ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಪಂಚಾಕ್ಷರ ವಾಣಿ

ಪಂಚಾಕ್ಷರ ವಾಣಿ

          ಒಂದು ದೇಶದ ಚಾರಿತ್ರಿಕ ಅಧ್ಯಯನದಲ್ಲಿ ಪತ್ರಿಕೆಗಳಿಗೆ ಅತ್ಯಂತ ಪ್ರಾಧಾನ್ಯತೆಯಿದೆ. ದೇಶದ ವಿದ್ಯಮಾನಗಳನ್ನು, ಪ್ರಚಲಿತದಲ್ಲಿ ನಡೆಯುವ ಘಟನೆಗಳನ್ನು ಪ್ರಜೆಗಳಿಗೆ ತಿಳಿಸುವಲ್ಲಿ ಸಂವಹನ ಮಾಧ್ಯಮಗಳಲ್ಲಿ ಪತ್ರಿಕೆಗಳ ಪಾತ್ರ ವಿಶೇಷವಾದುದು. ಶಿಕ್ಷಣ, ರಾಜಕೀಯ, ಸಾಹಿತ್ಯ, ಕಲೆ, ವಿಜ್ಞಾನ, ಧರ್ಮ ಜ್ಯೋತಿಷ್ಯ, ಚಲನಚಿತ್ರ, ಸಂಗೀತ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವೈವಿಧ್ಯಮಯ ಕುತೂಹಲಕಾರಿ ವಿಷಯಗಳನ್ನು ಪತ್ರಿಕೆಗಳು ಇಂದು ಸಾಕಷ್ಟು ಪ್ರಕಟಗೊಳಿಸುವುದರಿಂದ ಪ್ರಜಾತಂತ್ರ ಜಗತ್ತಿನಲ್ಲಿ ಪತ್ರಿಕೆಗಳು ಸಮಾಜದ ಜೀವನಾಡಿಗಳಂತೆ ಕಾರ್ಯನಿರ್ವಹಿಸುತ್ತಲಿದೆ.

          ಪತ್ರಿಕೆಗಳು ಸಮಕಾಲೀನ ಜನಾಂಗದ ಬದುಕಿನ ಜೀವನ ಚಿತ್ರಣವನ್ನು ನಮ್ಮೆದುರಿಗೆ ತಾನು ಕಂಡಂತೆ ಹಿಡಿದಿಟ್ಟು ವ್ಯಾಖ್ಯಾನಿಸುವುದರಿಂದ ಇವು ಸಾಮಾಜಿಕ ಬದುಕಿನ ಅತ್ಯಂತ ಉತ್ತಮ ದಾಖಲೆಗಳೆನಿಸುತ್ತವೆ. ಯಾವುದೆ ಒಂದು ಪ್ರದೇಶದ ಪತ್ರಿಕೆಯ ಅಧ್ಯಯನದವೆಂದರೆ ಆಯಾ ಕಾಲಘಟ್ಟದ ಸಾಂಸ್ಕೃತಿಕ ಬೆಳವಣಿಗೆ, ವಿದ್ಯಮಾನ-ಸಾಮಾಜಿಕ ಬದುಕಿನ ಅಭ್ಯಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ವೀರೇಶ್ವರ ಪುಣ್ಯಾಶ್ರಮದಿಂದ ಪುಟ್ಟರಾಜ ಗವಾಯಿಗಳವರು ಪ್ರತಿ ತಿಂಗಳೂ ಬಿಡುಗಡೆ ಮಾಡುವ ‘ಪಂಚಾಕ್ಷರ ವಾಣಿ’ ಮಾಸ ಪತ್ರಿಕೆಯು ಸಾಹಿತ್ಯ ಕ್ಷೇತ್ರಗಳ ವಿಷಯಗಳನ್ನೊಳಗೊಂಡು ಸಾಧಿಸಿದ ಸೇವೆಯು ಗುರುತರವಾದುದು.

          ಕ್ರಿ.ಶ.1812ರಲ್ಲಿ ಜರ್ಮನ್ ಪಾದ್ರಿಗಳು ಬಳ್ಳಾರಿಯಲ್ಲಿ ಪ್ರಕಟಿಸಿದ “ಕನ್ನಡ ಸಮಾಚಾರ’ ಕರ್ನಾಟಕದಲ್ಲಿ ಬಿಡುಗಡೆಯಾದ ಪ್ರಥಮ ಪತ್ರಿಕೆಯಾದರೆ, ಕರ್ನಾಟಕದಲ್ಲಿ ಕ್ರಿ.ಶ.1854ರಲ್ಲಿ ಪ್ರಕಟಗೊಂಡ ಮೈಸೂರಿನ 'ವೃತ್ತಾಂತ ಬೋಧಿನಿ’ ಕರ್ನಾಟಕದ ಮೊತ್ತ ಮೊದಲ ಪತ್ರಿಕೆಯಾಗಿದೆ. 1850ರಲ್ಲಿ ಬೆಳಗಾವಿಯಲ್ಲಿ ಹೊರಡುತ್ತಿದ್ದ ‘ಸುಬುದ್ದಿ ಪ್ರಕಾಶ’ ಉತ್ತರ ಕರ್ನಾಟಕದ ಮೊತ್ತಮೊದಲ ಪತ್ರಿಕೆಯಾಗಿದೆ. ನಂತರದ ಕಾಲಾವಧಿಯಲ್ಲಿ ಕರ್ನಾಟಕದಲ್ಲಿ ಸಂಘ-ಸಂಸ್ಥೆಗಳು, ಮಠಗಳು, ಕಾರ್ಯಸಾಧನೆಗಳನ್ನು ನಾಡವರಿಗೆ ತಿಳಿಸತೊಡಗಿದರು.

          ಕರ್ನಾಟಕದಲ್ಲಿ ವೀರಶೈವ ಧಾರ್ಮಿಕ ಪ್ರಸಾರವನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಪತ್ರಿಕೆಗಳನ್ನು ಪ್ರಾರಂಭಿಸಿ, ಅವುಗಳ ಮೂಲಕ ಸಾಹಿತ್ಯಪ್ರಕಟಣೆ ಕೈಗೊಂಡವರಲ್ಲಿ ಕನ್ನಡಿಗರ ಪಾಲು ಗಮನಿಸುವಂತಹದ್ದಾಗಿದೆ. ಘ.ಗು.ಹಳಕಟ್ಟಿಯವರ ‘ಶಿವಾನುಭವ’ ಧಾರವಾಡ ಮುರುಘಾಮಠದ “ಸಾವಧಾನ”, ಹುಬ್ಬಳ್ಳಿ ಮೂರುಸಾವಿರ ಮಠದ “ಪರಂಜ್ಯೋತಿ”, ನಿಡುಮಾಮಿಡಿ ಪೀಠದ “ಮಾಮಿಡಿ”, ಶಿವಯೋಗ ಮಂದಿರದ “ಸುಕುಮಾರ” ಪತ್ರಿಕೆಗಳು ಸಾಧಿಸಿದ ಸಾಧನೆ ಗಮನಾರ್ಹವಾದುದು. ಈ ಸಂದರ್ಭದಲ್ಲಿಯೇ ಡಾ.ಪುಟ್ಟರಾಜ ಗವಾಯಿಗಳವರು ಸಂಗೀತವನ್ನು ಕುರಿತಾಗಿ ಪ್ರಸಾರವನ್ನು ನಾಡಿನ ಬೇರೆ ಬೇರೆಡೆ ಇರುವ ತಮ್ಮ ಶಿಷ್ಯರಿಗೆ ಅಧ್ಯಯನಕ್ಕೆ ಪೂರಕವಾಗುವ ದೃಷ್ಠಿಯಲ್ಲಿ ಪತ್ರಿಕೆಯನ್ನು ಪ್ರಕಟಿಸುವ ಉದ್ದೇಶವನ್ನು ಹೊಂದಿದರು. ಗುರುಗಳಾದ ಪಂಚಾಕ್ಷರ ಗವಾಯಿಗಳವರ ಹೆಸರಿನಲ್ಲಿಯೇ “ಪಂಚಾಕ್ಷರ ಪ್ರಕಾಶ” ಎಂಬ ಮಾಸ ಪತ್ರಿಕೆಯನ್ನು ವೀರೇಶ್ವರ ಪುಣ್ಯಾಶ್ರಮದ ಪತ್ರಿಕೆಯಾಗಿ ಪ್ರಕಟಿಸಿ, ಬಿಡುಗಡೆ ಮಾಡುವದರೊಂದಿಗೆ ಪತ್ರಿಕಾಲೋಕವನ್ನು ಪ್ರವೇಶಿಸಿದರು. ಕ್ರಿ.ಶ.1969 ನವೆಂಬರ್-10 ರಂದು “ಪಂಚಾಕ್ಷರ ಪ್ರಕಾಶ” ಮಾಸ ಪತ್ರಿಕೆ ಮೊದಲ ಸಂಚಿಕೆಯನ್ನು ಮೂರುಸಾವಿರಮಠದ ಜಗದ್ಗುರು ಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ಕೆ.ಹೆಚ್.ಪಾಟೀಲ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಸರ್ವ ಶ್ರೀ ಅಡಕೆಯವರು ಭಾಗವಹಿಸಿದ್ದರು.

          ಸಂಗೀತ ಪರಿಚಯ, ಧರ್ಮತತ್ವಗಳ ಅರ್ಥ, ವಿವರಣೆ, ಮಹಾಪುರುಷರ ಜೀವನ ಚರಿತ್ರೆಯ ಲೇಖನಗಳೊಂದಿಗೆ, ಡಾ.ಪುಟ್ಟರಾಜ ಗವಾಯಿಗಳವರ ಸಂಪಾದಕೀಯವನ್ನು ಒಳಗೊಂಡ ಪತ್ರಿಕೆಯು ಪ್ರತಿ ತಿಂಗಳದ ಮೊದಲವಾರದಲ್ಲಿ “ಪಂಚಾಕ್ಷರ ಮುದ್ರಣ”ದಲ್ಲಿ ಪ್ರಕಟಗೊಂಡು ಬಿಡುಗಡೆಯಾಗುತ್ತದೆ. ಭಾರತೀಯ ಪತ್ರಿಕಾ ಲೋಕದಲ್ಲಿ ಅಂಧರೊಬ್ಬರು ಮಾಸ ಪತ್ರಿಕೆಯನ್ನು ನಡೆಸಿದವರಲ್ಲಿ ಡಾ. ಪುಟ್ಟರಾಜ ಗವಾಯಿಗಳು ಮೊದಲಿಗರಾಗಿದ್ದಾರೆ.

          ಪಂಚಾಕ್ಷರ ಗವಾಯಿಗಳವರ ಶಿಷ್ಯರು, ನಾಟಕ ಮಂಡಳಿಯ ಮಾಲೀಕರೂ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಪತ್ರಿಕೆಯ ಮುದ್ರಣಕ್ಕಾಗಿ ಮುದ್ರಣಯಂತ್ರವನ್ನು ಕೊಡುಗೆಯಾಗಿ ಸಲ್ಲಿಸಿದರು. ಶಿವಯೋಗ ಮಂದಿರದಿಂದ ಬಿಡುಗಡೆಯಾಗುತ್ತಿದ್ದ “ಸುಕುಮಾರ” ಪತ್ರಿಕೆಯ ಮಾದರಿಯಲ್ಲಿ ಸಂಗೀತ, ಸಾಹಿತ್ಯ ಇತರ ಕ್ಷೇತ್ರಗಳ ವಿಷಯಗಳನ್ನು ಪತ್ರಿಕೆಯು ಪ್ರಸಾರ ಮಾಡುವ ಉದ್ದೇಶವನ್ನು ಒಳಗೊಂಡಿದೆ. ಕ್ರಿ.ಶ.1988ರ ನಂತರ ಪತ್ರಿಕೆಯು ಅನೇಕ ಬದಲಾವಣೆಗಳನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ತನ್ನ ಹೆಸರಿನಲ್ಲಿಯೂ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡು “ಪಂಚಾಕ್ಷರ ವಾಣಿ” ಎಂಬ ಹೆಸರಿನಿಂದ ಪ್ರಕಟಗೊಂಡು ನಾಡವರ ಮನೆಯನ್ನು ತಲುಪತೊಡಗಿದೆ.

          ಪಂಚಾಕ್ಷರ ವಾಣಿ ಬಿಡಿ ಪತ್ರಿಕೆಯ ಬೆಲೆಯು ಒಂದು ರೂಪಾಯಿ ಐವತ್ತು ಪೈಸೆಗಳು (1-50) ವಾರ್ಷಿಕ ಚಂದಾ 35 ರೂ. ಅಜೀವ ಸದಸ್ಯರಿಗೆ 500 ರೂ.ಗಳು. “ಪಂಚಾಕ್ಷರ ವಾಣಿ” ಪತ್ರಿಕೆಯು ಪ್ರತಿ ತಿಂಗಳು 1954 ಓದುಗರನ್ನು ಹೊಂದಿದೆ. ಪಂಚಾಕ್ಷರ ವಾಣಿಗೆ ನಾಡಿನ ಹಿರಿಯ ವಿದ್ವಾಂಸರು, ಮಠಾಧೀಶರು, ಕವಿಗಳು, ಸಂಶೋಧಕರು ತಮ್ಮ ವಿಚಾರಗಳನ್ನು ಲೇಖನ, ಕವಿತೆ, ವಿಮರ್ಶೆ, ವ್ಯಾಖ್ಯಾನಗಳಂಥ ಸಾಹಿತ್ಯರೂಪದಲ್ಲಿ ಬರೆದು ಪತ್ರಿಕೆಯ ಸಾಹಿತ್ಯಿಕ ಮೌಲ್ಯವನ್ನು ತಿಂಗಳಿಂದ ತಿಂಗಳಿಗೆ ಕುತೂಹಲ ಹಾಗೂ ಚಿಂತನಾತ್ಮಕ ವಿಷಯಗಳೊಂದಿಗೆ ನಾಡವರ ನೆಚ್ಚಿನ ಪತ್ರಿಕೆಯಾಗಿಸಿದ್ದಾರೆ. ಜನ-ಮನವನ್ನು ಆಕರ್ಷಿಸಿದೆ. ಶ್ರಾವಣ ಮತ್ತು ವೈಶಾಖ ಮಾಸಗಳಲ್ಲಿ ಈ ಪತ್ರಿಕೆಯು ವಿಶೇಷಾಂಕವಾಗಿ ಹೊರಡುವುದು. ವೈಶಾಖ ಮಾದಲ್ಲಿ ಲಿಂ.ಪಂಚಾಕ್ಷರ ಗವಾಯಿಗಳವರ ಪುಣ್ಯ ಸ್ಮರಣೋತ್ಸವ ಜರುಗುವುದರಿಂದ ಪಂಚಾಕ್ಷರ ಗವಾಯಿಗಳವರ ವ್ಯಕ್ತಿತ್ವದರ್ಶನ, ಸಂಗೀತ ಕ್ಷೇತ್ರದ ಪ್ರಮುಖ ವಿಷಯಗಳನ್ನು ಒಳಗೊಂಡ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

          ಪತ್ರಿಕೆಯ ಪ್ರತಿಯೊಂದು ಸಂಪಾದಕೀಯದಲ್ಲಿ ಡಾ.ಪುಟ್ಟರಾಜ ಗವಾಯಿಗಳವರು ತಮ್ಮ ಅಗ್ರಲೇಖನಗಳನ್ನು ಪ್ರಕಟಿಸುವರು. ಅವರ ಸಂಪಾದಕೀಯ ಲೇಖನಗಳು “ತತ್ವ ಭೋಧಾಮೃತ” ಎಂಬ ಪುಸ್ತಕದಲ್ಲಿ ಸಂಗ್ರಹಗೊಂಡು ಪ್ರಕಟವಾಗಿದೆ. ಸಂಗೀತದಲ್ಲಿಯ ರಾಗಗಳು, ತಾಳ, ಬೇರೆ ಬೇರೆ ಚೀಜುಗಳು, ವೀರಶೈವ ಧರ್ಮದ ತಾತ್ವಿಕ ವಿಚಾರವನ್ನೊಳಗೊಂಡ ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುವದೊಂದಿಗೆ ಉದಯೋನ್ಮುಖ ಕವಿಗಳು, ಕವಿತೆಗಳು, ಚುಟುಕುಗಳು ಹೊಸದಾಗಿ ಸಾಹಿತ್ಯ ಲೋಕವನ್ನು ಪ್ರವೇಶಿಸುವ ಲೇಖಕರಿಗೆ “ಪಂಚಾಕ್ಷರ ವಾಣಿ” ಒಂದು ಉತ್ತಮ ಸಾಹಿತ್ಯ ಮಾಧ್ಯಮವಾಗಿ ನಾಡು ನುಡಿಯ ಸೇವೆಯನ್ನು ಸಲ್ಲಿಸುವಲ್ಲಿ ಸಾರ್ಥಕತೆಯನ್ನು ಪಡೆದಿದೆ. ಇದಕ್ಕೆ ಪುಟ್ಟರಾಜ ಗವಾಯಿಗಳವರ ಕ್ರಿಯಾಶಕ್ತಿಯೇ ಚೇತನ ಶಕ್ತಿಯಾಗಿದೆ.

News & Events