತ್ತೆ ಉಚ್ಚರಿಸಿ ಬರೆಯಿಸುತ್ತಾರೆ.

        ಬರವಣಿಗೆಯು ಮುಗಿಯುತ್ತಿದ್ದಂತೆ ಪ್ರಸಾದವನ್ನು ಸ್ವೀಕರಿಸಿ ತಮ್ಮ ಗುರುಗಳಾದ ಪಂಚಾಕ್ಷರ ಗವಾಯಿಗಳವರ ಗದ್ದುಗೆಯ ದರ್ಶನ ಪಡೆಯುವ ಸಂದರ್ಭದಲ್ಲಿ ನೆರೆದ ಭಕ್ತರಿಗೆ ದರ್ಶನವನ್ನು, ಆಶೀರ್ವಾದವನ್ನು ನೀಡುತ್ತ ಯೋಗಕ್ಷೇಮವನ್ನು ವಿಚಾರಿಸುವರು. ತದನಂತರ ಆಶ್ರಮದ ವಿದ್ಯಾರ್ಥಿಗಳ ಪಾಠ – ಪ್ರವಚನ, ಸಂಸ್ಥೆಯ ಆಡಳಿತ ಮಾಹಿತಿಗಳನ್ನು ಪಡೆದು ಸಲಹೆ ಸೂಚನೆಗಳನ್ನು ತಿಳಿಸುವದರೊಂದಿಗೆ ಮಾರ್ಗದರ್ಶನ ಮಾಡುವರು.

        ಸಾಯಂಕಾಲ ಮತ್ತೆ ವಿದ್ಯಾರ್ಥಿಗಳಿಗೆ ಅಭ್ಯಾಸ ಮತ್ತು ಕಲಿಕೆಯನ್ನು ತಿಳಿಸುವರು; ಸಂಗೀತದಲ್ಲಿ ವಿವಿಧ ವಾದ್ಯಗಳ ಅಧ್ಯಯನ ಕೈಕೊಂಡವರನ್ನು ಬೇರೆ ಬೇರೆ ವಿಭಾಗಗಳನ್ನು ಮಾಡಿ ಅವರ ವಿಷಯ ಕ್ಷೇತ್ರದ ಪ್ರಾಯೋಗಿಕ ಕಲಿಕೆಯು ನಡೆದಿರುತ್ತದೆ. ಮತ್ತೆ ರಾತ್ತಿ 8 ರಿಂದ 11ರವರೆಗೆ ಪೂಜೆ, ಕೃತಿ ರಚನೆ ಪ್ರಸಾದ ಕ್ರಿಯೆಗಳೆಲ್ಲವೂ ಮುಗಿದ ನಂತರ ವಿಶ್ರಾಂತಿ ಪಡೆಯುವರು.

        ಗವಾಯಿಗಳವರದು ಹಿತ-ಮಿತವಾದ, ಶುಚಿ-ರುಚಿಯಾದ ಪ್ರಸಾದ, ಹಣ್ಣು-ಹಂಪಲ, ಹಾಲು ಅವರ ನಿತ್ಯದ ಊಟೋಪಚಾರಗಳು, ಗವಾಯಿಗಳವರಿಗೆ ವಿಶೇಷವಾದ ಯೋಗದ ಅಭ್ಯಾಸವಿದೆ. ನಿತ್ಯ ಬೆಳಗಿನ ಸಂದರ್ಭದಲ್ಲಿ ಕೆಲ ಅವಧಿಯಲ್ಲಿ ಯೋಗಾಭ್ಯಾಸದಲ್ಲಿ ತೊಡಗಿರುತ್ತಾರೆ. ಆರೋಗ್ಯಯುತ ದೇಹ ಸಂವರ್ಧನೆಗೆ, ಸಮಚಿತ್ತಕ್ಕೆ ಯೋಗವನ್ನು ಪುಟ್ಟರಾಜರು ರೂಢಿಸಿ ಕೊಂಡವರು. ಸಾತ್ವಿಕ ಪ್ರಸಾದ ಸ್ವೀಕರಣೆ ಹಾಗೂ ತಮ್ಮ ಶಿಷ್ಯರಿಂದ ತಯಾರಿಸಿದ ಪ್ರಸಾದವನ್ನು ಸ್ವೀಕರಿಸುವುದು ಪುಟ್ಟರಾಜರು ನಡೆಸಿಕೊಂಡು ಬಂದ ಪದ್ಧತಿ.

ಸಂಗೀತ-ಸಾಹಿತ್ಯ ಸೃಷ್ಟಿಯ ಹಿನ್ನೆಲೆಯ ಪ್ರೇರಣೆ:

        ಪುಟ್ಟರಾಜ ಗವಾಯಿಗಳವರದು ಬಹುಮುಖೀ ವ್ಯಕ್ತಿತ್ವವಿದ್ದಂತೆ ಬಹುವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗಳ ದಾಖಲೆಗಳಿವೆ. ಸಂಗೀತ, ಸಾಹಿತ್ಯ, ಶಿಕ್ಷಣ, ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ಕೃಷಿಗೈಯಲು ಪ್ರೇರಣೆ ನೀಡಿದುದು ಅವರು ಬೆಳೆದು ಬಂದ ಪರಿಸರ. ಬಾಲ್ಯದಲ್ಲಿಯೇ ತಂದೆ ತೀರಿಕೊಂಡ ಮೇಲೆ ಸೋದರಮಾವಂದಿರಾದ ಚಂದ್ರಶೇಖರಯ್ಯ ಮಳ್ಳಗಟ್ಟಿ ಮಠ ಇವರ ಆಶ್ರಯದಲ್ಲಿದ್ದಾಗ ಮನೆಯಲ್ಲಿದ್ದ ಸಂಗೀತ ವಾತಾವರಣ ಪುಟ್ಟರಾಜರು ಒಬ್ಬ ಶ್ರೇಷ್ಠ ಸಂಗೀತಗಾರರಾಗಿ ಬೆಳೆಯಲು ಪ್ರೇರಣೆ ನೀಡಿತು.

        ಪಂಚಾಕ್ಷರ ಗವಾಯಿಗಳವರಲ್ಲಿ ಸಂಗೀತ, ಕಾವ್ಯ, ಗಾಯನ ವಿದ್ಯೆ ಪಡೆದ ಪುಟ್ಟರಾಜರು ಸಾಹಿತ್ಯಧ್ಯಯನದಿಂದ – ಕೃತಿ ರಚನೆಗೆ ತೊಡಗಿದರು. ಮೊದಮೊದಲು ನಾಟಕಗಳನ್ನು ಬರೆಯತೊಡಗಿದ ಗವಾಯಿಗಳವರು ಇಂದು ತಮ್ಮ ಹೆಸರನ್ನು ವಿಶೇಷವಾಗಿ ಗುರುತಿಸಿ ಕೊಳ್ಳುತ್ತಿರುವದು ಕಾವ್ಯ ರಚನೆ ಕ್ರಿಯೆಯ ಮೂಲಕ. ಗವಾಯಿಗಳವರಲ್ಲಿದ್ದ ದೈವಭಕ್ತಿ ಧಾರ್ಮಿಕ ಪರಿಸರ, ಹಿರಿಯ ಮಠಾಧೀಶರ ಸತ್ಸಂಗಗಳು ಪುಟ್ಟರಾಜರ ಕಾವ್ಯ ಕೃಷಿಯ ಪ್ರಾರಂಭದ ಪ್ರಯತ್ನಕ್ಕೆ ಕಾರಣವಾದವು.

        ಪುಟ್ಟರಾಜ ಗವಾಯಿಗಳವರು ಸಾಹಿತ್ಯ ರಚನೆಗೆ ತೊಡಗಿದುದು ಇಪ್ಪತ್ತನೆಯ ಶತಮಾನದ ನಲವತ್ತರ ದಶಕದಲ್ಲಿ; “ಸಿದ್ದರಾಮ ಸಂವಾದ” ಅವರು ರಚಿಸಿದ ಮೊದಲ ಏಕಾಂಕ ನಾಟಕ. ನಾಟಕ ಕಂಪನಿಯ ಜವಾಬ್ದಾರಿಯ ಉಸ್ತುವಾರಿಕೆಯನ್ನು ನೋಡಿಕೊಳ್ಳುತ್ತಿದ್ದರಿಂದ ನಾಟಕ ಪ್ರದರ್ಶನಕ್ಕಾಗಿ ಶರಣರ ಚರಿತ್ರೆಗಳನ್ನಾಧರಿಸಿ ಕಥೆಗಳನ್ನು; ನಾಟಕಗಳಿಗೆ ಬೇಕಾದ ಸನ್ನಿವೇಶಗಳನ್ನು ಸೃಷ್ಠಿಸಿಕೊಂಡು ಕೃತಿಗಳನ್ನು ರಚಿಸತೊಡಗಿದರು. ನಾಟಕ ಕಂಪನಿಯಲ್ಲಿರುವವರೆಗೂ ಪುಟ್ಟಾರ್ಯರು ನಾಟಕ ಕೃತಿಗಳನ್ನು ಬರೆದರು. ವಸ್ತುಗಳ ದೃಷ್ಟಿಯಿಂದ ಅವರು ಪೌರಾಣಿಕ ಐತಿಹಾಸಿಕ, ಸಾಮಾಜಿಕ, ನಾಟಕಗಳನ್ನು ಬರೆದಿದ್ದಾರೆ. ಆದರೆ ಅವರು ಹೆಚ್ಚು ಭಕ್ತಿ ಪ್ರಧಾನ ಶರಣರ ಚರಿತ್ರೆಗಳನ್ನೊಳಗೊಂಡ ರಚನೆಗಳಿಗೆ ಆದ್ಯತೆ ನೀಡಿರುವುದು ಅವರ ಕೃತಿಗಳ ಸಂಖ್ಯಾಪ್ರಮಾಣದಿಂದ ಸ್ಪಷ್ಟವಾಗುತ್ತದೆ.

        ಪುಟ್ಟರಾಜ ಗವಾಯಿಗಳು ಪುರಾಣ ಕೃತಿಗಳ ರಚನೆಗೆ ತೊಡಗಿದುದು ತಮ್ಮ 36ನೆಯ ವಯಸ್ಸಿನಲ್ಲಿ; ಕ್ರಿ.ಶ.1950 ರಲ್ಲಿ ರಚಿತವಾದ “ಉಡುತಡಿಯ ಮಹಾದೇವಿಯಕ್ಕನ ಪುರಾಣಂ” ಎಂಬ ಕೃತಿಯು ಅವರಿಂದ ರಚಿತವಾದ ಮೊದಲ ಪುರಾಣ ಕಾವ್ಯ. ಗವಾಯಿಗಳವರಿಗೆ ಪುರಾಣ ಕಾವ್ಯಗಳನ್ನು ರಚಿಸಬೇಕೆಂಬ ಪ್ರೇರಣೆ ಒದಗಿ ಬಂದಿರುವುದು ಮುಖ್ಯವಾಗಿ ವೀರಶೈವ ಮಠಗಳಿಂದ ಹಾಗೂ ಮಠಾಧಿಪತಿಗಳಿಂದ; ಕೆಲ ಸಲ ಭಕ್ತರು, ಅಭಿಮಾನಿಗಳು ತಮ್ಮ ಗುರುಗಳ, ಆರಾಧ್ಯದೇವರುಗಳ ಪುರಾಣಗಳನ್ನು ಬರೆಯಿಸುವದುಂಟು. ಪುಟ್ಟರಾಜ ಗವಾಯಿಗಳು ವೀರಶೈವ ಕವಿಗಳ ಕಾವ್ಯ ಪರಂಪರೆಯಲ್ಲಿಯೇ ತಮ್ಮ ಕಾವ್ಯ ರಚನಾ ಶೈಲಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಧರ್ಮ ತತ್ವಾಚರಣೆಗಾಗಿ ತಮ್ಮ ಬಾಳನ್ನು ಸೆವೆಸಿದ, ಸಾಮಾಜೋದ್ಧಾರಕ್ಕಾಗಿ ಗುರುಸ್ವರೂಪರಾಗಿ ಮಾರ್ಗದರ್ಶನ ನೀಡಿದ ಮಹಾತ್ಮರ, ಪುಣ್ಯಪುರುಷರ, ಮಹಂತರ, ಶಿವಯೋಗಿಗಳ ಚರಿತ್ರೆಗಳನ್ನು ದೃಷ್ಟಾಂತವಾಗಿ ಬಳಸಿಕೊಂಡು ಪುರಾಣಗಳನ್ನು ರಚಿಸಿದ್ದಾರೆ.

ಪುಟ್ಟರಾಜರು ಬರೆದ ಪುರಾಣಕೃತಿಗಳಲ್ಲಿ ಕೆಲವು ಪ್ರಾಚೀನ ವಿಷಯ ವಸ್ತುಗಳನ್ನೊಳಗೊಂಡಿದ್ದರೂ ಕೆಲವು ಸಮಕಾಲೀನ ಅವಧಿಯಲ್ಲಿ ಬದುಕಿ ಬಾಳಿ ಬೆಳೆಗಿದ ಪುಣ್ಯಪುರುಷರ ಚರಿತ್ರೆಗಳನ್ನು ಬರೆಯುವಾಗ ಐತಿಹಾಸಿಕವಾಗಿ ಅವರ ಬದುಕಲ್ಲು ಚಿತ್ರಿಸುವುದನ್ನು ಅವರ ಕೃತಿಗಳಲ್ಲಿ ಕಾಣುತ್ತೇವೆ. ಗವಾಯಿಗಳವರು ತಮ್ಮ ಕೃತಿಗೆ ಬೇಕಾದ ಪರಿಕರಗಳನ್ನು ಪೂರ್ವದ ಕೃತಿಗಳಿಂದ ಕೆಲವರ ಹೇಳಿಕೆಗಳಿಂದ ಕೆಲವು ಸಾರಿ ಅವರ ನೇರ ಸಂಪರ್ಕದಿಂದ ಪಡೆದುಕೊಂಡು ಇಲ್ಲವೆ ಅವರನ್ನು ಸಮೀಪದಿಂದ ಬಲ್ಲ ವ್ಯಕ್ತಿಗಳಿಂದ ಆ ಮಹಿಮರು ಬದುಕಿನ ಕಾರ್ಯಕ್ಷೇತ್ರಕ್ಕೆ ಹೋದಾಗ ತಮಗೆ ಬೇಕಾದ ವಿಷಯಗಳನ್ನು ಸಂಗ್ರಹಿಸಿ ಕೃತಿ ರಚನೆ ಮಾಡಿದ್ದಾರೆ. ಪುಟ್ಟರಾಜರು ಪುರಾಣಗಳನ್ನು ಬರೆಯಿಸಲು ಭಕ್ತರು ಕಾಣಿಕೆಗಳನನ್ಉ ನೀಡುವುದುಂಟು. ಮಠಾಧೀಶರು ಕಾಣಿಕೆಯಿತ್ತು ಪ್ರಶಸ್ತಿ-ಪತ್ರ ನೀಡಿ ಸನ್ಮಾನಿಸಿದ ದಾಖಲಗಳೂ ಇವೆ. ಕೆಲವು ಸಲ ಪುರಾಣಗಳನ್ನು ಬರೆಯಿಸಿಕೊಂಡ ಜನರು ಕೃತಿಗಳನ್ನು ಪ್ರಕಟಿಸದೇ ಇದ್ದುದರಿಂದ ಗವಾಯಿಗಳ ಕೆಲ ಕೃತಿಗಳು ಅಪ್ರಕಟಿತವಾಗಿಯೇ ಉಳಿದ ಉದಾಹರಣೆಗಳು ಇವೆ.

ಪುಟ್ಟರಾಜ ಗವಾಯಿಗಳವರದು ಬಹುಮುಖೀನ ಆಸಕ್ತಿ ಅಭಿರುಚಿಗಳ ಸಂಕೀರ್ಣ ವ್ಯಕ್ತಿತ್ವ; ಸಂಗೀತಗಾರರಾದಂತೆ ಕೀರ್ತನಕಾರರಾಗಿ ಪ್ರವಚನಕಾರರಾಗಿ ಸಮಾಜದಲ್ಲಿ ಅತ್ಯಂತ ಪ್ರತಿಷ್ಠಿತ ವ್ಯಕ್ತಿಗಳಾಗಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾಗಿ ಸಮಾಜ ಕಲ್ಯಾಣ ಕಾರ್ಯಗಳೊಂದಿಗೆ ಶೈಕ್ಷಣಿಕ ಪ್ರಸಾರದಂಥ ಕೆಲಸಗಳನ್ನು ಮಾಡುತ್ತಲಿದ್ದಾರೆ. ಅವುಗಳ ಪರಿಚಯಾತ್ಮಕ ವಿವರವನ್ನು ಇಲ್ಲಿ ತಿಳಿಯಪಡಿಸಲಾಗಿದೆ.

ಪುರಾಣ ಪ್ರವಚನಾಕಾರರು:

        ಪುಟ್ಟರಾಜ ಗವಾಯಿಗಳವರಲ್ಲಿ ಕಾವ್ಯ ಸೃಜನಾಶಕ್ತಿಯೊಂದಿಗೆ – ಅವುಗಳನ್ನು ಸಹೃದಯರ ಮನಕ್ಕೆ ಮುಟ್ಟುವಂತೆ ತಿಳಿಸಿಕೊಡುವ ಪುರಾಣ ಪ್ರವಚನ ಶೈಲಿ ಪ್ರಭಾವಿ ಮತ್ತು ಪರಿಣಾಮಕಾರಿಯಾದುದು. ಪುರಾಣಿಕರಾಗಿ ಜನಗಳ ಮನವನ್ನು ತಿದ್ದುವ ನೈತಿಕ ಶಿಕ್ಷಣವನ್ನು ಭೋದಿಸುವ ಅವರ ಕಾರ್ಯ ಬಹುಜನಾದರಣೀಯವಾದುದು. ಗವಾಯಿಗಳವರು ತಮ್ಮ ಆಶ್ರಮದಲ್ಲಿ ಪ್ರತಿ ಶ್ರಾವಣಮಾಸದಲ್ಲಿ ಶರಣರ ಚರಿತ್ರೆ-ಪುರಾಣ, ಪುಣ್ಯ ಚರಿತ್ರೆಗಳನ್ನು ಸಂಗೀತದೊಂದಿಗೆ ಹೃದ್ಯಮಯವಾಗಿ ಬೋಧಿಸುತ್ತಾರೆ. ಕಾವ್ಯದಲ್ಲಿರುವ ಕವಿವಾಣಿಯನ್ನು – ಜನವಾಣಿಯಾಗಿರಿಸಿ ಪುರುಷರಾದ ಬಸವಣ್ಣ, ಪ್ರಭುದೇವ, ಸಿದ್ದಲಿಂಗೇಶ್ವರರು, ಕಲಬುರ್ಗಿ ಶರಣಬಸವೇಶ್ವರ, ಅಕ್ಕಮಹಾದೇವಿ, ವೀರಶೈವ ಪುರಾತನರ ಶಿವಶರಣ ಬದುಕನ್ನೊಳಗೊಂಡ ಕಾವ್ಯಗಳನ್ನು ಮಾಸ ಪರ್ಯಂತರದಲ್ಲಿ ಸುಶ್ರಾವ್ಯವಾಗಿ ಹೇಳಿಕೊಡುವುದರೊಂದಿಗೆ ಜನ-ಮನ ಎಚ್ಚರಗೊಳ್ಳುವಂತೆ ಹೇಳಿದ್ದಾರೆ.

        ವಿಶೇಷವಾಗಿ ಪುಟ್ಟರಾಜ ಗವಾಯಿಗಳು ಶ್ರಾವಣಮಾಸದಲ್ಲಿ ತಮ್ಮ ವೀರೇಶ್ವರ ಪುಣ್ಯಾಶ್ರಮದಲ್ಲಿ ಪುರಾಣ ಪ್ರವಚನ ನೀಡುತ್ತಿದ್ದಂತೆ ದಸರೆಯ ನವರಾತ್ರಿ ಸಂದರ್ಭದಲ್ಲಿ ಕಾರ್ತಿಕ ಮಾಸದಲ್ಲಿ ಇಲ್ಲವೆ ಹಳ್ಳಿಗಳಲ್ಲಿರುವ ಪ್ರಮುಖ ದೇವತೆಗಳ ಜಾತ್ರಾ ಸಂದರ್ಭಗಳಲ್ಲಿ ಆಯಾ ಭಾಗದ ಶರಣರ ಪುರಾಣ ಇಲ್ಲವೆ ಶರಣ ಬಸವೇಶ್ವರ ಪುರಾಣ ಹೇಳುವುದು ಒಂದು ವಿಶೇಷ ಸಂಪ್ರದಾಯವೇ ಆಗಿದೆ. ಪುಟ್ಟರಾಜ ಗವಾಯಿಗಳ ಪ್ರಶಿಷ್ಯರಂತೂ “ಶ್ರೀಶರಣ ಬಸವೇಶ್ವರ ಪುರಾಣ” ಪ್ರವಚನಗಳನ್ನು 25 ವರ್ಷಗಳ ಕಾಲ ನಡೆಸಿಕೊಂಡು ಬಂದಿರುವದರಿಂದ ಅವರ ಹೆಸರಿನಲ್ಲಿಯೇ ಶರಣಬಸವೇಶ್ವರ ಮಠಗಳನ್ನು ನಿರ್ಮಾಣ ಮಾಡಿರುವ ದಾಖಲೆಗಳೂ ಉಂಟು.

ಕೀರ್ತನಕಾರರು:

        ಪುಟ್ಟರಾಜ ಗವಾಯಿಗಳವರು ಸಾಹಿತ್ಯ ಪ್ರಸಾರಕ್ಕೆ ಆಯ್ಕೆ ಮಾಡಿಕೊಂಡ ಮಾಧ್ಯಮಗಳಲ್ಲಿ ಅವರ ಕೀರ್ತನ ಕಾಯಕ ತುಂಬಾ ಪ್ರಭಾವಕಾರಿಯಾದುದು. ಕರ್ನಾಟಕದ ಶ್ರೇಷ್ಠ ಕೀರ್ತನಕಾರರ ಹೆಸರಿನಲ್ಲಿ ಗವಾಯಿಗಳವರದು ಅಗ್ರಸ್ಥಾನದಲ್ಲಿ ನಿಲ್ಲುವಂತದ್ದು. ಪುಟ್ಟರಾಜರು ಶರಣರ ಚರಿತ್ರೆಗಳನ್ನು, ಸಂಗೀತ ಸಾಹಿತ್ಯಗಳೊಂದಿಗೆ ನವರಸಭರಿತವಾಗಿ ಕೀರ್ತನ ಮಾಡುತ್ತಾರೆ. ಕೀರ್ತನಕಾರರಿಗೆ ಮಾರ್ಗದರ್ಶನ ರೂಪಿಯಾದ “ಅಷ್ಟಾವರಣ ಕಥಾ ಕೀರ್ತನ ಮಾಲೆ” ಎಂಬ ಕೃತಿಯನ್ನು ರಚಿಸಿದ್ದಾರೆ.

        ಕೀರ್ತನ ಸಾಹಿತ್ಯ ನಮ್ಮ ಸಮಾಜದಲ್ಲಿರುವ ಅಶಿಕ್ಷಿತರಿಗೆ ಯೋಗ್ಯ ಸಂಸ್ಕಾರ, ಸಂಸ್ಕ್ರತಿ ಪರಿಚಯ, ಆಚಾರ, ವಿಚಾರಗಳನ್ನು, ಪರಿಚಯಿಸವದರೊಂದಿಗೆ ಅನೌಪಚಾರಿಕ ಶಿಕ್ಷಣ ಮಾಧ್ಯಮಗಳಂತೆ ಕಾರ್ಯ ನಿರ್ವಹಿಸುತ್ತದೆ. ಪುಟ್ಟರಾಜ ಗವಾಯಿಗಳವರು ಕೇವಲ ವೀರಶೈವ ಧರ್ಮ ಪ್ರಸಾರಕರಲ್ಲ. ಸಮಗ್ರ ಭಾರತ ಸಂಸ್ಕ್ರತಿಯನ್ನು ತಮ್ಮ ಕೀರ್ತನ ಕಾಯಕದ ಮೂಲಕ ಪ್ರಸರಣಗೊಳಿಸಿದವರಾಗಿದ್ದಾರೆ.

        ಕೀರ್ತನ ಜನಸಮ್ಮುಖ ಮಾಧ್ಯಮದವಾಗಿರುವುದರಿಂದ ಹಬ್ಬ-ಹರಿದಿನಗಳಲ್ಲಿ ಜಾತ್ರೆಗಳಲ್ಲಿ ವಿಶೇಷ ಜಯಂತಿಗಳಲ್ಲಿ, ಉತ್ಸವಗಳಲ್ಲಿ ಪುಟ್ಟರಾಜ ಗವಾಯಿಗಳವರು ಕೀರ್ತೆನೆಗಳನ್ನು ಹೇಳುವ ಪದ್ಧತಿಯುಂಟು. ಗವಾಯಿಗಳವರು ಶರಣರ ಕಥೆಗಳೊಂದಿಗೆ ವೇದ, ಉಪನಿಷತ್ತು, ಅರಣ್ಯಕಗಳು, ಸ್ಮೃತಿಗಳಲ್ಲಿಯ ದೃಷ್ಟಾಂತಗಳೊಂದಿಗೆ ಕೀರ್ತನೆಯನ್ನು ಹೇಳುವರು. ಮಠ, ಮಂದಿರಗಳಲ್ಲಿ ಗ್ರಾಮಗಳ ಪ್ರಮುಖ ಸ್ಥಳಗಲ್ಲಿ ವಿಶೇಷ ವೇದಿಕೆಗಳ ಮೂಲಕ ತಮ್ಮ ಕೀರ್ತನೆಗಳನ್ನು ಗವಾಯಿಗಳವರು ಜನರಿಗೆ ಹೃದ್ಯವಾಗಿ ಹೇಳಿಕೊಟ್ಟಿದ್ದಾರೆ.

        ಪುಟ್ಟರಾಜ ಗವಾಯಿಗಳವರ ಅನೇಕ ಕೀರ್ತನೆಗಳು ಧ್ವನಿಸುರುಳಿಗಳಾಗಿಯೂ ಮುದ್ರಿತಗೊಂಡಿವೆ. “ಎಡೆಯೂರು ಸಿದ್ದಲಿಂಗೇಶ್ವರ” “ಕಚದೇವಯಾನಿ” “ಉಳವಿ ಚನ್ನಬಸವೇಶ್ವರ ಕೀರ್ತನೆ” “ಜೀವನಾಮೃತ” ಪ್ರಮುಖವಾದವು. ಪುಟ್ಟರಾಜರದು ಅತ್ಯಂತ ಆಕರ್ಷಣೀಯ ಕೀರ್ತನಾಶೈಲಿ; ಕಥಾ ನಿರೂಪಣೆ, ಸನ್ನಿವೇಶ ನಿರ್ಮಾಣ ದೃಷ್ಟಾಂತ ಸಮನ್ವಯ, ಪ್ರಪಂಚದ ಪ್ರಸ್ತುತ ಜೀವನ ಜ್ಞಾನದೊಂದಿಗೆ, ಕಾವ್ಯ-ಸಾಹಿತ್ಯಭ್ಯಾಸ, ಸಂಗೀತದೊಂದಿಗೆ ಅವರ ಕೀರ್ತನೆಗಳು ಜನತೆಯ ಮೇಲೆ ತುಂಬಾ ಪ್ರಭಾವ ಬೀರುತ್ತವೆ. ಪುಟ್ಟರಾಜರು ಸ್ವತಃ ಕವಿಗಳೇ ಆದುದರಿಂದ ಅವರ ಕೀರ್ತನೆಗಳು ಕಾವ್ಯಮಯವಾಗಿರುತ್ತವೆ. ಗವಾಯಿಗಳವರು ತಮ್ಮ ಕೀರ್ತನೆಗಳಿಗೆ ಬೇಕಾದ ವಸ್ತುವನ್ನು ತಾವೇ ಆಯ್ಕೆ ಮಾಡಿಕೊಂಡು ಕಥಾವಸ್ತುವನ್ನು ಕ್ರಮಬದ್ಧವಾದ ರೀತಿಯಲ್ಲಿ ಕಟ್ಟಿಕೊಂಡು ವಿಷಯ ಸಂಗ್ರಹಣೆ ಮಾಡಿ ನಿರ್ಧಿಷ್ಟ ಕಾಲಾವಧಿಗೆ ಮುಕ್ತಾಯಗೊಳಿಸುವ ಕ್ರಮವನ್ನು ಅನುಸರಿಸಿಕೊಂಡು ಬಂದಿದ್ದಾರೆ.

        ಕೀರ್ತನೆಯನ್ನು ಹೇಳುವ ಸಂದರ್ಭದಲ್ಲಿ ಹಾರ್ಮೋನಿಯಂ, ತಬಲಾ, ವಾಯಲಿನ್, ವೀಣೆ, ಸಾರಂಗಿ, ವಾದ್ಯಗಳನ್ನು ನುಡಿಸುವದರೊಂದಿಗೆ ಶ್ರವಕರಿಗೆ ಸಂಗೀತ, ಸುಧೆಯ ರುಚಿಯನ್ನು ಅವರು ನೀಡುವರು. ಕೀರ್ತೆಯ ಶ್ರವಣದಲ್ಲಿ ಹಳ್ಳಿಗಳಲ್ಲಿ ಎಲ್ಲ ವರ್ಗದ, ಎಲ್ಲ ಮತದ ಜನರು ಇದರಲ್ಲಿ ಪಾಲ್ಗೊಳ್ಳುವರು, ಗವಾಯಿಗಳವರು ಕುರುಬ, ಕುಂಬಾರ, ಕಮ್ಮಾರ, ಬಡಿಗ, ನೇಕಾರ, ಹೀಗೆ ಎಲ್ಲ ವರ್ಗಗಳ ಜನರ ಬೇಡಿಕೆಗಳಿಗಾಗಿ ಮನ್ನಣೆಯಿತ್ತು ಅವರ ಊರುಗಳಲ್ಲಿ ಕೀರ್ತನೆ ಮಾಡಿದ್ದಾರೆ. ಕೆಲವು ಸಲ ಅಕ್ಕನ ಬಳಗದ ಹೆಣ್ಣು ಮಕ್ಕಳ ಸಲುವಾಗಿ ಕೀರ್ತನೆಗಳನ್ನು ಮಾಡಿದ್ದಾರೆ. ಗವಾಯಿಗಳವರು ಸ್ತ್ರೀ ಸಮಾಜದ ಸುಧಾರಣೆಗಾಗಿ ಬಹುಮುಖೀವಾದ ಕಳಕಳಿಯನ್ನು ಹೊಂದಿದವರಾಗಿದ್ದಾರೆ.

ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದರಿಂದ ಪ್ರಶಂಸೆ-ಪ್ರಶಸ್ತಿ (1961)

        ಪುಟ್ಟರಾಜ ಕವಿ ಗವಾಯಿಗಳವರು ಧಾರವಾಡದ ಮುರುಘಾಮಠಕ್ಕೆ ಬಂದಾಗ ಅಲ್ಲಿರುವ ವಿದ್ವಾಂಸರೊಬ್ಬರು ಗವಾಯಿಗಳವರೆಗೆ ಹಿಂದಿ ಭಾಷೆಯಲ್ಲಿ “ಬಸವ ಪುರಾಣ”ವನ್ನು ಬರೆಯಲು ಸೂಚಿಸಿದರು. ಇದರಿಂದ ಬಸವಣ್ಣನವರ ಜೀವನ ಮತ್ತು ಸಾಧನೆಯನ್ನು ರಾಷ್ಟ್ರಭಾಷೆಯ ಮೂಲಕ ಎಲ್ಲರಿಗೂ ತಿಳಿಸಿಕೊಡುವ ಕಾರ್ಯವು ನಡೆದಂತಾಗುವುದೆಂದು ಅವರ ಅಭಿಪ್ರಾಯ. ಪುಟ್ಟರಾಜ ಕವಿ ಗವಾಯಿಗಳವರು ಇದೊಂದು ಒಳ್ಳೆಯ ಸೂಚನೆಯೆಂದು ಕೃತಿ ರಚನೆಗೆ ಹಿರಿಯರಾದ ಗೊಗ್ಗಿಹಳ್ಳಿಯ ಪಟ್ಟದ ಮಠದ ಗುರುಗಳಾದ ಷ.ಬ್ರ.ಶ್ರೀ ನಿಜಗುಣ ಶಿವಾಚಾರ್ಯರಿಂದ ಶ್ರೀಕಾರ ಹಾಕಿಸಿ ಬರವಣಿಗೆಯನ್ನು ಪ್ರಾರಂಭಿಸಿದರು. ಪುಟ್ಟರಾಜರು ಬರೆದ ಕೃತಿಯನ್ನು ಚಿತ್ತವಾಡಗಿಯ ಚೆನ್ನಪ್ಪನವರು ಬೆಲ್ಲದ ನೋಡಿ, ಕೃತಿಯನ್ನು ಆಗಿನ ಲೋಕಸಭಾ ಸದಸ್ಯರಾದ ಕೊಪ್ಪಳದ ಅಗಡಿ ಸಂಗಣ್ಣನವರಿಗೆ ತೋರಿಸಲು ಅವರು ಗವಾಯಿಗಳ ಜೀವನ ಹಾಗೂ ಕೃತಿ ರಚನೆಯ ಬಗ್ಗೆ ಅನೇಕ ಸಂಗತಿಗಳನ್ನು ಸಂಗ್ರಹಿಸಿ “ಬಸವ ಪುರಾಣ”ಕ್ಕೆ ರಾಷ್ಟ್ರಪತಿ ಪ್ರಶಸ್ತಿ ಕೊಡಿಸುವುದಕ್ಕೆ ರಾಷ್ಟ್ರಪತಿಗಳಿಗೆ ಸಲಹೆ ಮಾಡುವುದಾಗಿ ಭರವಸೆ ನೀಡಿದರು.

        ಗವಾಯಿಗಳವರು ಬರೆದ “ಬಸವಪುರಾಣ” ವನ್ನು ಅಗಡಿ ಸಂಗಣ್ಣನವರು ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರಿಗೆ ದಿ.08-12-2960 ರಂದು ನೀಡಿದರು. ಗವಾಯಿಗಳವರ ಕೃತಿಯನ್ನು ಅವಲೋಕಿಸಿದ ರಾಷ್ಟ್ರಪತಿ ಡಾ.ಬಾಬುರಾಜೇಂದ್ರ ಪ್ರಸಾದರು ಕಣ್ಣಿಲ್ಲದವರು ಕನ್ನಡವನ್ನು ಮಾತೃಭಾಷೆಯನ್ನಾಗಿಸಿಕೊಂಡವರು ಇಂಥಹ ಕೃತಿರಚನೆ ಮಾಡಿರುವದನ್ನು ತಿಳಿದು ಅವರನ್ನು ಕಾಣುವ ಹಂಬಲದಿಂದ ಸಂಗಣ್ಣನವರಿಗೆ ಗವಾಯಿಗಳನ್ನು ಕರೆಯಿಸಲು ಸೂಚಿಸಿದರು. ಪುಟ್ಟರಾಜ ಗವಾಯಿಗಳವರು ಬಹು ಕಷ್ಟದಿಂದ ತಮ್ಮೊಂದಿಗೆ ಎಂಟು ಜನ ಸಹಾಯಕರೊಂದಿಗೆ ದೆಹಲಿಯನ್ನು ತಲುಪಿದರು.

        ಅಗಡಿ ಸಂಗಣ್ಣನವರು ಕರ್ನಾಟಕದ ಎಂಟು ಜನ ಲೋಕಸಭಾ ಸದಸ್ಯರೊಂದಿಗೆ ರಾಷ್ಟ್ರಪತಿಯವರ ಭೇಟಿಗಾಗಿ ಪುಟ್ಟರಾಜ ಕವಿ ಗವಾಯಿಗಳವರನ್ನು ಕರೆದುಕೊಂಡು ದೆಹಲಿಗೆ ಹೋದರು. ಡಾ.ಬಾಬುರಾಜೇಂದ್ರ ಪ್ರಸಾದರು ಗವಾಯಿಗಳವರ ವ್ಯಕ್ತಿತ್ವದರ್ಶನ, ಜ್ಞಾನ ದರ್ಶನವನ್ನು, ಸಂಗೀತ ಸಾಧನೆಯನ್ನು ಕಂಡು “ಅಭಿಮಾನದಿಂದ ಗವಾಯಿಗಳವರು ತಮ್ಮ ವಿದ್ವತ್ ಪ್ರತಿಭೆಯಿಂದ ಬಸವಣ್ಣನವರನ್ನು ದೇಶಕ್ಕೆ ಪರಿಚಯಿಸುವ ಪ್ರಯತ್ನವನ್ನು ಮೆಚ್ಚಿ “ಭಾರತ ದೇಶಕ್ಕೆ ನೀವು ಅಮೂಲ್ಯ ಸಾಹಿತ್ಯ ಕೊಡುಗೆ” ನೀಡಿದ್ದೀರಿ ಎಂದು ಹೆಮ್ಮೆಯ ಮಾತುಗಳನ್ನಾಡಿ ಗವಾಯಿಗಳವರು ‘ಭಾರತಾಂಬೆಯ ವರಪುತ್ರ’ರೆಂದು ನುಡಿದರು. ಗವಾಯಿಗಳವರಿಗೆ ಸಹಾಯರ್ಥವಾಗಿ ಹಣವೇನಾದರೂ ಬೇಕಾಗಿದೆಯೇ ಎಂದು ಕೇಳಲು ಹಣಕ್ಕಿಂತ ನೀವು ನಮ್ಮ ಕೃತಿಯನ್ನು ಮೆಚ್ಚಿಕೊಂಡಿದ್ದಕ್ಕೆ ಏನಾದರೂ ಪತ್ರ ಮೂಲಕ ಅಭಿಪ್ರಾಯ ತಿಳಿಸಲು ಕೇಳಿದರು. ರಾಷ್ಟ್ರಪತಿಗಳು ಗವಾಯಿಗಳವರ ಉದಾರವಾದ ಮನವನ್ನರಿತು “ಪ್ರಶಸ್ತಿಪತ್ರ” ವನ್ನಿತ್ತು ಗೌರವಿಸಿ, ಗವಾಯಿಗಳು ಭರತನಾಡು ಕಂಡ “ಯುಗಪುರುಷ” ಎಂದು ಮನಸಾರೆ ಅಭಿನಂದಿಸಿದರು. ಈ ಘಟನೆಯು ಜರುಗಿದುದು 1961 ಫೆಬ್ರುವರಿ 4 ರಂದು ಆಗ ಬಾಬು ರಾಜೇಂದ್ರ ಪ್ರಸಾದರ ಕಾರ್ಯದರ್ಶಿಯಾಗಿ ಶ್ರೀ ಆರ್.ಎಲ್.ಹಂಡಾ ಕಾರ್ಯ ನಿರ್ವಹಿಸುತ್ತಿದ್ದರು.

        ಪುಟ್ಟರಾಜ ಗವಾಯಿಗಳವರದು ಬಹುಮುಖ ಪ್ರತಿಭೆಗಳ ವ್ಯಕ್ತಿತ್ವ; ಸಂಗೀತ, ಸಾಹಿತ್ಯ, ಕಲೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಅವರಿಂದ ಸಂದ ಕೊಡುಗೆ ಅಪಾರವಾದುದು. ವ್ಯವಸ್ಥಿತವಾದ ಸಂಗೀತ ಶಾಲೆಯ ಮೂಲಕ ಆರಂಭಗೊಂಡ ಗವಾಯಿಗಳವರ ಕಾರ್ಯಕ್ಷೇತ್ರವು ಬೆಳೆಯುತ್ತಾ ತಮ್ಮದೇ ಆದ ವೈವಿಧ್ಯಮಯವಾದ ಕೃತಿ ರಚನೆ, ಗಾಯಕರ ತರಬೇತಿ, ರಂಗಭೂಮಿಯ ವೈವಿಧ್ಯತೆಯನ್ನು ನೋಡಬಹುದು. ಅವುಗಳ ಪ್ರತ್ಯೇಕ ಅಧ್ಯಯನದಿಂದ ಡಾ.ಪುಟ್ಟರಾಜ ಗವಾಯಿಗಳ ಜೀವನ ಸಾಧನೆಗಳ ಸಮಗ್ರ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುವುದು.

News & Events