ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ನಾಟಕದ ಪ್ರಮುಖ ಕಲಾವಿದರು

ಶಿವಮೂರ್ತಿ, ಚಂದ್ರಶೇಖರಯ್ಯ, ದೇವಗಿರಿ

ಪುಟ್ಟರಾಜ ಗವಾಯಿಗಳವರು ಸ್ಥಾಪಿಸಿದ ನಾಟಕ ಮಂಡಳಿಯಲ್ಲಿ ಪ್ರಾರಂಭದಿಂದ ತಮ್ಮ ಜೀವಮಾನದ ಮುಸ್ಸಂಜೆಯವರೆಗೂ ಕಲಾ ಸೇವೆಯನ್ನು ಸಲ್ಲಿಸಿದ ಶಿವಮೂರ್ತಿಸ್ವಾಮಿ ದೇವಗಿರಿ ಗ್ರಾಮದವರು. ಪುಟ್ಟರಾಜ ಗವಾಯಿಗಳವರನ್ನು ಪಂಚಾಕ್ಷರ ಗವಾಯಿಗಳವರಲ್ಲಿ ವಿದ್ಯಾಭ್ಯಾಸಕ್ಕಾಗಿ ಸಂಚಾರಿ ಸಂಗೀತ ಪಾಠಶಾಲೆಗೆ ಸೇರಿಸಿದ ಚಂದ್ರಶೇಖರಯ್ಯನವರೇ ಶಿವಮೂರ್ತಿ ಸ್ವಾಮಿಗಳ ತಂದೆ. ಶಿವಮೂರ್ತಿಸ್ವಾಮಿಗಳದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಗರುಡ ಸದಾಶಿವರಾಯರ ನಾಟಕ ಮಂಡಳಿಯಲ್ಲಿ ಪ್ರಾರಂಭದ ಕಲಾವಿದರಾಗಿದ್ದ ಶಿವಮೂರ್ತಿಸ್ವಾಮಿಗಳು; ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಸ್ಥಾಪಿತಗೊಂಡನಂತರ ಗರುಡರ ಕಂಪನಿಯನ್ನು ಬಿಟ್ಟು ಗವಾಯಿಗಳವರ ಕಂಪನಿಯಲ್ಲಿ ಸೇರಿದರು.

ಮಧುರ ಕಂಠದ, ಸಧೃಡ ಸುಂದರಕಾಯದ ಶಿವಮೂರ್ತಿಸ್ವಾಮಿಗಳು ಪ್ರಧಾನವಾಗಿ ಪುರುಷ ಪಾತ್ರಗಳನ್ನೇ ಅಭಿನಯಿಸುತ್ತಿದ್ದರು. ಪಾತ್ರಧಾರಿಗಳಿಗೆ ಅಭಿನಯ ತರಬೇತಿಯನ್ನು ನೀಡುತ್ತಿದ್ದ ಇವರು ಅಭಿನಯ ಕಲೆಗೆ ನಿರ್ದೇಶನದ ಮಾರ್ಗದರ್ಶಕವಾಗಿದ್ದರು. ಉತ್ತಮ ಹಾರ್ಮೋನಿಯಂ ವಾದಕರಾಗಿದ್ದ ಇವರು ಒಳ್ಳೆಯ ಗಾಯಕರೂ ಹೌದು. ಕುಮಾರೇಶ್ವರ ನಾಟಕ ಮಂಡಳಿಯ ಬಹುಪಾಲು ರಂಗಪ್ರಯೋಗಗಳ ಯಶಸ್ಸಿನಲ್ಲಿ ಶಿವಮೂರ್ತಿಸ್ವಾಮಿಗಳ ಸೇವೆ ಉಲ್ಲೇಖನಾರ್ಹವಾದುದು. ಮೂವತ್ತು ವರ್ಷಗಳ ಕಾಲ ಗವಾಯಿಗಳವರ ಕಂಪನಿಯಲ್ಲಿ ನಟರಾಗಿ, ಗಾಯಕರಾಗಿ, ವಾದಕರಾಗಿ ನಿರ್ದೇಶಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ ಶಿವಮೂರ್ತಿ ಸ್ವಾಮಿಗಳು, ಕೆಲಕಾಲ ಕಂಪನಿಯನ್ನು ಬಿಟ್ಟು ತಾವೇ ಸ್ವತಂತ್ರವಾಗಿ “ಹಾನಗಲ್ಲ ಕುಮಾರಸ್ವಾಮಿಗಳ ನಾಟ್ಯ ಸಂಘ” ವನ್ನು ಸ್ಥಾಪಿಸಿ, 3 ತಿಂಗಳ ಕಾಲವಾದರೂ ವ್ಯವಸ್ಥಿತವಾಗಿ ನಡೆಯದೇ ಇದ್ದಾಗ ಮತ್ತೆ ಪೂಜ್ಯ ಪುಟ್ಟರಾಜರಲ್ಲಿಗೆ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡು ಕಂಪನಿಯಲ್ಲಿಯೇ ಬಹುಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಚೆಲುವಾದ ಮುದ್ದುಮುಖದ, ವಿಶಾಲ ಕಣ್ಣುಗಳುಳ್ಳ ಸೌಮ್ಯರೂಪದ ಶಿವಮೂರ್ತಯ್ಯನವರು ಯಾವುದೇ ಪಾತ್ರವಿದ್ದರೂ ಅದರಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಅಭಿನಯಿಸುತ್ತಿದ್ದರು. ಅವರ ಪ್ರತಿಪಾತ್ರದ ಅಂಗಿಕ ಅಭಿನಯವು ಹುಟ್ಟಿನಿಂದಲೇ ಮೂಡಿಬಂದ ನೈಜಕಲೆಯಾಗಿತ್ತು. ಪಾತ್ರದ ಗುಣ, ವ್ಯಕ್ತಿತ್ವ, ಆಶಯವನ್ನು ಅಧ್ಯಯನ ಮಾಡಿ ಅದನ್ನು ಅನುಭವಕ್ಕೆ ತಂದುಕೊಂಡು ಅಭಿನಯಿಸುವದರಲ್ಲಿ ಶಿವಮೂರ್ತಯ್ಯನವರು ಪರಿಣಿತರು.

ಶಿವಮೂರ್ತಯ್ಯರು ಪೌರಾಣಿಕ, ಸಾಮಾಜಿಕ, ಭಕ್ತಿಪ್ರಧಾನ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಅಭಿನಯಿಸುತ್ತಿದ್ದರು. “ದೇವರ ದುಡ್ಡು” ನಾಟಕದಲ್ಲಿ “ಸಿಂಹಳರಾಜನ” ಪಾತ್ರಧಾರಿಯಾಗಿ ಶಿವಮೂರ್ತಯ್ಯನವರು ಒಂದೆಡೆ ಕೋಪದ ಭಾವವನ್ನು ವ್ಯಕ್ತಪಡಿಸಿ ಅದೇ ಸಂದರ್ಭದಲ್ಲಿ ತನ್ನ ಕಾರ್ಯವು ನೆರವೇರದ ಸಂದರ್ಭದಲ್ಲಿ ಉಂಟಾಗುವ ರಾಜನ ವೃಥೆಯ ದುಃಕದ ಭಾವವನ್ನು ಏಕಕಾಲದಲ್ಲಿಯೇ ಅಭಿನಯದ ಮೂಲಕ ಪ್ರಕಟಗೊಳಿಸುವದರೊಂದಿಗೆ ಪ್ರೇಕ್ಷಕರ ಅಚ್ಚು-ಮೆಚ್ಚಿನ ನಟರಾಗಿದ್ದರು.

“ಹೇಮರೆಡ್ಡಿ ಮಲ್ಲಮ್ಮ” ನಾಟಕದಲ್ಲಿ ದೇವಗಿರಿ ಶಿವಮೂರ್ತಯ್ಯನವರು ಅಭಿನಯಿಸಿದ “ವೇಮನ ಪಾತ್ರ” ಪ್ರೇಕ್ಷಕ ವರ್ಗದಲ್ಲಿ ಬಹುಕಾಲದವರೆಗೆ ಸ್ಮರಣೆಯಲ್ಲಿ ಉಳಿಯುವಂತಹದ್ದು. ಮಲ್ಲಮ್ಮನಿಂದ ಮೂಗುತಿಯನ್ನು ಪಡೆದುಕೊಂಡ ವೇಮನ ವೇಷ್ಯಯಲ್ಲಿಗೆ ಬಂದು ಅವಳನ್ನು ಸುತ್ತುಹಾಕಿ ಮೂಗತಿಯನ್ನು ನೀಡುವಾಗ ಅವನಲ್ಲಿ ಉಂಟಾಗುವ ವಿರಕ್ತಿ ಭಾವದ ಅಭಿನಯವು ಇಡೀ ನಾಟಕದ ಜೀವಧ್ವನಿಯಾಗುವಂತೆ ಅಭಿನಯಿಸಿದ ಶ್ರೇಷ್ಟ ನಟ ದೇವಗಿರಿ ಶಿವಮೂರ್ತಯ್ಯನವರು. ಶ್ರೀಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಲ್ಲಿ ಪ್ರಯೋಗಗೊಳ್ಳುತ್ತಿದ್ದ ಪುಟ್ಟರಾಜ ಗವಾಯಿಗಳ ಹಾಗೂ ನಲವಡಿ ಶ್ರೀ ಕಂಠಶಾಸ್ತ್ರಿಗಳ ನಾಟಕಗಳ ಪ್ರಮುಖ ಪಾತ್ರಧಾರಿಯಾಗಿ, ಕೆಲಸಾರಿ ಸಣ್ಣ ಸಣ್ಣ ಪಾತ್ರಗಳಲ್ಲಿ ಪಾತ್ರವಹಿಸಿದರೂ ಅದನ್ನು ಶ್ರದ್ದೆಯಿಂದ ಚೆನ್ನಾಗಿ ನಿರ್ವಹಿಸುತ್ತಿದ್ದರು. ಪುಟ್ಟರಾಜರು ಸ್ಥಾಪಿಸಿದ ನಾಟಕ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ತ್ಯಾಗಮೂರ್ತಿ ಶಿವಮೂರ್ತಯ್ಯನವರು ಇವರಿಗೆ “ನಟಶೇಖರ” ಎಂಬ ಬಿರುದು ಇತ್ತು.

ಪಾತ್ರವಹಿಸಿದ ನಾಟಕಗಳು: ‘ದೇವರ ದುಡ್ಡು’, ‘ಪ್ರಪಂಚ ಪರೀಕ್ಷೆ’, ಹೇಮರಡ್ಡಿ ಮಲ್ಲಮ್ಮ’, ‘ರತ್ನಹಾರ’, ‘ಶ್ರೀಕೃಷ್ಣ ಗಾರುಡಿ’, ‘ಕೌಂಸವಧೆ’, ‘ವಿಷಯ ವಿವಾಹ’, ‘ಸಿದ್ದರಾಮೇಶ್ವರ’, ‘ಸತ್ಯ-ಸಂಕಲ್ಪ’, ‘ಸತಿ-ಸುಕನ್ಯೆ’, ‘ಸವತಿ ಮತ್ಸರ’ ಮುಂತಾದವುಗಳು.

ಮೃಡದೇವ ಗವಾಯಿಗಳು:

          “ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘ”ದ ಸ್ಥಾಪನೆಯೊಂದಿಗೆ ತಮ್ಮಕಲಾ ಸೇವೆಯನ್ನು ಅಭಿನಯ, ಗಾಯನ, ವಾದನದೊಂದಿಗೆ ತಮ್ಮನ್ನು ಪ್ರೇಕ್ಷಕರಿಗೆ ಪರಿಚಯಿಸಿಕೊಂಡವರು ಮೃಡದೇವ ಗವಾಯಿಗಳು. ಸಂಗೀತ ಪ್ರೇಮಿಗಳು “ಮೃಡದೇವ” ನನ್ನು ಗವಾಯಿಗಳೆಂದು ಅಭಿಮಾನದಿಂದ ಕರೆದರೆ, ಅವರ ಅಭಿನಯವನ್ನು ಕಂಡು ಮೆಚ್ಚಿದ ರಂಗಭೂಮಿ ಪ್ರೇಮಿಗಳು ಮಹಾನ್ ನಟರೆಂದು ಕರೆದು ಗೌರವಿಸಿದರು. ಸಂಗೀತ ಹಾಗೂ ಅಭಿನಯಗಳೆರಡರಲ್ಲೂ ವಿಶೇಷ ಪರಿಣಿತರಾದ ಮೃಡದೇವ ಗವಾಯಿಗಳು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹೊಸಹಳ್ಳಿ ಗ್ರಾಮದವರು. ತಾನೊಬ್ಬ ಸಂಗೀತಗಾರನಾಗಬೇಕೆಂಬ ಇಚ್ಛೆಯಿಂದ ಎಂಟು ವರ್ಷದ ಈ ಬಾಲಕ ಪಂಚಾಕ್ಷರ ಗವಾಯಿಗಳ ಸಂಚಾರ ಸಂಗೀತ ಪಾಠಶಾಲೆಯು ಕೋಟೆಕಲ್ಲಿನಲ್ಲಿದ್ದಾಗ ಪ್ರವೇಶ ಪಡೆದನು.

          ಬಡಕಲು ಶರೀರ, ಸುಶ್ರಾವ್ಯ ಕಂಠ ಹೇಳಿದ್ದನ್ನು ನುಂಗಿ ಅರಗಿಸಿಕೊಳ್ಳುವ ಗ್ರಹಣ ಶಕ್ತಿಯೊಂದಿಗೆ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೃಡದೇವನಿಗೆ ಪಂಚಾಕ್ಷರ ಗವಾಯಿಗಳು “ಸಂಗೀತದಲ್ಲಿ ವಿಶೇಷ ಪರಿಣತಿ ಸಾಧಿಸುವುದಕ್ಕೆ ಕಂಠದಂತೆ ದೇಹಕ್ಕೂ ವ್ಯಾಯಾಮಕೊಡು” ಎಂದು ಆಶೀರ್ವದಿಸಿದರು. 1940ರ ಅವಧಿಯಲ್ಲಿ ಮೃಡಯ್ಯನವರು “ಶ್ರೀ ಕುಮಾರೇಶ್ವರ” ಕೃಪಾಪೋಷಿತ ನಾಟ್ಯ ಸಂಘ”ದಲ್ಲಿ ಹಾರ್ಮೋನಿಯಂ ವಾದಕರಾಗಿ ಸೇವೆ ಪ್ರಾರಂಭಿಸಿದರು. ಗವಾಯಿಗಳವರ “ಶ್ರೀಕೃಷ್ಣ ಗಾರುಡಿ” ನಾಟಕದ ಭೀಮನ ಪಾತ್ರಧಾರಿಗಾಗಿ ಶೋಧನ ನಡೆದಾಗ ಮೃಡಯ್ಯನವರನ್ನೇ ಭೀಮನ ಪಾತ್ರಕ್ಕೆ ಪಂಚಾಕ್ಷರ ಗವಾಯಿಗಳು ನಿರ್ಧರಿಸಿ ಪಾತ್ರವನ್ನು ಅಭಿನಯಿಸುವಂತೆ ಅಪ್ಪಣೆ ಮಾಡಿದರು. ಮೃಡದೇವನವರು ಭೀಮನ ಪಾತ್ರದಲ್ಲಿ ಪ್ರೇಕ್ಷಕರನ್ನು ತಮ್ಮ ಅದ್ಭುತ ಅಭಿನಯದೊಂದಿಗೆ ಆನಂದ ಪಡಿಸಿದರು. ರೌದ್ರಾವತಾರದ ಮುಖ, ಭೀಕರತೆಯ ಕಣ್ಣುಗಳು, ಭಯದಿಂದ ರಂಗಭೂಮಿಯನ್ನು ಪ್ರವೇಶಿಸಿ ಗುಡುಗುವ ಮೃಡಯ್ಯನವರ ಅಭಿನಯ ನಾಟಕದಲ್ಲಿ ರೋಮಾಂಚನಕಾರಿ ವಾತಾವರಣವನ್ನೇ ನಿರ್ಮಾಣ ಮಾಡುತ್ತಿತ್ತು.

          ಪೌರಾಣಿಕ ನಾಟಕಗಳಾದ “ರೇಣುಕಾ ಮಹಾತ್ಮೆ”ಯಲ್ಲಿ ಪರಶುರಾಮನಾಗಿ, “ಹರಗಿರಿಜೆ”-ನಾಟಕದಲ್ಲಿ ತಾರಕಾಸುರನಾಗಿ, ಶ್ರೀ ಕೃಷ್ಣ ಗಾರುಡಿಯಲ್ಲಿ ಭೀಮನಾಗಿ, ಪ್ರಪಂಚ ಪರೀಕ್ಷೆಯಲ್ಲಿ – ಭತ್ಯಹರಿಯಾಗಿ ಪಾತ್ರವಹಿಸಿದರು. “ಹರಗಿರಿಜೆ” ನಾಟಕದ ತಾರಕಾಸುರನ ಅಭಿನಯವು ಮೃಡದೇವರಿಗೆ ಹೆಚ್ಚಿನ ಕೀರ್ತಿಯನ್ನು ತಂದು ಕೊಟ್ಟಿತು.

          ಸಾಮಾಜಿಕ ನಾಟಕಗಳಾದ “ಕುಲಪುತ್ರ”ದಲ್ಲಿ ಹಾಲಪ್ಪನಾಗಿ; “ಪಣಕ್ಕಿಟ್ಟ ಪ್ರಮಾಣ”ದಲ್ಲಿ – ಸೈನಿಕನಾಗಿ; ಪಾತ್ರವಹಿಸಿ ಅಭಿನಯಿಸಿದ ಮೃಡಯ್ಯನವರಲ್ಲಿ ಉತ್ತಮ ರಂಗಭೂಮಿಯ ಕಲಾವಿದನೊಬ್ಬನಿಗೆ ಇರಬೇಕಾದ ಎಲ್ಲ ಅರ್ಹತೆಗಳಿದ್ದವು. ಗವಾಯಿಗಳವರ ನಾಟಕ ಮಂಡಳಿಯಲ್ಲಿಯೇ ಅತಿ ಸುಂದರ ಕಲಾವಿದರು. ಸುಪ್ರಸಿದ್ದ ನಟರಾಗಿ ಸೇವೆಸಲ್ಲಿಸಿದ ಮೃಡಯ್ಯನವರು “ನಟ ಶೇಖರ” ಬಿರುದು ಪಡೆದಿದ್ದರು. ಕೆಲವು ಕಾಲ “ಶ್ರೀ ಅಮರೇಶ್ವರ ನಾಟ್ಯ ಸಂಘ ಹೊಸಹಳ್ಳಿ” ಸ್ಥಾಪಿಸಿ, ಅದರ ಮೂಲಕ ಹಲವಾರು ರಂಗಪ್ರಯೋಗಗಳನ್ನು ಪ್ರದರ್ಶಿಸಿದ ನಾಟಕ ಸಂಘದ ಒಡೆಯಾಗಿದ್ದರು.

          “ತಮ್ಮ ಜೀವಮಾನವನ್ನೇ ರಂಗಭೂಮಿಯಲ್ಲಿ ನಟರಾಗಿ ಅಭಿನಯಿಸುವದರೊಂದಿಗೆ ಗಂಧದಂತೆ ಕಾಯವನ್ನು ದುಡಿಸಿದ ಮೃಡದೇವ ಗವಾಯಿಗಳು ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಪಡೆದ ಅಪರೂಪದ ನಟರಾಗಿದ್ದಾರೆ:. 1967ರಲ್ಲಿ ಪಟ್ಟದಕಲ್ಲಿನಲ್ಲಿ ಬಸವಯ್ಯನವರ ಕಂಪನಿಯು ಲಿಂಗದ ಹೊಳೆಯಲ್ಲಿ ಕ್ಯಾಂಪ್ ಮಾಡಿತ್ತು. “ಪಣಕ್ಕಿಟ್ಟ ಪ್ರಮಾಣ” ನಾಟಕ ಜನದಟ್ಟಣೆಯಲ್ಲಿ ಪ್ರಯೋಗಗೊಳ್ಳುತ್ತಿತ್ತು. ಅದೊಂದು ದಿನ ಮೃಡಯ್ಯನವರು ನದಿಗೆ ಸ್ಥಾನಕ್ಕೆ ಹೋದವರು ಎದೆ ನೋವಿನಿಂದ ಬಳಲುತ್ತಲೇ ಕೋಣೆ ಸೇರಿದರು, ನೋವು ಕಡಿಮೆಯಾಗಲಿಲ್ಲ. ಹೃದಯಬಡಿತ ಹೆಚ್ಚಿತು, ಉಪಚಾರ ಫಲಿಸಲಿಲ್ಲ ಅದೇ ದಿನ ಹೃದಯಾಘಾತದಿಂದ ಅಸುನೀಗಿದರು.

ಚನ್ನಬಸಯ್ಯ ನರೇಗಲ್

          “ನಟರತ್ನ” ಎಂಬ ಬಿರುದಿನೊಂದಿಗೆ ಕನ್ನಡಿಗರ ಚಿತ್ತ ಭಿತ್ತಿಯಲ್ಲಿ ಅಚ್ಚಳಿಯದಂತೆ ಸ್ಥಿರವಾದ ಅಭಿನಯವನ್ನು ನೀಡಿದ ಚನ್ನಬಸಯ್ಯ ನರೇಗಲ್ “ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘ”ದಲ್ಲಿ ಬಹುಕಾಲ ತಮ್ಮ ಅಭಿನಯದೊಂದಿಗೆ ಜನ ಮೆಚ್ಚುಗೆ ಪಡೆದ ನಟರು. ಸಂಗೀತದಲ್ಲಿ ವಿಶೇಷತೆ ಪಡೆದ ಚನ್ನಬಸಯ್ಯನವರು ರೋಣ ತಾಲ್ಲೂಕಿನ ನರೇಗಲ್ ಗ್ರಾಮದ ಕೋರಧಾನ್ಯಮಠ (ಕಂಬಾಳಿಮಠ) ಮನೆತನದವರು. ಪಂಚಾಕ್ಷರ ಗವಾಯಿಗಳವರ ಸಂಚಾರಿ ಸಂಗೀತ ಪಾಠಶಾಲೆಯಲ್ಲಿ ಸಂಗೀತ ಕಲಿಯಲು ಪ್ರವೇಶ ಪಡೆದ ಚನ್ನಬಸಯ್ಯನನ್ನು ನಾಟ್ಯ ಸಂಘವು ಸ್ಥಾಪನೆಗೊಂಡ ದಿನವೇ ನಟನನ್ನಾಗಿ ಸ್ವೀಕರಿಸಿದ ಪಂಚಾಕ್ಷರ ಗವಾಯಿಗಳು ಸಿದ್ದರಾಮ ಸಂವಾದದಲ್ಲಿ ಅಲ್ಲಮಪ್ರಭುವಾಗಿ, ಚನ್ನಬಸಯ್ಯ ಅಭಿನಯಿಸಿದ ನಟನೆ ಸಂಗೀತವನ್ನು ಆಲಿಸಿ ಒಳ್ಳೆಯ ನಟನಾಗುವಂತೆ ಆಶೀರ್ವದಿಸಿದರು. ಗಂಭೀರ ಮುಖಮುದ್ರೆ, ವಿಶಾಲ ಕಾಂತಿಯನ್ನು ಹೊಂದಿದ ಕಣ್ಣುಗಳು, ಸದೃಢವಾದ ದೇಹಸೌಷ್ಟವ ಹೊಂದಿದ ಚನ್ನಬಸಯ್ಯನವರ ವಾಕ್ ಚಾತುರ್ಯ, ರಾಗ, ತಾಳ, ಲಯ-ಬದ್ಧವಾದ ಹಾಡುಗಾರಿಕೆ, ಸನ್ನಿವೇಶ, ಸಂದರ್ಭವನ್ನು ಅರಿತುಕೊಂಡು ಅಭಿನಯಿಸುವ ಹಾವ-ಭಾವಗಳೊಂದಿಗೆ ತನ್ನ ಕಲೆಯನ್ನು ರಂಗಭೂಮಿಯ ಮೇಲೆ ಪ್ರದರ್ಶಿಸುತ್ತಿದ್ದ ಇವರು ಅತ್ಯಂತ ಬೇಡಿಕೆಯ ನಟರಾದರು. ಹತ್ತುವರ್ಷಗಳ ಕಾಲ (1942-1952) ಶ್ರೀ ಕುಮಾರೇಶ್ವರ ನಾಟ್ಯ ಸಂಘದಲ್ಲಿ ಸೇವೆಗೈದ ಚನ್ನಬಸಯ್ಯನವರು “ಹೇಮರಡ್ಡಿ ಮಲ್ಲಮ್ಮ”ನ ನಾಟಕದಲ್ಲಿ ವೇಮನ ಪಾತ್ರ, “ನಲ್ಲೂರ ನಂಬೆಕ್ಕ” ನಾಟಕದಲ್ಲಿ-ಪರಮಾತ್ಮನ ಪಾತ್ರ, “ಪ್ರಪಂಚ ಪರೀಕ್ಷೆ”ಯಲ್ಲಿ –ಕುದುರೆ (ಗೋಡೆ) ಸವಾರ, “ಮಹಾರಥಿ ಭೀಷ್ಮ” ನಾಟಕದಲ್ಲಿ-ಭೀಷ್ಮನಾಗಿ, “ರತ್ನಹಾರ”ದಲ್ಲಿ-ಶೇಡಜಿ, ಪಾತ್ರಗಳನ್ನು ಅಭಿನಯಿಸುವದರೊಂದಿಗೆ ವೃತ್ತಿರಂಗಭೂಮಿಯಲ್ಲಿ ಕೀರ್ತಿಶೇಷರಾದರು.

          ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘವನ್ನು ಬಿಟ್ಟು ಮೃಡದೇವ ಗವಾಯಿಗಳೊಂದಿಗೆ ಪಾಲುದಾರಿಕೆಯಲ್ಲಿ ಸಂಘ ಸ್ಥಾಪಿಸಿ ನಂತರ ಅವರಿಬ್ಬರಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಕಂಪನಿಯನ್ನು. ಬಿಟ್ಟು ಗರುಡ ಸದಾಶಿವರಾಯರ ಕಂಪನಿ, ಅಣ್ಣಿಗೇರಿ ಹುಸೇನಸಾಹೇಬರ ಕಂಪನಿ, ಪಟ್ಟದಕಲ್ಲು ಬಸಯ್ಯನವರ ಕಂಪನಿ ಹೀಗೆ ಬೇರೆ ಬೇರೆ ಕಂಪನಿಗಳಲ್ಲಿ ನಟರಾಗಿ ಅಭಿನಯಿಸಿ ಕೊನೆಗೆ ತಮ್ಮದೆ ಆದ “ವಿಜಯ ಕುಮಾರ ನಾಟ್ಯ ಸಂಘ”ವನ್ನು ಗದುಗಿನಲ್ಲಿ ಸ್ಥಾಪಿಸಿದರು. ಬಹಳ ದಿನ ಕಂಪನಿ ನಡೆಯದಾದ ಕಾರಣ ಬೇರೆ ಕಂಪನಿಯಲ್ಲಿ ಆಶ್ರಯಪಡೆದರು.

          ರಂಗಭೂಮಿ ಬಣ್ಣದ ಬದುಕಿನ ಅಬ್ಬರದಲ್ಲಿ ಚನ್ನಬಸಯ್ಯನವರು ಬಹುಕಾಲ ಅವಿವಾಹಿತರಾಗಿಯೇ ಉಳಿದರು. ವಯಸ್ಸಾದ ಮೇಲೆ ಮಮ್ತಾಜ ಬೇಗಂ ಎಂಬ ಕಲಾವಿದೆಗೆ ಲಿಂಗದೀಕ್ಷೆ ನೀಡಿ ಮದುವೆಯಾದರು. ಬದುಕಿನಲ್ಲಿ ಉಂಟಾದ ಏರಿಳಿತಗಳು ಭಾವುಕರಾದ ಚನ್ನಬಸಯ್ಯನವರ ಮನವನ್ನು ಕಲುಕಿದವು. ಮಾನಸಿಕ ಸಮಸ್ಥಿತಿಯನ್ನು ಕಳೆದುಕೊಂಡು ಕೊನೆ ಕೊನೆಗೆ ಹುಚ್ಚರಾದರು. ಜೀವಿತ ಕೊನೆಯ ದಿನಗಳು ನಟರ ಪಾಲಿಗೆ ಕಷ್ಟ ಮತ್ತು ವೇದನೆಯ ಕ್ಷಣಗಳಾದವು. ರಂಗಭೂಮಿಗೆ ನಲವತ್ತಕ್ಕೂ ಹೆಚ್ಚು ವರ್ಷಗಳ ಸೇವೆಸಲ್ಲಿಸಿದ ಕಲಾವಿದ 1984 ರಲ್ಲಿ ತಮ್ಮ ಬದುಕಿಗೆ ಅಂತಿಮ ವಿರಾಮವಿತ್ತರು.

ಚಿತ್ತರಗಿ ಶ್ರೀ ಗಂಗಾಧರ ಶಾಸ್ತ್ರಿಗಳು

          ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯ ನಟರೂ, ಹಿತೈಷಿಗಳೂ, ಸ್ವಂತ ನಾಟ್ಯ ಸಂಘ ಸ್ಥಾಪನೆಯ ಸಂಸ್ಥಾಪಕರಾದ ಚಿತ್ತರಗಿ ಶ್ರೀ ಗಂಗಾಧರ ಶಾಸ್ತ್ರಿಗಳು ಈಗಿನ ಬಾಗಿಲಕೋಟೆ ಜಿಲ್ಲೆಯ ಶಿರೂರ ಗ್ರಾಮದವರು. ಶ್ರೀ ಚಿತ್ತಾಪುರ ಪಟ್ಟಾಧ್ಯಕ್ಷರ ಸನ್ನಿಧಿಯಲ್ಲಿ ಸಂಸ್ಕೃತ-ಕನ್ನಡ-ಭಾಷೆಗಳ ವ್ಯಾಸಂಗ ಮಾಡಿದವರು. ಯಾದಗಿರಿಯ ಪಂ.ಸದಾಶಿವ ಶಾಸ್ತ್ರಿಗಳವರಲ್ಲಿ ಪ್ರವಚನ, ಕೀರ್ತನ ಕಲೆಯನ್ನು ಅಭ್ಯಾಸ ಮಾಡಿದ ಗಂಗಾಧರ ಶಾಸ್ತ್ರಿಗಳು ಕೀರ್ತನೆಗಳನ್ನು ಊರುರಲ್ಲಿ ಮಾಡುತ್ತ ಉಪಜೀವನ ಸಾಗಿಸುತ್ತಿರುವಾಗ 1935ರಲ್ಲಿ ಪಂಚಾಕ್ಷರ ಗವಾಯಿಗಳ ಸಂಚಾರಿ ಸಂಗೀತ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದು ಸಂಗೀತದಲ್ಲಿ ಪರಿಣಿತರಾಗಿ ಪಂಚಾಕ್ಷರ ಗವಾಯಿಗಳು ಪ್ರಾರಂಭಿಸಿದ ನಾಟಕ ಕಂಪನಿಯಲ್ಲಿ ಕಲಾವಿದರಾಗಿ ಪಾತ್ರಗಳನ್ನು ಅಭಿನಯಿಸತೊಡಗಿದರು.

          1941ರಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಗಾಗಿ ಪಂಚಾಕ್ಷರ ಗವಾಯಿಗಳವರು ಇಳಕಲ್ಲಿನ ಮಾಲೀಕರಿಂದ ಖರೀದಿಸಿದ ಸಾಮಾನುಗಳ ಹಣವನ್ನು ಕೇಳಲು ಬಂದಾಗ ಗವಾಯಿಗಳವರ ಸಾಮಾನುಗಳು ಒತ್ತೆ ಬೀಳುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಶ್ರೀ ಗಂಗಾಧರ ಶಾಸ್ತ್ರಿಗಳು ತಮ್ಮ ಪಾಲಿನ ಜಮೀನನ್ನು ಮಾರಿಬಂದ ಹಣದಿಂದ ಕಂಪನಿಯ ಸಾಲವನ್ನು ತೀರಿಸಿದರು. ಹಲವು ಕಾಲ ಗವಾಯಿಗಳ ನಾಟಕ ಮಂಡಳಿಯಲ್ಲಿದ್ದ ಶ್ರೀ ಗಂಗಾಧರ ಶಾಸ್ತ್ರಿಗಳು 1942ರಲ್ಲಿ ತಮ್ಮದೇ ಆದ “ಶ್ರೀಕುಮಾರ ವಿಜಯ ನಾಟ್ಯ ಸಂಘ ಚಿತ್ತರಗಿ” ಎಂಬ ನಾಟಕ ಸಂಸ್ಥೆಯನ್ನು ಹುಟ್ಟುಹಾಕಿ ಉತ್ತರ ಕರ್ನಾಟಕ ವೃತ್ತಿರಂಗ ಭೂಮಿಗೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ಸಲ್ಲಿಸಿದ್ದಾರೆ. ಶ್ರೀ ಗಂಗಾಧರ ಶಾಸ್ತ್ರಿಗಳ ನಾಟಕ ಮಂಡಳಿ ತನ್ನ ಕಲಾಸೇವೆಯನ್ನು ಇನ್ನೂ ಸಲ್ಲಿಸುತ್ತಲಿದೆ.

          ಗಂಗಾಧರ ಶಾಸ್ತ್ರಿಗಳ ಕಲಾಸಾಧನೆ ಮತ್ತು ವೃತ್ತಿ ರಂಗಭೂಮಿಯ ಕೊಡುಗೆಯನ್ನು ಮೆಚ್ಚಿಕೊಂಡು ಅನೇಕ ಸಂಘ ಸಂಸ್ಥೆಗಳು “ಕೀರ್ತನಾಚಾರ್ಯ ಪ್ರಶಸ್ತಿ” ನೀಡಿ ಗೌರವಿಸಿದೆ. ಬದುಕಿನುದ್ದಕ್ಕೂ ರಂಗಭೂಮಿಯ ಶ್ರೇಯಸ್ಸಿಗಾಗಿ ಶ್ರಮಿಸಿದ “ಪಂಚಾಕ್ಷರ ಗವಾಯಿಗಳ ಗುರುಭಕ್ತರಾಗಿ, ಸಂಗೀತ ಪ್ರಿಯರಾದ, ಅಗ್ರಗಣ್ಯ ಕೀರ್ತನಕಾರ ಸಾಹಿತಿಗಳಾದ ಶ್ರೀ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು 26-04-1925 ರಂದು ನಿಧನರಾದರು.”

ತಾಳಕೇರಿ ಬಸವರಾಜ ಗವಾಯಿಗಳು

          ಶ್ರೀ ತಾಳಕೇರಿ ಬಸವರಾಜ ಗವಾಯಿಗಳು ರಂಗಭೂಮಿಯ ನಟರಾಗಿ, ಸಂಗೀತಗಾರರಾಗಿ, ಕವಿಯಾಗಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಲ್ಲಿ ತಮ್ಮ ಕಲಾಭಿನಯ ಪ್ರದರ್ಶಿಸಿದ ಉತ್ತಮ ನಟರು, ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ 1924 ಆಗಸ್ಟ್ 24 ರಂದು ಜನಿಸಿದರು. ಕಲಿತದ್ದು ಗಾವಟಿ ಶಾಲೆಯಲ್ಲಿ ಎರಡನೇಯ ಇಯತ್ತೆ, ಪೂರ್ವದಿಂದಲೂ ಮನೆತನದಲ್ಲಿ ಕಲೆಯ ಬಗ್ಗೆ ವಿಶೇಷವಾದ ಆಸಕ್ತಿ, ಕಲೆ ಪೂರ್ವಜರಿಂದ ಬಾಲಕ ಬಸವರಾಜನಲ್ಲೂ ಹರಿದು ಬಂದಿತ್ತು. ತಂದೆ ಶ್ರೇಷ್ಟ ಮೃದಂಗವಾದಕ. ಊರಲ್ಲಿ ಸಂಘಟಿಸಿದ “ಅಕ್ಷಯಾಂಬರ” ನಾಟಕದಲ್ಲಿ ಬಾಲ ಪಾತ್ರಧಾರಿಯಾಗಿ ಅಭಿನಯಿಸಿದ ಬಸವರಾಜನ ಕಲಾಪ್ರತಿಭೆಯನ್ನು ಕಂಡು ಊರವರೆಲ್ಲ ಇವನೊಬ್ಬ ಶ್ರೇಷ್ಟ ನಟನಾಗುವ ಅರ್ಹತೆ ಹೊಂದಿದ್ದು, ಇವನಿಗೆ ಪ್ರೋತ್ಸಾಹ ಪ್ರೇರಣೆ ನೀಡಬೇಕೆಂದು ನಿರ್ಧಿರಿಸಿದರು.

          ಬಾಲಕ ಬಸವರಾಜನಲ್ಲಿ ತಾನೊಬ್ಬ ಉತ್ತಮ ನಟನಾಗಬೇಕೆಂಬ ಆಕಾಂಕ್ಷೆ ಮೂಡಿ ಅದಕ್ಕಾಗಿ ಗುರುವಿನ ಶೋಧದಲ್ಲಿದ್ದಾಗ 1941 ಸೆಪ್ಟಂಬರ್ ತಿಂಗಳಲ್ಲಿ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘವು ಬಸವನಬಾಗೇವಾಡಿಯಲ್ಲಿ ಕ್ಯಾಂಪ್ ಹಾಕಿತ್ತು. ಅಲ್ಲಿ ತಾಳಕೇರಿಯವರಾದ ಮೃತ್ಯುಂಜಯ ಸ್ವಾಮಿ ಪುರಾಣಿಕ ಎಂಬುವರು ಬಾಲಕ ಬಸವರಾಜನನ್ನು ಕರೆದುಕೊಂಡು ಪಂಚಾಕ್ಷರ ಗವಾಯಿಗಳವರ ನಾಟಕ ಮಂಡಳಿಯನ್ನು ಸೇರಿಸಿದರು. ಅಲ್ಲಿ ಪುಟ್ಟರಾಜರ ಸೇವೆಯೊಂದಿಗೆ ಅಭಿನಯ, ಸಂಗೀತ ಅಭ್ಯಾಸವನ್ನು ಪ್ರಾರಂಭಿಸಿದರು. ಬಸವರಾಜನಿಗೆ ನಾಟಕದಲ್ಲಿ ಪಾತ್ರಧಾರಿಯಾಗಲು ಅವಕಾಶ ನೀಡಿದರು. “ಸತಿ ಸುಕನ್ಯೆ” ನಾಟಕದಲ್ಲಿ ಪಾತ್ರವಹಿಸಿದ ಬಸವರಾಜನಿಗೆ ಪುಟ್ಟರಾಜ ಗವಾಯಿಗಳು ಬಿಜಾಪುರದ ಮನಗೂಳಿಯಲ್ಲಿ ನಡೆದ ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಲು ಅನುಮತಿ ನೀಡಿದರು. ಮುಂದೆ ನಾಟಕ ಮಂಡಳಿಯು ಗದುಗಿನಲ್ಲಿ ಕ್ಯಾಂಪ್ ಹಾಕಿದಾಗ ಜಿ.ಹಿರೇಮಠ ಅವರಿಂದ ಪ್ರಜಾನೃತ್ಯ, ಸಭಾನೃತ್ಯಗಾರಿಕೆಯನ್ನು ಕಲಿತುಕೊಂಡರು. “ಹೇಮರಡ್ಡಿ ಮಲ್ಲಮ್ಮ”ನ ನಾಟಕದಲ್ಲಿ ನಾಗಮ್ಮನ ಪಾತ್ರದಲ್ಲಿ ತಾಳಕೇರಿ ಬಸವರಾಜನ ಅಭಿನಯ ಜನಮೆಚ್ಚುಗೆಯನ್ನು ಪಡೆಯಿತು. ನಲ್ಲೂರ ನಂಬೆಕ್ಕ ನಾಟಕದಲ್ಲಿ ಚೌಕದ ಬಸಲಿಂಗಿಯ ಪಾತ್ರವು ಹೆಚ್ಚು ಜನಪ್ರಿಯತೆಯನ್ನು ಬಸವರಾಜ ಗವಾಯಿಗಳಿಗೆ ತಂದು ಕೊಟ್ಟಿತು. ಹಳ್ಳಿಯ ಜೀವನದಲ್ಲಿ ಹೆಣ್ಣುಮಗಳೊಬ್ಬಳು ತನ್ನ ಸತಿ ಧರ್ಮವನ್ನು ಕಾಪಾಡಿಕೊಂಡ ಬಗೆಯನ್ನು ತಿಳಿಸುವ ಸನ್ನಿವೇಶದ ಪಾತ್ರ ಅಭಿನಯ ವಿಶೇಷವಾದುದು. ರತ್ನಹಾರದಲ್ಲಿಯೂ ಹಾಸ್ಯ ಪಾತ್ರಧಾರಿಯಾಗಿ ಅಭಿನಯಿಸಿದರು. “ಶ್ರೀ ಸಿದ್ಧರಾಮೇಶ್ವರ” ನಾಟಕದಲ್ಲಿ ಸುಗ್ಗಲಾದೇವಿಯ ಪಾತ್ರವನ್ನು ಅಭಿನಯಿಸಿ ನಂತರ ಸಿದ್ಧರಾಮನ ಸತ್ವ ಪರೀಕ್ಷೆಯನ್ನು ಮಾಡುವ “ಮೋಹಿನಿ” ಪಾತ್ರವನ್ನು, “ಶ್ರೀ ಕೃಷ್ಣಗಾರುಡಿಯಲ್ಲಿ “ಮೋಹಿನಿ” ಪಾತ್ರವನ್ನು ಅಭಿನಯಿಸುತ್ತಿದ್ದರು.

          ‘ಮಿಂಚು’ ನಾಟಕದಲ್ಲಿ ಹೊಳೆಯಮ್ಮನ ಪಾತ್ರದಲ್ಲಿ ಬಸವರಾಜ ಗವಾಯಿಗಳು ನೀಡಿದ ತಮ್ಮ ಅಭಿನಯದಿಂದ ಜನರನ್ನು ಆಕರ್ಷಿಸಿದರು.

          1941 ರಿಂದ 1961ರ ಅವಧಿಯವರೆಗೆ ಸುಮಾರು 20 ವರ್ಷಗಳ ಕಾಲ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಲ್ಲಿ ನಟರಾಗಿ ಅಭಿನಯಿಸಿದ ಬಸವರಾಜ ಗವಾಯಿಗಳು; ಚನ್ನಬಸಯ್ಯ ನರೇಗಲ್ಲ ಇವರೊಂದಿಗೆ “ವಿಜಯ ಕುಮಾರ ನಾಟ್ಯ ಸಂಘ” ವನ್ನು ಸ್ಥಾಪಿಸಿ ಕೆಲವು ವರ್ಷ ನಾಟಕಗಳನ್ನು ಪ್ರಯೋಗಿಸಿ ನಟರ ವರ್ತನೆಗಳಿಗೆ ಬೇಸತ್ತು ಕಂಪನಿಯನ್ನು ಸ್ಥಗಿತಗೊಳಿಸಿ, 1972 ರಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಾರ್ಯನಿರ್ವಹಿಸುವದರೊಂದಿಗೆ ಸಾಹಿತ್ಯ ರಚನೆಯನ್ನು ಕೈಗೊಂಡರು.

          “ಪಂಚಾಕ್ಷರ ಗುರುಗೀತೆ” “ಗವಿಸಿದ್ದೇಶ್ವರ ನಾಮಾವಳಿ” “ಎಡೆಯೂರ ಸಿದ್ಧಲಿಂಗೇಶ್ವರ ಭಕ್ತಿಗೀತೆಗಳು” “ಹಾಡೋಣ-ಬಾ-ತಂಗಿ” “ಬಸವಧ್ಯಾನ ಚಿಂತಾಮಣಿ” ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

          ತಾಳಕೇರಿ ಬಸವರಾಜ ಗವಾಯಿಗಳು ಅನೇಕ ಪ್ರಶಸ್ತಿ ಸನ್ಮಾನಗಳನ್ನು ನಾಡವರಿಂದ ಸ್ವೀಕರಿಸಿ ಜನರ ಅಭಿಮಾನ, ಗೌರವಕ್ಕೆ ಪಾತ್ರರಾಗಿದ್ದಾರೆ. ನವಿಲಕುಂದ ಗವಿಮಠದ ಲಿಂ.ಬಸವಲಿಂಗ ಮಹಾಸ್ವಾಮಿಗಳು “ಅಶುಕವಿ” ಬಿರುದನ್ನು ಇತ್ತು ಗೌರವಿಸಿದ್ದಾರೆ. ಇವರ ಜಾನಪದ ಸಂಗೀತ ಪ್ರೀಯತೆಗೆ 1983ರ “ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿ “ಕರ್ನಾಟಕ ರಾಜ್ಯ ಜಾನಪದ ಅಕಾಡಮಿ ಪ್ರಶಸ್ತಿ” ದೊರೆತಿವೆ. ಶ್ರೀಯುತರು ಸದ್ಯ ತಮ್ಮ ವಿಶ್ರಾಂತಿ ಜೀವನವನ್ನು ತಾಳಕೇರಿಯಲ್ಲಿ ನಡೆಸುತ್ತಿದ್ದಾರೆ.

ಅರ್ಜುನಸಾ ನಾಕೋಡ

          ಸಂಗೀತ ಸಾಧನೆಗಾಗಿ ಪಂಚಾಕ್ಷರ ಗವಾಯಿಗಳವರ ಶಿಷ್ಯರಾಗಿ ಸಂಗೀತ ಪಾಠಶಾಲೆಯನ್ನು ಪ್ರವೇಶಿಸಿದ ಅರ್ಜುನಸಾ ನಾಕೋಡ ಶ್ರೇಷ್ಠ ಗಾಯಕ ಹಾಗೂ ನಟರು; ನಾಟಕ ಮಂಡಳಿಯು ಪ್ರಯೋಗಿಸುತ್ತಿದ್ದ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಿಕಾರ್ಜುನ ಸ್ವಾಮಿಯಾಗಿ ಅರ್ಜುನಸಾ ಅಭಿನಯಿಸಿದ ಅಭಿನಯ ಅವರಿಗೆ ಅಪಾರವಾದ ಕೀರ್ತಿಯನ್ನು ತಂದುಕೊಟ್ಟಿತು. ಮುಂದೆ ತಾವೇ ಸ್ವತಃ “ವಸಂತ ಕಲಾ ನಾಟ್ಯ ಸಂಘ ಗದಗ” ಎಂಬ ಹೆಸರಿನ ನಾಟಕ ಕಂಪನಿ ಕಟ್ಟಿ ಕರ್ನಾಟಕದಾದ್ಯಂತ ನಾಟಕ ಪ್ರದರ್ಶಿಸಿದರು. ನಾಡಿನ ಖ್ಯಾತ ಗಾಯಕರ ಸಾಲಿನಲ್ಲಿ ಅರ್ಜುನಸಾ ನಾಕೋಡ ಪ್ರತಿಷ್ಟಿತ ಹೆಸರನ್ನು ಸಂಪಾದಿಸಿದರು. ಇವರಿಗೆ 1991ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ನಾಟಕ ಅಕಾಡೆಮಿ, 1994ರಲ್ಲಿ ಚಂದ್ರಹಾಸ ಪ್ರಶಸ್ತಿ ಲಭಿಸಿದವು. ಸಂಗೀತ ಅಭಿನಯಗಳನ್ನೆ ತಮ್ಮ ಜೀವನದ ಉಸಿರಾಗಿರಿಸಿಕೊಂಡಿದ್ದ ಅರ್ಜುನಸಾ ನಾಕೋಡ ದಿ.04.11.2001 ರಂದು ನಿಧನರಾದರು.

ಮರಿಯಪ್ಪ ಸತ್ಯಪ್ಪ ರೋಣದ

          ಪಂಚಾಕ್ಷರ ಗವಾಯಿಗಳವರ ಸಂಚಾರಿ ಸಂಗೀತ ಪಾಠಶಾಲೆಯಲ್ಲಿ ಶಿಷ್ಯರಾಗಿ ಪ್ರವೇಶ ಪಡೆದ ಮರಿಯಪ್ಪ ರೋಣದ ಶ್ರೇಷ್ಟ ವಾದ್ಯಗಾರರಾಗಿದ್ದರು. ಶಹನಾಯಿ, ಕೊಳಲು, ಹಾರ್ಮೋನಿಯಂ ನುಡಿಸುತ್ತಿದ್ದ ಮರಿಯಪ್ಪನವರು ನೂರಾರು ವಿದ್ಯಾರ್ಥಿಗಳಿಗೆ ಹಾರ್ಮೋನಿಯಂ ಸಂಗೀತ ವಿದ್ಯೆಯನ್ನು ತರಬೇತಿ ನೀಡುವದರೊಂದಿಗೆ ಒಳ್ಳೆಯ ವಾದಕರನ್ನಾಗಿ ತಯಾರುಮಾಡಿದ ಶ್ರೇಯಸ್ಸಿಗೆ ಕಾರಣರಾಗಿದ್ದರು. ಸಹಜವಾದ ನೈಜ ಕಲೆಯ ಮೂಲಕ ಅಭಿನಯವನ್ನು ನೀಡುತ್ತಿದ್ದ ಮರಿಯಪ್ಪ ಹಾಸ್ಯ ಪಾತ್ರಗಳಲ್ಲಿ ಭಾಗವಹಿಸಿದ್ದು ಹೆಚ್ಚು. “ನೆಲ್ಲೂರ-ನಂಬೆಕ್ಕ” “ಶಿರಹಟ್ಟಿ ಫಕ್ಕೀರೇಶ್ವರ ಮಹಾತ್ಮೆ” “ದೇವರ ದುಡ್ಡು” ಹೇಮರಡ್ಡಿ ಮಲ್ಲಮ್ಮ” ನಾಟಕಗಳಲ್ಲಿ ತಮ್ಮ ಅಭಿನಯದೊಂದಿಗೆ ಪ್ರೇಕ್ಷಕರ ಅಚ್ಚು ಮೆಚ್ಚಿನ ನಟರಾಗಿ ಸೇವೆಗೈದ ಇವರು ಆಕಾಶವಾಣಿ ಕಲಾವಿದರಾಗಿದ್ದರು. ಬದುಕಿನುದ್ದಕ್ಕೂ ಸಂಗೀತ, ನಟನೆಗಳ ಮೂಲಕ ಗುರುಸೇವೆ ಸಲ್ಲಿಸಿದ ಕೃತಾರ್ಥ ಜೀವನ ಮರಿಯಪ್ಪ ರೋಣದ ಅವರದಾಗಿದೆ.

ಸಿದ್ಧರಾಮಸ್ವಾಮಿ ಕೋರವಾರ

          ಪಂಚಾಕ್ಷರ ನಾಟಕ ಮಂಡಳಿಯಲ್ಲಿ ಅಭಿನಯ ಹಾಗೂ ಹಾಡುಗಾರಿಕೆಗೆ ಪ್ರತಿಷ್ಟತೆ ಪಡೆದ ಕಲಾವಿದರಲ್ಲಿ ಸಿದ್ಧರಾಮಸ್ವಾಮಿ ಕೋರವಾರ ಅವರದು ವಿಶೇಷ ಮೆರಗು. ವಿಜಾಪೂರ ಜಿಲ್ಲೆಯ ಕೋರವಾರ ಗ್ರಾಮದ ಗಂಗಾಧರಯ್ಯ ಮತ್ತು ಬಸಮ್ಮನವರ ಮಗನಾಗಿ ಜನಿಸಿದ ಸಿದ್ಧರಾಮಸ್ವಾಮಿ, 7-8 ವರ್ಷದ ಬಾಲಕನಿದ್ದಾಗಲೇ ನಾಟಕ ಮಂಡಳಿಯನ್ನು ಸೇರಿದನು. ಬಾಲಕ ಪಾತ್ರಗಳ ಅಭಿನಯದ ಮೂಲಕ ರಂಗಭೂಮಿಯನ್ನು ಏರಿದ ಸಿದ್ಧರಾಮಸ್ವಾಮಿ ಅಭಿನಯದೊಂದಿಗೆ ಹಾಡುಗಾರಿಕೆಯನ್ನು ರಕ್ತಗತವಾಗಿರಿಸಿಕೊಂಡ ಕಲಾವಿದ. 8 ವರ್ಷಗಳ ಕಾಲ ನಾಟಕ ಮಂಡಳಿಯಲ್ಲಿದ್ದ ಸಿದ್ಧರಾಮಸ್ವಾಮಿ “ನೆಲ್ಲೂರ ನಂಬೆಕ್ಕನ” ನಾಟಕದಲ್ಲಿ ಶಿವಕುಮಾರನ ಪಾತ್ರಧಾರಿಯಾಗಿ, “ಸತಿ-ಸುಕನ್ಯೆ” ನಾಟಕದಲ್ಲಿ ನಾರದನಾಗಿ ನೀಡಿದ ಅಭಿನಯ ಕನ್ನಡ ಕಲಾ ಪ್ರೇಮಿಗಳ ಚಿತ್ತದಿಂದ ಇನ್ನೂ ಮಾಸಿಲ್ಲ. ಸಂಗೀತ ಪಾಠಶಾಲೆಯಲ್ಲಿ ಹತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ನೂರಾರು ಶಿಷ್ಯರಿಗೆ ಸಂಗೀತ ತರಬೇತಿ ನೀಡಿದ ಇವರು “ಸಂಗೀತ ಕಲಾ ಆಚಾರ್ಯ” ಎಂಬ ಪ್ರಶಸ್ತಿಯನ್ನು “ಅಭಿನಯ ಕಲಾ ಪರಿಷತ್ ಭೂಪಾಲ” ಸಂಸ್ಥೆಯಿಂದ ಪಡೆದಿದ್ದಾರೆ. ಭೂಪಾಲದಲ್ಲಿ “ವೀರೇಶ್ವರ ಪುಣ್ಯಾಶ್ರಮ” ಎಂಬ ಹೆಸರಿನಲ್ಲಿ ಸಂಗೀತ ಪಾಠಶಾಲೆಯನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಅಭ್ಯಾಸದ ಪಾಠಗಳನ್ನು ಹೇಳಿಕೊಡುವ ವ್ಯವಸ್ಥೆಯನ್ನು ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟರು. ಆಕಾಶವಾಣಿ ಭೂಪಾಲದಲ್ಲಿ ನಿಲಯದ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ಧರಾಮಸ್ವಾಮಿ ಕೋರವಾರ “ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಮಂಡಳಿ” ದಲ್ಲಿ ಶ್ರೇಷ್ಠ ನಟರಾಗಿ, ಗಾಯಕರಾಗಿ, ವಾದ್ಯಗಾರರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.

ಶಿವಯೋಗಿ ಶಾಸ್ತ್ರಿ ದೇವಗಿರಿ

          ಗವಾಯಿಗಳವರ ನಾಟಕ ಮಂಡಳಿಯಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಬಹುಕಾಲ ತಮ್ಮ ಅಭಿನಯ ಸೇವೆ ಸಲ್ಲಿಸಿದವರಲ್ಲಿ ಶಿವಯೋಗಿ ಶಾಸ್ತ್ರಿ ದೇವಗಿರಿ ಬಹುಮುಖ ಪ್ರತಿಭಾವಂತರು. 06-05-1930 ರಂದು ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ ಚಂದಯ್ಯ, ಚನ್ನಬಸಮ್ಮ ನವರ ಮಗನಾಗಿ ಜನಿಸಿದ ಶಿವಯೋಗಿ ಶಾಸ್ತ್ರಿಯನ್ನು ಪುಟ್ಟರಾಜ ಗವಾಯಿಗಳ ಮಾವಂದಿರಾದ ಚಂದ್ರಶೇಖರಯ್ಯನವರು 1942 ರಲ್ಲಿ ಪಂಚಾಕ್ಷರ ಗವಾಯಿಗಳವರ ನಾಟಕ ಮಂಡಳಿಯು ಕೊಣ್ಣೂರಿನಲ್ಲಿ ಕ್ಯಾಂಪ್ ಹಾಕಿದಾಗ ಸಂಗೀತ ಕಲಿಯಲು ಸೇರಿಸಿದರು. ನಾಲ್ಕನೆಯ ತರಗತಿಯವರೆಗೆ ಶಿಕ್ಷಣ ಪಡೆದ ಶಿವಯೋಗಿಶಾಸ್ತ್ರಿ ಗವಾಯಿಗಳವರ ನಾಟಕದಲ್ಲಿ ಪ್ರಮುಖ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿದವರು. ಮಧುರಕಂಠದ ಎತ್ತರ ಧ್ವನಿಯ ಶಿವಯೋಗ ಶಾಸ್ತ್ರಿ ಅವಶ್ಯಕವಾದ ರೂಪ ಚಲುವಿಕೆಯನ್ನು ಹೊಂದಿದ ತರುಣರಾಗಿದ್ದರು. ಪ್ರತಿಯೊಂದು ಪಾತ್ರದಲ್ಲಿ ವಿಶೇಷ ಅಭಿನಯದೊಂದಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದವರು.

          “ರತ್ನಹಾರ”ದಲ್ಲಿ – ಚಂದ್ರಮತಿ, “ಪ್ರಪಂಚ ಪರೀಕ್ಷೆ”ಯಲ್ಲಿ –ಭಾನುಮತಿ, “ಮಿಂಚು”-ನಾಟಕದಲ್ಲಿ ಸೌಧಾಮಿನಿ, “ನೆಲ್ಲೂರ ನಂಬೆಕ್ಕ”-ನಾಟಕದಲ್ಲಿ ನಂಬೆಕ್ಕನ ಪಾತ್ರ, “ಸತ್ಯ ಸಂಕಲ್ಪ”-ಶಾರದಾ, “ಹೇಮರಡ್ಡಿ ಮಲ್ಲಮ್ಮ” ನಾಟಕದಲ್ಲಿ-ಮಲ್ಲಮ್ಮನಾಗಿ, “ಸಿದ್ದರಾಮ”-ನಾಟಕದಲ್ಲಿ ನಿಂಗಮ್ಮನ ಹಾಸ್ಯ ಪಾತ್ರಧಾರಿಯಾಗಿ ಅಭಿನಯ ನೀಡಿದ ಶಿವಯೋಗಿ ಶಾಸ್ತ್ರಿ 1950ರ ವರೆಗೆ ಕುಮಾರೇಶ್ವರ ನಾಟ್ಯ ಸಂಘದಲ್ಲಿ ನಟರಾಗಿ ಸೇವೆ ಸಲ್ಲಿಸಿದರು. ಗದುಗಿನಲ್ಲಿ ಗವಾಯಿಗಳ ಕಂಪನಿ ನಾಟಕಗಳನ್ನು ಪ್ರಯೋಗಿಸುತ್ತಿದ್ದ ಸಂದರ್ಭದಲ್ಲಿ ಸ್ತ್ರೀ ಪಾತ್ರಗಳನ್ನು ಅತ್ಯಂತ ಸುಂದರ ಅಭಿನಯ, ಹಾಡುಗಾರಿಕೆಯೊಂದಿಗೆ ರಂಗಭೂಮಿಯಲ್ಲಿ ವಿಶೇಷ ಕೀರ್ತಿಗೆ ಪಾತ್ರರಾದರು.

          ಡಾವಣಗೇರಿಯಲ್ಲಿ ಸೀತಾರಾಮ ಶಾಸ್ತ್ರೀಯವರ ಕಂಪನಿಯಲ್ಲಿ ಪ್ರಯೋಗಗೊಳ್ಳುತ್ತಿದ್ದ “ಎಚ್ಚಮ ನಾಯಕ” ನಾಟಕದಲ್ಲಿ – ಕಾರ್ನವಾಲಿಷ ಪಾತ್ರವನ್ನು “ಭಕ್ತ ಅಂಬರೀಷ” ನಾಟಕದಲ್ಲಿ “ವಿಷ್ಣು” ಪಾತ್ರವನ್ನು ಅಭಿನಯಿಸಿದ ಶಿವಯೋಗಿ ಶಾಸ್ತ್ರಿಗಳು ಶ್ರೇಷ್ಠ ಕೀರ್ತನಕಾರರಾಗಿದ್ದಾರೆ. “ಮಂತ್ರಜಾತ”, “ಸುಜ್ಞಾನ ಶಿವಯೋಗಿ” “ಸತಿ ಅನಸೂಯ” “ಗಜಾನನ ಜನ್ಮ” “ಅಕ್ಕಮಹಾದೇವಿ” “ಗುಣಶೇಖರ ಮಹಾರಾಜ”, “ಮೋಳಿಗೆಯ ಮಾರಯ್ಯ” “ಎಡೆಯೂರ ಸಿದ್ಧಲಿಂಗೇಶ್ವರ” ಶಿವ ಕೀರ್ತನೆಗಳನ್ನು ನಾಡಿನ ಬಹುಭಾಗದಲ್ಲಿ ಪ್ರವಚನಗಳೊಂದಿಗೆ ತಮ್ಮ ಸಾಹಿತ್ಯ ಪ್ರಸಾರ ಕಾರ್ಯವನ್ನು ಇಂದಿನವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಶಿವಕೀರ್ತನೆಗಳನ್ನು ಹೇಳುವುದರಲ್ಲಿ ವಿಶೇಷ ಪ್ರಾವೀಣ್ಯತೆ ಪಡೆದ ಇವರನ್ನು ಹಲವಾರು ಸಂಘ-ಸಂಸ್ಥೆಗಳು, ಮಠಗಳು ಪ್ರಶಸ್ತಿಗಳನ್ನು ಇತ್ತು ಸನ್ಮಾನಿಸಿವೆ.

          ಪುಟ್ಟರಾಜ ಕವಿ ಗವಾಯಿಗಳವರಲ್ಲಿ ಅಪಾರ ಶೃದ್ಧೆ-ಭಕ್ತಿ ಗೌರವ ಹೊಂದಿದ ಇವರು ಪುಣೆ-ಬೆಂಗಳೂರು ಮಾರ್ಗದಲ್ಲಿ ಬರುವ ಪುಟ್ಟರಾಜರ ಜನ್ಮಸ್ಥಳ ದೇವಗಿರಿಯ ಮಾರ್ಗಕ್ಕೆ ಗವಾಯಿಗಳವರ ಸ್ಮಾರಕವಾಗಿ ಮಹಾದ್ವಾರ ಹಾಗೂ ಮೂರ್ತಿ ಪ್ರತಿಷ್ಠಾಪನೆಯನ್ನು ದಿ.25-06-2002 ರಂದು ನೆರವೇರಿಸುವದರೊಂದಿಗೆ ತಮ್ಮ ಗುರುಭಕ್ತಿಯನ್ನು ಸಲ್ಲಿಸುವ ಪ್ರಮುಖ ಕಾರ್ಯವನ್ನು ಕೈಗೊಂಡು ಅದರಲ್ಲಿ ಯಶಸ್ವಿಯಾಗಿದ್ದಾರೆ.

          ಶಿವಯೋಗಿ ಶಾಸ್ತ್ರಿಗಳ ನಾಟ್ಯ ಸೇವೆ ಧರ್ಮಪ್ರಸಾರ ಕಾರ್ಯಗಳನ್ನು ಗುರುತಿಸಿ 1972 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು “ಕೀರ್ತನ ಕಲಾನಿಪುಣ” ಪ್ರಶಸ್ತಿಯನ್ನು 2001 ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಕಲಾ ಪರಿಷತ್ತು “ಕುಮಾರೇಶ್ವರ ಪ್ರಶಸ್ತಿ” ಯನ್ನು ಶ್ರೀಶೈಲ ಪೀಠದ ಶ್ರೀ ಜಗದ್ಗುರು ವಾಗೇಶ ಪಂಡಿತಾರಾಧ್ಯರು “ಕೀರ್ತನ ಭಾಸ್ಕರ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 21-01-2001 ರಲ್ಲಿ ರಾಣೆಬೆನ್ನೂರಿನಲ್ಲಿ ನರುಗಿದ ಹಾವೇರಿ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

ರಾಚಯ್ಯ ಮಡಿವಾಳಯ್ಯ ಹಿರೇಮಠ

          ಪಂಚಾಕ್ಷರ ಗವಾಯಿಗಳ ನಾಟಕ ಮಂಡಳಿಯಲ್ಲಿ 1977ರಲ್ಲಿ ಪ್ರವೇಶ ಪಡೆದ ಇವರು ಪುಟಗಾವ ಬಡ್ನಿ ಗ್ರಾಮದವರು. ಹಾಸ್ಯ ಪಾತ್ರಗಳ ಮೂಲಕ ತಮ್ಮ ಅಭಿನಯವನ್ನು ರಂಗಭೂಮಿಯ ಮೇಲೆ ಪ್ರಯೋಗಿಸುವಲ್ಲಿ ಅತೀ ಪ್ರಭಾವಿತ ನಟರು. 25 ವರ್ಷಗಳಿಂದ ಮಂಡಳಿಯಲ್ಲಿ “ಅಕ್ಕ ಮಹಾದೇವಿ” “ನೆಲ್ಲೂರ ನಂಬೆಕ್ಕ” “ಶ್ರೀಕೃಷ್ಣ ಗಾರುಡಿ”, “ರತ್ನ ಮಾಂಗಲ್ಯ” “ಕೊಂಡು ತಂದ ಗಂಡ”, “ಕೊರವಂಜಿ” ನಾಟಕಗಳಲ್ಲಿ ಹಾಸ್ಯ ಪಾತ್ರಧಾರಿಗಳಾಗಿ ಪ್ರೇಕ್ಷಕರನ್ನು ಆಕರ್ಷಿಸಿದ ನಟರು. ಸಧ್ಯದ ಅವಧಿಯಲ್ಲಿ ಗವಾಯಿಗಳವರ ನಾಟಕ ಕಂಪನಿಯಲ್ಲಿ ಇನ್ನು ಪಾತ್ರ ನಿರ್ವಹಿಸುತ್ತಿದ್ದಾರೆ.

ಸಂಗಮೇಶ ದುಂಡಪ್ಪ ತೋಳಮಟ್ಟಿ

          ವಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ 01-06-1972ರಲ್ಲಿ ಜನಿಸಿದ ಸಂಗಮೇಶ, ನಾಟಕ ಮಂಡಳಿಯನ್ನು 11-11-1990ರಲ್ಲಿ ಸೇರಿದರು. ಸ್ತ್ರೀ ಪಾತ್ರಗಳನ್ನು ಹೆಚ್ಚು ಅಭಿನಯಿಸುವ ಇವರು ಕುಡಕುಟ್ಟಿಯಲ್ಲಿ ನಾಟಕ ನೋಡಲು ಬಂದು ತಾನೊಬ್ಬ ನಟನಾಗಬೇಕೆಂಬ ತನ್ನ ಆಸೆಯನ್ನು ಪುಟ್ಟರಾಜರಲ್ಲಿ ಕೇಳಿಕೊಂಡಾಗ ಪುಟ್ಟರಾಜರ ಅನುಮತಿಯನ್ನು ಪಡೆದು ನಾಟಕ ಮಂಡಳಿಗೆ ಪ್ರವೇಶಿಸಿದರು. “ಅಕ್ಕಮಹಾದೇವಿ” “ಬಂಜೆತೊಟ್ಟಿಲು”, “ಮಲಮಗಳು”, “ಹಸಿರುಬಳೆ”, “ಮಾಂಗಲ್ಯ ಭಾಗ್ಯ”, “ಚನ್ನಪ್ಪ ಚನ್ನಗೌಡ” ನಾಟಕಗಳಲ್ಲಿ ಪ್ರಮುಖ ಸ್ತ್ರೀ ಪಾತ್ರಧಾರಿಯಾಗಿ ಅಭಿನಯವನ್ನು ಪ್ರದರ್ಶಿಸುವಲ್ಲಿ ನಿಷ್ಣಾತರಾದ ಇವರು ಮಂಡಳಿಯಲ್ಲಿ ಇನ್ನು ಕಲಾವಿದರಾಗಿ ಮುನ್ನಡೆದಿದ್ದಾರೆ.

ವೀರೇಶ ಕುಮಾರ ಮಂಡ್ಲಿಗೇರಿ:

          ಯಲಬುರ್ಗಾ ತಾಲೂಕಿನ ಮಂಡ್ಲಿಗೇರಿ ಗ್ರಾಮದವರಾದ ವೀರೇಶಕುಮಾರರು ನಾಟಕ ಮಂಡಳಿಯನ್ನು 1977ರಲ್ಲಿ ಮಹಾಲಿಂಗಪುರದಲ್ಲಿ ಕ್ಯಾಂಪ್ ಮಾಡಿದಾಗ ಸೇರಿದರು. ಸಂಗೀತ ಕಲಿಯಲು ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದ ವೀರೇಶ ಕುಮಾರರನ್ನು ಗುರುಸ್ವಾಮಿ ಕಲಕೇರಿಯವರು ಬಾಲಕನ ಅಭಿನಯ ದೇಹ ಸದೃಢತೆಯನ್ನು ಕಂಡು ನಾಟಕದಲ್ಲಿ ಒಳ್ಳೆಯ ಕಲಾವಿದನಾಗುವ ಅರ್ಹತೆಗಳು ಇರುವುದನ್ನು ಗುರುತಿಸಿ ನಟನಾಗಿ ಮುಂದುವರೆಯುವಂತೆ ಮಾರ್ಗದರ್ಶನ ಮಾಡಿದರು. ಖಳನಾಯಕ ಹಾಗೂ ನಾಯಕ ಪಾತ್ರಗಳಲ್ಲಿ ವಿಶೇಷತೆ ಹೊಂದಿದ ವೀರೇಶಕುಮಾರ “ಅಕ್ಕಮಹಾದೇವಿ”, “ಮಾಂಗಲ್ಯ ಭಾಗ್ಯ”, “ಬಂಜೆತೊಟ್ಟಿಲು”, ಕೊರವಂಜಿ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಉತ್ತಮ ಹಾಡುಗಾರರಾದ ವೀರೇಶಕುಮಾರ ನಾಟಕ ಮಂಡಳಿಯಲ್ಲಿ ತಮ್ಮ ಅಭಿನಯದೊಂದಿಗೆ ಇನ್ನು ಸೇವೆಸಲ್ಲಿಸುತ್ತಿದ್ದಾರೆ.

ರೇವಣಸಿದ್ದಯ್ಯ ಹೊಸೂರಮಠ:

          ಶ್ರೀಧರಗಡ್ಡೆ ಗ್ರಾಮದಲ್ಲಿ 1947ರಲ್ಲಿ ಜನಿಸಿದ ರೇವಣಸಿದ್ದಯ್ಯನವರು 1964ರಲ್ಲಿ ಪಂಚಾಕ್ಷರ ಗವಾಯಿಗಳ ನಾಟಕ ಮಂಡಳಿಯಲ್ಲಿ ನಟರಾಗಿ ಪ್ರವೇಶಿಸಿದರು. ಪುರುಷ ಪಾತ್ರಗಳನ್ನು ಅಭಿನಯಿಸುವ ರೇವಣಸಿದ್ದಯ್ಯನವರು ಅಕ್ಕಮಹಾದೇವಿ ನಾಟಕದಲ್ಲಿ ಕೌಶಿಕನಾಗಿ ನೀಡಿದ ಅಭಿನಯವು ಪ್ರೇಕ್ಷಕರಲ್ಲಿ ಉತ್ಸಾಹ ಮತ್ತು ಕಾತುರವನ್ನು ಉಂಟು ಮಾಡುವಂತಹದ್ದು. “ನೆಲ್ಲೂರ ನಂಬೆಕ್ಕ” ನಾಟಕದಲ್ಲಿ ಪರಮೇಶ್ವರನಾಗಿ, “ಮಹಾಲಿಂಗೇಶ್ವರ ಮಹಾತ್ಮೆ”ದಲ್ಲಿ ಮಹಾಲಿಂಗೇಶ್ವರನಾಗಿ, “ಬದುಕು ಬಂಗಾರವಾಯ್ತು” ನಾಟಕದಲ್ಲಿ ಮುಕ್ಕಣ್ಣನಾಗಿ, “ಕೊರವಂಜಿ” ನಾಟಕದಲ್ಲಿ –ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ರೇವಣಸಿದ್ದಯ್ಯ ಪುಟ್ಟರಾಜರು ರಚಿಸಿದ “ಶ್ರೀಕೃಷ್ಣ ಗಾರುಡಿಯಲ್ಲಿ” ಕೃಷ್ಣನಾಗಿ ಮಗನಾಗಿ, “ಪ್ರೇಮ” ನಾಟಕದಲ್ಲಿ ಶಿವರಾಯನ ಪಾತ್ರದಲ್ಲಿ ವಿಶೇಷವಾದ ಅಭಿನಯವನ್ನು ನೀಡುತ್ತಾ ರಂಗಕಲಾವಿದರಾಗಿ, ಹಾರ್ಮೋನಿಯಂ ವಾದಕರಾಗಿ, ಕಾರ್ಯದರ್ಶಿಯಾಗಿ ಮಂಡಳಿಯ ಕಾರ್ಯವನ್ನು ನಡೆಸುತ್ತಿದ್ದಾರೆ.

ಶಿವಯ್ಯ ಸ್ವಾಮಿ ಮುದೇನಗುಡಿ:

          1969ರಲ್ಲಿ ಶ್ರೀಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘ ಡಾವಣಗೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ನಾಟಕವನ್ನು ಪ್ರದರ್ಶನಗೊಳಿಸುತ್ತಿತ್ತು. ವರನಟ ಡಾ. ರಾಜಕುಮಾರ ನಾಟಕ ಮಂಗಲಗೊಂಡ ನಂತರ ರಂಗಭೂಮಿಗೆ ಹೋಗಿ ಮಲ್ಲಮ್ಮನ ಪಾತ್ರವನ್ನು ಅಭಿನಯಿಸಿದ ನಟನನ್ನು ಅತ್ಯಂತ ಕುತೂಹಲ ಹಾಗೂ ಆತುರದಿಂದ ವೀಕ್ಷಿಸಿ ಆಲಂಗಿಸಿಕೊಂಡು “ಯಾವ ಸ್ತ್ರೀ ಕಲಾವಿದೆಯೂ ನಿಮ್ಮಂತೆ ಅಭಿನಯಿಸಿರುವದನ್ನು ನಾನು ಇಲ್ಲಿಯವರೆಗೆ ನೋಡಿಲ್ಲ” ಎಂದು ಆನಂದದಿಂದ ಅಭಿನಂದಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

          ಇನ್ನೊಂದು ಸಾರಿ ಗವಾಯಿಗಳ ಕಂಪನಿ ಹುಬ್ಬಳ್ಳಿಯಲ್ಲಿ ಕ್ಯಾಂಪ್ ಮಾಡಿದಾಗ ಹಿರಿಯ ಕಲಾವಿದೆ, ಪಂಢರಿಬಾಯಿ “ಹೇಮರಡ್ಡಿ ಮಲ್ಲಮ್ಮ” ನಾಟಕದ ಮಲ್ಲಮ್ಮನ ಪಾತ್ರಾಭಿನಯವನ್ನು ಕಂಡು ನಾಟಕ ಮಂಗಲವಾದ ನಂತರ ರಂಗಸಜ್ಜಿಕೆಗೆ ಸಾಗಿ ಪಾತ್ರಾಧಾರಿಯನ್ನು ಕರೆದು “ಚೆನ್ನಾಗಿ ಅಭಿನಯಿಸಿದೆಯಮ್ಮ” ಎಂದರು. ಪಾತ್ರಾಧಾರಿಯಾಗಿದ್ದ ಕಲಾವಿದ” ನಾನು ಹೆಣ್ಣುಮಗಳಲ್ಲ ಗಂಡು” ಎಂದಾಗ ಪಂಢರಿಬಾಯಿಗೆ ವಿಸ್ಮಯ ಮತ್ತು ಅಭಿಮಾನ ಉಕ್ಕಿ “ನಟನೆಗೆ ಜೀವಂತಿಕೆ ತುಂಬುವ ಕಲಾವಿದರು ನಿಮ್ಮಂತವರು” ಎಂದು ಹರಿಸಿದರು. ಈ ಎರಡು ಘಟನೆಗಳಿಗೆ ಕಾರಣರಾದ ಕಲಾವಿದ ನಟರೇ “ಹೇಮರೆಡ್ಡಿ ಮಲ್ಲಮ್ಮ” ನಾಟಕದ ಮಲ್ಲಮ್ಮನ ಪಾತ್ರಾಧಾರಿ ಮುದೇನಗುಡಿ ಶಿವಯ್ಯ ಸ್ವಾಮಿ.

          ಗವಾಯಿಗಳವರ ನಾಟಕ ಕಂಪನಿಯಲ್ಲಿ ವಿಶೇಷವಾಗಿ ಸ್ತ್ರೀ ಪಾತ್ರಗಳಿಗೆ ಹೆಸರು ಮಾಡಿದ ಶಿವಯ್ಯ ಸ್ವಾಮಿ ಮುದೇನಗುಡಿ 1928ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಮುದೇನಗುಡಿ ಗ್ರಾಮದ ಬಡತನ ಮನೆತನದಲ್ಲಿ ಜನಿಸಿದರು, 1949 ರಲ್ಲಿ ತಮ್ಮ 21ನೇಯ ವಯಸ್ಸಿಗೆ ಗವಾಯಿಗಳವರ ನಾಟ್ಯ ಸಂಘ ಸೇರಿದರು. ಹದಿಮೂರನೆಯ ದಿವಸಕ್ಕೆ ಬಾಲ ಪಾತ್ರಧಾರಿಯಾಗಿ “ಶ್ರೀ ಶಿರಹಟ್ಟಿ ಫಕ್ಕೀರೇಶ್ವರ” ನಾಟಕದಲ್ಲಿ ಅಭಿನಯಿಸಿದರು. ಮುಂದೆ ಕೆಲವೆ ದಿನಗಳಲ್ಲಿ ಗವಾಯಿಗಳವರ ಎಲ್ಲ ನಾಟಕಗಲ್ಲಿಯೂ ಮುಖ್ಯ ಸ್ತ್ರೀ ಪಾತ್ರವಹಿಸಿದರು. ಇವರ ತಂದೆ ಸಿದ್ಧಯ್ಯನವರು ಮಗನು ಸಂಗೀತಗಾರನಾಗಲೆಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ತಂದು ಇರಿಸಿದರು. ಗವಾಯಿಗಳವರು ಬಾಲಕನಲ್ಲಿದ್ದ ಅಭಿನಯ ಕಲೆಯನ್ನು ಗುರುತಿಸಿ ನಾಟಕ ಮಂಡಳಿಗೆ ಸೇರಿಸಿದರು. ತಿಂಗಳಿಗೆ 15 ರೂ. ಸಂಭಾವನೆಗೆ ಸೇರಿಕೊಂಡ ಶಿವಯ್ಯನವರು ಬಹುಕಾಲ ಕಂಪನಿಯಲ್ಲಿ ಕಲಾಸೇವೆ ಸಲ್ಲಿಸಿದರು. 18 ಪದಗಳು, 400 ಮಾತುಗಳು, 300 ಹಿಂದಿ ಚೀಜಗಳನ್ನು ಕಂಠಸ್ಥ ಮಾಡಿದ ಶಿವಯ್ಯನವರ ಸ್ಮರಣಶಕ್ತಿ ಅಪಾರವಾದುದು. “ಹೇಮರೆಡ್ಡಿ ಮಲ್ಲಮ್ಮ” ನಾಟಕದಲ್ಲಿ ಶ್ರೀಶೈಲದ ಮಲ್ಲಿಕಾರ್ಜುನನಿಗೆ ಸಲ್ಲಿಸುವ ಪೂಜಾ ಸಂದರ್ಭದಲ್ಲಿ ಹಾಡುತ್ತಿದ್ದ-

          “ಜಯವೆಂದು ಬೆಳಗುವೆ ಮಲ್ಲಿಕಾರ್ಜುನಗೆ - ಮಲ್ಲಿಕಾರ್ಜುನಗೆ ಭಕ್ತವತ್ಸಲನೆ”

          ಎಂಬ ಗೀತೆಯನ್ನು ಶಿವಯ್ಯನವರ ಮಧುರ ಧ್ವನಿಯಲ್ಲಿ ಆಲಿಸುತ್ತಿದ್ದ ಪ್ರೇಕ್ಷಕರು ಭಾವಪರವಶರಾಗುತ್ತಿದ್ದರು. ಶಿವಯ್ಯನವರು “ರತ್ನಹಾರದಲ್ಲಿ” ಚಂಪಾ, ಅಕ್ಕಮಹಾದೇವಿಯ ನಾಟಕದಲ್ಲಿ – ಮಹಾದೇವಿ “ದೇವರ ದುಡ್ಡು” ನಾಟಕದಲ್ಲಿ ರಾಣಿ ಪಾತ್ರಾಧಾರಯಾಗಿ, “ಸತಿ ಸುಕನ್ಯೆ”-ನಾಟಕದಲ್ಲಿ-ಸುಕನ್ಯೆ ಪಾತ್ರದಲ್ಲಿ “ಪ್ರಪಂಚ ಪರೀಕ್ಷೆ” ನಾಟಕದಲ್ಲಿ-ಭಾನುಮತಿ ಪಾತ್ರದಲ್ಲಿ “ಶಿರಹಟ್ಟಿ ಫಕೀರೇಶ್ವರ ಮಹಾತ್ಮೆ”ಯಲ್ಲಿ ನೀಲಮ್ಮನ ಪಾತ್ರದಲ್ಲಿ. ಕಂದಗಲ್ಲ ಹನುಮಂತರಾಯರ ನಾಟಕಗಳಾದ “ಅಕ್ಷಯಾಂಬರ” “ಕುರುಕ್ಷೇತ್ರ”ದಲ್ಲಿ- ದ್ರೌಪದಿ ಪಾತ್ರದಲ್ಲಿ, ಕೆ.ಎನ್.ಸಾಳುಂಕೆಯವರ “ದಾರಿದೀಪ” ನಾಟಕದ-ಗುಣವಂತಿ ಪಾತ್ರದಲ್ಲಿ ಎಚ್.ಟಿ.ಮಹಾಂತೇಶ ಶಾಸ್ತ್ರೀಯವರ “ಹೆಣ್ಣಿನ ಜೀವನ” ನಾಟಕದಲ್ಲಿ-ಸರಿತಾ ಪಾತ್ರದಲ್ಲಿ ತಮ್ಮ ಅತ್ಯುತ್ತಮ ಹಾವ-ಭಾವ, ಅಭಿನಯ, ಸಂಗೀತಮಯ ಗಾಯನದೊಂದಿಗೆ “ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಸಂಘದ” ಪ್ರಮುಖ ಸ್ತ್ರೀ ಪಾತ್ರಧಾರಿಯಾಗಿ ತಮ್ಮ ರಂಗಭೂಮಿಯ ಸೇವೆಯನ್ನು ಸಲ್ಲಿಸಿದ್ದಾರೆ.

          ಶಿವಯ್ಯನವರ ಕಲಾಸೇವೆಯನ್ನು ಗುರುತಿಸಿ ಗೌರವಿಸಿದ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ. ಅವರು ಪಡೆದ ಪ್ರಶಸ್ತಿಗಳಲ್ಲಿ “ನಾಟ್ಯ ರಂಗಭೂಮಿಯ ರಾಣಿ” ಡಾವಣಗೇರಿಯ ನಾಗರಿಕರಿಂದ “ಪೌರ ಸನ್ಮಾನ” ಗದಗದ ನಗರಸಭೆಯು ಸನ್ಮಾನ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

          ಹಿರಿಯ ಕಲಾವಿದರಾದ ಸಿ.ಅಶ್ವತ್ ಅವರ ಜೊತೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಶಿವಯ್ಯನವರದು. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಅಭಿನಯ ಕಲೆಯನ್ನು ರಕ್ತಗತ ಮಾಡಿಕೊಂಡು ತಮ್ಮ ವೈವಿಧ್ಯಮಯ ಸ್ತ್ರೀ ಪಾತ್ರಗಳಿಂದ ಕನ್ನಡ ಜನ-ಮನವನ್ನು ಮುದೇನಗುಡಿ ಶಿವಯ್ಯನವರು ಸೂರೆಗೊಂಡರು.

          ಇವರಲ್ಲದೆ ಕುಮಾರೇಶ್ವರ ನಾಟಕ ಮಂಡಳಿಯಲ್ಲಿ ಶಿವಪ್ಪ, ಯರಂಗಳಿ, ಎಲಿವಾಳ ಸಿದ್ಧಯ್ಯ, ಎಚ್.ಎನ್.ಹೂಗಾರ, ವೀರೇಶ ಮದಿರೆ, ಬಸವರಾಜ ರಾಜಗುರು, ಜಾಲಿಬೆಂಚಿ ದೊಡ್ಡಬಸಯ್ಯ, ಧಾರವಾಡ ದತ್ತು, ಮುಪ್ಪಯ್ಯ ಸ್ವಾಮಿ ಚಿತ್ತರಗಿ, ಬೀಳಗಿ ಗದಿಗಯ್ಯ, ಸಿದ್ರಾಮಯ್ಯ ಕಣವಿ, ಬಳ್ಳಾರಿ ಪಂಚಯ್ಯ, ವಿರೂಪಾಕ್ಷಯ್ಯ ಬಿನ್ನಾಳ, ರೇವಣಸಿದ್ಧಯ್ಯ ಸಿಬಾರಗಟ್ಟಿ ದ್ಯಾಮನಗೌಡ ಪಾಟೀಲ, ಸಂಜೀವಪ್ಪ ಗಬ್ಬೂರ, ರಾಚಯ್ಯ ಬಡ್ನಿ, ಶ್ರೀಬಾಲಚಂದ್ರ ಶಾಸ್ತ್ರಿಗಳು, ಲಿಂಗರಾಜ ಅಂಬಲಿ, ದೇವರಾಜ ಅಂಬಲಿ, ವೀರಭದ್ರಪ್ಪ ತಿಮ್ಮಾಪೂರ, ಧೀರೇಂದ್ರಾ ಚಾರ್ಯ ಕುಣಿಗಲ್, ಮೃತ್ಯುಂಜಯ ಪುರಾಣಿಕ, ಬಸವಣ್ಣೆಯ್ಯ ಅಗಸನಕಟ್ಟೆ, ಅಂಕಲಯ್ಯ ಸ್ವಾಮಿ ಹಂಚಿನಾಳ, ಶಂಕರಯ್ಯ ಸ್ವಾಮಿ ಜಿರಗಿ, ಚಂದ್ರಶೇಖರ ಬಂಧುಗಳು. ಈ ಎಲ್ಲ ಮಹಾನಿಯರು ಗವಾಯಿಗಳವರ ನಾಟಕ ಮಂಡಳಿಯಲ್ಲಿ ತಮ್ಮ ಅಭಿನಯದ ಮೂಲಕ ಶ್ರೇಷ್ಠ ನರಾಗಿ ಖ್ಯಾತಿಯನ್ನು ಸಂಪಾದಿಸಿದರು.

News & Events