ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಕೊಡುಗೆ

        ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಕಲ್ಪದ ಭವ್ಯ ಮಹತ್ ಸಾಧನೆ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆ. 1944-45ರ ಅವಧಿಯಲ್ಲಿ ಒಂದು ಕಿರಿದಾದ ಮಂಟಪ ರೂಪದಲ್ಲಿ ಮೊಳಕೆಯೆತ್ತ ವೀರೇಶ್ವರ ಪುಣ್ಯಾಶ್ರಮ ಇಂದು ಕನ್ನಡ ನಾಡಿನಲ್ಲಿಯೇ ಅತ್ಯಂತ ಪ್ರತಿಷ್ಠಿತ ಸಂಗೀತ ಕಲಾ ಸಂಸ್ಥೆಯಾಗಿ ಬೆಳೆದಿದೆ. ಬೆಳೆಯುತ್ತ ಸಾಗಿದೆ. ಪಂಚಾಕ್ಷರ ಗವಾಯಿಗಳವರು ತಮ್ಮ ನಂತರ ಕ್ರಿ.ಶ.1944 ರಲ್ಲಿ ಆಶ್ರಮದ ಜವಾಬ್ದಾರಿಯನ್ನು ಪುಟ್ಟರಾಜ ಗವಾಯಿಗಳವರಿಗೆ ವಹಿಸಿಕೊಟ್ಟರು. ಡಾ.ಪುಟ್ಟರಾಜ ಗವಾಯಿಗಳವರು ತಮ್ಮ ಜೀವನದ ಸರ್ವಸ್ವವನ್ನು ವೀರೇಶ್ವರ ಪುಣ್ಯಾಶ್ರಮದ ನಿರ್ಮಾಣ ಮತ್ತು ಅದರ ಬೆಳವಣಿಗೆಗಾಗಿ ಮುಡುಪಾಗಿಟ್ಟಿದ್ದಾರೆ. ತೊಂಭತ್ತು ವರ್ಷದ ತುಂಬು ಜೀವನದಲ್ಲೂ ಉತ್ಸಾಹದೊಂದಿಗೆ 58 ವರ್ಷ ಗಳಿಂದಲೂ ಪುಣ್ಯಾಶ್ರಮವನ್ನು ಕಟ್ಟುವಲ್ಲಿ ತೊಡಗಿದ್ದು ಅದರೊಂದಿಗೆ ತಾವು ಎಂಟು ಮಕ್ಕಳಿಂದ ಮೊದಲುಗೊಂಡು ಪ್ರಾಯದ ವಯಸ್ಸಿನವರೆಗಿನವರನ್ನು ಅಭ್ಯಾಸಕ್ಕಾಗಿ ಪ್ರವೇಶ ನೀಡುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ, ಸಾಹಿತ್ಯ, ನಾಟಕ, ಕೀರ್ತನೆಗಳಂಥ ಲಲಿತ ಕಲೆಗಳನ್ನು ಅಧ್ಯಯನ ಮಾಡಿಸುವದರಿಂದ ಪ್ರತಿಭಾವಂತ ಕಲಾವಿದರು ತಯಾರಾಗುತ್ತಾರೆ. ವೀರೇಶ್ವರ ಪುಣ್ಯಾಶ್ರಮವು ಮಹಾನ್ ಕಲಾವಿದರನ್ನು ನಿರ್ಮಿಸುವ ಕಾರ್ಯಾಗಾರವಾಗಿದೆ. ವೀರೇಶ್ವರ ಪುಣ್ಯಾಶ್ರಮ ಒಂದು ಸಂಗೀತ ವಿಶ್ವವಿದ್ಯಾಲಯಕ್ಕಿಂತಲೂ ಹೆಚ್ಚು ಯಶಶ್ಸು ಸಾಧಿಸಿದೆ.

        ನಾಡಿನ ಹಿರಿಯ ಗಾಯನ ಕಲಾವಿದರಾದ ಬಸವರಾಜ ರಾಜಗುರು, ಸಿದ್ದರಾಮ ಜಂಬಲದಿನ್ನಿ. ಪಂಡಿತ ಶೇಷಾದ್ರಿ ಗವಾಯಿ, ಅರ್ಜುನಸಾ ನಾಕೋಡ, ಗುರುಸ್ವಾಮಿ ಕಲಕೇರಿ, ಬಿಂದು ಮಾಧವ ಪಾಠಕ, ಪಂಚಾಕ್ಷರಸ್ವಾಮಿ ಮತ್ತೀಕಟ್ಟಿ, ಸೋಮನಾಥ ಮರಡೂರು, ಎಂ.ವೆಂಕಟೇಶ ಕುಮಾರ, ಡಿ.ಕುಮಾರದಾಸ, ಶ್ರೀ ಸಿದ್ದರಾಮಸ್ವಾಮಿ ಕೋರವಾರ ಗಾಯನ ಕ್ಷೇತ್ರದಲ್ಲಿ ಅತ್ಯಂತ ಹಿರಿಯ ಸಾಧನೆಯನ್ನು ಸಾಧಿಸಿದವರು. ವಿವಿಧ ವಾದ್ಯಗಳ ವಾದನ ಕಲೆಯಲ್ಲಿ ಪಂ.ಶೇಷಾದ್ರಿ ಗವಾಯಿ, ಹನುಮಂತಾಚಾರ್ಯ, ರೇವಣಪ್ಪ, ಕುಂ ಕುಮಗಾರ, ಶಿವಪ್ಪ ಕುಕನೂರ, ವೀರನಗೌಡ ಕಂಪ್ಲಿ, ಯಲ್ಲಪ್ಪ ಅಮರಗೋಳ, ಶ್ರೀ ಸಂಗಮೇಶ್ವರ ಪಾಟೀಲ, ಸೋಮಶೇಖರ ಸ್ವಾಮಿ ಲೋಣಾರಮಠಾ, ಲಿಂಗರಾಜ ಗವಾಯಿ ಕುಂದಗೋಳ, ನಾಡಿನಲ್ಲಿ ಜರಗುವ ಯಾವುದೇ ಧರ್ಮದ ಕಾರ್ಯಕ್ರಮಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಕಲಾವಿದರೊಬ್ಬರು ಅದರಲ್ಲಿ ತೊಡಗಿಕೊಂಡಿರುತ್ತಾರೆ. ವೀರೇಶ್ವರ ಪುಣ್ಯಾಶ್ರಮದ ಪ್ರತಿ ವಾರ್ಷಿಕೋತ್ಸವವು ಜೇಷ್ಠ ಮಾಸ ಬಹುಳ ಷಷ್ಠಮಿ ತಿಥಿಯಂದು ಸಂಗೀತ ರಾಗಗಳ ಝೇಂಕಾರದಿಂದ ಗಗನ ತುಂಬೆಲ್ಲಾ ನಿನಾದಗೊಳುತ್ತದೆ.

        ವೀರೇಶ್ವರ ಪುಣ್ಯಾಶ್ರಮ ಕೀರ್ತನಕಾರರಲ್ಲಿ ಟಿ.ಎಂ.ಚಂದ್ರಶೇಖರ ಶಾಸ್ತ್ರಿ, ಬಾಲಚಂದ್ರ ಶಾಸ್ತ್ರಿಗಳು ಹಿರೇಮಣ್ಣೂರ, ಟಿ.ಭಾರತೀಶ, ಶಿವಯೋಗಿ ಶಾಸ್ತ್ರಿ ದೇವಗಿರಿ, ಸಿದ್ದೇಶ್ವರ ಶಾಸ್ತ್ರಿ ತಲ್ದೂರ, ಕಲ್ಲಿನಾಥ ಶಾಸ್ತ್ರಿ ಅಡ್ನೂರ, ಕುಮಾರಿ ಸತ್ಯಭಾಮಾ ಹಳ್ಳಿಕೇರಿ ಪ್ರಮುಖ ಕೀರ್ತನಕಾರರಾಗಿ ನಾಡಿನ ತುಂಬೆಲ್ಲಾ ಸಂಚರಿಸುತ್ತಾ ಕೀರ್ತನ ಕಲೆಯನ್ನು ಮುಂದುವರಿಸಿ ಕೊಂಡು ಸಾಗುತ್ತಿದ್ದಾರೆ.

        ವೀರೇಶ್ವರ ಪುಣ್ಯಾಶ್ರಮವು ತಲೆಮಾರಿನಿಂದ ತಲೆಮಾರಿಗೆ ಶತಮಾನದಿಂದ ಶತಮಾನಕ್ಕೆ ಶಾಶ್ವತವಾಗಿ ಬೆಳೆಯಬಲ್ಲ ಕೊಡುಗೆಯನ್ನು ನೀಡುವ ಪ್ರೇರಾಣಾಶಕ್ತಿ ಕೇಂದ್ರವಾಗಿದೆ. ಅಂಧರ ಬಾಳಿನಲ್ಲಿ ಹೊಸಬೆಳಕನ್ನು ನೀಡಿ ಅವರು ಬದುಕಿನಲ್ಲಿ ಸಂತೃಪ್ತಿ ಜೀವನವನ್ನ್ನು ಮುಂದುವರೆಸುವಂತೆ ಆತ್ಮ ವಿಶ್ಚವಾಸವನ್ನು ಮೂಡಿಸುವ ಸಂಸ್ಥೆಯಾಗಿದೆ. ಸಂಗೀತದಲ್ಲಿ ಆಸಕ್ತಿಯುಳ್ಳ ಯಾವುದೆ ಜನಾಂಗ, ಜಾತಿ, ವರ್ಗವನ್ನು ಪರಿಗಣಿಸದೆ ವಿಫುಲ ಅವಕಾಶವನ್ನು ನೀಡುವ ಸಂಗೀತ ಶಿಕ್ಷಣದ ಮಹಾವೃಕ್ಷವಾಗಿ ದಿನದಿಂದ ದಿನಕ್ಕೆ ನಿರ್ಮಿಸಿಕೊಡುವ ಕಮ್ಮಟವಾದ ವೀರೇಶ್ವರ ಪುಣ್ಯಾಶ್ರಮ ಕನ್ನಡ ನಾಡು ಕಂಡ ಅಪರೂಪದ ಸಾಂಸ್ಕ್ರತಿಕ ಸಂಸ್ಥೆಯಾಗಿದೆ. ಕರ್ನಾಟಕ ಹಿಂದೂಸ್ಥಾನ ಸಂಗೀತದಲ್ಲಿ ಅದ್ವಿತೀಯ ಸಾಧಕರನ್ನು ವೀರೇಶ್ವರ ಪುಣ್ಯಾಶ್ರಮವು ಬಳುವಳಿಯಾಗಿ ನೀಡುತ್ತಲೇ ಇದೆ. ಈ ಸಂಸ್ಥೆ ಭಾರತ ದೇಶದಲ್ಲಿಯೇ ಒಂದು ವಿಶಿಷ್ಟ ಪ್ರಕಾರದ ಸಂಸ್ಥೆಯಾಗಿದೆ. ಪ್ರಧಾನವಾಗಿ ಸಂಗೀತ ಸಂಸ್ಥೆಯಾಗಿರುವ ಶ್ರೀವೀರೇಶ್ವರ ಪುಣ್ಯಾಶ್ರಮವು ಮುಕ್ತ ಸಮಾಜ ಸೇವೆಯನ್ನು ತನ್ನ ಅಂತಸತ್ವವನ್ನಾಗಿಸಕೊಂಡಿದೆ. ಅದರೊಂದಿಗೆ ಆಧ್ಯಾತ್ಮ ಮಾಹಿತಿಯ, ಭಕ್ತಿ ಜ್ಞಾನಗಳ ದಿವ್ಯ ತಾಣವೂ ಆಗಿ ಪೂಜೆಗೊಳ್ಳುತ್ತದೆ. ಡಾ.ಪುಟ್ಟರಾಜ ಗವಾಯಿಗಳವರ ಭಕ್ತಾದಿಗಳು, ಅಭಿಮಾನಿಗಳು, ಪೋಷಕರು ನೀಡುವ ಪೋಷಣೆ, ಆಶ್ರಯವನ್ನು ಆಧರಿಸಿ ಬೆಳೆಯುತ್ತಿರುವ ಪುಣ್ಯಾಶ್ರಮವು ಸರಕಾರದ ಸಹಾಯವನ್ನು ಆಪೇಕ್ಷಿಸಿಲ್ಲ, ಭಕ್ತ ಭಾವನೆಯ ಭಾಗ್ಯವೇ ಆಸ್ತಿಯೆಂದು ಅವರ ಮುಕ್ತ ಮನಸ್ಸಿನ ಭಕ್ತಿ ಕಾಣಿಕೆಯೇ ಆಶ್ರಮದ ಶಕ್ತಿಯಾಗಿದೆ. ಪುಣ್ಯಾಶ್ರಮದ ಊಟ ವಸತಿ ಗೃಹದಲ್ಲಿ ಆಶ್ರಯ ಪಡೆದು, ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಐದುನೂರಕ್ಕೂ ಹೆಚ್ಚಿದೆ. ಅಂಧರು ಸೇರಿದಂತೆ ಅನಾಥ ಮಕ್ಕಳು ಬಡಮಕ್ಕಳು ಈ ಆಶ್ರಮದ ಪ್ರಯೋಜನ ಪಡೆದು ಪ್ರತಿಭಾವಂತರಾಗಿ ಪ್ರವೃದ್ಧಮಾನರಾಗಿ ಕನ್ನಡ ನಾಡಿನ ತುಂಬೆಲ್ಲ ಬಳ್ಳಿಯಂತೆ ಹಬ್ಬಿದ್ದಾರೆ. ತಾವು ಪಂಚಾಕ್ಷರ ಗವಾಯಿಗಳವರ ಹಾಗೂ ಡಾ. ಪುಟ್ಟರಾಜ ಗವಾಯಿಗಳವರ ಮಾನಸ ಪುತ್ರರೆಂದು ಹೆಮ್ಮೆಯಿಂದ ಹೇಳುತ್ತಾರೆ. ವೀರೇಶ್ವರ ಪುಣ್ಯಾಶ್ರಮದಲ್ಲಿ ‘ಇವನಾರವ ಇವನಾರವ’ ಎಂಬ ಭಾವೈಕ್ಯತೆ ಮೂಡಿ ‘ಸರ್ವೇಜನಾಃ ಸುಖಿನೋಭವಂತು’ ಎಂಬ ಮಾನವ ಸಂದೇಶವು ಮೂರ್ತರೂಪವನ್ನು ಪಡೆದುಕೊಂಡಿದೆ.

        ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಪುಣ್ಯಾಶ್ರಮದ ಕೊಡುಗೆ ಗಣನೀಯವಾದುದು. ಪ್ರತಿಭಾ ಸಂಪನ್ನ ಸಂಗೀತಗಾರರನ್ನು ಸಂಗೀತಜ್ಞರನ್ನು, ಸಂಗೀತ ಶಿಕ್ಷಕರನ್ನು, ಕೀರ್ತನಕಾರರನ್ನು ನಿರಂತರವಾಗಿ ರೂಪಿಸುತ್ತಲೇ ಇರುವ ವೀರೇಶ್ವರ ಪುಣ್ಯಾಶ್ರಮ ಭಾರತೀಯ ಸಂಸ್ಕ್ರತಿಯ ಪೋಷಕ ಶಕ್ತಿ ಕೇಂದ್ರವಾಗಿದೆ. ಪುಣ್ಯಾಶ್ರಮದಲ್ಲಿ ತರಬೇತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ.

        ಜಾತಿ, ಮತ, ಪಂಥಗಳನ್ನು ಪರಿಗಣಿಸದೆ ಸಮಾಜದ ಎಲ್ಲಾ ವರ್ಗಗಳ ಅಂಧ ಮಕ್ಕಳಿಗೆ, ಬಡ ಅನಾಥ ಮಕ್ಕಳಿಗೆ ಉಚಿತ ಪ್ರವೇಶ ನೀಡುವ ಪುಣ್ಯಾಶ್ರಮವು ಅಪ್ಪಟ ಜಾತ್ಯತೀತ ಸಂಸ್ಥೆ, ಭೇದ ಭಾವಗಳ ಪರಿವೇ ಇಲ್ಲದಂತೆ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ತಾವು ವಿರೇಶ್ವರ ಪುಣ್ಯಾಶ್ರಮದ ಬಂಧುಗಳು, ಗವಾಯಿಗಳವರ ಶಿಷ್ಯರು ಎಂಬ ಸ್ನೇಹ ಭಾವದಿಂದ, ಸಾಮರಸ್ಯ ಭಾವದಿಂದ ಜೀವಿಸುತ್ತಿರುವದರಿಂದ, ಪುಣ್ಯಾಶ್ರಮದ ಪರಿಸರವು ಮತೀಯ  ಸಾಮರಸ್ಯ ಹಾಗೂ ಸಾರ್ವತ್ರಿಕ ಭಾತೃತ್ವದ ಆದರ್ಶ ಮಾದರಿಯನ್ನು ನಾಡಿಗೆ ನಿತ್ಯವು ಸಾರುತ್ತಲೇ ಸಾಗುತ್ತದೆ.

        ವೀರೇಶ್ವರ ಪುಣ್ಯಾಶ್ರಮವು ನಾಡಿಗೆ ನೀಡಿದ ಸಂಗೀತ, ನಾಟ್ಯಕಲೆ ಮತ್ತು ಸಾಮಾಜಿಕ ಕೊಡುಗೆ ಹಾಗೂ ಸೇವೆಯನ್ನು ಗುರುತಿಸಿ ಕರ್ನಾಟಕ ಘನ ಸರಕಾರವು 2001 ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ಕರ್ನಾಟಕ ಮತ್ತು ಲಲಿತಕಲಾ ಅಕಾಡೆಮಿಯಿಂದ ಪ್ರಧಾನ ಮಾಡಿದೆ. ಪ್ರಶಸ್ತಿಯನ್ನು ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಹಿಡ್ಕಿಮಠ ಸ್ವೀಕರಿಸಿದ್ದಾರೆ.

News & Events