ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಹಿನ್ನೆಲೆ

ಮಾನವ ಸಮಾಜದಲ್ಲಿಯ ವ್ಯಕ್ತಿಗಳ ಸಂಘಟನಾ ಶಕ್ತಿಯ ಮೂರ್ತ ಸ್ವರೂಪವೇ ಸಂಸ್ಥೆಯಾಗಿ ನಿರ್ಮಾಣವಾಗುತ್ತದೆ. ಸಂಘ-ಸಂಸ್ಥೆಗಳು ತಮ್ಮ ನಿರಂತರ ಕ್ರಿಯಾಶೀಲತೆಯೊಂದಿಗೆ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತವೆ. ಇಂಥ ಜಂಗಮಶೀಲ ಸಂಸ್ಥೆಗಳು ನಿರ್ಮಾಣವಾಗಬೇಕಾದರೆ ಅದಕ್ಕೊಬ್ಬ ಸಮರ್ಥಶೀಲ ವ್ಯಕ್ತಿತ್ವದ ಮುಖಂಡನ ಅವಶ್ಯಕತೆಬೇಕು. ಅದಕ್ಕೊಂದು ನಿಶ್ಚಿತವಾದ ತನ್ನದೆ ಆದ ಉದ್ದೇಶವು ಬೇಕು. ಸಂಸ್ಥೆಯ ಸ್ಥಾಪನೆಯಷ್ಟೆ ಅಲ್ಲದೆ ಅದರ ಮುಂದುವರೆಕೆಯೂ ಮಹತ್ವದ ಅಂಶವಾಗಿರುತ್ತದೆ. ಹಾನಗಲ್ಲ ಕುಮಾರ ಸ್ವಾಮಿಗಳು ಶ್ರೇಷ್ಠ ಸಂಘಟನಾಶೀಲರೂ, ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡವರಾಗಿದ್ದರಿಂದ ಅವರಿಂದ ಅನೇಕ ಸಂಘ-ಸಂಸ್ಥೆಗಳು ಸೃಷ್ಠಿಯಾದವು. ಅವರ ಶಿಷ್ಯರಾದ ಪಂಚಾಕ್ಷರ ಗವಾಯಿಗಳವರ ಹಾಗೂ ಪುಟ್ಟರಾಜ ಗವಾಯಿಗಳವರ ಕರ್ತೃತ್ವ ಶಕ್ತಿಯ ಸಾಂಸ್ಥಿಕ ರೂಪವೇ ವೀರೇಶ್ವರ ಪುಣ್ಯಾಶ್ರಮ. ಕನ್ನಡ ನಾಡಿನ ಯುಗಪುರುಷರಾದ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಕ್ರಿಯಾಶಕ್ತಿಯ ಫಲದಿಂದ ಸಂಗೀತ ಲೋಕದ ಮಹಾಸಾಧಕನೊಬ್ಬನನ್ನು ಕನ್ನಡನಾಡು ಪಡೆಯುವಂತಾಯಿತು. ಹಾನಗಲ್ಲ ಕುಮಾರ ಸ್ವಾಮಿಗಳು ಕಾಡಶೆಟ್ಟಿ ಹಳ್ಳಿಯ ಹಕ್ಕಲಬಸವೇಶ್ವರ ಜಾತ್ರೆಯ ಸಂದರ್ಭದಲ್ಲಿ ಆ ಊರ ಅಂಧ ಬಾಲಕರಾದ ಗದಿಗಯ್ಯ ಮತ್ತು ಗುರುಬಸವರ ಮಧುರ ಕಂಠದಿಂದ ಹೊರಹೊಮ್ಮಿದ ಹಾಡಿನಲ್ಲಿ ಸಂಗೀತ ಲೋಕವನ್ನೇ ಬೆಳಗುವ ಮಹಾಶಕ್ತಿಯನ್ನು ಗುರುತಿಸಿ, ತಮ್ಮಲ್ಲಿಗೆ ಕರೆದೊಯ್ದರು. ಮಾತೃವಾತ್ಸಲ್ಯದ ಕಾರುಣ್ಯವನ್ನೆರೆದು, ಸಂಗೀತ ಲೋಕದ ಮಹಾನ್ ಕಲಾವಿದರಾದ ನೀಲಕಂಠ ಬುವಾ ಮಿರಜಕರ; ಗದಿಗೆಪ್ಪ ಗವಾಯಿಗಳು ಶಿರಾಳಕೊಪ್ಪ, ಮೊದಲಾದವರಿಂದ ಸಂಗೀತ ಶಿಕ್ಷಣವನ್ನು ಕಲಿಸಿ, ಭಾರತೀಯ ಸಂಗೀತ ಲೋಕದ ಮಹಾದೃಷ್ಠಾರರೊಬ್ಬರನ್ನು ರೂಪಿಸಿದರು. ಆ ಮಹಾಶಕ್ತಿಯೇ ವ್ಯಕ್ತಿರೂಪದ ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳು.

        ಶಿವಯೋಗ ಮಂದಿರದಲ್ಲಿ ಕುಮಾರ ಸ್ವಾಮಿಗಳ ಪ್ರೋತ್ಸಾಹ ಮಾರ್ಗದರ್ಶನದಲ್ಲಿ ಪಂಚಾಕ್ಷರ ಗವಾಯಿಗಳವರು ಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಎಂಟು-ಹತ್ತು ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಶಾಲೆಯು ಪಂಚಾಕ್ಷರ ಗವಾಯಿಗಳ ಪರಿಶ್ರಮ ಹಾಗೂ ಪ್ರಾಮಾಣಿಕ ಗುರುಸೇವೆಯ ಫಲವಾಗಿ ದಿನದಿಂದ-ದಿನಕ್ಕೆ ಬೆಳಗುತ್ತಾ-ಬೆಳೆಯ ತೊಡಗಿತು. ಶಿವಯೋಗ ಮಂದಿರದ ಸಂಗೀತಪಾಠ ಶಾಲೆಯ ಬಳ್ಳಿಯಿಂದ ಹೊರಹೊಮ್ಮಿದ ಮಧುರ ಕಂಪಿಗೆ ನಾಡಿನ ಬೇರೆ ಬೇರೆ ಭಾಗಗಳಿಂದ ಶಿವಯೋಗ ಮಂದಿರ ಸಂಗೀತ ಪಾಠ ಶಾಲೆಗೆ ಆಗಮಿಸುವ ಸಂಗೀತ ಅಧ್ಯಯನದ ಸಾಧಕರ ಸಂಖ್ಯೆಯು ದ್ವಿಗುಣಗೊಳ್ಳತೊಡಗಿತು. ಪಂಚಾಕ್ಷರ ಗವಾಯಿಗಳು ವಿದ್ಯಾದಾನವೇ ಪವಿತ್ರ ಕಾಯಕವೆಂದರಿತವರು. ತಮ್ಮಲ್ಲಿಗೆ ವಿದ್ಯೆಯನ್ನರಿಸಿ ಬರುವ ವಿದ್ಯಾರ್ಥಿಗಳಿಗೆ ಸಂಗೀತವನ್ನು ಹೇಳತೊಡಗಿದರು. ಸಂಗೀತ ಪಾಠ ಶಾಲೆಗೆ ಬಂದು ಸೇರುವ ವಿದ್ಯಾರ್ಥಿಗಳ ಸಂಖ್ಯೆ ದಿನೇ-ದಿನೇ ಬೆಳಯತೊಡಗಿತು. ಇದರಿಂದ ಶಿವಯೋಗ ಮಂದಿರದ ವ್ಯವಸ್ಥಾಪಕ ಮಂಡಳಿಯವರಿಗೆ ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠ ಶಾಲೆಯನ್ನು ನಿರ್ವಹಿಸುವದು ನಿಷ್ಟ್ರಯೋಜನವೆನಿಸಿತು. ವ್ಯವಸ್ಥಾಪಕ ಮಂಡಳಿಯಲ್ಲಿ ಪಂಚಾಕ್ಷರ ಗವಾಯಿಗಳವರ ಶ್ರೇಯೋಭಿವೃದ್ಧಿಯನ್ನು ಅವರ ಘನತೆ, ಪ್ರತಿಷ್ಠಿತೆಗಳನ್ನು ಸಹಿಸಲಾರದವರು ಹಲವರಿದ್ದರು. ಆದುದರಿಂದ ‘ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠ ಶಾಲೆಯನ್ನು ಶಿವಯೋಗ ಮಂದಿರದಿಂದ ಬೇರೆ ಕಡೆಗೆ ವರ್ಗಾಯಿಸುವ ಏರ್ಪಾಡು ಮಾಡುವುದು ಒಳಿತು’ ಎಂದು ಕುಮಾರ ಮಹಾಸ್ವಾಮಿಗಳಿಗೆ ಪ್ರಸ್ತಾಪ ಮಾಡಿದರು.

        ಬಾಲಕನಾಗಿದ್ದಾಗಲೇ ಕರೆತಂದು ಜೋಪಾನಮಾಡಿ ವಿದ್ಯಾವಂತನನ್ನಾಗಿ ಸಂಗೀತ ಸಾಧಕನ್ನಾಗಿ ಮಾಡಿದ ಪಂಚಾಕ್ಷರ ಗವಾಯಿಗಳವರನ್ನು ತಮ್ಮಿಂದ ಬಿಟ್ಟುಕೊಡಲು ಮನಸ್ಸು ಇಲ್ಲದ ಕುಮಾರಸ್ವಾಮಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅನಿವಾರ್ಯವಾಗಿ ಗವಾಯಿಗಳವನ್ನು, ಅವರ ಶಿಷ್ಯರನ್ನು ಬೇರೆ ಕಡೆಗೆ ಕಳುಹಿಸಲು ನಿರ್ಧರಿಸಿದರು. ವ್ಯವಸ್ಥಾಪಕ ಮಂಡಳಿಯು ತೆಗೆದುಕೊಂಡ ನಿರ್ಧಾರವನ್ನು ಸ್ವಾಮಿಗಳು ಪಂಚಾಕ್ಷರ ಗವಾಯಿಗಳಿಗೆ ತಿಳಿಸಿದರು. ಆಕಸ್ಮಿಕವಾಗಿ ಉಂಟಾದ ಮಂಡಳಿಯ ನಿರ್ಧಾರದಿಂದ ಪಂಚಾಕ್ಷರ ಗವಾಯಿಗಳವರಿಗೆ ದಿಕ್ಕು-ದಾರಿ ತೋಚದಂತಾಗಿ ದುಃಖಿಸತೊಡಗಿದರು. ದುಃಖ ತಪ್ತ ಶಿಷ್ಯರನ್ನು ಅಪ್ಪಿಕೊಂಡು ಕುಮಾರ ಸ್ವಾಮಿಗಳು ಗವಾಯಿಗಳಲ್ಲಿ ಧೈರ್ಯವನ್ನು ತುಂಬುತ್ತ ‘ಅಳಬೇಡ ಗವಾಯಿ ನೀನು ಎಂದಿಗೂ ಅಳಬಾರದೆಂದು ನಾನು ನಿಗೆ ಸಂಗೀತ ವಿದ್ಯೆಯನ್ನು ಕಲಿಸಿದ್ದು, ನೀನು ಕಲಿತ ವಿದ್ಯೆಯ ಶಕ್ತಿಯನ್ನು ಬೆಳೆಸಿಕೊಂಡು ಸಂಗೀತ ಲೋಕವನ್ನು ವಿಸ್ತರಿಸುವ ಅರಸನಾಗಬೇಕು, ಅಂಧ-ಅನಾಥ ಮಕ್ಕಳ ಕಣ್ಣೀರನ್ನೊರೆಸುವ ನಿನ್ನ ಕೈಗಳು ಅವರನ್ನು ರಕ್ಷಿಸುವ ರಕ್ಷಾಕವಚವಾಗಬೇಕು, ಸಂಗೀತ ಲೋಕದ ಗಾನ ಗಂಧರ್ವನಾಗಿ ಬೆಳಗಬೇಕು, ಸಮಾಜ ಸೇವೆಗೆ ನಿನ್ನನ್ನು ನೀನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲೇಬೇಕು” ಎಂದು ಹೇಳಿ ಮುಂದಿನ ಜೀವನ ಯಾತ್ರೆಗೆ ಸನ್ನದ್ದವಾಗುವಂತೆ ಆಶೀರ್ವದಿಸಿದರು.

        ಶಿವಯೋಗ ಮಂದಿರದಿಂದ ಹೊರಬಂದ ಪಂಚಾಕ್ಷರ ಗವಾಯಿಗಳು ಮತ್ತು ಅವರ ಶಿಷ್ಯ ಬಳಗವು ಧಾರವಾಡ ಜಿಲ್ಲೆಯ (ಇಂದು ಗದಗ ಜಿಲ್ಲೆಗೆ ಸೇರಿದೆ) ರೋಣ ತಾಲ್ಲೂಕಿನ ನಿಡಗುಂದಿಕೊಪ್ಪದಲ್ಲಿ ಕ್ರಿ.ಶ.1914ರಲ್ಲಿ ವೈಶಾಖ ಶುದ್ಧ ಅಕ್ಷಯ ತದಿಗೆ ಬಸವ ಜಯಂತಿಯ ದಿನ ಸಂಗೀತ ಪಾಠ ಶಾಲೆಯನ್ನು ಪಂಚಾಕ್ಷರ ಗವಾಯಿಗಳವರು ತಮ್ಮ ಗುರುಗಳಾದ ಕುಮಾರ ಮಹಾಸ್ವಾಮಿಗಳವರ ಆಶೀರ್ವಾದದಿಂದ ಸ್ಥಾಪಿಸಿದರು. ಈ ಸಂದರ್ಭದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಹದಿನೈದು. ಮೂರು ವರ್ಷಕಾಲ ಕೊಪ್ಪದಲ್ಲಿಯೇ ಸತತವಾಗಿ ಪಾಠ ಶಾಲೆ ನಡೆಯಿತು. ವಿದ್ಯರ್ಥಿಗಳ ಸಂಖ್ಯೆ ಇಪ್ಪತ್ತೈದಕ್ಕೇರಿತು. ಕುಮಾರ ಸ್ವಾಮಿಗಳು ಸಂಗೀತ ಪಾಠ ಶಾಲೆಯ ಜೀವನ ಮಂತ್ರವಾಗಬೇಕು. ಸರ್ವಜಾತಿಯ ಅಂಧ-ಅನಾಥ ಮಕ್ಕಳಿಗೆ ಸಂಗೀತ ಸಾಹಿತ್ಯದ ವಿದ್ಯಾದಾನ ನೀಡಬೇಕು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಗಾಯನ ಕಛೇರಿ ನಡೆಸಿದರೆ ಹಣವನ್ನು ಪಡೆಯಬಾರದು. ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಜನತೆ ಹಣ ಕೊಡಮಾಡಿದಷ್ಟು ತೆಗೆದುಕೊಳ್ಳಬೇಕು. ಹಣಕ್ಕಾಗಿ ಯಾರನ್ನು ಪೀಡಿಸಬಾರದು. ಸಂಗೀತ ಪಾಠಶಾಲೆಯನ್ನು ಸದ್ಭಕ್ತರ ನೆರವಿನಿಂದಲೇ ನಡೆಸಬೇಕು’ ಎಂಬ ಗುರುಗಳ ಮಾತಿನಂತೆ ಪಂಚಾಕ್ಷರ ಗವಾಯಿಗಳು ಪಾಠಶಾಲೆಯನ್ನು ನಡೆಸುತ್ತಿದ್ದರು. ಪಂಚಾಕ್ಷರ ಗವಾಯಿಗಳು ಕುಮಾರ ಸ್ವಾಮಿಗಳ ನಿರ್ದೇಶನದಂತೆ ಸಂಗೀತ ಪಾಠ ಶಾಲೆಯನ್ನು ಆಗಾಗ್ಗೆ ಬೇರೆ ಬೇರೆ ಊರುಗಳಿಗೆ ವರ್ಗಾಯಿಸುತ್ತಿದ್ದರು. ಒಂದು ಊರಲ್ಲಿ ಮೂರು ವರ್ಷಗಳವರೆಗೆ ನಡೆಸಲಾಗುತ್ತಿತ್ತು. ಪಾಠ ಶಾಲೆಯು ನಿಡಗುಂದಿಕೊಪ್ಪದಿಂದ ಬೆಳಗಾವಿ, ಲಿಂಗದಹಳ್ಳಿ ಗಜೇಂದ್ರಗಡ, ಗುಳೇದಗುಡ್ಡ, ಕೋಟೆಕಲ್ಲ ಸ್ಥಳಗಳಲ್ಲಿ ಮೂರು ಮೂರುವರ್ಷಗಳಂತೆ ಸಂಚಾರವನ್ನು ಕೈಗೊಂಡಿತು. ಪಂಚಾಕ್ಷರ ಗವಾಯಿಗಳು ಸಂಚಾರಿ ಪಾಠ ಶಾಲೆಯ ಸ್ಥಳವನ್ನು ಆಗಾಗ ಬದಲಾಯಿಸುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಪ್ರಯಾಣಕ್ಕೆ ಆಗುವ ತೊಂದರೆಯನ್ನು ಗಮನಿಸಿ ತಮ್ಮ ಸಂಚಾರಿ ಪಾಠ ಶಾಲೆಯನ್ನು ಸ್ಥಾಯಿ ಸಂಗೀತ ಪಾಠ ಶಾಲೆ ಹಾಗೂ ಸಂಚಾರಿ ಸಂಗೀತ ಪಾಠ ಶಾಲೆ ಎಂದು ಎರಡು ಭಾಗಮಾಡಿದರು. ಸ್ಥಾಯಿ ಪಾಠಶಾಲೆಯು ಗಜೇಂದ್ರಗಡದಲ್ಲಿ ಕೆಲಕಾಲ ಹಾಗೂ ಕೋಟೆಕಲ್ಲ ಶ್ರೀ ಹುಚ್ಚೇಶ್ವರ ಮಠದಲ್ಲಿ ಕೆಲಕಾಲ ನಡೆಯಿತು. ಪಂಚಾಕ್ಷರ ಗವಾಯಿಗಳವರ ಸಂಚಾರಿ ಮತ್ತು ಸ್ಥಾಯಿ ಪಾಠಶಾಲೆಯಲ್ಲಿ ಸುಮಾರು ಐವತ್ತು-ಅರವತ್ತು ವಿದ್ಯಾರ್ಥಿಗಳಿರುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳಿಗೆ ಊರಿನ ಸದ್ಭಕ್ತರ ಮನೆಯಲ್ಲಿ ಬೆಳಿಗ್ಗೆ ವಾರದ ಮನೆಯ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿತ್ತು. ರಾತ್ರಿಯಲ್ಲಿ ವಿದ್ಯಾರ್ಥಿಗಳು ಕಂತಿ ಭಿಕ್ಷೆಯನ್ನು ಕೈಕೊಳ್ಳುತ್ತಿದ್ದರು. ವಾರದ ಮನೆಯ ಊಟದ ವ್ಯವಸ್ಥೆಯು ಹೊಂದಾಣಿಕೆಯಾಗುತ್ತಿರಲಿಲ್ಲ. ಕೆಲವು ಸಾರಿ ಸಂಚಾರದಿಂದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಂಗೀತ ಸಾಧನೆಗೆ ತೊಂದರೆ ಉಂಟಾಗುತ್ತಿತ್ತು. ಸಂಗೀತ ಪಾಠ ಶಾಲೆಯ ಉಜ್ವಲ ಭವಿಷ್ಯಕ್ಕಾಗಿ ಪಂಚಾಕ್ಷರ ಗವಾಯಿಗಳು ಅಲ್ಲಿ-ಇಲ್ಲಿ ಧನ ಸಂಗ್ರಹಿಸುವ ಬದಲು ಮೈಸೂರಿನ ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರಲ್ಲಿ ಧನ ಸಹಾಯ ಪಡೆದು ಸಂಗೀತ ಪಾಠ ಶಾಲೆಗೆ ಶಾಶ್ವತ ಆದಾಯ ಮಾಡಬೇಕೆಂದು ವಿಚಾರಿಸಿ, ಮೈಸೂರಿಗೆ ಶಿಷ್ಯರೊಂದಿಗೆ ಸಾಗಿ ಹಲವಾರು ಕಾರಣಗಳಿಂದ ಅರಸರಿಂದ ಪ್ರೋತ್ಸಾಹ ಸಹಾಯ ದೊರೆಯುವ ಬದಲು ಪಾಠಶಾಲೆಯು ಆರೇಳು ಸಾವಿರ ರೂ.ಸಾಲವನ್ನು ಹೊತ್ತುಕೊಂಡು ಕ್ರಿ.ಶ.1940 ರಲ್ಲಿ ಮರಳಿ ನರಗುಂದಕ್ಕೆ ಬಂದು ನೆಲೆಸಿತು.

        ನರಗುಂದದ ಜನತೆ ಗವಾಯಿಗಳವನ್ನು ಅತ್ಯಂತ ಆದರ ಹಾಗೂ ಅಭಿಮಾನಗಳಿಂದ ಬರಮಾಡಿಕೊಂಡು ಗವಾಯಿಗಳವರ ಶಿಷ್ಯರಿಗೆ, ಪಾಠಶಾಲೆಗೆ ಬಹು ವಿಧವಾಗಿ ಸಹಾಯ ಮಾಡಿದರು. ಸಂಗೀತ ಪಾಠಶಾಲೆಯಲ್ಲಿ ಈಗಾಗಲೇ ಪ್ರವೇಶಿಸಿದ ಪುಟ್ಟರಾಜ ಗವಾಯಿಗಳು ನರಗುಂದದ ನಾಗರಿಕರ ಸಹಕಾರದೊಂದಿಗೆ ಗುರುಗಳಾದ ಪಂಚಾಕ್ಷರ ಗವಾಯಿಗಳವರಿಂದ ಒಪ್ಪಿಗೆ ಪಡೆದು ನಾಟಕ ಮಂಡಳಿಯೊಂದನ್ನು ಸ್ಥಾಪಿಸುವುದಕ್ಕೆ ಸಲಹೆ ಸೂಚಿಸಿದರು. ನರಗುಂದದ ನಾಗರಿಕರ ಬೇಡಿಕೆ ಹಾಗು ಪುಟ್ಟರಾಜರ ಅಪೇಕ್ಷೆಯಂತೆ 1940ರ ವಿಜಯ ದಶಮಿಯಂದು ‘ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿ’ ಸ್ಥಾಪಿತವಾಯಿತು. ನಾಟ್ಯ ಸಂಘವು ನರಗುಂದ, ರೋಣ, ಮಲ್ಲಾಪುರ, ಬನಶಂಕರಿ, ತಾಳಿಕೋಟೆ, ಮುದ್ದೇಬಿಹಾಳ್, ಕಲಕೇರಿ, ದೇವರಹಿಪ್ಪರಗಿ ಮುಂತಾದ ಊರುಗಳಲ್ಲಿ ಸಂಚರಿಸಿತು. ನಾಟಕ ಮಂಡಳಿಯೊಂದಿಗೆ ಸಂಗೀತ ಪಾಠಶಾಲೆಯೂ ಸಂಚರಿಸುತ್ತಿತ್ತು. ಪಾಠ ಶಾಲೆಯ ವಿದ್ಯಾರ್ಥಿಗಳು ನಾಟಕಗಳಲ್ಲಿ ಪಾತ್ರದಾರಿಗಳಾಗಿ ಅಭಿನಯಸುತ್ತಿದ್ದರು. ನಾಟಕ ಮಂಡಳಿಯು ಅನೇಕ ಏಳು-ಬೀಳುಗಳನ್ನು ಎದುರಿಸುತ್ತಾ 1941-42ರಲ್ಲಿ ಪಂಚಾಕ್ಷರ ಗವಾಯಿಗಳವರು ನಾಟಕ ಮಂಡಳಿಯನ್ನು ಗದುಗಿಗೆ ತೆಗೆದುಕೊಂಡು ಬಂದು ವಾಸ್ತವ್ಯ ಮಾಡಿದರು. ಪಂಚಾಕ್ಷರ ಗವಾಯಿಗಳವರು 1942 ರಲ್ಲಿ ಗದುಗಿನಲ್ಲಿ ನೆಲೆಸಿದ ಕಾಲದಲ್ಲಿ ನಾಡಿನ ತುಂಬೆಲ್ಲ ಭೀಕರವಾದ ಬರಗಾಲ ಉಂಟಾಗಿ, ಜನರ ಜೀವನ ಬಹಳಷ್ಟು ತೊಂದರೆಗೆ ಒಳಗಾಗಿತ್ತು. ಪಂಚಾಕ್ಷರ ಗವಾಯಿಗಳವರ ತ್ರಿಕಾಲ ಪೂಜೆ, ಸಂಗೀತ ಪಾಠ ಬೋಧನೆ ಬಹಳಷ್ಟು ನಾಗರೀಕರನ್ನು ಆಕರ್ಷಿಸಿತು. ಆಗ ಕೆಲವು ಮುಖಂಡರು ಗವಾಯಿಗಳಲ್ಲಿ ಬಂದು ‘ತಾವು ಕೆಲ ಕಾಲವಾದರೂ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳನ್ನು ಅವರವರ ಊರಿಗೆ ಕಳುಹಿಸಿದರೆ ಸೂಕ್ತ’ ಎಂದು ವಿನಂತಿಸಿದರು. ಆದರೆ ಪಂಚಾಕ್ಷರ ಗವಾಯಿಗಳು ಇದಕ್ಕೆ ಒಪ್ಪಲಿಲ್ಲ. “ಸಂಸ್ಥೆ ಮುಚ್ಚುವುದನ್ನಾಗಲಿ, ಶಿಷ್ಯರನ್ನು ಊರಿಗೆ ಕಳುಹಿಸುವುದಾಗಲಿ ಸಾಧ್ಯವಿಲ್ಲ. ಬರಗಾಲ ಬಂದಿದೆ ಎಂದು ನಿಮ್ಮ ಮಕ್ಕಳನ್ನು ಮನೆ ಬಿಟ್ಟು ಹೊರಗೆ ಕಳುಹಿಸುವಿರಾ ನಾನು ಉಪವಾಸವಿದ್ದರೂ ಚಿಂತೆಯಿಲ್ಲ, ನನ್ನ ತಂಬೂರಿಯನ್ನಾದರೂ ಮಾರಿ ವಿದ್ಯಾರ್ಥಿಗಳನ್ನು ಸಲಹುತ್ತೇನೆ” ಎಂದು ಖಂಡುತುಂಡಾಗಿ ತಿಳಿಸಿದರು. ಗವಾಯಿಗಳ ನಿರ್ಧಾರವನ್ನು ಕೇಳಿ ನಾಗರಿಕರು ತಮ್ಮ ತಮ್ಮಲ್ಲಿಯೇ ಆಲೋಚಿಸಿ ಸಾಧ್ಯವಾದಷ್ಟು ಸಹಾಯವನ್ನು ಮಾಡಲು ಮುಂದಾದರು.

ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಬಹುಪಾಲು ಸೇವೆಯನ್ನು ಅರ್ಪಿಸಿದವರಲ್ಲಿ ಬಸರೀಗಿಡದ ವೀರಪ್ಪನವರು ಸ್ಮರಣೀಯರಾಗಿದ್ದಾರೆ. ಮೂಲತ: ರೋಣದವರಾದ ವೀರಪ್ಪನವರು ಪರಿಶ್ರಮ ಜೀವಿಗಳು, ದಯಾಪರರು, ಲೋಕಹಿತ ಕಾರ್ಯದಲ್ಲಿ ಆನಂದ, ತೃಪ್ತಿಯನ್ನು ಪಡೆದವರು. ನಾಡಿಗೆ ಒದಗಿದ ಭೀಕರ ಬರಗಾಲದ ಬವಣೆಗೆ ತತ್ತರಿಸಿ ಹೋದ ಜನರಿಗೆ ದಾನಶೂರ, ಬರಗಾಲ ಬಂಡನೆಂದು ಖ್ಯಾತರಾದ ವೀರಪ್ಪನವರು ಅನ್ನ, ವಸತಿ ನೀಡಿ ಆಶ್ರಯ ನೀಡಿದ್ದರು.

ಪಂಚಾಕ್ಷರ ಗವಾಯಿಗಳವರ ಧೀಮಂತ ವ್ಯಕ್ತಿತ್ವ, ಸಂಗೀತ ವಿದ್ಯೆ, ಸಮಾಜ ಸೇವೆಯನ್ನು ಕೇಳಿ ತಿಳಿದಿದ್ದರು.  ಗವಾಯಿಗಳ ಸಂಕಷ್ಟದ ಪರಿಸ್ಥಿತಿಯನ್ನು ಅರಿತು, ಅವರಲ್ಲಿಗೆ ಬಂದು ‘ನಾನು ನಿಮಗೆ ಮತ್ತು ತಮ್ಮ ಶಿಷ್ಯ ಬಳಗಕ್ಕೆ ಸಹಕಾರಗಳನ್ನು ನೀಡುತ್ತೇನೆ. ತಮ್ಮ ಸೇವೆಗೆ ನನಗೆ ಒಪ್ಪಿಗೆ ನೀಡಬೇಕು’ ಎಂದು ಕೇಳಿಕೊಂಡರು.

ಬಸರೀಗಿಡದ ವೀರಪ್ಪನವರು ಬಹಳ ಕಷ್ಟಗಳನ್ನು ಅನುಭವಿಸಿ ತಮ್ಮ ಸತತ ದುಡಿಮೆ ಹಾಗು ಪರಿಶ್ರಮಗಳಿಂದ ಸಮಾಜದಲ್ಲಿ ಮೇಲೆ ಬಂದಿದ್ದರು. ಗದುಗಿನಲ್ಲಿ ‘ಮಹಾಲಕ್ಷ್ಮಿ ಮೋಟಾರ ಕಂಪನಿ’ ಯನ್ನು ಸ್ಥಾಪಿಸಿ ನೂರಾರು ಮೋಟಾರುಗಳೊಂದಿಗೆ ಐದುನೂರು ನೌಕರರಿಗೆ ಕೆಲಸ ನೀಡಿದ್ದರು.

ವೀರಪ್ಪನವರನ್ನು ‘ಕರ್ನಾಟಕದ ಫೋರ್ಡ್’ ಎಂದೇ ಜನತೆ ಕರೆಯುತ್ತಿದ್ದರು.  ಅವರ ಮೋಟಾರ ಕಂಪನಿ ಧರ್ಮಛತ್ರವಾಗಿತ್ತು.  ವೀರಪ್ಪನವರು ಪಂಚಾಕ್ಷರ ವಾಯಿಗಳನ್ನು ‘ಮಹಾಲಕ್ಷ್ಮಿ ಮೋಟಾರ ಕಂಪನಿ’ಯಲ್ಲಿ ಸದಸ್ಯರನ್ನಾಗಿ ಮಾಡಿಕೊಂಡು ತಮಗೆ ಬರುವ ಲಾಬದಲ್ಲಿ ಸ್ವಲ್ಪ ಭಾಗವನ್ನು ಗವಾಯಿಗಳಿಗೆ ಕರಾರಿನಂತೆ ಕೊಡಹತ್ತಿದರು.

ಮೊದಲ “ಕೃತಪುರ ಪ್ರೆಸ್ಸಿಂಗ್” ಸ್ಥಳದಲ್ಲಿದ್ದ ಪಾಠಶಾಲೆಗೆ ತಮ್ಮ ಸ್ಥಳದಲ್ಲಿಯೇ ಅನುಕೂಲ ಮಾಡಿಕೊಟ್ಟು ಪಾಠಶಾಲೆ ಸುಗಮವಾಗಿ ನಡೆಯುವಂತೆ ಸಹಾಯ ಮಾಡಿದರು.  ವೀರಪ್ಪನವರು ನಾಲ್ವಾಡದವರ ಜಾಗೆಯಲ್ಲಿ ಹಾಕಿಕೊಟ್ಟ ತಗಡಿನ ಛಾವಣಿಯುಳ್ಳ ಕಟ್ಟಡವೇ ‘ಸ್ಥಾಯಿ ಸಂಗೀತ ಪಾಠ ಶಾಲೆಯಾಯಿತು’.  ಪಾಠಶಾಲೆಯ ಆರ್ಥಿಕ ಸ್ಥಿತಿಯು ಸುಧಾರಿಸಿದ್ದರಿಂದ ಮತ್ತೆ ನಾಟಕ ಸಂಸ್ಥೆಯನ್ನು ಸ್ಥಾಪಿಸಲಾಯಿತು.  ಪಂಚಾಕ್ಷರ ಗವಾಯಿಗಳು ಗದುಗಿನಲ್ಲಿದ್ದುಕೊಂಡು ಸ್ಥಾಯಿ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಹೇಲಿಕೊಡುತ್ತಿದ್ದರು. ಪುಟ್ಟರಾಜ ಗವಾಯಿಗಳು ನಾಟಕ ಸಂಸ್ಥೆಯೊಂದಿಗೆ ಸಂಚಾರಿ ಪಾಠಶಾಲೆಯನ್ನು ಸಾಗಿಸಿಕೊಂಡು ಮುನ್ನೆಡೆದರು. ವ್ಯವಸ್ಥಾಪಕರಾದ ಅನ್ನದಾನಯ್ಯ ಹಿರೇಮಠ ಎರಡು ಕಡೆಗೆ ಇದ್ದು ಪಾಠಶಾಲೆಗಳ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು.

News & Events