ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಸ್ಥಾಪನೆ

        ಪಂಚಾಕ್ಷರ ಗವಾಯಿಗಳವರು ನಡೆಸಿಕೊಂಡು ಬಂದ ‘ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಸಂಗೀತ ಪಾಠಶಾಲೆ’ ಎಂಬ ಹೆಸರಿಗೆ ಸೂಕ್ತ ಬದಲಾವಣೆ ಮಾಡುವ ವಿಚಾರವು ಗದುಗಿನ ಜನತೆಯಲ್ಲಿ ಮತ್ತು ಗವಾಯಿಗಳವರಲ್ಲಿ ಮೂಡಿತು. ಪಾಠಶಾಲೆಯ ಕಟ್ಟಡವನ್ನು ಶ್ರೀಮನ್ನಿರಂಜನ ಜಗದ್ಗುರು ಮುಂಡರಗಿಯ ಅನ್ನದಾನ ಮಹಾಸ್ವಾಮಿಗಳವರಿಂದ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಪಂಚಾಕ್ಷರ ಗವಾಯಿಗಳವರು, ಶಿಷ್ಯರಾದ ಪಂಡಿತ ಪುಟ್ಟರಾಜ ಗವಾಯಿಗಳವರಿಂದ ನಾಲ್ವತ್ತವಾಡದ ಶ್ರೀ ವೀರೇಶ್ವರ ಶರಣರ ಪುಣ್ಯ ಚರಿತ್ರೆಯ ಪುರಾಣ ಪ್ರವಚನವನ್ನು ಪ್ರಾರಂಭಿಸಿದರು. ಪಂಚಾಕ್ಷರ ಗವಾಯಿಗಳವರಿಗೆ ವೀರೇಶ್ವರ ಶರಣದಲ್ಲಿ ಬಹುಭಕ್ತಿ ಹಾಗೂ ಗೌರವ ಭಾವವಿತ್ತು. ಕಷ್ಟಕಾಲದಲ್ಲಿ ಬಸರೀಗಿಡದ ವೀರಪ್ಪನವರು ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠಶಾಲೆಗೆ ಬಹಳಷ್ಟು ಸಹಾಯ ಮಾಡಿದ್ದರು. ಇವೆಲ್ಲದರ ಪರಿಣಾಮವಾಗಿ ಪಾಠಶಾಲೆಗೆ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ಎಂಬ ನೂತನ ನಾಮಕರಣವನ್ನಿಟ್ಟು ಪಾಠಶಾಲೆಯನ್ನು ಸ್ಥಾಪಿಸಲಾಯಿತು.

        ವೀರೇಶ್ವರ ಪುಣ್ಯಾಶ್ರಮ ಎಂಬ ನಾಮಕರಣವನ್ನು ಕುರಿತು ಕೆಲವರು, ಪಂಚಾಕ್ಷರ ಗವಾಯಿಗಳು ಬಸರೀಗಿಡದ ವೀರಪ್ಪನವರ ಸಹಾಯದಿಂದಲೇ ಗದುಗಿನಲ್ಲಿ ನೆಲೆಸಿದರು. ಆದುದರಿಂದ ಅವರ ಹೆಸರನ್ನು ಆಶ್ರಮಕ್ಕೆ ನಾಮಕರಣ ಮಾಡಲಾಯಿತೆಂದು ಹೇಳುತ್ತಾರೆ. ಆದರೆ ಪುಟ್ರಾಜ ಗವಾಯಿಗಳವನ್ನು ಸಂದರ್ಶಿಸಿದಾಗ ಬಂದ ವಿಚಾರಗಳು ಇಂತಿವೆ. 1) ಶ್ರೀ ಬಸರೀಗಿಡದ ವೀರಪ್ಪನವರು ಹೆಸರಿಗಾಗಿ ಎಂದೂ ಬಯಸಿದವರಲ್ಲ, ಅವರಿಗೆ ಅಂಥ ಆಶೆಯೂ ಇದ್ದಿರಲಿಲ್ಲ. 2) ಗುರುಗಳಾದ ಪಂಚಾಕ್ಷರ ಗವಾಯಿಗಳವರಿಗೆ ವೀರೇಶ್ವರ ಶರಣರ ಮೇಲೆ ಎಷ್ಟು ಪೂಜ್ಯ ಭಾವನೆ ಇತ್ತೋ, ಅಷ್ಟೇ ಪ್ರೀತಿ ಬಸರೀಗಿಡದ ವೀರಪ್ಪನವರಲ್ಲಿ ಇಟ್ಟುಕೊಂಡಿದ್ದರು. ಅದಲ್ಲದೆ ವೀರಪ್ಪನವ ಕುಲದೈವ ವೀರಭದ್ರ ದೇವರಾಗಿರುವದು ಕಾರಣವಾಗಿ ಈ ಉದ್ದೇಶದಿಂದ 1941 ರಲ್ಲಿ ನಿಡಗುಂದಿ ಕೊಪ್ಪದಲ್ಲಿ ಪ್ರಾರಂಭವಾದ ‘ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಗೀತ ಪಾಠಶಾಲೆ’ 1942 ರಲ್ಲಿ ಗದಗ ನಗರದಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ‘ವೀರೇಶ್ವರ ಪುಣ್ಯಾಶ್ರಮ’ ಎಂಬ ಅಭಿನಾಮವನ್ನು ಹೊತ್ತು ಶಾಶ್ವತವಾಗಿ ನೆಲೆಸಿತು.

        ಕ್ರಿ.ಶ.1943 ರಲ್ಲಿ ದಾನಶೂರ ಬಸರೀಗಿಡದ ವೀರಪ್ಪನವರು ತಮ್ಮ ಮಸಾರಿಯಲ್ಲಿ ಒಂದು ಎಕರೆ ಭೂಮಿಯನ್ನು ಪಂಚಾಕ್ಷರ ಗವಾಯಿಗಳವರಿಗೆ ದಾನವಾಗಿ ನೀಡಿ ನೊಂದಣಿಯನ್ನು ಮಾಡಿಸಿದರು. ಪಂಚಾಕ್ಷರ ಗವಾಯಿಗಳವರು ಶಿಷ್ಯರಿಗೆ ಸಂಗೀತ ಪಾಠಗಳನ್ನು ಹೇಳುತ್ತ ಗದುಗಿನಲ್ಲಿದ್ದರೆ, ಪುಟ್ಟರಾಜ ಗವಾಯಿಗಳವರು ಸಂಚಾರಿ ಪಾಠಶಾಲೆಯೊಂದಿಗೆ ನಾಟ್ಯ ಸಂಘವನ್ನು ಮುನ್ನಡೆಸುತ್ತಿದ್ದರು. ನಿರಂತರವಾದ ಹಾಡುಗಾರಿಕೆ, ಸತತ ಪ್ರಯಾಣ ಕಾರ್ಯಗಳ ಒತ್ತಡದಿಂದ ಪಂಚಾಕ್ಷರ ಗವಾಯಿಗಳವರ ದೇಹದ ಆರೋಗ್ಯ ಅಸ್ತವ್ಯಸ್ತವಾಗಿ ಉದರ ರೋಗ ಕಾಣಿಸಿಕೊಂಡಿತು. ಪಂಚಾಕ್ಷರ ಗವಾಯಿಗಳು ತಮ್ಮ ಶಿಷ್ಯರಾದ ಪುಟ್ಟರಾಜ ಗವಾಯಿಗಳಿಗೆ ಪುಣ್ಯಾಶ್ರಮದ ಜವಾಬ್ದಾರಿಯನ್ನು ವಹಿಸಿಕೊಡಬೇಕೆಂದು ನಿರ್ಧರಿಸಿ ಕರೆಕಳುಹಿಸಿದರು.

        1944 ರಲ್ಲಿ ನಾಟಕ ಮಂಡಳಿಯು ಹಂಪಸಾಗರದಲ್ಲಿ ಕ್ಯಾಂಪ್ ಮಾಡಿತ್ತು. ಗದುಗಿಗೆ ಧಾವಿಸಿ ಬಂದ ಪುಟ್ಟರಾಜ ಗವಾಯಿಗಳವರು, ಗುರುಗಳ ಅಪ್ಪಣೆಯಂತೆ ವೀರೇಶ್ವರ ಪುಣ್ಯಾಶ್ರಮದ ಭಾರವನ್ನು ಹೊತ್ತುಕೊಂಡರು. ಕ್ರಿ.ಶ.1944 ಜೂನ್-11 ರಂದು ಪಂಚಾಕ್ಷರ ಗವಾಯಿಗಳು ಲಿಂಗೈಕ್ಯರಾದರು. ಬಸರೀಗಿಡದ ವೀರಪ್ಪನವರು ದಾನ ಮಾಡಿದ ಭೂಮಿಯಲ್ಲಿ ಪಂಚಾಕ್ಷರ ಗವಾಯಿಗಳವರ ಸಮಾಧಿಯನ್ನು ಹಾಲಕೇರಿ ಶ್ರೀ ಅನ್ನದಾನ ಮಹಾಸ್ವಾಮಿಗಳವರ ಸಲಹೆಯಂತೆ ನಿರ್ಮಿಸಲಾಯಿತು. ಗದುಗಿನ ಮಧ್ಯವರ್ತಿ ಸ್ಥಳದಲ್ಲಿದ್ದ ವೀರೇಶ್ವರ ಪುಣ್ಯಾಶ್ರಮವನ್ನು ಪಂಚಾಕ್ಷರ ಗವಾಯಿಗಳವರ ಐಕ್ಯಸ್ಥಳಕ್ಕೆ ಸ್ಥಳಾಂತರಿಸಲಾಯಿತು.

        ವೀರೇಶ್ವರ ಪುಣ್ಯಾಶ್ರಮದ ಬೆಳವಣಿಗಾಗಿ ಅನೇಕ ದಾನಿಗಳು, ಉದಾರವಾಗಿ ಸಹಾಯ ಮಾಡಿದ್ದಾರೆ. ಶ್ರೀ ಸಿದ್ದರಾಮಪ್ಪನವರು ಮಾನ್ವಿ, ಶ್ರೀ ವೆಂಕಣ್ಣ ರಾಮಚಂದ್ರ ಕುಷ್ಟಗಿ, ಶ್ರೀ ಬಿ.ಬಿ.ತೇಗೂರು, ಡಾ.ಡಿ.ಎಂ.ಮುಲ್ಕಿ ಶ್ರೀಮತಿ ವೀರಮ್ಮನವರು ಮಾನ್ವಿ, ಕರಿಬಸಪ್ಪ ಮತ್ತು ಅವರ ಧರ್ಮಪತ್ನಿ ಸುಮಂಗಳಮ್ಮ ನೂರಂದಪ್ಪ ಚವಡಿ, ಅಡಿವೆಪ್ಪನವರು ಮುಧೋಳ, ಡಾ.ರಾಜಕುಮಾರ, ಅಬ್ಬಿಗೇರಿ, ಬಸಪ್ಪನವರು, ಲಿಂಗಯ್ಯ ಶಿಗ್ಲಿಮಠ ದುಂಡಪ್ಪ, ಶಿವಪ್ಪ ಮಾನ್ವಿ, ವಿರುಪಾಕ್ಷಪ್ಪ ಚವಡಿ, ವೀರಬಸಪ್ಪ ಚವಡಿ, ಶಿವಣ್ಣ ಗಾಣಿಗೇರಿ, ನಿಂಗರಡ್ಡೆಪ್ಪ ಮುರೋಳ, ಹೊನ್ನಿಗನೂರು, ರೋಣ, ಶ್ರೀಧರಗಡ್ಡೆ, ಬೆಳವಣಿಕೆಯ ಸದ್ಭಕ್ತರು ಸರ್ವ ಶ್ರೀ ಹೆಚ್.ಜಿ.ರಾಮಲು, ತಮ್ಮನಗೌಡ ಬಳ್ಳಾರಿ, ಪಂಚಾಕ್ಷರಪ್ಪ ಎರಿಗಚ್ಚಿನ, ಚನ್ನವೀರಪ್ಪನವರು ಪಟ್ಟಣಶೆಟ್ಟಿ, ವೀರಪ್ಪ ಅಂಗಡಿ, ಸಂಗಪ್ಪ ಚವಡಿ, ಪೂಜ್ಯಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ, ಹುಬ್ಬಳ್ಳಿ ಈ ಎಲ್ಲ ಮಹಾನೀಯರು ವೀರೇಶ್ವರ ಪುಣ್ಯಾಶ್ರಮದ ಮೊದಲ ಹಂತದ ಅಭಿವೃದ್ಧಿಗಾಗಿ ಅಪಾರವಾದ ಧನ ಸಹಾಯವನ್ನು ನೀಡಿದರು.

        ಡಾ.ಆರ್.ಟಿ.ಕುಲಕರ್ಣಿ, ಡಾ.ಎಂ.ಎಂ.ಮುಳಗುಂದ, ಡಾ.ಬಿ.ಎಂ.ಆಲೂರ ಇವರ ಪ್ರಯತ್ನ ಹಾಗೂ ಪರಿಶ್ರಮದ ಫಲವಾಗಿ ಅಮೇರಿಕಾದ ನ್ಯೂಜರ್ಸಿ ಫಾರಮಸಿ ರೋಟರಿ ಕ್ಲಬ್ ಸಂಸ್ಥೆ ಹಾಗೂ ರೋಟರಿ ಫೌಂಡೇಷನ್ ಸಂಸ್ಥೆಗಳು 65,000 ಡಾಲರ್ ಗಳನ್ನು ವೀರೇಶ್ವರ ಪುಣ್ಯಾಶ್ರಮವನ್ನು ಅಭಿವೃದ್ಧಿಪಡಿಸಲು ಸಹಾಯಾರ್ಥವಾಗಿ ನೀಡಿದ ಫಲವಾಗಿ ಬೃಹತ್ ಮೊತ್ತದ ಸುಂದರ ಕಟ್ಟಡವು ನಿರ್ಮಾಣಗೊಂಡು ಆಶ್ರಮದ ಸೌಂದರ್ಯವನ್ನು ಅಧಿಕಗೊಳಿಸಿದೆ.

        ಕ್ರಿ.ಶ.1945 ರಲ್ಲಿ ಬಟ್ಟ ಬಯಲಾಗಿದ್ದ ಸ್ಥಳವಿಂದು ದೇಶದ ಮಹಾನ್ ಸಾಂಸ್ಕ್ರತಿಕ ಸಂಸ್ಥೆಯಾಗಿ ಬೆಳೆದಿದೆ. ವೀರೇಶ್ವರ ಪುಣ್ಯಾಶ್ರಮವನ್ನು ಬೆಳೆಸುವಲ್ಲಿ ಪುಟ್ಟರಾಜ ಗವಾಯಿಗಳು ಆಸಕ್ತಿವಹಿಸಿ ಅನೇಕ  ರೀತಿಯಲ್ಲಿ ಶ್ರಮಪಟ್ಟು ಕಾರ್ಯಗೈದಿದ್ದಾರೆ. ಭಕ್ತರಿಂದ, ದಾನಿಗಳಿಂದ, ನಾಡವರಿಂದ ಕಾಣಿಕೆಯಾಗಿ ಬರುವ ಹಣವನ್ನು ವೀರೇಶ್ವರ ಪುಣ್ಯಾಶ್ರಮದ ಶ್ರೇಯೋಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತದೆ. ಆಶ್ರಮದಲ್ಲಿಂದು ಐದನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿಯೊಂದಿಗೆ ಪ್ರಸಾದವನ್ನು ಸ್ವೀಕರಿಸಿ ಸಂಗೀತ ಅಭ್ಯಾಸವನ್ನು ಪೂರೈಸಿಕೊಳ್ಳುವರು. ಆಶ್ರಮದಲ್ಲಿ ಬೆಲೆಬಾಳುವ ಸಂಗೀತದ ವಾದ್ಯಗಳು, ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣ, ಸೂಕ್ತವಾದ ಗ್ರಂಥಾಲಯ, ಬೋಜನಾಲಯ, ಉತ್ತಮ ಸ್ಥಿತಿಯಲ್ಲಿದ್ದು ವಿದ್ಯಾರ್ಥಿಗಳ, ಅಂಧ-ಅನಾಥ ಮಕ್ಕಳ ಅಧ್ಯಯನಕ್ಕೆ ಅನುಕೂಲಕರವಾಗಿದೆ. ಪುಣ್ಯಾಶ್ರಮದ ಸ್ಥಾಪನೆಯಲ್ಲಿ ಡಾ.ಪುಟ್ಟರಾಜ ಗವಾಯಿಗಳವರದು ಅತ್ಯಂತ ಪ್ರಮುಖವಾದ ಪಾತ್ರವಿದೆ. ಬಹುಜನರಿಗೆ ವೀರೇಶ್ವರ ಪುಣ್ಯಾಶ್ರಮದ ಮಹತ್ವವೇ ತಿಳಿದಿರಲಿಲ್ಲ. ಆಶ್ರಮವನ್ನು ಸಂಗೀತಾತ್ಮಕವಾಗಿ ಸಾಂಸ್ಕ್ರತಿಕ ಸಂಸ್ಥೆಯಾಗಿ ಬೆಳೆಸುವಲ್ಲಿ ಪುಟ್ಟರಾಜರು ಪಟ್ಟ ಪರಿಶ್ರಮ ಕರ್ಮಯೋಗಿಯೊಬ್ಬನ ಕಾಯಕ ವೃತ್ತಾಂತವೇ ಆಗಿದೆ. ಡಾ.ಪುಟ್ಟರಾಜ ಗವಾಯಿಗಳು ಪುಣ್ಯಾಶ್ರಮದ ರೂವಾರಿಗಳಷ್ಟೇ ಅಲ್ಲ ಆಶ್ರಮವನ್ನು ಅಂತರಾಷ್ಟ್ರೀಯ ಸಾಂಸ್ಕ್ರತಿಕ ಮಹಾ ಸಂಸ್ಥೆಯನ್ನಾಗಿ ನಿರ್ಮಿಸಿದ ಇತಿಹಾಸ ಪುರುಷರಾಗಿದ್ದಾರೆ. ವೀರೇಶ್ವರ ಪುಣ್ಯಾಶ್ರಮವು ಕರ್ನಾಟಕದ ಸಂಸ್ಕ್ರತಿಯನ್ನು ಪ್ರಸಾರಗೊಳಿಸುವ ಪ್ರಮುಖ ಸಂಸ್ಥೆಯಾಗುವಂತೆ ಬೆಳೆಸಿದ ಕೀರ್ತಿ ಡಾ.ಪುಟ್ಟರಾಜ ಗವಾಯಿಗಳವರಿಗೆ ಸಲ್ಲುತ್ತದೆ.

News & Events