ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಸಂಘಟನೆ ಸಂಚಾರ

ನಾಟಕ ಮಂಡಳಿಯ ಸಂಘಟನೆ – ಸಂಚಾರ:

        ಪುಟ್ಟರಾಜ ಗವಾಯಿಗಳು ತಾವೇ ಬರೆದ “ಸಿದ್ದರಾಮ ಸಂವಾದ”ವನ್ನೇ ಸ್ತ್ರೀ ಪಾತ್ರಗಳನ್ನು ಜೋಡಿಸುವದರೊಂದಿಗೆ ರಂಗಭೂಮಿಯ ಮೇಲೆ ಪ್ರದರ್ಶನಗೊಳ್ಳುವಂತೆ ಏರ್ಪಾಡು ಮಾಡಿದರು. ಪಾಠಶಾಲೆಯಲ್ಲಿದ್ದ ನರಗುಂದದ ಬಸವಣ್ಣೆಪ್ಪ ಪುರಾಣಿಕ ಎಂಬುವರು ನಾಟಕದ ಪಾತ್ರಕ್ಕೆ ಬೇಕಾದ ಕಲಾವಿದರನ್ನು ಆಯ್ಕೆ ಮಾಡಿದರು. ಪುಟ್ಟರಾಜ ಗವಾಯಿಗಳು ಹಾರ್ಮೋನಿಯಂ ನುಡಿಸಿದರು. ಪಂಚಾಕ್ಷರ ಗವಾಯಿಗಳೇ ತಬಲಾ ವಾದಕರು, ಬೀಳಿಗೆಯ ಗದಿಗಯ್ಯ ಬಾಳಸಿದ್ಧರಾಮನಾಗಿ, ಬಸವರಾಜ ರಾಜಗುರು-ರೇವಣಸಿದ್ದನಾಗಿ, ನಂತರ ಪ್ರೌಢಸಿದ್ಧರಾಮನಾಗಿ, ಚನ್ನಬಸಯ್ಯ ಕೋರದಾನ್ಯಮಠ ನರೇಗಲ್ಲ- ಅಲ್ಲಮ ಪ್ರಭುದೇವರಾಗಿ ಪುರುಷ ಪಾತ್ರಗಳನ್ನು ವಹಿಸಿದರು. ಜಾಲಿಬೆಂಚಿ ದೊಡ್ಡಬಸಯ್ಯ ಸುಗ್ಗಲಾದೇವಿಯ ಮುಖ್ಯ ಸ್ತ್ರೀ ಪಾತ್ರವಹಿಸಿದರೆ, ರೋಣದ ಮರಿಯಪ್ಪ, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ವೆಂಕಪ್ಪ ರೋಣದ ಹಾಸ್ಯ ಸ್ತ್ರೀ ಪಾತ್ರ ವಹಿಸಿದರು. ಶ್ರೀ ವೆ.ಮೂ.ಶಿವಮೂರ್ತಿಸ್ವಾಮಿ ದೇವಗಿರಿ ನಾಟಕ ಸಂಸ್ಥೆಯ ನಿರ್ದೇಶಕರಾಗಿದ್ದರು. ಸಂಗೀತ ಸಾಧನೆ, ಸನ್ನಿವೇಶಕ್ಕೆ ಅನುಗುಣವಾದ ನಟರ ಹಾವ-ಭಾವಗಳ ಅಭಿನಯ, ಭಕ್ತಿಪರವಾದ ತಾತ್ವಿಕ ಸಂಭಾಷಣೆಯೊಂದಿಗೆ, ಶಾಸ್ತ್ರ ಬದ್ಧ ಶುದ್ಧರಾಗ-ತಾಳ-ಮೇಳದೊಂದಿಗೆ ಶಿವಯೋಗಿ ಸಿದ್ದರಾಮನ ಜೀವನ ವೃತ್ತಾಂತದ ಪ್ರಸಂಗಗಳು ರಂಗಭೂಮಿಯ ಮೇಲೆ ನಟರಿಂದ ಪ್ರದರ್ಶನಗೊಳ್ಳುತ್ತಿದ್ದಂತೆ ಪ್ರೇಕ್ಷಕರು ಭಕ್ತಿಪರವಷರಾಗಿ ನಾಟಕವನ್ನು ವೀಕ್ಷಿಸುತ್ತಿದ್ದರು. ಬಣ್ಣ ಬಣ್ಣದ ಬೆಳಕಿನಲ್ಲಿ ರಂಗವೇದಿಕೆಯು ಹೊಸಶಕ್ತಿಯನ್ನು ಪಡೆಯುತ್ತಿದ್ದಂತೆ ಜನರು ಅಭಿಮಾನದ ಹಾರೈಕೆಯ ಘೋಷಣೆಗಳನ್ನು ಹಾಕಿದರು. ನಾಟಕ ನಡೆದ ಸಂದರ್ಭದಲ್ಲಿ ಮಳೆಯಾದರೂ ಒದ್ದೆಯಾದ ಬಟ್ಟೆಗಳಲ್ಲಿಯೇ ತಮ್ಮ ಸ್ಥಾನವನ್ನು ಬಿಟ್ಟು ಕದಲಲಾರದೆ ನಾಟಕವನ್ನು ವೀಕ್ಷಿಸಿದ್ದು ಗವಾಯಿಗಳವರು ನಾಟಕ ಪ್ರದರ್ಶಿಸಿದ ಯಶಸ್ವಿಯ ದ್ಯೋತಕವಾಯಿತು. ಒಂದೇ ಪ್ರಯೋಗದಲ್ಲಿ 1,800-00 ರೂಪಾಯಿಗಳು ಸಂದಾಯವಾದುದಲ್ಲದೆ ನರಗುಂದದ ನಾಗರಿಕರೆಲ್ಲರೂ ಗವಾಯಿಗಳವರ ನಾಟಕ ಮಂಡಳಿಗೆ ದೇಣಿಗೆಯಾಗಿ 2,000-00 ರೂಪಾಯಿಗಳನ್ನು ನೀಡಿ ಕಲಾವಿದರನ್ನು ಕಂಪನಿಯನ್ನು ಪ್ರೋತ್ಸಾಹಿಸಿದರು. ಇದರಿಂದ ಗವಾಯಿಗಳ ಸಾಲ ಕರಗುತ್ತಿದ್ದಂತೆ ನಾಟಕ ಮಂಡಳಿ ಆರ್ಥಿಕ ಅಭಿವೃದ್ಧಿಯನ್ನು ಹೊಂದಿ ಪ್ರಗತಿಯೊಂದಿಗೆ ಮುನ್ನಡೆಯುತ್ತ ಗಟ್ಟಿಗೊಳ್ಳುತ್ತಾ ಸಾಗಿತು. ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯು ತನ್ನ ಕಲಾಯಾತ್ರೆಯನ್ನು ನರಗುಂದದಿಂದ ಬದಾಮಿಗೆ ಕ್ಯಾಂಪು ಹಾಕಿತು. ಬನಶಂಕರಿ ದೇವಿಯ ಜಾತ್ರೆಯಲ್ಲಿ ಎಲ್ಲ ಕಂಪನಿಗಳಿಗಿಂತ ಗವಾಯಿಗಳವರ ನಾಟಕ ಮಂಡಳಿಯು ಪ್ರಯೋಗಿಸುತ್ತಿದ್ದ ನಾಟಕಗಳನ್ನು ನೋಡಲು ಪ್ರೇಕ್ಷಕರು ಕಿಕ್ಕಿರಿಯುತ್ತಿದ್ದರು. ಜಾತ್ರೆಯಲ್ಲಿ ಪುಟ್ಟರಾಜರ “ಸತಿ ಸುಕನ್ಯಾ” ನಾಟಕವು ಬಹು ಜನಪ್ರಿಯತೆಯನ್ನು ಗಳಿಸಿತು.

        ಕ್ರಿ.ಶ.1941 ರಲ್ಲಿ ನಾಟಕ ಮಂಡಳಿಯು ಸಿಂದಗಿಯಲ್ಲಿ ನಾಟಕಗಳನ್ನು ಪ್ರಯೋಗಿಸುತ್ತಿತ್ತು. ಆ ಸಂದರ್ಭದಲ್ಲಿ ನಾಟಕ ಮಂಡಳಿಗೆ ಬಾಡಿಗೆ ರೂಪದಲ್ಲಿಕೊಟ್ಟ ರಂಗಪರಿಕರಗಳ, ಸೀನರಿಗಳ ಹಣವನ್ನು ಮಾಲಕರು ಕೊಡಲೇಬೇಕೆಂದು ಪಟ್ಟು ಹಿಡಿದರು. ನಾಟಕ ಮಂಡಳಿಯ ಆರ್ಥಿಕ ಪರಿಸ್ಥಿತಿಯು ಅಷ್ಟೊಂದು ಉತ್ತಮ ರೀತಿಯಲ್ಲಿರಲಿಲ್ಲ. ಗವಾಯಿಗಳಿಎ ನಾಟಕ ಕಂಪನಿಗೆ ಒದಗಿದ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂದು ತಿಳಿಯದಾಗಿ ಬಹಳಷ್ಟು ಇಕ್ಕಟ್ಟಿಗೆ ಒಳಗಾದರು. ನಾಟಕ ಕಂಪನಿಯಲ್ಲಿ ಪಾತ್ರಧಾರಿಯಾಗಿದ್ದ ಚಿತ್ತರಗಿ ಶ್ರೀ ಗಂಗಾಧರ ಶಾಸ್ತ್ರಿಗಳು ತಮ್ಮ ಊರಾದ ಶಿರೂರಿಗೆ ಹೋಗಿ ತಮ್ಮ ಪಾಳಿನ ಜಮೀನನ್ನು ಮಾರಿ ಬಂದ 10,000-00 ರೂಪಾಯಿ ಹಣವನ್ನು ಸಾಲಗಾರರಿಗೆ ತೀರಿಸಿ, ಪಂಚಾಕ್ಷರ ಗವಾಯಿಗಳಿಗೆ ವಿಷಯ ತಿಳಿಸಿದರು. ಅಲ್ಲದೇ ನಾಟಕ ಮಂಡಳಿಗೆ ಬೇಕಾದ ಎಲ್ಲ ಸಾಮಾನುಗಳನ್ನು ಖರೀದಿಸಿದರು. ಹೊಸ ಹೊಸ ವೇಷ ಭೂಷಣ, ಬಣ್ಣದ ರಂಗಸನ್ನಿವೇಶಕ್ಕೆ ಅನುಗುಣವಾದ ದೃಶ್ಯಾವಳಿಯನ್ನೊಳಗೊಂಡ ಪರದೆಗಳನ್ನು ಬರೆಯಿಸಲಾಯಿತು. ನಟರ ಅಭಿನಯ ತರಬೇತಿಗಾಗಿ ಬಸವಂತಪ್ಪ ಉಡಕೇರಿಯವರನ್ನು ಕರೆಯಿಸಿದರು. ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಸಹಾಯದಿಂದ ಮಂಡಳಿ ಸುಧಾರಣೆಯನ್ನು ಪಡೆಯಿತು. ಕಂಪನಿಯು ಗುಲಬರ್ಗಾ, ವಿಜಾಪೂರ, ಬಳ್ಳಾರಿಯತ್ತ ಸಂಚರಿಸತೊಡಗಿತು.

        1941 ರಲ್ಲಿ ನಾಟಕ ಮಂಡಳಿಯು ಹಂಪಸಾಗರದಿಂದ ಶಿರಹಟ್ಟಿಗೆ ಬಂದು ಕ್ಯಾಂಪ್ ಹಾಕಿತು. ಶಿರಹಟ್ಟಿ ಫಕ್ಕೀರೇಶ್ವರ ಮಹಾಸ್ವಾಮಿಗಳ ಜಾತ್ರೆಯಲ್ಲಿ ನಾಟಕ ಮಂಡಳಿ ವಾಸ್ತವ್ಯ ಮಾಡಿತು. ಆಗಿನ ಕಾಲದಲ್ಲಿ ಔದ ಸಂಸ್ಥಾನದ ಸ್ವಾಧೀನದಲ್ಲಿದ್ದ ಶಿರಹಟ್ಟಿಯಲ್ಲಿ ಒಂದು ಪಂಗಡದ ಅಧಿಕಾರಿ ಜನರು ನಾಟಕವನ್ನು ನೋಡುವುದಕ್ಕೆ ಪುಕ್ಕಟೆಯಾಗಿ ಬಿಡಲು ಒತ್ತಾಯಿಸಿದರು. ಕಂಪನಿಯ ಮಾಲಕರು ಇದಕ್ಕೆ ಒಪ್ಪದೇ ಇರುವುದರಿಂದ ಅಧಿಕಾರಿಗಳು ಕಂಪನಿಯ ಬಗ್ಗೆ ತಾತ್ಸಾರ ಭಾವನ್ನು ತಳೆದರು. ನಾಟಕ ಪ್ರದರ್ಶನವನ್ನು ಮಾಡುವುದಕ್ಕೆ ಆತಂಕವನ್ನು ವ್ಯಕ್ತಪಡಿಸಿ ನಾಟಕ ಮಂಡಳಿಗೆ ಅಪರಾಧವನ್ನು ಹೊರಸಿದರು. ನಿರಪರಾಧಿಗಳಾದ ಪಂಚಾಕ್ಷರ ಗವಾಯಿಗಳು ಕಛೇರಿಗೆ ಬಂದು ಕ್ಷಮೆಯನ್ನು ಕೇಳಿದರೂ ಸಹಿತ ಅಧಿಕಾರಿಗಳು ಬಹಿರಂಗ ಸಭೆಯಲ್ಲಿ ಪಂಚಾಕ್ಷರ ಗವಾಯಿಗಳು ಸಾಮೂಹಿಕವಾಗಿ ಕ್ಷಮೆ ಕೇಳಬೇಕೆಂದು ಹಠ ಹಿಡಿದರು.

        ಪಂಚಾಕ್ಷರ ಗವಾಯಿಗಳು ನಗರಸಭೆಯಲ್ಲಿ ಕ್ಷಮೆ ಕೇಳಿದರು, ಇದಕ್ಕೆ ತೃಪ್ತಿ ಪಡೆಯದ ಅಧಿಕಾರಿಗಳು ನಾಟಕ ಮಂದಿರದಲ್ಲಿ ಸಾರ್ವಜನಿಕರೆದುರಿನಲ್ಲಿ ಕ್ಷಮಾಪಣೆ ಕೇಳಬೇಕೆಂದು ಮಾತ್ಸರ್ಯಭಾವದಿಂದ ಗವಾಯಿಗಳವರಿಗೆ ತೊಂದರೆ ಕೊಡಲಾರಂಭಿಸಿದರು. ಒಂದು ದಿನ ಸಭೆಯಲ್ಲಿ ಗವಾಯಿಗಳವರು ರಂಗ ಮಂದಿರದ ವೇದಿಕೆಗೆ ಬಂದು, ಪ್ರೇಕ್ಷಕರ ಎದುರಿನಲ್ಲಿ ನಿಂತು “ನನ್ನ ಯಾವತ್ತು ಶೀರಹಟ್ಟಿಯ ಜನಗಳೆ, ನಮ್ಮ ನಾಟಕ ಮಂಡಳಿಯ ಕಲಾವಿದರು ಯಾವುದೇ ತಪ್ಪನ್ನು ಮಾಡದಿದ್ದರೂ ಪದೇ ಪದೇ ಊರಿನ ಅಧಿಕಾರಿ ವರ್ಗದವರು ನಮ್ಮ ನಾಟಕ ಪ್ರಯೋಗಗಳಿಗೆ ಆತಂಕವನ್ನುಂಟು ಮಾಡಿ ಬಗೆಬಗೆಯಾಗಿ ಕಾಡೀರಿ; ನಾಲ್ಕಾರು ದಿನದಿಂದ ನಿರಪರಾಧಿಗಳಾದ ನಮಗೆ ತೊಂದರೆಯನ್ನುಂಟು ಮಾಡಿದ್ದಿರಿ, ಇನ್ನು ಮುಂದೆ ಈ ಊರಲ್ಲಿ ನಾವಾಗಲಿ ನಮ್ಮ ಶಿಷ್ಯ ಮಂಡಳಿಯಾಗಲಿ ನಾಟಕ ಪ್ರಯೋಗಗಳನ್ನು, ಕಲಾ ಸೇವೆಯನ್ನು ಮಾಡುವುದಿಲ್ಲ. ನಾಳೆಯೇ ನಿಮ್ಮ ಊರಿನಿಂದ ನಾವು ಶೀಷ್ಯರೊಂದಿಗೆ ಬೇರೆ ಕಡೆಗೆ ಹೋಗುತ್ತೇವೆ ನಿಮ್ಮಲ್ಲರಿಗೂ ಶರಣಾರ್ಥಿ” ಎಂದು ಹೇಳಿ ಪಂಚಾಕ್ಷರ ಗವಾಯಿಗಳು ಗದುಗಿಗೆ ಬಂದು ವಾಸ್ತವ್ಯ ಮಾಡಿದರು. ಮುಂದೆ ಕೆಲವೇ ದಿನಗಳಲ್ಲಿ ಘಟನೆಗೆ ಕಾರಣನಾದ ಅಧಿಕಾರಿಯು ದುರ್ಮರಣಕ್ಕೆ ಒಳಗಾಗಿ ಸಾವನ್ನು ಅಪ್ಪಿದನು.

        ಶ್ರೀಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯು ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ತನ್ನ ಕಲಾಯಾತ್ರೆಯನ್ನು ನಡೆಸುತ್ತಾ ರೋಣದಲ್ಲಿ ಕ್ಯಾಂಪ್ ಮಾಡಿತು.  ಮಂಡಳಿಯ ಪ್ರಮುಖ ನಾಟಕ “ಸತಿ-ಸುಕನ್ಯಾ”ವನ್ನು ರಂಗಪ್ರಯೋಗಕ್ಕೆ ಸಿದ್ಧಗೊಳಿಸಲಾಯಿತು. ಕಂಪನಿ ಯಲ್ಲಿ ಯಾವುದೇ ಹೊಸ ನಾಟಕವನ್ನು ಗುರುವಾರ ಪ್ರಾರಂಭಿಸುವ ಪದ್ಧತಿ ಇತ್ತು. ಆದ್ದರಿಂದ ಪಂಚಾಕ್ಷರ ಗವಾಯಿಗಳು ಹೊಸ ನಾಟಕದ ಪ್ರಾರಂಭಕ್ಕೆ ಥೇಟರಿಗಾಗಿ ವಿಚಾರಿಸತೊಡಗಿದರು. ಈಗಾಗಲೇ ರಂಗಭೂಮಿಯ ಹಿರಿಯ ಕಲಾವಿದ ಹಂದಿಗನೂರು ಶಿದ್ರಾಮಪ್ಪನವರ “ವಿಶ್ವ ಕಲಾರಂಜನ ನಾಟ್ಯ ಸಂಘ’ವು ರೋಣದಲ್ಲಿ ನಾಟಕ ಪ್ರಯೋಗಗಳನ್ನು ನಡೆಸುತ್ತಿತ್ತು. ಗುರುವಾರ ರೋಣದ ಸಂತೆಯಾದುದರಿಂದ ನಾಟಕಕ್ಕೆ ಒಳ್ಳೆಯ ಹಣವು ಸಂಗ್ರಹವಾಗುತ್ತಿತ್ತು. ಆದ್ದರಿಂದ ಗುರುವಾರ ದಿವಸ ನಾಟಕ ಪ್ರಯೋಗಿಸಲು ಸಿದ್ರಾಮಪ್ಪನವರು ಥೇಟರ ಕೊಡಲು ಒಪ್ಪುವದು ಸಾಧ್ಯವಾಗದ ಸೂಚನೆಗಳು ಕಂಡು ಬಂದವು. ಕುಶಾಗ್ರಮತಿಗಳಾದ ಪುಟ್ಟರಾಜ ಗವಾಯಿಗಳು ಪರಿಸ್ಥಿತಿಯ ಅಧ್ಯಯನವನ್ನು ಅರಿತು ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಅದು ಮಹಾಯುದ್ಧಗಳ ಕಾಲ ಬ್ರಿಟೀಷ ಸರಕಾರ ಯುದ್ಧದ ವಂತಿಕೆಯಾಗಿ ಜನಗಳಿಂದ ವಂತಿಕೆ ರೂಪದಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದರು. “ತಮಗೆ ಗುರುವಾರ ನಾಟಕ ಪ್ರದರ್ಶಿಸಲು ಥೇಟರನ್ನು ಕೊಡಿಸಿದರೆ ನಿಮ್ಮ “ವಾರಫಂಡಿಗೆ” ಹಣ ಕೊಡುತ್ತೇವೆಂದು” ಮಾಮಲೇದಾರರಿಗೆ ತಿಳಿಸಲು ಪುಟ್ಟರಾಜ ಗವಾಯಿಗಳು ಸೂಚಿಸಿದರು. ಈ ಸಲಹೆ ಸೂಕ್ತವೆಂದು ಪಂಚಾಕ್ಷರರು ಮಾಮಲೇದಾರರಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

        ಮಾಮಲೇದಾರರು ಗವಾಯಿಗಳವರಿಗೆ ನಾಟಕವನ್ನು ಆಡಲು ಗುರುವಾರ ಥೇಟರನ್ನು ಕೊಡುವಂತೆ ಸಿದ್ರಾಮಪ್ಪನವರನ್ನು ಕೇಳಿದಾಗ ಮೊದಲು ಅವರು ಒಪ್ಪಲಿಲ್ಲ. ಮಾಮಲೇ-ದಾರರು ವಾರ ಪಂಢಿಗೆ ಹಣ ಬೇಕಾಗಿರುವುದರಿಂದ ಗವಾಯಿಗಳು ಗುರುವಾರ ಆಡಲು ನಿರ್ಧರಿಸಿದ ನಾಟಕ ಹಣವನ್ನು ನೀಡುವುದಾಗಿ ಒಪ್ಪಿರುವುದರಿಂದ ಅಂದೇ ಥೇಟರನ್ನು ಕೊಡಬೇಕೆಂದು ಹಟ ಹಿಡಿದರು. ಸಿದ್ರಾಮಪ್ಪನವರು ಬೇಸರ ಪಟ್ಟುಕೊಂಡು ಥೇಟರನ್ನು ಬಿಟ್ಟು ಕೊಟ್ಟರು. ದಾಸಿವಾಳ ಬಸವಯ್ಯನ “ಸುಕನ್ಯಾ” ಪಾತ್ರಾಭಿನಯ ದೇವಗಿರಿ ಶಿವಮೂರ್ತಯ್ಯನವರ ಶರ್ಯಾತಿ ಮಹಾರಾಜನ ಪಾತ್ರ, ಪುಟ್ಟರಾಜರ ಹಾರ್ಮೋನಿಯಂ ವಾದನ, ಪಂಚಾಕ್ಷರ ಗವಾಯಿಗಳವರ ತಬಲಾ ವಾದನದಿಂದ ರಂಗಭೂಮಿ ಅತ್ಯಂತ ವೈಭವವಾಗಿ ಕಂಗೊಳಿಸುತ್ತಿದ್ದಂತೆ ರಂಗಮಂದಿರ ಕಕ್ಕಿರಿದು ತುಂಬಿಹೋಯಿತು. ಅಂದು ನಾಟಕವನ್ನು ನೋಡಲು ಸಿದ್ರಾಮಪ್ಪನವರು ಕುಳಿತಿದ್ದರು. ಗವಾಯಿಗಳವರ ನಾಟಕ ಮಂಡಳಿಯವರ ಅಭಿನಯ, ಸಂಗೀತ ನಟರ ಸಾಧನೆಗಳನ್ನು ಕಂಡು ಅತ್ಯಂತ ಆನಂದಭರಿತರಾಗಿ ರಂಗವೇದಿಕೆಗೆ ಬಂದು ಅಭಿಮಾನ ಪರವಾಗಿ ಮಾತನಾಡುತ್ತ “ಪಂಚಾಕ್ಷರ ಗವಾಯಿಗಳಂಥ ಶ್ರೇಷ್ಠ ಶಿವಯೋಗಿಗಳು ಈ ವೃತ್ತಿರಂಗಭೂಮಿಗೆ ಪ್ರವೇಶಿಸಿದುದರಿಂದ ರಂಗಭೂಮಿಯೂ ಪಾವನವಾಯಿತು. ಈ ಸಂದರ್ಭದಲ್ಲಿ ಪಂಚಾಕ್ಷರ ಗವಾಯಿಗಳಂಥವರ ಮಾರ್ಗದರ್ಶನ ವೃತ್ತಿ ರಂಗಭೂಮಿಗೆ ಬೇಕಾಗಿದೆ; ಇದರಿಂದ ರಂಗ ಭೂಮಿಯ ಪ್ರಗತಿ ಸಾಧ್ಯವಾಗುತ್ತದೆ. ಇವರ ನಾಟಕಗಳನ್ನು ನಾನು ನೋಡಿ ಆನಂದ ಪಟ್ಟಿದ್ದೇನೆ” ಎಂದು ಹೇಳಿ ಸಂಘಕ್ಕೆ 101 ರೂಪಾಯಿಗಳ ಕಾಣಿಕೆಯನ್ನು ನೀಡಿ ಗೌರವಿಸಿದರು.

        ರೋಣದಿಂದ ನಾಟಕ ಮಂಡಳಿಯು ಬದಾಮಿಯ ಬನಶಂಕರಿ ದೇವಿಯ ಜಾತ್ರಾ ಸಂದರ್ಭದಲ್ಲಿ ಕ್ಯಾಂಪ್ ಹಾಕಿತ್ತು. “ಸತಿ ಸುಕನ್ಯಾ” ನಾಟಕದ ಪ್ರಯೋಗಗಳು ಅತ್ಯಂತ ಭರ್ಜರಿಯಾಗಿ ನಡೆದಿದ್ದವು. ಪುಟ್ಟರಾಜ ಗವಾಯಿಗಳವರಿಗೆ ದೈಹಿಕ ತೊಂದರೆಯಿಂದ ಚೊಳಚಗುಡ್ಡದಲ್ಲಿದ್ದರು. ಒಂದು ದಿನ ಕರ್ನಾಟಕದ ಷೇಕ್ಸಪೀಯರೆಂದೇ ಖ್ಯಾನಾಮರಾದ ಕಂದಗಲ್ಲ ಹನುಮಂತರಾಯರು ಗವಾಯಿಗಳವರ ನಾಟಕ ಮಂಡಳಿಯ “ಸತಿ ಸುಕನ್ಯಾ” ನಾಟಕವನ್ನು ನೋಡಿ “ಈ ಕೃತಿಯನ್ನು ಬರೆದವರು ಯಾರು?” ಎಂದು ಉದ್ಗಾರದೊಂದಿಗೆ ಪ್ರಶ್ನಿಸಿದರು. ‘ಕಣ್ಣಿಲ್ಲದ ಪುಟ್ಟರಾಜ ಗವಾಯಿಗಳು’ ಎಂದಾಗ ಅವರಿಗೆ ಮತ್ತಷ್ಟು ಕುತೂಹಲ ಉಂಟಾಗಿ ಅವರನ್ನು ಕಾಣುವುದಾಗಿ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಚೊಳಚಗುಡ್ಡದಿಂದ ಶಿಷ್ಯರು ಪುಟ್ಟರಾಜ ಗವಾಯಿಗಳನ್ನು ಬನಶಂಕರಿಯಲ್ಲಿದ್ದ ನಾಟಕ ಮಂಡಳಿಗೆ ಕರೆದುಕೊಂಡು ಬಂದರು. ಪುಟ್ಟರಾಜ ಗವಾಯಿಗಳವರನ್ನು ಕಂಡ ಕಂದಗಲ್ಲ ಹನುಮಂತರಾಯರು ಅಭಿಮಾನದಿಂದ “ನಿಮ್ಮ ನಾಟಕ ರಚನಾ ಶೈಲಿಯು ತುಂಬಾ ಒಳ್ಳೆಯದಾಗಿದೆ ತಮ್ಮಿಂದ ನಾಟಕ ಸಾಹಿತ್ಯ ಕ್ಷೇತ್ರ ವೃದ್ಧಿಸುವ ಕುರುಹುಗಳನ್ನು ಕಂಡು ಆನಂದಾಯಿತು.” ಎಂದು ಹೇಳಿ ಹೂಮಾಲೆಯುನ್ನು ಹಾಕಿ ತಮ್ಮ ಗೌರವ ಸಲ್ಲಿಸಿದ ಪ್ರಸಂಗವನ್ನು ಪುಟ್ಟರಾಜರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

        1940 ರಲ್ಲಿ ಬಾಗಲಕೋಟೆಯಲ್ಲಿ ಕ್ಯಾಂಪ್ ಮಾಡಿದ ನಾಟಕ ಮಂಡಳಿಯು “ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿ” ಎಂಬ ಅಭಿನಾಮವನ್ನು ಪಡೆದು ನಾಡಿನಲ್ಲೆಲ್ಲ ಸಂಚರಿಸುತ್ತ 1942ರಲ್ಲಿ ಗದುಗಿಗೆ ಬಂದಿತು. ಈ ಸಂದರ್ಭದಲ್ಲಿ ಭೀಕರವಾದ ಬರಗಾಲವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಗದುಗಿನಲ್ಲಿ “ಬರಗಾಲದ ಬಂಟ” “ಬರಕ್ಕೆ ಬುತ್ತಿಕಟ್ಟಿದವ” ಎಂದೆನಿಸಿಕೊಂಡ ದಾನಶೂರ ಬಸರೀಗಿಡದ ವೀರಪ್ಪನವರು ಪಂಚಾಕ್ಷರ ಗವಾಯಿಗಳವರನ್ನು ಹಾಗೂ ಅವರ ಶಿಷ್ಯರನ್ನು ತಮ್ಮ ಶೆಡ್ಡಿನ ಒಂದು ಭಾಗದಲ್ಲಿ ಕಟ್ಟಡ ಕಟ್ಟಿಸಿ ವಿದ್ಯಾರ್ಥಿಗಳಿಗೆಲ್ಲ ಊಟ, ವಸತಿ ಮತ್ತು ಪಾಠ ಪ್ರವಚನಗಳಿಗೆ ಆಶ್ರಯ ಮಾಡಿಕೊಟ್ಟರು 1942ನೇಯ ನವೆಂಬರ ತಿಂಗಳದಲ್ಲಿ ಪಂಚಾಕ್ಷರ ಗವಾಯಿಗಳವರು ನಾಟ್ಯ ಸಂಘದ ಸಂಪೂರ್ಣ ಜವಾಬ್ದಾರಿಯನ್ನು ಪುಟ್ಟರಾಜ ಗವಾಯಿಗಳಿಗೆ ವಹಿಸಿ ಪಂಚಾಕ್ಷರ ಗವಾಯಿಗಳು ಶಿಷ್ಯರಿಗೆ ಪಾಠ ಹೇಳಿಕೊಡುತ್ತಾ ಅನುಷ್ಠಾನ ಪೂಜೆಗಳೊಂದಿಗೆ ಗದುಗಿನಲ್ಲಿಯೇ ಉಳಿದುಕೊಂಡರು.

        ಪುಟ್ಟರಾಜ ಗವಾಯಿಗಳು ನಾಟಕ ಮಂಡಳಿಯನ್ನು ತಮ್ಮ ಮಾರ್ಗದರ್ಶನದಲ್ಲಿ ಕಂಪ್ಲಿ ಗಂಗಾವತಿ, ರಾಮಸಾಗರ, ಹೊಸಪೇಟೆ, ಕೊಟ್ಟೂರು, ಹೂವಿನಹಡಗಲಿ ಹಾಗೂ ಹಂಪಸಾಗರದಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. 1944 ರಲ್ಲಿ ನಾಟಕ ಮಂಡಳಿಯು ಹಂಪಸಾಗರದಲ್ಲಿದ್ದಾಗ ಪಂಚಾಕ್ಷರ ಗವಾಯಿಗಳವರು ತಾವು ಲಿಂಗೈಕ್ಯರಾಗುವದನ್ನು ತಿಳಿದು “ತಮ್ಮ ಮುಂದಿನ ಉತ್ತರಾಧಿಕಾರಿ ಪುಟ್ಟರಾಜ ಗವಾಯಿಗಳೆಂದು ನಿರ್ಧರಿಸಿ ಅವರನ್ನು ಕರೆಕಳುಹಿಸಿ ವೀರೇಶ್ವರ ಪುಣ್ಯಾಶ್ರಮದ ಅಧಿಕಾರವನ್ನು ಪುಟ್ಟರಾಜರಿಗೆ ವಹಿಸಿಕೊಟ್ಟರು”.

        ಪುಟ್ಟರಾಜರ ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ನಾಟಕ ಸಂಘವು ತನ್ನ ಹೆಸರನ್ನು “ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂ.ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ, ಗದಗ” ಎಂದು ವಿಸ್ತರಿಸಿಕೊಂಡು ಕಲಾ ಸೇವೆಯನ್ನು ಮುಂದುವರಿಸತೊಡಗಿತು. ನಾಟಕ ಮಂಡಳಿಯಲ್ಲಿ ಮ್ಯಾನೇಜರ ಹಾಗೂ ನಟರಲ್ಲಿ ಡೈರೆಕ್ಟರ ಹಾಗೂ ನಟರಲ್ಲಿ ಆಗಾಗ ಕೆಲವು ವ್ಯತ್ಯಾಸಗಳು ಕಂಪನಿಯಲ್ಲಿ ಉಂಟಾಗಿ ನಾಟಕಗಳು ನಿಲ್ಲುವ ಪರಿಸ್ಥಿತಿಯಲ್ಲಿ ಪುಟ್ಟರಾಜ ಗವಾಯಿಗಳು ತಮ್ಮ ಕುಶಲತೆಯಿಂದ ಸಮಸ್ಯೆಗಳನ್ನು ಅತ್ಯಂತ ಪ್ರೀತಿಯಿಂದ ಬಗೆಹರಿಸಿ “ತಾವೆಲ್ಲರೂ ಒಂದೇ ಸಂಸ್ಥೆಯ ಬಂಧುಗಳು, ತಾವೆಲ್ಲರೂ ಪಂಚಾಕ್ಷರ ಗವಾಯಿಗಳವರ ಲೋಕಾರ್ಥ ಸೇವೆಯಲ್ಲಿ ಪಾಲ್ಗೊಂಡ ಶಿಷ್ಯರು” ಎಂಬ ಅಭಿಮಾನ ಮೂಡುವಂತೆ ಅವರಿಗೆ ತಿಳುವಳಿಕೆ ಮೂಡಿಸಿ ಕಾರ್ಯ ಪ್ರವರ್ತಕರಾಗುವಂತೆ ಯಾವಾಗಲೂ ಸ್ಪೂರ್ತಿ ನೀಡುತ್ತಾರೆ.

        1944 ರಿಂದ ಪುಟ್ಟರಾಜ ಗವಾಯಿಗಳವರು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿದ್ದುಕೊಂಡು ನಾಟಕ ಮಂಡಳಿಗೆ ಮ್ಯಾನೇಜರಾಗಿದ್ದ ಅಂದಾನಯ್ಯ ಹಿರೇಮಠ ಅವರ ವ್ಯವಸ್ಥಾಪಕತ್ವದಲ್ಲಿ ಶ್ರೀಕುಮಾರೇಶ್ವರ ಕೃಪಾಪೋಷಿತ ಲಿಂ.ಪಂಚಾಕ್ಷರ ಗವಾಯಿಗಳವರ ನಾಟಕ ಮಂಡಳಿಯು ತನ್ನ ರಂಗ ಕಲಾಯಾತ್ರೆಯನ್ನು ನಾಡಿನ ಪ್ರಮುಖ ಸ್ಥಳಗಳಲ್ಲಿ ಪ್ರಯೋಗಿಸುತ್ತ ಸಂಚರಿಸತೊಡಗಿತು.

        1948 ರಲ್ಲಿ ನಾಟಕ ಮಂಡಳಿಯು ಗೋಕಾಕದಲ್ಲಿ ಕ್ಯಾಂಪ ಮಾಡಿದ ಸಂದರ್ಭದಲ್ಲಿ ನಾಟಕ ಮಂಡಳಿಯ ಡೈರೆಕ್ಟರ್ ಮತ್ತು ನಟರಲ್ಲಿ ಸಣ್ದಾದ ಮೈಮನಸ್ಸು ತಲೆದೋರಿ ನಾಟಕ ಸಂಘವು ನಿಂತುಹೋಗುವ ಪರಿಸ್ಥಿತಿಗೆ ಬಂದಿತು. ಆಗ ಸಂಘದ ಒಡೆಯರಾದ ಪುಟ್ಟರಾಜರು ತಮ್ಮೊಂದಿಗೆ ಗದುಗಿನ ಕೆಲ ಸಪ್ರಮುಖರಾದ ಗಣ್ಯವ್ಯಕ್ತಿಗಳನ್ನು ಕರೆದುಕೊಂಡು ಗೋಕಾಕಕ್ಕೆ ಬಂದು ಮ್ಯಾಣೇಜರ ಹಾಗೂ ನಟರಿಗೆ “ಗುರುಗಳಾದ ಪಂಚಾಕ್ಷರ ಗವಾಯಿಗಳ ಹೆಸರಿನಲ್ಲಿ ನಾಡಿನ-ಸಂಸ್ಕ್ರತಿಕ ಪರಂಪರೆಯನ್ನು ಪ್ರಚಾರ ಗೊಳಿಸುವುದಕ್ಕಾಗಿ ಹುಟ್ಟಿದ ಈ ಸಂಸ್ಥೆಯಲ್ಲಿ ನಾವೆಲ್ಲರೂ ಗುರು ಸೇವೆಗಾಗಿ ಸ್ವಾರ್ಥ ಮತ್ತು ದ್ವೇಷಗಳನ್ನು ಮರೆತು ದುಡಿಯಬೇಕು. ನಾವೆಲ್ಲರೂ ಒಂದು ಕುಟುಂಬದ ಬಂಧುಗಳೆಂದು ಹೃದಯವಂತಿಕೆಯಿಂದ ಇರಬೇಕೆಂದು ಇನ್ನು ಮುಂದೆ ತಾವೆಲ್ಲರೂ ಸಹಕಾರದಿಂದ ನಡೆದುಕೊಳ್ಳಿರಿ” ಎಂದು ತಿಳುವಳಿಕೆ ಹೇಳಿ ಸಂಘವು ಮುಂದುವರೆಯುವಂತೆ ಮಾಡಿದರು.

        1959ನೇಯ ಏಪ್ರಿಲ್ ತಿಂಗಳದಲ್ಲಿ ನಾಟಕ ಮಂಡಳಿಯು ರೋಣದಲ್ಲಿ ಕ್ಯಾಂಪ್ ಮಾಡಿತ್ತು. ಈ ಸಂದರ್ಭದಲ್ಲಿ ಮಂಡಳಿಯ ಮ್ಯಾನೇಜರ್ ಮತ್ತು ಡೈರೆಕ್ಟರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ನಾಟಕದ ನಟರೆಲ್ಲರೂ ಒಂದೆಡೆಯಾಗಿ ನಾಟಕ ಪ್ರಯೋಗಗಳು ನಿಂತು ಹೋದವು. ಕೆಲನಟರು ಕಂಪನಿಯಿಂದ ಬಿಟ್ಟು ಹೋದರು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಪುಟ್ಟರಾಜ ಗವಾಯಿಗಳು ಮಂಡಳಿಗೆ ರಜೆಯನ್ನು ಘೋಷಿಸಿದರು.

        1960 ರಲ್ಲಿ ಪಂಚಾಕ್ಷರ ಗವಾಯಿಗಳವರ ಪುಣ್ಯತಿಥಿಯನ್ನು ಜೇಷ್ಠಮಾಸದ ಜೂನ್ ತಿಂಗಳಲ್ಲಿ ಆಚರಿಸುವ ಸಂದರ್ಭದಲ್ಲಿ ನಾಟಕ ಮಂಡಳಿಯ ಎಲ್ಲಾ ನಟರೂ ಒಂದೆಡೆ ಸೇರಿ ನಾಟಕ ಮಂಡಳಿಯನ್ನು ಪುನಃ ಪ್ರಾರಂಭಿಸುವುದಾಗಿ ವಿಚಾರಿಸಿ ತಮ್ಮ ಅಭಿಪ್ರಾಯವನ್ನು ಪುಟ್ಟರಾಜ ಗವಾಯಿಗಳವರ ಹಾಗೂ ಗದುಗಿನ ನಾಗರೀಕರ ಮುಂದೆ ತಿಳಿಸಲಾಗಿ ಕಲಾಭಿಮಾನಿಗಳಾದ ಹಿರಿಯರು, ಪುಟ್ಟರಾಜರು ಆಶೀರ್ವಾದದೊಂದಿಗೆ ನಾಟಕ ಮಂಡಳಿಯನ್ನು ಪ್ರಾರಂಭಿಸುವಂತೆ ಅನುಮತಿ ನೀಡಿದರು ಕಂಪನಿಗೆ ಈಗಾಗಲೇ ಆಗಿರುವ ಸಾಲವನ್ನು ತೀರಿಸುವುದಕ್ಕಾಗಿ ಟಿಕೀಟನ್ನು ಹಾಕಿ ನಾಟಕವನ್ನು ಆಡಲು ತೀರ್ಮಾನಿಸಿದರು. ಕೇವಲ 5-6 ಪ್ರಯೋಗಗಳನ್ನು ಆಡಬೇಕೆನ್ನುವ ಉದ್ದೇಶದಿಂದ ಚಿತ್ರ ಮಂದಿರವಿದ್ದ ಡಬ್ಬಾ (ಮಹಾಲಕ್ಷ್ಮೀ) ಥೇಟರಿನಲ್ಲಿ ಉತ್ಸಾಹ ಹಾಗೂ ವೈಭವದಿಂದ ನಲವಡಿ ಶ್ರೀಕಂಠ ಶಾಸ್ತ್ರೀಗಳು ಬರೆದ “ಹೇಮರೆಡ್ಡಿ ಮಲ್ಲಮ್ಮ” ನಾಟಕವನ್ನು ಆಡಿದರು. ನಟರ ಅಭಿನಯ, ಮಧುರವಾದ ಸಂಗೀತ ಪುಟ್ಟರಾಜ ಗವಾಯಿಗಳವರ ಹಾರ್ಮೋನಿಯಂ ವಾದನ, ಒಂದೊಂದು ಪಾತ್ರ ಧಾರಿಯ ಒಂದೊಂದು ವಿಶೇಷತೆ ನಾಟಕಕ್ಕೆ ಹೆಚ್ಚು ಮೆರಗನ್ನು ತಂದಿತು. ಪ್ರೇಕ್ಷಕರು ಉತ್ಸಾಹಿತರಾದರು. ಆದರೆ ನಾಟಕವು ಚಿತ್ರಮಂದಿರದಲ್ಲಿ ನಡೆಯುತ್ತಿದ್ದರಿಂದ ಮಾಲಿಕರು ಪ್ರಯೋಗಿಸಲು ಒಂದು ವ್ಯವಸ್ಥಿತ ರಂಗಮಂದಿರದ ನಿರ್ಮಾಣವನ್ನು ಮಾಡುವುದಕ್ಕಾಗಿ ಚಿಂತಿಸತೊಡಗಿದರು.

        ಬಸರೀಗಿಡದ ವೀರಪ್ಪನವರು ತಮ್ಮ ಗ್ಯಾರೀಜಿನ ಹತ್ತಿರದ ನಾಲ್ವಾಡದವರ ಜಾಗೆಯಲ್ಲಿ ನಾಟ್ಯ ಮಂದಿರವನ್ನು ಸ್ಥಾಪಿಸಲು ಒಪ್ಪಿಗೆ ದೊರೆತದ್ದೇ ತಡ ನಟರ ಹಾಗೂ ಅಭಿಮಾನಿಗಳ ಉತ್ಸಾಹದಿಂದ ಒಂದೇ ದಿನದಲ್ಲಿ ನೂತನವಾದ ನಾಟಕ ಮಂದಿರ ಸ್ಥಾಪಿತಗೊಂಡು, “ಹೇಮರೆಡ್ಡಿ ಮಲ್ಲಮ್ಮ” ನಾಟಕವು ಮತ್ತಷ್ಟು ಹೊಸ ಕಳೆಯನ್ನು ಪಡೆದುಕೊಂಡು ಪ್ರಯೋಗ ಗೊಳ್ಳತೊಡಗಿತು. ದಿನಗಳು ಕಳೆದಂತೆ ನಾಟಕ ಯಶಸ್ವಿಯಾಗಿ ಸಾಗಿತು. 09-02-1960 ರಲ್ಲಿ ಹೇಮರೆಡ್ಡಿ ಮಲ್ಲಮ್ಮ ನಾಟಕದ ‘ಸುವರ್ಣ ಮಹೋತ್ಸವ ಸಮಾರಂಭವನ್ನು’ ಆಚರಿಸಲಾಯಿತು. ಹೇಮರೆಡ್ಡಿ ಮಲ್ಲಮ್ಮ ನಾಟಕವು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆಯುವದರೊಂದಿಗೆ ಉತ್ತರ ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸುವದರೊಂದಿಗೆ 399 ಪ್ರಯೋಗಗಳನ್ನು ನಿರಂತರವಾಗಿ ನಡೆಸಿ ಜನಪ್ರಿಯತೆಯನ್ನುಪಡೆಯಿತು. ಈ ನಾಟಕವನ್ನು ಆಡುವ ಥೇಟರಿಗೆ ಬಹುಕಾಲದವರೆಗೆ ‘ಮಲ್ಲಮ್ಮನ ಥೇಟರೆಂದೆ’ ಹೇಳುವ ಹೆಸರು ಖ್ಯಾತವಾಯಿತು.

        ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳವರ ನಾಟಕ ಮಂಡಳಿ 1975ರಲ್ಲಿ ವಿಜಾಪುರ ಜಿಲ್ಲೆಯ ಮಹಾಳಿಂಗಪುರದಲ್ಲಿ ಕ್ಯಾಂಪ್ ಮಾಡಿದ ಸಂದರ್ಭದಲ್ಲಿ ಶರಣ ಸಾಹಿತಿ ಮಾರುತೇಶ ಮಾಂಡ್ರೆ ರಚಿಸಿದ “ಮಹಾಳಿಂಗೇಶ್ವರ ಮಹಾತ್ಮೆ” ನಾಟಕವು ಪ್ರಯೋಗಗೊಳ್ಳುತ್ತಿತ್ತು. ಮಹಾಳಿಂಗೇಶ್ವರ ಪಾತ್ರಧಾರಿಯಾಗಿ ಕಲ್ಲಿನಾಥ ಶಾಸ್ತ್ರಿ ಅಡ್ನೂರ ನೀಡಿದ ಅಭಿನಯ ಕಲಾಪ್ರೇಮಿಗಳನ್ನು ಆಕರ್ಷಿಸತೊಡಗಿತು. ರಂಗಭೂಮಿಯ ಮೇಲೆ ಆನೆಗಳ ಪ್ರವೇಶ ಹಾಗೂ ವೈಭವ ಪೂರಿತ ರಂಗಪರಿಕರಗಳು ಜನರಲ್ಲಿ ಭಕ್ತಿಭಾವವನ್ನು ತುಂಬಿ ಬಹಳಷ್ಟು ಪ್ರಭಾವವನ್ನು ತುಂಬಿ ಬಹಳಷ್ಟು ಪ್ರಭಾವವನ್ನು ಬೀರಿದವು. ಹಿರಿಯ ಸಾಹಿತಿಗಳಾದ ಡಾ.ಹಾ.ಮಾ.ನಾಯಕರು ಗವಾಯಿಗಳವರ ಕಂಪನಿಯ ಕಲಾ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

        1996ರಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯು ತನ್ನ ಷಷ್ಟ್ಯಬ್ದಿ ಮಹೋತ್ಸವವನ್ನು ನರಗುಂದದಲ್ಲಿ ಅದ್ದೂರಿಯಾಗಿ ಆಚರಿಸಿತು. ಈ ಸಂದರ್ಭದಲ್ಲಿ ‘ಡಾ.ಪುಟ್ಟರಾಜ ಗವಾಯಿಗಳವರ ತುಲಾಭಾರ ಸನ್ಮಾನ’ ಕಾರ್ಯಕ್ರಮಗಳು ಕಲಾವಿದರ ಸತ್ಕಾರಗಳು ನಡೆದವು.

        199ರ ಅವಧಿಯಲ್ಲಿ ಸವಣೂರು ತಾಲ್ಲೂಕಿನ ಹುರುಳಿಕುಪ್ಪಿಯಲ್ಲಿ “ಉಡುತಡಿಯ ಅಕ್ಕಮಹಾದೇವಿ” ನಾಟಕ 100 ಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ನೀಡಿ ಜನಪ್ರಿಯತೆಯನ್ನು ಸಾಧಿಸಿತು. 2001-2002ರ ಅವಧಿಯಲ್ಲಿ ಬಾಗಲಕೋಟೆಯ ಹತ್ತಿರದ ಶಿರೂರು ಗ್ರಾಮದಲ್ಲಿ ಪಂಚಾಕ್ಷರ ಗವಾಯಿಗಳವರ ನಾಟಕ ಮಂಡಳಿಯು 100 ಯಶಸ್ವಿ ನಾಟಕ ಪ್ರಯೋಗಗಳನ್ನು ಪ್ರದರ್ಶಿಸಿತು.

        ಆರು ದಶಕಗಳ ಕಾಲ ಡಾ.ಪುಟ್ಟರಾಜ ಗವಾಯಿಗಳವರ ಮಾರ್ಗದರ್ಶನದಲ್ಲಿ ಕಲಾ ಸೇವೆಯನ್ನು ಮಾಡುತ್ತಾ ಬಂದ ನಾಟಕ ಮಂಡಳಿಯು ಪ್ರಸ್ತುತ ದಿನಮಾನಗಳಲ್ಲಿ ವೃತ್ತಿರಂಗ ಭೂಮಿಗೆ ತನ್ನ ಸೇವೆಯನ್ನು ಸಲ್ಲಿಸುತ್ತಲೇ ಇದೆ. ಕರ್ನಾಟಕದ ಶ್ರೇಷ್ಠ ನಟರನ್ನು, ಗಾಯಕರನ್ನು, ನಾಟಕ ಮಂಡಳಿಯ ಸಂಸ್ಥಾಪಕರನ್ನು ಸೃಷ್ಟಿಸಿದ ಶ್ರೇಯಸ್ಸು ಹಾಗೂ ಅವುಗಳ ಕೊಡುಗೆ ಡಾ.ಪುಟ್ಟರಾಜ ಗವಾಯಿಗಳವರಿಗೆ ಸಲ್ಲುತ್ತದೆ.

News & Events