ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಸ್ಥಾಪನೆ

ನಾಟ್ಯಸಂಘದ ಹುಟ್ಟು

        ಡಾ.ಪುಟ್ಟರಾಜ ಗವಾಯಿಗಳು ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘವನ್ನು ಕಟ್ಟುವುದಕ್ಕಾಗಿ ಹಿನ್ನೆಲೆಯಾದ ಕಾರಣವು ಅತ್ಯಂತ ಕರುಣಾಜನಕವಾದುದು. ಶಿವಯೋಗ ಮಂದಿರದ ಸಂಸ್ಥಾಪಕರಾದ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಶಿಷ್ಯರಾದ ಪಂಚಾಕ್ಷರ ಗವಾಯಿಗಳವರು ಶಿವಯೋಗ ಮಂದಿರದಲ್ಲಿಯೇ ಇದ್ದು ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆಯನ್ನು ಹೇಳಿ ಕೊಡುತ್ತಿದ್ದರು. ಗವಾಯಿಗಳವರಲ್ಲಿಗೆ ಸಂಗೀತ ಕಲಿಯಲು ಬರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ  ಹೆಚ್ಚುತ್ತ ಹೋಯಿತು. ಅಲ್ಲದೆ ಕೆಲ ಕಾರಣಗಳಿಂದ ಪಂಚಾಕ್ಷರ ಗವಾಯಿಗಳು ಶಿವಯೋಗ ಮಂದಿರವನ್ನು ಬಿಟ್ಟು ರೋಣ ತಾಲೂಕಿನ ನಿಡಗುಂದಿಕೊಪ್ಪಕ್ಕೆ ಬಂದು 1914 ರಲ್ಲಿ ತಮ್ಮ ಸಂಚಾರಿ ಸಂಗೀತ ಪಾಠಶಾಲೆಯನ್ನು ಸ್ಥಾಪಿಸಿ ಸಂಗೀತ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಸಂಚಾರಿ ಸಂಗೀತಪಾಠ ಶಾಲೆಯು ಕರ್ನಾಟಕದ ಬೇರೆ-ಬೇರೆ ಕಡೆಗಳಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಪಾಠ ಶಾಲೆಗೆ ಬಂದು ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ದಿನದಿಂದ-ದಿನಕ್ಕೆ ವೃದ್ಧಿಸುತ್ತಾ ಸಾಗಿತು. ಇದರಿಂದ ಸಂಗೀತ ಪಾಠಶಾಲೆಯನ್ನು ನಡೆಸಲು ಆರ್ಥಿಕ ತೊಂದರೆಯು ಉಂಟಾಗಿ ಪಂಚಾಕ್ಷರ ಗವಾಯಿಗಳವರು ಚಿಂತಿಸತೊಡಗಿದರು. ಕ್ರಿ.ಶ.1938 ರಲ್ಲಿ ಸಂಚಾರಿ ಸಂಗೀತ ಪಾಠಶಾಲೆ ರೋಣದಿಂದ ಹೊಂಬಳಕ್ಕೆ ಬಂದು ಕ್ಯಾಂಪ ಹಾಕಿತು.

        ಮೈಸೂರು ನಾಡಿನ ಮಹಾಪ್ರಭುಗಳು ಸಾಹಿತ್ಯ ಸಂಗೀತದ ಬಗ್ಗೆ ಅಪಾರವಾದ ಅಭಿಮಾನವನ್ನು ಪಡೆದವರಾಗಿದ್ದು, ಕವಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹವನ್ನು ಸಹಾಐವನ್ನು ಉದಾರವಾಗಿ ನೀಡಿ ಆಶ್ರಯವನ್ನಿತ್ತು ರಕ್ಷಣೆ ನೀಡುತ್ತಿದ್ದರು. ಇದನ್ನು ತಿಳಿದ ಪಂಚಾಕ್ಷರ ಗವಾಯಿಗಳು ಮೈಸೂರು ಮಹಾರಾಜರಲ್ಲಿ ತಮ್ಮ ಸಂಚಾರಿ ಸಂಗೀತ ಪಾಠಶಾಲೆಗೆ ಆರ್ಥಿಕ ಸಹಾಯವನ್ನು ಪಡೆಯುವ ಉದ್ದೇಶದಿಂದ 19367-38 ರಲ್ಲಿ ಹೊಂಬಳದಿಂದ 50-60 ಶಿಷ್ಯರೊಂದಿಗೆ ಪ್ರಯಾಣವನ್ನು ಬೆಳಸಿ ಬೆಂಗಳೂರಿನಲ್ಲಿ ವಾಸ್ತವ ಮಾಡಿದರು. ಪುರಾಣ ಪ್ರವಚನಗಳೊಂದಿಗೆ ಕಾರ್ಯಕ್ರಮವನ್ನು ನೀಡುತ್ತ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ವೀರಭದ್ರಗೌಡರ ಛತ್ರದಲ್ಲಿ ಬಿಡಾರ ಹೂಡಿ, ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಪಂಚಾಕ್ಷರ ಗವಾಯಿಗಳು ತಮ್ಮ ಬೇಡಿಕೆಯನ್ನು ಮನವಿಯ ಮೂಲಕ ನೀಡಿ ಅರಸರ ಕರೆಯನ್ನು ಕಾಯುತ್ತ ಕುಳಿತರು. ಒಂದು ತಿಂಗಳ ಅವಧಿ ಗತಿಸಿದರೂ ಅರಸರಿಂದ ಯಾವುದೇ ಕರೆ ಬರಲಿಲ್ಲ. ಅಲ್ಲದೇ ಮೈಸೂರು ಸರಕಾರದವರು ಸಂಗೀತ ಪಾಠಶಾಲೆಯ ವಿವರಣೆಗಾಗಿ ಮಾಹಿತಿಯನ್ನು ಕೇಳಿದರು. ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠಶಾಲೆಯು ಶಿವಯೋಗ ಮಂದಿರದ ಪಾಠಶಾಲೆ ಎಂದು ಅಧಿಕೃತವಾದ ಪ್ರಮಾಣ ಪತ್ರವನ್ನು ಮಹಾರಾಜರಿಗೆ ತಲುಪಿಸುವಲ್ಲಿ ವಿಳಂಬವಾಯಿತು. ಅಷ್ಟರಲ್ಲಿ ಎಂಟೊಂಭತ್ತು ತಿಂಗಳು ಗತಿಸಿದಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರು ದಿ.04-05-1940 ರಂದು ನಿಧನರಾದರು. ಇದರಿಂದ ಸಹಾಯವನ್ನು ಬಯಸಿ ಬೆಂಗಳೂರಿಗೆ ಬಂದ ಪಂಚಾಕ್ಷರ ಗವಾಯಿಗಳಿಗೆ ಆಕಾಶವೇ ಕಳಚಿ ಬಿದ್ದಂತಾದುದಲ್ಲದೆ, ಆಧಾರವೆ ತಪ್ಪಿತು. ಸಹಾಯ ಪಡೆಯಲು ಹೋಗಿ ಏಳೆಂಟು ಸಾವಿರ ರೂಪಾಯಿಗಳ ಸಾಲದ ಭಾರವನ್ನು ಹೊತ್ತುಕೊಂಡು ಶಿಷ್ಯರೊಂದಿಗೆ ಬಹಳಷ್ಟು ಕಷ್ಟಪಡುತ್ತ ಅಲ್ಲಲ್ಲಿ ವಾಸ್ತವ್ಯ ಮಾಡುತ್ತ ನರಗುಂದ ನಗರಕ್ಕೆ ಬಂದು ನೆಲೆಸಿದರು. ನರಗುಂದದ ಜನತೆ ಗವಾಯಿಗಳಿಗೆ ಅನೇಕ ರೀತಿಯ ಸಹಾಯ ಮಾಡಿದರು. ಗುರುಗಳಾದ ಪಂಚಾಕ್ಷರ ಗವಾಯಿಗಳವರಿಗೆ ಒದಗಿದ ಪರಿಸ್ಥಿತಿಯನ್ನು ಕಂಡು-ಮರುಗಿದ ಪುಟ್ಟರಾಜ ಗವಾಯಿಗಳು ಸಂಚಾರಿ ಸಂಗೀತ ಪಾಠಶಾಲೆಯಲ್ಲಿ ಇರುವ ವಿದ್ಯಾರ್ಥಿಗಳನ್ನು ಸಂಘಟಿಸಿ ನಾಟಕಗಳನ್ನು ಪ್ರಯೋಗಿಸುವದರೊಂದಿಗೆ ಜನಗಳಿಂದ ಹಣವನ್ನು ಪಡೆದ ಸಾಲವನ್ನು ತೀರಿಸಬಹುದೆಂದು ವಿಚಾರಿಸಿದರು. ಈ ಹಿಂದೆ 1939 ರಲ್ಲಿ ತಾವೇ ರಚಿಸಿದ “ಸಿದ್ದರಾಮೇಶ್ವರ ಸಂವಾದ” ಎಂಬ ಕಥೆಯನ್ನು ಕೇವಲ ಪುರುಷ ಪಾತ್ರಗಳೊಂದಿಗೆ ಅಭಿನಯಿಸಲು ಪಾಠಶಾಲೆಯ ವಿದ್ಯಾರ್ಥಿಗಳನ್ನೇ ನಟರನ್ನಾಗಿ ಆಯ್ಕೆ ಮಾಡಿ “ಬಂಕದ ನಾಟಕ” ಪ್ರಯೋಗಗಳನ್ನು ಹೊಂಬಳದಲ್ಲಿ ಪ್ರಾರಂಭಿಸಿದ್ದರು. ಹೊಂಬಳದಲ್ಲಿ ಹತ್ತಾರು ಪ್ರಯೋಗಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ “ಸಿದ್ಧರಾಮೇಶ್ವರ ಸಂವಾದ” ವನ್ನೇ ನಾಟಕವನ್ನಾಗಿ ಪರಿವರ್ತಿಸಿ ಪ್ರಯೋಗಗಳನ್ನು ಪ್ರದರ್ಶಿಸುವದರೊಂದಿಗೆ ನಾಟಕ ಮಂಡಳಿಯನ್ನು ಸ್ಥಾಪಿಸಬೇಕೆಂದು ಪುಟ್ಟರಾಜ ಗವಾಯಿಗಳು ನಿರ್ಧರಿಸಿದರು.

        ಪಂಚಾಕ್ಷರ ಗವಾಯಿಗಳವರಿಗೆ ನಾಟಕವೆಂದರೆ ಹಿಡಿಸುತ್ತಿರಲಿಲ್ಲ ಈ ಹಿಂದೆ ತಾವು ಸ್ಥಾಪಿಸಿದ “ಮಳೆಮಲ್ಲೇಶ್ವರ” ನಾಟಕ ಮಂಡಳಿಯಿಂದ ಬಹಳಷ್ಟು ಕಷ್ಟಕ್ಕೆ ಒಳಗಾದ ಪಂಚಾಕ್ಷರ ಗವಾಯಿಗಳು ನಾಟಕದ ಮಾತೆತ್ತಿದರೆ ಮೌನವಾಗುತ್ತಿದ್ದರು. ಹಿಂದೊಮ್ಮೆ ಪುಟ್ಟರಾಜ ಗವಾಯಿಗಳು ಕೇಳಿದಾಗಲೂ ಒಪ್ಪಿಗೆಯನ್ನು ನೀಡದ್ದರಿಂದ, ಈ ಬಾರಿ ಗುರುಗಳಿಂದ ಒಪ್ಪಿಗೆಯನ್ನು ಪಡೆಯಲು ಭಕ್ತ ಜನರನ್ನು ಪಂಚಾಕ್ಷರ ಗವಾಯಿಗಳಲ್ಲಿಗೆ ಕಳುಹಿಸಿದರು. ಈ ವೇಳೆಗಾಗಲೇ ಸಂಚಾರಿ ಸಂಗೀತ ಪಾಠಶಾಲೆ ಬೆಂಗಳೂರಿನಿಂದ ಸಂಚರಿಸುತ್ತ ನರಗುಂದಕ್ಕೆ ಕ್ಯಾಂಪ್ ಹಾಕಿತ್ತು. ಪುಟ್ಟರಾಜರು ನರಗುಂದದ ನಾಗರಿಕರಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿ ಗುರುಗಳಲ್ಲಿಗೆ ನಾಟಕ ಮಂಡಳಿಯ ಸ್ಥಾಪನೆಗಾಗಿ ಕೇಳಲು ಕಳುಹಿಸಿದರು. ನರಗುಂದದ ಶ್ರೀಮಂತರಾದ ಶ್ರೀ ಫಕ್ಕೀರಪ್ಪ ಹಸಬಿ ಹಾಗೂ ಊರ ಗಣ್ಯರು ಪಂಚಾಕ್ಷರ ಗವಾಯಿಗಳಲ್ಲಿಗೆ ಬಂದು “ಗವಾಯಿಗಳವರೇ ಜನರು ಭಿಕ್ಷೆಯನ್ನು ಹಾಗೆಯೇ ಕೇಳಿದರೆ ಕೊಡುವುದಿಲ್ಲ. ಅದಕ್ಕೆ ಬದಲಾಗಿ ನಾಟಕಗಳನ್ನು ಆಡುವುದರಿಂದ ಜನರಿಗೆ ಮನರಂಜನೆಯು ದೊರೆಯುತ್ತದೆ. ಟಿಕೇಟಿನಿಂದ ಬರುವ ಹಣದಿಂದ ಪಾಠಶಾಲೆಗೆ ಆರ್ಥಿಕ ಬಲವು ದೊರೆಯುವುದು” ಎಂದು ಹೇಳಿ “ತಾವುಗಳು ನಾಟಕಗಳನ್ನಾಡಲು ಆಶೀರ್ವಾದವಿತ್ತು, ಒಪ್ಪಿಗೆಯನ್ನಿತ್ತು ಶಿಷ್ಯರಿಗೆ ಮಾರ್ಗದರ್ಶನ ನೀಡಬೇಕು” ಎಂದು ಪ್ರಾರ್ಥಿಸಿಕೊಂಡರು. ರಾತ್ರಿಯ ವೇಳೆಯಾದುದರಿಂದ ಪಂಚಾಕ್ಷರ ಗವಾಯಿಗಳು ಮರುದಿನ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ತಮ್ಮಲ್ಲಿಗೆ ಬಂದ ಜನರನ್ನು ಬೀಳ್ಕೊಟ್ಟರು. ಪಂಚಾಕ್ಷರ ಗವಾಯಿಗಳು ಸಾಲದ ಭಾರವನ್ನು ಪರಿಹರಿಸುವದನ್ನೇ ಚಿಂತಿಸುತ್ತ ಮಲಗಿದ ಸಂದರ್ಭದಲ್ಲಿ ಹಾಣಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಸ್ವಪ್ನದಲ್ಲಿ ದರ್ಶನವಿತ್ತು “ಶಿಷ್ಯರ ಆಪೇಕ್ಷೆಯಂತೆ ನಾಟಕಗಳನ್ನು ಆಡಿದರೆ ಪಾಠಶಾಲೆಯ ಸಾಲವು ಹರಿದು ಆದಾಯವಾಗುವುದು” ಎಂದು ನುಡಿದು ಆ ಮಾರ್ಗದಲ್ಲಿ ಸಾಗುವಂತೆ ಆಶೀರ್ವಾದಿಸಿದರು. ಪಂಚಾಕ್ಷರ ಗವಾಯಿಗಳವರಿಗೆ ತಮ್ಮ ಗುರುಗಳಿಂದ ದೊರೆತ ಆಶೀರ್ವಾದ ಹಾಗೂ ಶಿಷ್ಯರಾದ ಪುಟ್ಟರಾಜ ಗವಾಯಿಗಳವರ ಸಂಕಲ್ಪವನ್ನು ಒಂದೇ ಸಂದರ್ಭದಲ್ಲಿ ಈಡೇರಿಸುವುದಕ್ಕೆ ಗುರು ಪ್ರೇರಣೆ ದೊರೆಯುತ್ತಿರುವುದರಿಂದ ಸಂತೋಷಗೊಂಡ ಮರುದಿನವೇ ಪುಟ್ಟರಾಜರನ್ನು ಕರೆದು ಸ್ತ್ರೀ ಪಾತ್ರಗಳನ್ನು ಗಂಡಸರೇ ಮಾಡಬೇಕೆಂದು ಕಡ್ಡಾಯಮಾಡಿ ನಾಟಕಗಳನ್ನಾಡುವುದಕ್ಕೆ ಒಪ್ಪಿಗೆಯನ್ನು ಕೊಟ್ಟರು. ಪುಟ್ಟರಾಜ ಗವಾಯಿಗಳವರಿಗೆ ಅತ್ಯಾನಂದವಾಗಿ ನಾಟಕ ಪ್ರದರ್ಶನದ ಸಿದ್ದತೆಗೆ ತೊಡಗಿದರು. ನಾಟಕ ಸಾಹಿತ್ಯ, ರಂಗಸಜ್ಜಿಕೆ, ನಟ-ನಟಿಯರು, ವ್ಯವಸ್ಥಾಪಕರು, ರಂಗಕರ್ಮಿಗಳು, ಎಲ್ಲರೂ ಪಾಠಶಾಲೆಯ ವಿದ್ಯಾರ್ಥಿಗಳೇ! ನರಗುಂದದ ನಾಗರಿಕರ ಸಹಕಾರ ಹಾಗೂ ಪಾಠಾಶಾಲೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕ್ರಿ.ಶ.1940ರ ಆಗಸ್ಟ್ ವಿಜಯ ದಶಮಿಯಂದು “ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ” ಯು ಸ್ಥಾಪನೆಯಾಯಿತು.

News & Events